ಮೆಟಾವರ್ಸ್‍‍ ಜಗತ್ತಿನೊಳಗೊಂದು ಇಣುಕುನೋಟ

– ನಿತಿನ್ ಗೌಡ.

ಕಂತು-1

ಹಿಂದಿನ ಕಂತಿನಲ್ಲಿ ಮೆಟಾವರ್ಸ್‍‍ ಜಗತ್ತಿನ ಇಣುಕು ನೋಟವನ್ನು ನೀಡಲಾಗಿತ್ತು. ಈ ಕಂತಿನಲ್ಲಿ ಮೆಟಾವರ್ಸ್‍‍ ಲೋಕ ಕಟ್ಟುವ ಹಿಂದೆ ಬಳಸಲಾಗುವ ಮೈಮರೆಸುವ ಚಳಕಗಳು (Immersive Tech), ವೆಬ್ 3.0, ಈಗಿರುವ ಬಗೆ ಬಗೆಯ ಮೆಟಾವರ್ಸ್‍‍‍‍ ಲೋಕಗಳು, ಮೆಟಾವರ್ಸ್‍‍‍‍‍‍ನ ಹಣಕಾಸು ವ್ಯವಸ್ತೆ, ಮೆಟಾವರ್ಸ್‍‍ ತಂದೊಡ್ಡುವ ತೊಡಕುಗಳು ಸೇರಿದಂತೆ ಇನ್ನಶ್ಟು ಕುತೂಹಲಕಾರಿ ವಿಶಯಗಳ ಬಗೆಗೆ ತಿಳಿಯೋಣ. ಮೈಮರೆಸುವ ಚಳಕಗಳ ಬಗೆಗೆ ಸರಿಯಾಗಿ ತಿಳಿದುಕೊಂಡಲ್ಲಿ, ಮೆಟಾವರ್ಸ್‍‍ ಜಗತ್ತನ್ನು ಅರಿಯುವುದು ಸುಳುವಾಗುತ್ತದೆ.

ಮೈಮರೆಸುವ ಚಳಕಗಳು ( Immersive Technologies )

ಬೌತಿಕ ಜಗತ್ತನ್ನು  ಡಿಜಿಟಲ್ ಇಲ್ಲವೇ ನನಸಿನ ಅಣಕದೊಟ್ಟಿಗೆ  (Simulated reality) ಬೆಸೆಯುವ ಮೂಲಕ ತನ್ನದೇ ಆದ ಒಂದು ವಿಶೇಶ ಬಗೆಯ ಅನುಬೂತಿಯನ್ನು ನೀಡುವ ಚಳಕಗಳನ್ನು ಮೈಮರೆಸುವ ಚಳಕಗಳು ಎನ್ನುತ್ತಾರೆ. ಚಳಕಗಳು ನಮ್ಮನ್ನು  ಮೈಮರೆಯುವಂತೆ ಮಾಡಿ, ನಮ್ಮದೇ ಆದ ಒಂದು ಲೋಕದಲ್ಲಿ ಕಳೆದು ಹೋಗುವಂತೆ ಮಾಡುವುದರಿಂದ, ಇವುಗಳನ್ನು ಮೈಮರೆಸುವ ಚಳಕಗಳು ಎನ್ನುವರು.

  ಅನುಬೂತಿಗಳು ಯಾವ ಬಗೆಯ ಬಳಕೆಗಳನ್ನು ಹೊಂದಿವೆ  ಮತ್ತು ಎಶ್ಟರ ಮಟ್ಟಿಗೆ ನಮ್ಮನ್ನು ಮೈಮರೆಯುವಂತೆ ಮಾಡಬಲ್ಲವು ಅನ್ನುವುದರ ಮೇಲೆ, ಚಳಕವನ್ನು 3 ಗುಂಪಾಗಿ ಬೇರ್ಪಡಿಸಬಹುದು. ಅವುಗಳೆಂದರೆ;

1.ಹಿಗ್ಗಿಸಿದ ನನಸು( Augmented reality-AR )

ಇಲ್ಲಿ ಬೌತಿಕ ಜಗತ್ತಿನೊಟ್ಟಿಗೆ ದಿಟದಂತಿರುವ(virtual) ಜಗತ್ತನ್ನು ಬೆಸೆಯುವ ಮೂಲಕ ನಮ್ಮನ್ನು ನಾವು ಮೈಮರೆಯುವಂತಹ ಅನುಬವಗಳನ್ನು ಹುಟ್ಟುಹಾಕಲಾಗುತ್ತದೆ. ಡಿಜಿಟಲ್ ಡಿವೈಸ್‍‍ಗಳಾದ ( Digital device) ಸ್ಮಾರ‍್ಟ್ ಪೋನ್‍‍ಗಳ ಮೂಲಕ ಬಳಕೆದಾರರು ತಾವು ನೋಡಲು, ಕೇಳಿಸಿಕೊಳ್ಳಲು ಮತ್ತು ನೆನಸಿನ ಸ್ವತ್ತುಗಳೊಟ್ಟಿಗೆ( Virtual assets) ವ್ಯವಹರಿಸಬಹುದು.

ಕಂಪ್ಯೂಟರ್ ವಿಶನ್ ಎಸುಗೆಬಗೆಗಳ ( Computer vision algorithm) ಮೂಲಕ ಈ ಚಳಕವನ್ನು ಸಾದಿಸಲಾಗಿದೆ. ಈ ಎಸುಗೆಬಗೆಗಳು, ಡಿವೈಸ್‍‍ಗಳಲ್ಲಿರುವ ಅರಿವುಕಗಳ(sensor) ಮೂಲಕ ಮಾಹಿತಿ ಕಲೆಹಾಕಿ, ನೆನಸಿನ ಸ್ವತ್ತುಗಳನ್ನು ಬಳಸುಗರೊಟ್ಟಿಗೆ ವ್ಯವಹರಿಸಲು ಸಹಾಯ ಮಾಡುತ್ತವೆ. ಇವುಗಳಲ್ಲಿ ಹಲವು ಬಗೆಯ ಹಿಗ್ಗಿಸುವ ನನಸಿನ ಚಳಕಗಳಿವೆ.
ಹಲವರು ಪ್ರತಿದಿನ ಬಳಸಲಾಗುತ್ತಿರುವ ಕೆಲವು ಆಪ್‍‍ಗಳ(AR – apps) ಎತ್ತುಗೆಗಳನ್ನು ನೋಡುವುದಾದರೆ;
1. ಸ್ನಾಪ್ ಚಾಟ್ ಆಪ್ ನಲ್ಲಿ, ಪಿಲ್ಟರ‍್‍‍ಗಳ ಮೂಲಕ ಬಳಕೆದಾರ ತನ್ನ ಮುಕ ಬದಲಾಯಿಸಿಕೊಳ್ಳಬಹುದು, ತನ್ನ ಕಿವಿಯ ಬದಲು ನಾಯಿಯ ಕಿವಿಯನ್ನು ಜೋಡಿಸಬಹುದು.
2. ಗೂಗಲ್ ಮ್ಯಾಪ್ ಲೈವ್ ವ್ಯೂ(Google map live view) ಬಳಕೆದಾರರಿಗೆ ದಾರಿತೋರಲು ಹಿಗ್ಗಿಸುವ ನನಸಿನ ಚಳಕ ಬಳಸುತ್ತದೆ.

2. ಹುಸಿ ನನಸು (virtual reality)

ಈ ಚಳಕದಲ್ಲಿ ಬಳಕೆದಾರರ ಸುತ್ತಲಿನ ಜಗತ್ತನ್ನು ಒಂದು ಡಿಜಿಟಲ್ ನೆನಸಿನ ಸುತ್ತಣವಾಗಿ ( Virtual digital sorroundings) ಮಾರ‍್ಪಡಿಸಲಾಗಿರುತ್ತದೆ. ಹೆಡ್ ಮೌಂಟೆಡ್ ಡಿವೈಸ್(HMD) ಎಂಬ ಡಿವೈಸ್‍‍ ಮೂಲಕ ಈ ಜಗತ್ತನ್ನು ನೋಡಬಹುದು. ಬಳಕೆದಾರನಿಗೆ ಈ ಹುಸಿ ಜಗತ್ತಿನಲ್ಲಿ(Virtual world) ತನ್ನ ಇರುವಿಕೆಯ ಅನುಬವವನ್ನು ಈ ಚಳಕ ನೀಡುತ್ತದೆ. ಈ ಚಳಕ ಹಲವೆಡೆ ಬಳಕೆಗಳನ್ನು ಹೊಂದಿದೆ. ಎತ್ತುಗೆಗೆ;

  • ಹಲವಾರು ವೀಡಿಯೋ ಗೇಮ್ ಕಂಪನಿಗಳು ಇದನ್ನು ಬಳಸಿ ಗೇಮಿಂಗ್ ಅನುಬವವನ್ನು ಹೆಚ್ಚಿಸಿ ಆ ಜಗತ್ತಿನಲ್ಲಿ ಆಟಗಾರ ಮೈಮರೆಯುವಂತೆ ಮಾಡುತ್ತಿವೆ.
  • ತಮ್ಮ ಕೆಲಸಗಾರರಿಗೆ ಕೆಲಸದ ತರಬೇತಿ ನೀಡಲು ನಾಸಾ ಸೇರಿದಂತೆ ಹಲವು ಸಂಸ್ತೆಗಳು ಬಳಸುತ್ತಿವೆ. ಹೊರ ಬಾನಿನಲ್ಲಿ ಎದುರಾಗುವ ಹಲವು ಕಶ್ಟಕರ ಸನ್ನಿವೇಶಗಳನ್ನು ಅಣಕಿಸಿ, ಅಂತಹ ಸಂದರ‍್ಬದಲ್ಲಿ ತಮ್ಮ ಹೊರಬಾನಾಡಿಗರು(Astraonauts) ಮತ್ತು ಬಾನರಿಗರು(space scientists) ಯಾವ ಬಗೆಯಾಗಿ ಉತ್ತಮವಾಗಿ ಪರಿಸ್ತಿತಿಯನ್ನು ಎದುರಿಸಬಹುದು ಎನ್ನುವ ರೀತಿಯ ತರಬೇತಿ ನೀಡಲಾಗುತ್ತದೆ.
  • ಸೇನೆಯಲ್ಲಿ ಸೈನಿಕರಿಗೆ ಯುದ್ದದ ಬಯಾನಕ ಸುತ್ತಣವನ್ನು ಅಣಕಿಸುವ(simulate) ಮೂಲಕ ತರಬೇತಿ ನೀಡಲು ಸಹ ಈ ನೆನಸಿನ ಚಳಕವನ್ನು ಬಳಸಲಾಗುತ್ತಿದೆ.

3. ಬೆರೆತ ನನಸು (Mixed reality)

ಇಲ್ಲಿ ಹಿಗ್ಗಿಸಿದ ನನಸು ಮತ್ತು ಹುಸಿ ನನಸು ಇವೆರಡೂ ಚಳಕಗಳನ್ನು ಕೂಡಿ ಬಳಸಿಕೊಳ್ಳಲಾಗುತ್ತದೆ.ಈ ಎರಡೂ ಚಳಕಗಳನ್ನು ಎಶ್ಟರಮಟ್ಟಿಗೆ ಬಳಸಿಕೊಳ್ಳಲಾಗಿದೆ ಎನ್ನುವುದರ ಮೇಲೆ ಈ ಚಳಕದಲ್ಲಿ ಹಲವು ಬಗೆಗಳನ್ನು ಕಾಣಬಹುದು. ದಿಟಜಗತ್ತು ಮತ್ತು ಹುಸಿ ಜಗತ್ತು ಇವೆರಡನ್ನೂ ಬಳಸಿಕೊಳ್ಳುವ ಜೊತೆಗೆ, ನೆನಸಿನ ವಸ್ತುಗಳೊಡನೆ (Virtual assets) ವ್ಯವಹರಿಸುವ ಗುಣವನ್ನು ಬಳಸುವುದರಿಂದ, ಈ ಚಳಕ ಹಲವು ಬಗೆಯ ಬಳಕೆಗಳನ್ನು ಹೊಂದಿದೆ. ಅದರಲ್ಲೂ ಮನೋರಂಜನಾ ಕ್ಶೇತ್ರಗಳಾದ ಸಿನಿಮಾ ಮತ್ತು ವೀಡಿಯೋ ಗೇಮ್ ಗಳಲ್ಲಿ ಹಲವು ಬಳಕೆಗಳನ್ನು ಹೊಂದಿದೆ.

ವೆಬ್ 3.

ಮಿಂಬಲೆಯ ಜಗತ್ತು ಮೊದಲಬಾರಿಗೆ ಜಗತ್ತಿಗೆ ತೆರೆದುಕೊಂಡಾಗ ಅದನ್ನು ವೆಬ್ 1.೦ ಎನ್ನಲಾಯಿತು. ಇಲ್ಲಿ ಮಿಂದಾಣಗಳ(website) ಮೂಲಕ ಮಾಹಿತಿಯನ್ನು ಓದಬಹುದಿತ್ತಶ್ಟೆ(Read only). ಅದು ಬದಲಾಗದ ಮಿಂಪುಟಗಳನ್ನು( static webpages) ಹೊಂದಿರುತ್ತಿತ್ತು, ಅಂದರೆ ಮಿಂದಾಣಗಳು ನಮ್ಮ ಜೊತೆ ವ್ಯವಹರಿಸುತ್ತಿರಲಿಲ್ಲ. ಸದ್ಯಕ್ಕೆ ನಾವು ಬಳಸುತ್ತಿರುವ ಮಿಂಬಲೆಯ ವರ‍್ಶನ್ ವೆಬ್ 2.೦ ಆಗಿದ್ದು, ಇಲ್ಲಿ ಬಳಕೆದಾರ ಮತ್ತು ಕಂಪ್ಯೂಟಿಂಗ್ ಡಿವೈಸ್‍‍ಗಳ ನಡುವೆ ಒಂದು ವ್ಯವಹಾರ(Interaction) ನಡೆಯುತ್ತದೆ. ಇದರಲ್ಲಿ ಹೆಚ್ಚಾಗಿ ಯಾವುದೋ ಒಂದು ಸರ‍್ವರ‍್ ನಲ್ಲಿ ಮಿಂದಾಣ ಇರಲಿದ್ದು, ಸೆಂಟ್ರಲೈಸ್ಡ್ ಬಗೆಯಲ್ಲಿ ಕೆಲಸಮಾಡುತ್ತದೆ. ಇಲ್ಲಿನ ಮಿಂಪುಟಗಳು ಬಳಸುಗರಿಗೆ ಬೇಕಾದ ಮಾಹಿತಿಯನ್ನು ನೀಡುವುದರೊಟ್ಟಿಗೆ, ಬಳಸುಗರಿಂದ ಮಾಹಿತಿಯನ್ನು ಪಡೆಯುತ್ತವೆ. ಇಲ್ಲಿ ಬಳಸುಗರು-ಸರ್‍ವರ್ ನಡುವೆ ಮಾಹಿತಿ ಕೊಡುಕೊಳ್ಳುವಿಕೆ ಆಗುತ್ತದೆ. ಎತ್ತುಗೆಗೆ, ಅಮೆಜಾನ್ ಅಲ್ಲಿ ನಾವು ನಮ್ಮ ಆರ‍್ಡರ‍್ ಹಾಕುವ ಮುನ್ನ ನಾವು ಅಮೆಜಾನ್ ಆಪ್ ಇಲ್ಲವೇ ಮಿಂದಾಣದಲ್ಲಿ ಅನೇಕ ಬಗೆಯ ಚಟುವಟಿಕೆ ಮಾಡುತ್ತಾ ಅದರ ಬಳಿ ವ್ಯವಹರಿಸುತ್ತೇವೆ. ಹೊನಲಿನ ಓದುಗರು, ತಮ್ಮ ಹಿನ್ನುಣಿಕೆಗಳನ್ನು, ಒಕ್ಕಣೆಯ ಮೂಲಕ ಕೊಡಬಹುದು. ಇದು ಸಾದ್ಯವಾಗಿದ್ದು ವೆಬ್ 2.೦ ಇಂದ. ವೆಬ್ 3.೦ ಮಿಂಬಲೆಯ ಮೂರನೇ ವರ‍್ಶನ್ ಆಗಿದೆ. ಇದು ಹಂಚಿಹೋಗಿರುವ ಕಟ್ಟಲೆಗಳ ( Decentralized protocols) ತಳಹದಿಯ ಮೇಲೆ ಕೆಲಸಮಾಡುತ್ತದೆ. ಈ ನಿಟ್ಟಿನಲ್ಲಿ ಬ್ಲಾಕ್‍‍ಚೈನ್ ನಂತಹ ಚಳಕಗಳನ್ನು ಬಳಸಿಕೊಳ್ಳುತ್ತದೆ. ಇದರ ಹರವು ದಿನದಿಂದ ದಿನಕ್ಕೆ ಹಿಗ್ಗುತ್ತಾ ಸಾಗುತ್ತಿದೆ.

ಮೆಟಾವರ್ಸ್‍‍ ಹರವು ಬೆಳೆಯುತ್ತಲೇ ಇದೆ. ಈ ಮೊದಲೇ ಹೇಳಿದಂತೆ, ಇಂದು ಹಲವಾರು ಮೆಟಾವರ್ಸ್‍‍ ಗಳು ಹುಟ್ಟಿಕೊಳ್ಳುತ್ತಿವೆ. ಅವುಗಳಲ್ಲಿ ಕೆಲವು ಹೇಳುವುದಾದರೆ;

ಸ್ಯಾಂಡ್ ಬಾಕ್ಸ್ ( SAND)

ಇದೊಂದು ಮೆಟಾವರ್ಸ್‍‍ ಅಗಿದ್ದು, ಯುತೇರಿಯಮ್ ಬ್ಲಾಕ್ ಚೈನ್ ತಳಹದಿಯ ಮೇಲೆ ಮಾಡಲ್ಪಟ್ಟಿದೆ. ಇದು ತನ್ನದೇ ಆದ ಬೂಪಟ ಹೊಂದಿದೆ. ಇಲ್ಲಿ ದಿಟದಂತಿರುವ ನೆಲವನ್ನು(virtual land) ಕೊಳ್ಳಬಹುದು ಮತ್ತು ಅಲ್ಲಿ ನಮ್ಮದೇ ಆದ ಆಟಗಳನ್ನು ಹುಟ್ಟುಹಾಕಬಹುದು ಮತ್ತು ನಮ್ಮ ಅನುಬವಗಳನ್ನು ಸೇರಿಸಬಹುದು. ಇಲ್ಲಿ, ಈ ಬೂಪಟದ ನೆಲದ ತುಣುಕುಗಳ(Land parcels) ವಹಿವಾಟನ್ನು ಮಾಡಬಹುದು. ನಾವು ಸೈಟ್ ಗಳನ್ನು ಕೊಳ್ಳುವುದು-ಮಾರುವುದನ್ನು ಮಾಡಿದಂತೆಯೇ! ಈ ಬೂಪಟದಲ್ಲಿರುವ ನೆಲದ ತುಣುಕಿಗೆ ಮಿತಿ ಇದೆ. ಆದ್ದರಿಂದ ಇದರ ಬೇಡಿಕೆ ಹೆಚ್ಚಿದಂತೆ, ಇದರ ಬೆಲೆಯೂ ಹೆಚ್ಚುತ್ತದೆ. ಇಲ್ಲಿ ಹಲವಾರು ಕಂಪನಿಗಳು ಕೋಟಿ ಕೋಟಿ ಹೂಡಿಕೆ ಕೂಡ ಮಾಡಿದ್ದಾವೆ. ಈ ಮೆಟಾವರ್ಸ್‍‍ ಜಗತ್ತಿನ  ಕರೆನ್ಸಿ/ಟೋಕನ್ ಹೆಸರು ಸ್ಯಾಂಡ್(SAND).

ಡೀಸೆಂಟ್ರಾಲ್ಯಾಂಡ್ ( Decentraland – MANA )

ಇದೊಂದು ಮೆಟಾವರ್ಸ್‍‍ ಅಗಿದ್ದು, ಯುತೇರಿಯಮ್ ಬ್ಲಾಕ್ ಚೈನ್ ತಳಹದಿಯ ಮೇಲೆ ಮಾಡಲ್ಪಟ್ಟಿದೆ. ಇಲ್ಲಿ ಕೂಡ ನಮ್ಮದೇ ಆದ ಡಿಜಿಟಲ್ ಜಗತ್ತನ್ನು ನಾವು ಕಟ್ಟಿಕೊಳ್ಳಬಹುದು ಮತ್ತು ನೆಲದ ತುಣುಕುಗಳನ್ನು ಕೊಂಡುಕೊಳ್ಳಬಹುದು. ಜೆ.ಪಿ ಮೋರ್ಗನ್ ಕಂಪನಿಯು, ಇತ್ತೀಚಿಗೆ ಇಲ್ಲಿ ತನ್ನದೇ ಒಂದು ತಂಗುದಾಣವನ್ನು( Lounge ) ತೆರೆದಿದೆ. ಈ ಮೆಟಾವರ್ಸ್‍‍ ಜಗತ್ತಿನ ಕರೆನ್ಸಿ/ಟೋಕನ್ ಹೆಸರು ಮಾನಾ( MANA).ಸಂಗೀತಗಾರ ಸ್ನೂಪ್ ಡಾಗ್ ಅವರು ಇಲ್ಲಿ ತಮ್ಮ ನಿಜ ಜಗತ್ತನ್ನು ಹೋಲುವ ಡಿಜಿಟಲ್ ಮನೆಯನ್ನು ಸ್ನೂಪ್‍‍ವರ‍್ಸ್ ನಲ್ಲಿ ಕಟ್ಟುತ್ತಿದ್ದಾರೆ. ಇಲ್ಲಿ ಅವರು ಬಳಸುವ ವಸ್ತುಗಳ NFT ಗಳ ವಹಿವಾಟು ನಡೆಯುತ್ತದೆ. ಸ್ನೂಪ್‍‍ವರ‍್ಸ್ನಲ್ಲಿ ಇವರ ನೆರೆಮನೆಯವರಾಗಲೂ, ಈಗಾಗಲೇ ಜನ ಮುಗಿಬೀಳುತ್ತಿದ್ದು ,ಕೋಟ್ಯಾಂತರ ಡಾಲರ‍್ ಸುರಿಯುತ್ತಿದ್ದಾರೆ.

ಕ್ರಿಪ್ಟೋ ವೋಕ್ಸೆಲ್ಸ್ ( Cryptovoxels )

ಇದೊಂದು ಮೆಟಾವರ್ಸ್‍‍ ಅಗಿದ್ದು, ಯುತೇರಿಯಮ್ ಬ್ಲಾಕ್ ಚೈನ್ ತಳಹದಿಯ ಮೇಲೆ ಮಾಡಲ್ಪಟ್ಟಿದೆ. ಇಲ್ಲಿ ಜನರು ಆರ‍್ಟ್ ಗ್ಯಾಲರಿ, ಡಿಜಿಟಲ್ ಮಾಲ್ ಗಳನ್ನು ಕಟ್ಟಿಕೊಳ್ಳಬಹುದು. ಈ ಮಾಲ್ ಗಳಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಾಡಿಗೆ ನೀಡುವುದರ ಮೂಲಕ ಹಣಗಳಿಸಬಹುದು. ಎತ್ತುಗೆಗೆ ಸಂಗೀತಗಾರರು ಇಲ್ಲಿನ ಕಾನ್ಸರ‍್ಟ್ ಹಾಲ್ ಅಲ್ಲಿ ಸಂಗೀತ ಮೇಳ ನಡೆಸಿದಂತೆ, ಅಂತಹ ಹಾಲ್ ಗಳಿಗೆ ಬೇಡಿಕೆ ಹೆಚ್ಚುತ್ತದೆ. ಇಂದು ಒಂದು ಮಿಂದಾಣವನ್ನು ನಡೆಸಲು ಡೊಮೈನ್ ನೇಮ್ ಕೊಂಡುಕೊಳ್ಳಬೇಕು. ಹಾಗೆಯೇ ಮೆಟಾವರ‍್ಸ್ ಜಗತ್ತಿನಲ್ಲಿ ಅಂಗಡಿ ಮುಂಗಟ್ಟು ತೆರೆದು ವ್ಯಾಪಾರ ನಡೆಸಲು ಜಾಗ ಬೇಕಾಗುತ್ತದೆ. ಆದ್ದರಿಂದ ಈ ಜಗತ್ತಿನ ನೆಲದ ತುಣುಕುಗಳಿಗೆ ಬೇಡಿಕೆಯೂ ಹೆಚ್ಚುತ್ತದೆ.

ಮೆಟಾವರ್ಸ್‍‍ ಹಣಕಾಸು ವ್ಯವಸ್ತೆ

ಬಹಳ ವೇಗವಾಗಿ ಓಡುತ್ತಿರುವ ಡಿಜಿಟಲ್ ಜಗತ್ತಿನ್ನಲ್ಲಿ, ಮೆಟಾವರ್ಸ್‍‍ ಒಂದು ಬಹುದೊಡ್ಡ ಮಾರುಕಟ್ಟೆಯಾಗಿ ಹೊರ ಹಮ್ಮುವುದರಲ್ಲಿ ಎರಡು ಮಾತಿಲ್ಲ. ಬಾರತದ ಒಟ್ಟೂ ಎಕಾನಮಿ ಅಂದಾಜು 2.5 ರಿಂದ 3 ಟ್ರಿಲಿಯನ್ ಡಾಲರ್ ಅಶ್ಟಿದೆ. ಅದೇ ಬಲ್ಲವರ ಪ್ರಕಾರ ಮೆಟಾವರ್ಸ್‍‍ ಇನ್ಮುಂದೆ ಟ್ರಿಲಿಯನ್ ಡಾಲರ್ ಎಕಾನಮಿ ಆಗಿ ಹೊರಹಮ್ಮುತ್ತದೆ ಎಂದು ಅಂದಾಜಿಸಿದ್ದಾರೆ. ಮೈಕ್ರೋಸಾಪ್ಟ್, ಪೇಸ್ಬುಕ್ ಸೇರಿದಂತೆ ಹಲವಾರು ಸಂಸ್ತೆಗಳು ಈ ನಿಟ್ಟಿನಲ್ಲಿ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡುತ್ತಿದ್ದಾರೆ.

ಮೆಟಾವರ್ಸ್‍‍ ತಂದೊಡ್ಡುವ ತೊಡಕುಗಳು

ಚಳಕಗಳು ಬೆಳೆದಂತೆ, ಅದನ್ನು ಸರಿಯಾಗಿ ಬಳಸದೇ ಹೋದಲ್ಲಿ ಹಲವಾರು ತೊಡಕಗಳು ಹುಟ್ಟುಕೊಳ್ಳುತ್ತವೆ. ಮೆಟಾವರ್ಸ್‍‍ ಜಗತ್ತಿನಲ್ಲಿ ಕಾನೂನು ವ್ಯವಸ್ತೆ ಕಾಪಾಡುವುದು ಕೂಡ ಈ ನಿಟ್ಟಿನಲ್ಲಿ ಸವಾಲಿನ ಕೆಲಸವಾಗಿದೆ. ಮೆಟಾವರ್ಸ್‍‍ ಅರಕೆ ಸಂಸ್ತೆಯಾದ ಕಬೂನಿ ವೆಂಚರ್‍ ಹುಟ್ಟು ಹಾಕಿದ ಲಂಡನ್ ಮೂಲದ ನೀನಾ ಜೇನ್ ಪಟೇಲ್ ಅವರು, ಮೆಟಾವರ್ಸ್‍‍‍‍ನಲ್ಲಿ, ಅವರ ಮಾನಕ್ಕೆ ದಕ್ಕೆ ತರುವ ಕೆಲಸ ನಡೆಯಿತು ಎಂದು ದೂರಿದ್ದಾರೆ. ಈ ಬಗೆಯ ಕಾನೂನು ಅವ್ಯವಸ್ತೆ ಅಲ್ಲದೇ ಡಿಜಿಟಲ್ ಜಗತ್ತಿನಲ್ಲಿ ಕಾಸಗಿತನ ಮತ್ತು ಸೆಕ್ಯುರಿಟಿ ಸಂಬಂದಿತ ವಿಶಯಗಳ ಸುತ್ತ ತೊಡಕುಗಳು ತಲೆದೋರಬಹುದು. ಹುಸಿ ಜಗತ್ತಿನಲ್ಲಿ ಹೆಚ್ಚುಕಾಲ ಹೊತ್ತು ಕಳೆಯುತ್ತಾ ಹೋದಂತೆ ಅದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪೆಟ್ಟು ನೀಡಬಹುದು. ಡಿಜಿಟಲ್ ಕ್ರಾಂತಿಯಿಂದ, ಹಿಂದೆಂದಿಗಿಂತ ಇಂದು ಮನುಶ್ಯ ಹೆಚ್ಚು ಬೆಸೆದುಕೊಂಡಿದ್ದಾನೆ ನಿಜ, ಆದರೆ ದಿಟ ಜಗತ್ತಿನ ಒಂದು ಜೀವಂತಿಕೆ, ನೇರ ಒಡನಾಟದ ಅನುಬವ ಹುಸಿ ಜಗತ್ತಿನಲ್ಲಿ ಸಿಗುವುದಿಲ್ಲ.

ಮೆಟಾವರ್ಸ್‍‍ ಒಂದು ಚಳಕವಾಗಿ ಅದ್ಬುತ ಲೋಕವನ್ನು ನಮ್ಮ ಮುಂದೆ ತೆರೆದಿಡಬಹುದು. ಆದರೆ ಇದನ್ನು ಬಳಸುವವರು, ಎಚ್ಚರವಾಗಿರಬೇಕು. ಆ ಜಗತ್ತಿನಲ್ಲೇ ಕಳೆದುಹೋಗಿ, ತಮ್ಮ ದಿಟ ಜಗತ್ತನ್ನು ಮರೆಯಬಾರದು.  ನಮ್ಮ ಈಗಿನ ಜಗತ್ತು ಕೂಡ ಸುಂದರವಾಗಿದೆ. ಇದೇ ಒಂದು ದೇವರು ಹುಟ್ಟು ಹಾಕಿರುವ ಅಲ್ಟಿಮೇಟ್ ಮೆಟಾವರ್ಸ್‍‍ ಅನ್ನಬಹುದೇನೋ. ಇದು ಜೀವಂತಿಕೆ ಇರುವ ಲೋಕ. ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಎನ್ನುವ ಹಾಗೆ, ಬದಲಾವಣೆಯ ಗಾಳಿ ಬೀಸಿದಂತೆ, ಮನುಶ್ಯ ತನ್ನ ಸಹಜ ಗುಣವಾದ ಕುತೂಹಲಕ್ಕೆ ಉತ್ತರ ಕಂಡುಕೊಳ್ಳಲು ಯಾವಾಗಲೂ ಹೊಸದರ ಹುಡುಕಾಟದಲ್ಲಿರುತ್ತಾನೆ. ಅಂತೆಯೇ ತನ್ನ ಅನುಕೂಲ ಹೆಚ್ಚಿಸಿಕೊಳ್ಳಲು,  ಹೊಸ ಹೊಸ ಚಳಕಗಳನ್ನು ಕಂಡುಹಿಡಿಯುತ್ತಿರುತ್ತಾನೆ. ಚಳಕಗಳೇನೋ ಒಳ್ಳೆಯದು ಆದರೆ ಆ ಚಳಕಗಳೇ ನಮ್ಮನ್ನು ಹತೋಟಿಗೆ ತೆಗೆದುಕೊಳ್ಳಬಾರದು ಅಂತಹ ವಿವೇಚನೆ ನಾವು ಬೆಳೆಸಿಕೊಳ್ಳಬೇಕು.

ಕಂತು-1

( ಚಿತ್ರ ಸೆಲೆ ಮತ್ತು ಮಾಹಿತಿ ಸೆಲೆ: forbes.com , digicatapult.org.uk, vistaequitypartners.com, cnbctv18.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: