ಮೋಸೆಸ್ ಮಿರಾಕಲ್ – ಸಮುದ್ರ ಇಬ್ಬಾಗವಾಗುವ ಸೋಜಿಗ
– ಕೆ.ವಿ.ಶಶಿದರ.
ಕೊರಿಯಾದ ದ್ವೀಪ ಸಮೂಹದಲ್ಲಿನ ಜಿಂಡೋ ಮತ್ತು ಮೋಡೋ ದ್ವೀಪಗಳ ನಡುವೆ ಸಮುದ್ರ ಇಬ್ಬಾಗವಾಗುವ ವಿಚಿತ್ರ ವಿದ್ಯಮಾನವನ್ನು ಮೋಸೆಸ್ ಮಿರಾಕಲ್ ಎನ್ನುತ್ತಾರೆ. ಈ ಸಮುದ್ರ ವಿಬಜನೆಯ ವಿದ್ಯಮಾನ ವಸಂತಕಾಲದಿಂದ ಬೇಸಿಗೆಯ ಅವದಿಯಲ್ಲಿ ಸಂಬವಿಸುತ್ತದೆ. ಜಿಂಡೋ ಮತ್ತು ಮೋಡೋ ದ್ವೀಪಗಳ ನಡುವಿನ 2.8 ಕಿಲೋಮೀಟರ್ ಉದ್ದ ಮತ್ತು 40 ಮೀಟರ್ ಅಗಲದ ಬೂಮಿ ಸರಿ ಸುಮಾರು ಒಂದು ಗಂಟೆಗಳ ಕಾಲ ಕಂಡು ಬರುತ್ತದೆ. ಈ ವಿದ್ಯಮಾನವನ್ನು ವೀಕ್ಶಿಸಲು ಲಕ್ಶೋಪಲಕ್ಶ ವೀಕ್ಶಕರು ಕಾದಿರುತ್ತಾರೆ.
‘ಮೋಸೆಸ್ ಮಿರಾಕಲ್’ ಎಂಬ ಹೆಸರು ಬರಲು ಕಾರಣವೇನು?
ಈ ವಿದ್ಯಮಾನಕ್ಕೆ ‘ಮೋಸೆಸ್ ಮಿರಾಕಲ್’ ಎಂಬ ಹೆಸರು ಬರಲು ಒಂದು ಕಾರಣವಿದೆ. ಮೋಸೆಸ್ ಒಬ್ಬ ಪ್ರಮುಕ ಯಹೂದಿ ಪ್ರವಾದಿ. ಈತ ಈಜಿಪ್ಟರಿಂದ ಇಸ್ರೇಲಿಗಳನ್ನು ಉಳಿಸಲು ದೇವರಲ್ಲಿ ಪ್ರಾರ್ತಿಸುತ್ತಾನೆ. ಅವನ ಕರೆಗೆ ಓಗೊಟ್ಟ ಸಮುದ್ರ (ರೆಡ್ ಸೀ) ಇಬ್ಬಾಗವಾಗಿ, ಒಣ ಪ್ರದೇಶ ಕಂಡು ಬರುತ್ತದೆ. ಇಸ್ರೇಲಿಗಳು ಅದರ ಮೂಲಕ ಸುರಕ್ಶಿತವಾಗಿ ದಾಟಿದ ನಂತರ ಮೋಸೆಸ್ ಸಮುದ್ರವನ್ನು ಮತ್ತೆ ಒಂದು ಮಾಡುತ್ತಾನೆ. ಅದೇ ರೀತಿಯ ವಿದ್ಯಮಾನ ಇಲ್ಲೂ ಸಂಬವಿಸುವ ಕಾರಣ ಇದನ್ನು ‘ಮೋಸೆಸ್ ಮಿರಾಕಲ್’ ಎಂದು ಕ್ರಿಶ್ಚಿಯನ್ನರು ಹೆಸರಿಸಿದ್ದಾರೆ.
ಕೊರಿಯನ್ನರು ಈ ಗಟನೆಯನ್ನು ‘ಜಿಂಡೋ ಮಿರಾಕಲ್ ಸೀ ರೋಡ್ ಪೆಸ್ಟಿವಲ್’ ಎಂದು ಕರೆಯುತ್ತಾರೆ. ಈ ವಿದ್ಯಮಾನವನ್ನು ವೀಕ್ಶಿಸಲು ಬರುವ ಪ್ರವಾಸಿಗರು, ಸಮುದ್ರದ ನಡುವೆ ನಡೆಯುವ ಮತ್ತು ಸಮುದ್ರದಲ್ಲಿ ದೊರಕುವ ಕಪ್ಪೆಚಿಪ್ಪುಗಳನ್ನು ಸಂಗ್ರಹಿಸುತ್ತಾ ಅತವಾ ಸಮುದ್ರ ಜೀವಿಗಳನ್ನು ಎತ್ತಿ ಮುದ್ದಾಡುತ್ತಾ ಆನಂದದಿಂದ 2.8 ಕಿಲೋಮೀಟರ್ ದೂರವನ್ನು ನಿರಾಯಾಸವಾಗಿ ಸವೆಸುತ್ತಾರೆ. ಅಲ್ಲಿ ದೊರಕುವ ಅತ್ಯಂತ ತಾಜಾ ಸಮುದ್ರಾಹಾರವನ್ನು ಶೇಕರಿಸಲು ಅವಶ್ಯವಾದ ಬುಟ್ಟಿಯನ್ನು ಕೊಂಡೊಯ್ಯುವುದು ಅವಶ್ಯ. ಸಮುದ್ರ ವಿಬಜನೆಯ ಈ ವಿದ್ಯಮಾನದ ಅವದಿ ಕೇವಲ ಒಂದು ಗಂಟೆ. ಈ ಹಿನ್ನೆಲೆಯಲ್ಲಿ ಆದಶ್ಟು ಬೇಗ ಸಮುದ್ರದ ಕಿನಾರೆಯಲ್ಲಿ ಹಾಜರಿದ್ದು ಈ ಅದ್ಬುತವನ್ನು ಅನುಬವಿಸಲು ವೀಕ್ಶಕರು ಮುಗಿಬೀಳುತ್ತಾರೆ.
ಹೀಗೊಂದು ದಂತಕತೆ
ಕಡಲ ಕಿನಾರೆಯಲ್ಲಿ ಮುದುಕಿ ಮತ್ತು ಹುಲಿಯ ಪ್ರತಿಮೆಯಿದೆ. ಇದು ಕೊರಿಯನ್ ಆವ್ರುತ್ತಿಯ ಮೋಸೆಸ್ ಪವಾಡದ ದಂತಕತೆಯನ್ನು ಹೇಳುತ್ತದೆ. ದಂತಕತೆಯಂತೆ ಒಂದಾನೊಂದು ಕಾಲದಲ್ಲಿ ಜಿಂಡೋ ದ್ವೀಪದಲ್ಲಿ ಹುಲಿಗಳ ಸಂತತಿ ಹೇರಳವಾಗಿತ್ತು. ಇಲ್ಲಿನ ಹುಲಿಗಳು ತಮ್ಮ ಆಹಾರಕ್ಕಾಗಿ ಹಳ್ಳಿಗಳ ಮೇಲೆ ಆಕ್ರಮಣ ಮಾಡುತ್ತಿದ್ದವು. ಹುಲಿಗಳಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಜಿಂಡೋ ದ್ವೀಪದ ಜನ, ಮೋಡೋ ದ್ವೀಪಕ್ಕೆ ಕಾಲು ನಡಿಗೆಯಲ್ಲೇ ಪಲಾಯನ ಮಾಡುತ್ತಿದ್ದರು. ಹೀಗೆ ಪಲಾಯನ ಮಾಡುವಾಗ್ಗೆ ವಯಸ್ಸಾದ ಮಹಿಳೆ ಬಿಯೋಂಗ್ಳನ್ನು ಅಕಸ್ಮಾತ್ ಆಗಿ ಬಿಟ್ಟು ಪಲಾಯನ ಮಾಡಿ ಬಿಡುತ್ತಾರೆ. ಆಕೆ ತನ್ನ ಉಳಿವಿಗಾಗಿ ಹಾಗೂ ತನ್ನವರನ್ನು ಸೇರುವ ತವಕದಿಂದ ಸಮುದ್ರ ದೇವತೆಯಾದ ಯಾಂಗ್ವಾಂಗ್ ನನ್ನು ಕುರಿತು ಪ್ರಾರ್ತಿಸುತ್ತಾಳೆ. ಆಕೆಯ ಕನಸಿನಲ್ಲಿ ಸಮುದ್ರ ದೇವತೆ ಕಾಣಿಸಿಕೊಂಡು, ‘ಸಮುದ್ರವನ್ನು ದಾಟಲು, ಸಮುದ್ರದಲ್ಲಿ ಕಾಮನ ಬಿಲ್ಲು ಕಾಣಿಸಿಕೊಳ್ಳುತ್ತದೆ’ ಎಂದು ಹೇಳಿದಂತೆ ಬಾಸವಾಗುತ್ತದೆ. ಆಕೆ ಎಚ್ಚರಗೊಂಡ ನಂತರ ಸಮುದ್ರದ ಕಿನಾರೆಗೆ ಹೋದಾಗ, ಸಮುದ್ರದ ನೀರು ವಿಬಜನೆಯಾಗಿ ಮಳೆಬಿಲ್ಲಿನಾಕಾರದ ರಸ್ತೆ ಕಾಣಿಸಿಕೊಳ್ಳುತ್ತದೆ. ಅವಳು ಮಳೆಬಿಲ್ಲಿನ ರಸ್ತೆಯ ಮೂಲಕ ಹಾದು ಹೋಗಿ ಕುಟುಂಬಸ್ತರನ್ನು ಸೇರಿಕೊಳ್ಳುತ್ತಾಳಂತೆ. ಈ ವಿದ್ಯಮಾನದ ನಂತರ ಹುಲಿಯ ಜೊತೆಗಿನ ಆಕೆಯ ಪ್ರತಿಮೆಯನ್ನು ಕಿನಾರೆಯಲ್ಲಿ ಸ್ತಾಪಿಸಿದ್ದಾರೆ. ಇದರ ಎದುರೇ ಸಮದ್ರ ವಿಬಜನೆಗೊಳ್ಳುವುದು. ಇದರ ಜ್ನಾಪಕಾರ್ತ ಸ್ತಳೀಯರು ಈ ಜನಪ್ರಿಯ ಸಂಪ್ರದಾಯ ‘ಜಿಂಡೋ ಮಿರಾಕಲ್ ಸೀ ರೋಡ್ ಪೆಸ್ಟಿವಲ್’ ಆರಂಬಿಸಿದರು.
ಈ ವಿಚಿತ್ರ ವಿದ್ಯಮಾನಕ್ಕೆ ನಿಜವಾದ ಕಾರಣ ಏನು?
ಇದು ಅಲ್ಲಿನವರ ದಂತಕತೆಯಾದರೆ, ವೈಜ್ನಾನಿಕವಾಗಿ ವಿಶ್ಲೇಶಿಸಿದರೆ, ಸಾಮಾನ್ಯವಾಗಿ ವರ್ಶದ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆವಿಗೂ ಸಮುದ್ರಗಳ ಏರಿಳಿತದವು ಅತಿ ಕಡಿಮೆಯಿರುತ್ತದೆ. ಇದಕ್ಕೆ ಸೂರ್ಯ ಚಂದ್ರರ ಸ್ತಾನ ಮತ್ತು ಆಕರ್ಶಣೆ ಕಾರಣ. ಇದರಿಂದಾಗಿ ಸಮುದ್ರದ ಮಟ್ಟ ಇಳಿಮುಕವಾಗಿ, ಬೂ ಪ್ರದೇಶ ಗೋಚರವಾಗುತ್ತದೆ. ಈ ಬೂ ಪ್ರದೇಶ ಸತತವಾಗಿ ಮೂರ್ನಾಲ್ಕು ದಿನಗಳ ಕಾಲ ಸರಿಸುಮಾರು ಒಂದು ಗಂಟೆಯ ಅವದಿಯಶ್ಟು ಸಮಯ ಕಾಣಿಸಿಕೊಳ್ಳುತ್ತದೆ.
2022ರ ವರ್ಶದ ಉತ್ಸವ ಏಪ್ರಿಲ್ 17ರಿಂದ 19ರವರೆಗೂ ನಡೆಯುತ್ತದೆ. ಈ ಅವದಿಯಲ್ಲಿ ವಿವಿದ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತದೆ. ಇದರಲ್ಲಿ ಜಾನಪದ ಸಂಗೀತ ಕಚೇರಿ, ಕಲಾ ಪ್ರದರ್ಶನ, ವಿವಿದ ಬೀದಿ ಪ್ರದರ್ಶನಗಳು ಒಳಗೊಂಡಿರುತ್ತವೆ. ಇದರೊಂದಿಗೆ ‘ಡಾಗ್ ಶೋ’ ಸಹ ಆಯೋಜನೆಗೊಳ್ಳುತ್ತದೆ. ವೀಕ್ಶಕರು ಕೊರಿಯನ್ ಜಿಂಡೋ ಶ್ವಾನಗಳನ್ನು ಇದರಲ್ಲಿ ಕಾಣಬಹುದು. ಇವುಗಳು ಇದೇ ಜಿಂಡೋ ದ್ವೀಪದಲ್ಲಿ ಹುಟ್ಟಿದ್ದು, ಇವು ನಿಶ್ಟೆ, ವಿದೇಯತೆ ಮತ್ತು ಸಾಹಸಗಳನ್ನು ಪ್ರದರ್ಶೀಸುವಲ್ಲಿ ಹೆಸರುವಾಸಿಯಾಗಿದೆ.
1975ರಿಂದ ಈ ‘ಮೋಸೆಸ್ ಮಿರಾಕಲ್ ಅಟ್ ಜಿಂಡೋ ಐಲ್ಯಾಂಡ್’ ವಿಶ್ವವ್ಯಾಪಿ ಪ್ರಕ್ಯಾತಿಯಾಯಿತು. ಇದಕ್ಕೆ ಕಾರಣ ಪ್ರೆಂಚ್ ಪತ್ರಿಕೆಯಲ್ಲಿ ಪ್ರೆಂಚ್ ರಾಜತಾಂತ್ರಿಕರೊಬ್ಬರು ಇದನ್ನು ಕಣ್ಣಾರೆ ಕಂಡು, ಅದರ ಬಗ್ಗೆ ವಿವರವಾಗಿ ಬರೆದು ಪ್ರಕಟಿಸಿದ್ದು.
ಸಿಯೋಲ್ನ ಸೆಂಟ್ರಲ್ ಸಿಟಿ ಟರ್ಮಿನಲ್ ನಿಂದ ಜಿಂಡೋ ಬಸ್ ಟರ್ಮಿನಲ್ಗೆ ಇಂಟರ್ಸಿಟಿ ಬಸ್ ವ್ಯವಸ್ತೆಯಿದೆ. ಇದರ ಮೂಲಕ ಉತ್ಸವದ ‘ನಿಗೂಡ ಜಿಂಡೋ ಸಮುದ್ರ ಮಾರ್ಗ’ದ ಸ್ತಳ ಸುಲಬವಾಗಿ ತಲುಪಬಹುದು.
(ಮಾಹಿತಿ ಮತ್ತು ಚಿತ್ರ ಸೆಲೆ: nationalgeographic.com, unbelievable-facts.com, rove.me, koreaherald.com)
ಇತ್ತೀಚಿನ ಅನಿಸಿಕೆಗಳು