ಕವಿತೆ: ಏನೂ ಉಳಿದಿಲ್ಲ
– ವೆಂಕಟೇಶ ಚಾಗಿ.
ಬರೀ ಮೌನ
ನಿರಾಶೆಯೋ ತ್ರುಪ್ತಿಯೋ
ನಿನಗೆ ಹೇಳಬೇಕಾದುದು ಏನೂ ಉಳಿದಿಲ್ಲ
ನಿನ್ನ ಅಮಲಿನಲಿ
ಆತ್ಮಕ್ಕೆ ಅಂಟಿದ ಅಲಿಕಿತ ಕಾನೂನು
ನಗುತ್ತಲೆ ನಾಟಕವಾಡಿದೆ
ಚಿತ್ರ ವಿಚಿತ್ರ ಗಂಟೆಗಳ ಯುದ್ದ ಬೂಮಿಯಲ್ಲಿ
ನಿನಗೆ ಹೇಳಬೇಕಾದುದು ಏನೂ ಉಳಿದಿಲ್ಲ
ನಿನ್ನ ಅಮಲಿನಲಿ
ಈಗ ಕಾರಣಗಳೆಲ್ಲಾ ನಿವ್ರುತ್ತಿ ಹೊಂದಿವೆ
ಕಲ್ಪಿತ ಚಿತ್ರಗಳೆಲ್ಲಾ ವಿಚಿತ್ರ ಸಂತೆಗಳಾಗಿ ನಗು ಉಕ್ಕಿಸುತ್ತಿವೆ
ಅದೇ ಕೆನ್ನೆಯ ಸಂತಾಪ
ನಿನಗೆ ಹೇಳಬೇಕಾದುದು ಏನೂ ಉಳಿದಿಲ್ಲ
ನಿನ್ನ ಅಮಲಿನಲಿ
ಪರದೆ ಹಿಂದಿನ ವ್ಯಾಪಾರ ಮನಸ್ಸಿಗೆ ಹಿತವಾದೀತು
ಉಸಿರಾಟದ ಶತ್ರುಗಳಿಗೆ ಪ್ರೀತಿ ಒಂದು ಅಕಾಲದ ಮಾಯೆ
ಸೋಲೋ ಗೆಲುವೋ
ನಿನಗೆ ಹೇಳಬೇಕಾದುದು ಏನೂ ಉಳಿದಿಲ್ಲ
ನಿನ್ನ ಅಮಲಿನಲಿ
ಸತ್ಯ ಅದೊಂದೇ ಆ ಕ್ಶಣಗಳ ಡೊಂಬರಾಟ
ಸಾಗರದ ಹನಿಯ ಲೆಕ್ಕ ನಿನಗೇನು ಗೊತ್ತು
ನನ್ನಂತೆ ನೀನೂ ಮಾಯಾ ಗೊಂಬೆ
ಹ್ರುದಯದೊಳಗಿನ ನೀನು ಏನೇ ಕೇಳಿದರೂ
ನಿನಗೆ ಹೇಳಬೇಕಾದುದು ಏನೂ ಉಳಿದಿಲ್ಲ
ನಿನ್ನ ಅಮಲಿನಲಿ
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು