ಅಂಬಿಗರ ಚೌಡಯ್ಯನ ವಚನ ಓದು – 8ನೆಯ ಕಂತು

– ಸಿ.ಪಿ.ನಾಗರಾಜ.

ಅಂಬಿಗರ ಚೌಡಯ್ಯ, Ambigara Choudayya

ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ
ಶಾಸ್ತ್ರದಲುಳ್ಳಡೆ ಸಮಯವಾದವಪ್ಪುದೆ
ಪರ್ವತದಲುಳ್ಳಡೆ ಹೋದವರು ಬಹರೆ
ನಿರ್ಬುದ್ಧಿ ಮಾನವರನೇನೆಂಬೆ
ಮನ ವಚನ ಕಾಯ
ಶುದ್ಧಿಯಾಗಿಪ್ಪಾತನ ಹೃದಯದಲಿ
ನಿಮ್ಮ ಕಂಡೆನೆಂದನಂಬಿಗ ಚೌಡಯ್ಯ.

ವ್ಯಕ್ತಿಯ ಒಳ್ಳೆಯ ನಡೆನುಡಿಯಲ್ಲಿ ದೇವರು ನೆಲೆಸಿದ್ದಾನೆಯೇ ಹೊರತು ಯಾಗದಲ್ಲಿ ನೀಡುವ ಪ್ರಾಣಿಬಲಿಯಲ್ಲಿ, ಪೂಜಿಸುವಾಗ ಮಾಡುವ ಸಂಪ್ರದಾಯದ ಆಚರಣೆಯಲ್ಲಿ ಇಲ್ಲವೇ ಕಾಡಿನಲ್ಲಿ ಮಾಡುವ ಜಪತಪದಲ್ಲಿ ದೇವರಿಲ್ಲ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ವೇದದಲ್+ಉಳ್ಳಡೆ; ವೇದದಲ್=ವೇದದಲ್ಲಿ; ವೇದ=ಅರಿವು/ತಿಳುವಳಿಕೆ; ಇಂಡಿಯಾ ದೇಶದಲ್ಲಿದ್ದ ಪ್ರಾಚೀನ ಜನಸಮುದಾಯದವರು ಬೀಸುವ ಗಾಳಿ, ಉರಿಯುವ ಬೆಂಕಿ, ಸುರಿಯುವ ಮಳೆ, ಮರಗಿಡಬಳ್ಳಿಗಳು, ಮೋಡಗಳ ಡಿಕ್ಕಿಯಿಂದ ಉಂಟಾಗುವ ಸಿಡಿಲು ಮಿಂಚು ಮೊದಲಾದ ನಿಸರ‍್ಗದ ಸಂಗತಿಗಳನ್ನೇ ದೇವತೆಗಳನ್ನಾಗಿ ಕಲ್ಪಿಸಿಕೊಂಡು ಪೂಜಿಸುತ್ತಿದ್ದ ಆಚರಣೆಗಳ ವಿವರವನ್ನು ಒಳಗೊಂಡ ‘ರುಗ್ವೇದ-ಯಜುರ‍್ವೇದ-ಸಾಮವೇದ-ಅತರ‍್ವಣ’ ಎಂಬ ನಾಲ್ಕು ಹೊತ್ತಗೆಗಳು;

ಉಳ್ಳಡೆ=ಇದ್ದರೆ; ಪ್ರಾಣಿ+ವಧೆ+ಅಪ್ಪುದೆ; ಪ್ರಾಣಿ=ದನ/ಎಮ್ಮೆ/ಕುದುರೆ/ಕುರಿ/ಕೋಳಿ ಮುಂತಾದ ಜೀವಿಗಳು; ವಧೆ=ಕೊಲೆ; ಅಪ್ಪುದೆ=ಆಗುತ್ತಿತ್ತೇ;

ವೇದದಲುಳ್ಳಡೆ ಪ್ರಾಣಿವಧೆಯಪ್ಪುದೆ=ವೇದದಲ್ಲಿ ದೇವರು ಇದ್ದಿದ್ದರೇ ಪ್ರಾಣಿಗಳ ಬಲಿಯು ಆಗುತ್ತಿತ್ತೇ ಎಂಬ ಪ್ರಶ್ನೆಯನ್ನು ಜನಸಮುದಾಯದ ಮುಂದೆ ವಚನಕಾರನು ಇಟ್ಟಿದ್ದಾನೆ. ನಾಲ್ಕು ವೇದಗಳಲ್ಲಿಯೂ ಈ ಜಗತ್ತಿನಲ್ಲಿರುವ ಎಲ್ಲ ಬಗೆಯ ವಸ್ತುಗಳ ಇರುವಿಕೆಗೆ ಮತ್ತು ಜೀವಿಗಳ ಹುಟ್ಟಿಗೆ ದೇವರೇ ಕಾರಣನೆಂದು ಹೇಳಲಾಗಿದೆ. ಅಂದ ಮೇಲೆ ಅಂತಹ ದೇವರಿಗೆ ಮತ್ತೆ ಅವನೇ ಹುಟ್ಟಿಸಿರುವ ಪ್ರಾಣಿಗಳನ್ನು ಬಲಿಕೊಡಬೇಕಾದ ಅಗತ್ಯವೇನಿದೆ? ಆದ್ದರಿಂದ ದೇವರು ಎಂಬುವವನು ಕೇವಲ ಮಾನವರ ಕಲ್ಪನೆಯಿಂದ ಮೂಡಿರುವ ವ್ಯಕ್ತಿ ಇಲ್ಲವೇ ಶಕ್ತಿಯೇ ಹೊರತು. ವಾಸ್ತವದಲ್ಲಿ “ ದೇವರು ಇಲ್ಲ ” ಎಂಬ ಅರಿವನ್ನು ಜನಮನದಲ್ಲಿ ಮೂಡಿಸಲು ವಚನಕಾರನು ಇಂತಹ ಪ್ರಶ್ನೆಯನ್ನು ಹಾಕಿದ್ದಾನೆ;

ಶಾಸ್ತ್ರದಲ್+ಉಳ್ಳಡೆ; ಶಾಸ್ತ್ರದಲ್=ಶಾಸ್ತ್ರದಲ್ಲಿ; ಶಾಸ್ತ್ರ=ದೇವರನ್ನು ಪೂಜಿಸುವಾಗ ಅನುಸರಿಸಬೇಕಾದ ಸಂಪ್ರದಾಯದ ಆಚರಣೆಗಳು ; ಸಮಯ+ವಾದ+ಅಪ್ಪುದೆ; ಸಮಯ=ಆಚರಣೆಗಳ ರೀತಿನೀತಿ/ಸಂಪ್ರದಾಯ ; ವಾದ=ಚರ‍್ಚೆ/ತರ‍್ಕ; ಸಮಯವಾದ=ದೇವರನ್ನು ಪೂಜಿಸುವಾಗ ಮಾಡುವ ಆಚರಣೆಗಳಲ್ಲಿ ಇಲ್ಲವೇ ಅನುಸರಿಸುವ ಕಟ್ಟುಕಟ್ಟಲೆಗಳಲ್ಲಿ ಕೆಲವು ಬಗೆಯು ಎಲ್ಲಕ್ಕಿಂತ ಉತ್ತಮ ಎಂಬ ಚರ‍್ಚೆಯಲ್ಲಿ ತೊಡಗುವುದು;

ಶಾಸ್ತ್ರದಲುಳ್ಳಡೆ ಸಮಯವಾದವಪ್ಪುದೆ= ಪೂಜೆಯ ಆಚರಣೆಗಳಲ್ಲಿ ದೇವರಿದ್ದರೆ, ಆಚರಣೆಗಳಲ್ಲಿ ಹಿರಿದು ಕಿರಿದು ಎಂಬ ಚರ‍್ಚೆಯ ಅಗತ್ಯವೇಕೆ;

ಪರ್ವತದಲ್+ಉಳ್ಳಡೆ; ಪರ್ವತದಲ್=ಪರ‍್ವತದಲ್ಲಿ; ಪರ್ವತ=ಬೆಟ್ಟಗುಡ್ಡಗಳಿಂದ ಕೂಡಿದ ಕಾಡು; ಬಹರೆ=ಬರುತ್ತಾರೆಯೆ ;

ಪರ್ವತದಲುಳ್ಳಡೆ ಹೋದವರು ಬಹರೆ=ಪರ‍್ವತ ಪ್ರಾಂತ್ಯದಲ್ಲಿ ದೇವರಿದ್ದರೆ, ಅವನನ್ನು ಜಪತಪಗಳಿಂದ ಒಲಿಸಿಕೊಂಡವರು, ಅವನ ಜತೆಯಲ್ಲಿಯೇ ಇರದೆ, ಮತ್ತೆ ನಾಡಿಗೆ ಹಿಂತಿರುಗಿ ಬರುತ್ತಾರೆಯೇ; ಜನಮನದಲ್ಲಿರುವ ಒಂದು ನಂಬಿಕೆಯ ಹಿನ್ನೆಲೆಯಲ್ಲಿ ಈ ನುಡಿಗಳನ್ನಾಡಲಾಗಿದೆ. ಜಪತಪಗಳ ಮೂಲಕ ದೇವರನ್ನು ಮೆಚ್ಚಿಸಿ, ಅವನ ಅನುಗ್ರಹಕ್ಕೆ ಪಾತ್ರರಾದವರು ‘ಜೀವಿಗಳ ಹುಟ್ಟು ಸಾವಿನ ಚಕ್ರ’ ದಿಂದ ಬಿಡುಗಡೆಯನ್ನು ಪಡೆದು ಅವನಲ್ಲಿಯೇ ಒಂದಾಗುತ್ತಾರೆ ಎಂಬ ಒಂದು ನಂಬಿಕೆಯು ಜನಮನದಲ್ಲಿದೆ;

ನಿರ್ಬುದ್ಧಿ=“ಯಾವುದು ಸರಿ–ಯಾವುದು ತಪ್ಪು” ಎಂಬುದರ ಅರಿವು ಇಲ್ಲದಿರುವುದು/ “ಯಾವುದು ಒಳ್ಳೆಯದು—ಯಾವುದು ಕೆಟ್ಟದ್ದು” ಎಂಬ ಎಚ್ಚರ ಇಲ್ಲದಿರುವುದು/ “ಯಾವುದು ವಾಸ್ತವ—ಯಾವುದು ಕಲ್ಪಿತ ” ಎಂಬ ವಿವೇಕ ಇಲ್ಲದಿರುವುದು; ಮಾನವರನ್+ಏನ್+ಎಂಬೆ; ಮಾನವರನ್=ವ್ಯಕ್ತಿಗಳನ್ನು; ಎಂಬೆ=ಹೇಳಲಿ ; ನಿರ್ಬುದ್ಧಿ ಮಾನವರು=ಅರಿವು, ಎಚ್ಚರ ಮತ್ತು ವಿವೇಕವಿಲ್ಲದ ವ್ಯಕ್ತಿಗಳು; ಏನೆಂಬೆ=ಏನೆಂದು ಕರೆಯಲಿ/ಹೇಳಲಿ;

ನಿರ್ಬುದ್ಧಿ ಮಾನವರನೇನೆಂಬೆ=ದೇವರನ್ನು ಒಲಿಸಿಕೊಂಡು ಅವನ ಅನುಗ್ರಹಕ್ಕೆ ಪಾತ್ರರಾಗಲೆಂದು ಪ್ರಾಣಿಗಳನ್ನು ಬಲಿಯನ್ನು ಕೊಡುವ, ಸಂಪ್ರದಾಯದ ಕಟ್ಟುಕಟ್ಟಲೆಗಳನ್ನೇ ದೊಡ್ಡದೆಂದು ನಂಬಿ ಆಚರಿಸುವ ಮತ್ತು ಜಪ ತಪದಲ್ಲಿ ತೊಡಗುವ ವ್ಯಕ್ತಿಗಳನ್ನು ತಿಳಿಗೇಡಿಗಳು ಎಂದು ವಚನಕಾರನು ಅಲ್ಲಗಳೆಯುತ್ತಾನೆ. ಏಕೆಂದರೆ ವಚನಕಾರನು ದೇವರ ಬಗ್ಗೆ ಬೇರೊಂದು ಬಗೆಯ ನಿಲುವನ್ನು ಹೊಂದಿದ್ದಾನೆ;

ಮನ=ಮನಸ್ಸು ; ವಚನ=ಮಾತು ; ಕಾಯ=ದೇಹ;

ಶುದ್ಧಿ+ಆಗಿ+ಇಪ್ಪ+ಆತನ; ಶುದ್ಧಿ=ಸರಿಯಾಗಿರುವುದು; ಮನ ಶುದ್ಧಿ=ದುರಾಸೆ ಮತ್ತು ಹಗೆತನದ ಒಳಮಿಡಿತಗಳಿಂದ ದೂರವಿರುವುದು; ವಚನ ಶುದ್ಧಿ=ಸುಳ್ಳನ್ನು ಹೇಳದಿರುವುದು ಮತ್ತು ಕಾಡು ಹರಟೆಯನ್ನು ಹೊಡೆಯದಿರುವುದು; ಕಾಯ ಶುದ್ಧಿ=ಕೊಲೆ, ಕಳವು ಮತ್ತು ಹಾದರವನ್ನು ಮಾಡದಿರುವುದು;

ಇಪ್ಪ=ಇರುವ ; ಹೃದಯ=ಎದೆ; ನಿಮ್ಮ=ನಿಮ್ಮನ್ನು ; ಕಂಡೆನ್+ಎಂದನ್+ಅಂಬಿಗ; ನಿಮ್ಮ ಕಂಡೆನ್=ದೇವರಾದ ನಿಮ್ಮನ್ನು ನೋಡಿದೆನು;

ಮನ ವಚನ ಕಾಯ ಶುದ್ಧಿಯಾಗಿಪ್ಪಾತನ ಹೃದಯದಲಿ ನಿಮ್ಮ ಕಂಡೆನ್=ಯಾವ ವ್ಯಕ್ತಿಯ ಮಯ್ ಮನಸ್ಸು ಮಾತು ಸರಿಯಾಗಿರುತ್ತದೆಯೋ ಅಂದರೆ ದೇಹದಿಂದ ಕೆಟ್ಟಕೆಲಸವನ್ನು ಮಾಡದೆ, ಮನಸ್ಸಿನಲ್ಲಿ ಕೆಟ್ಟದ್ದನ್ನು ಚಿಂತಿಸದೆ, ಮಾತಿನಲ್ಲಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ನುಡಿಗಳನ್ನಾಡದೆ ಇರುತ್ತಾನೆಯೋ ಅಂತಹ ವ್ಯಕ್ತಿಯ ಅಂತರಂಗದಲ್ಲಿ ನಾನು ದೇವರನ್ನು ಕಂಡೆನು ;

ಎಂದನ್=ಎಂದು ನುಡಿದನು; ಅಂಬಿಗ=ನದಿಯಲ್ಲಿ ದೋಣಿಯನ್ನು ನಡೆಸುವ ಕಾಯಕದವನು;

ಶಿವಶರಣಶರಣೆಯರ ಪಾಲಿಗೆ ‘ದೇವರು’ ಎನ್ನುವ ಶಕ್ತಿ ಇಲ್ಲವೇ ವ್ಯಕ್ತಿಯು ಕಲ್ಲು, ಮಣ್ಣು, ಲೋಹ ಮತ್ತು ಮರದಿಂದ ಮಾಡಿದ ವಿಗ್ರಹರೂಪಿಯಾಗಿರಲಿಲ್ಲ. ಆದ್ದರಿಂದಲೇ ಅವರು ದೇಗುಲವನ್ನು ನಿರಾಕರಿಸಿ, ತಮ್ಮ ಅಂಗಯ್ ಮೇಲೆ ಇಶ್ಟಲಿಂಗವನ್ನು ಇಟ್ಟುಕೊಂಡು ಪೂಜಿಸುತ್ತಿದ್ದರು. ಆದರೆ ಅದು ಕೂಡ ಅವರಿಗೆ “ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವುದಕ್ಕೆ” ಒಂದು ಸಂಕೇತವಾಗಿತ್ತೇ ಹೊರತು ಅದೇ ದೇವರಾಗಿರಲಿಲ್ಲ. ಒಳ್ಳೆಯ ನಡೆನುಡಿಗಳು ಇರುವ ಎಡೆಯಲ್ಲಿ ದೇವರು ನೆಲೆಸಿರುತ್ತಾನೆ ಎಂಬ ನಿಲುವನ್ನು ವಚನಕಾರರು ಹೊಂದಿದ್ದರು

“ಒಳ್ಳೆಯ ನಡೆನುಡಿ” ಎಂದರೆ ವ್ಯಕ್ತಿಯು ತನ್ನ ಮಯ್ ಮನದಲ್ಲಿ ಮಿಡಿಯುವ ಒಳಿತು ಕೆಡುಕಿನ ಒಳಮಿಡಿತಗಳಲ್ಲಿ ಕೆಟ್ಟದ್ದನ್ನು ಹತ್ತಿಕ್ಕಿಕೊಂಡು, ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ತಾನು ಆಡುವ ಮಾತು ಮತ್ತು ಮಾಡುವ ಕಾಯಕದ ಮೂಲಕ ತನಗೆ, ತನ್ನ ಕುಟುಂಬಕ್ಕೆ ಒಳಿತನ್ನು ಬಯಸುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವುದು.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: