ಕವಿತೆ: ನಾನೇಕೆ ತಪ್ಪು ಮಾಡಿದೆ

– ವೆಂಕಟೇಶ ಚಾಗಿ.

worried, tension, depression, ಚಿಂತೆ, ಕೊರಗು

ಆ ದಿನಗಳಂದು ನಾನಿನ್ನೂ
ಏನನ್ನು ಅರಿಯದವನು
ಅವರು ಹೇಳದೇ ಇರುವುದರಿಂದ
ಕೆಲವು ತಪ್ಪುಗಳನ್ನು ಮಾಡಿದೆ

ಒಂದು ಕಲ್ಲು ಎಸೆದು,
ಅದೆಲ್ಲವನ್ನು ಕಿತ್ತುಹಾಕಿದೆ
ಕೆಲವು ನನ್ನಿಂದ ಒಡೆದವು

ಕೆಲವರಿಗೆ ನಾನು ಹೊಡೆದೆ
ಅವರು ನನಗೂ ಹೊಡೆದರು
ಸಿಟ್ಟು ನೆತ್ತಿಯ ಮೇಲೆ ಏರಿ
ಅವರಿವರು ಪುಕ್ಕಟೆ ನೀಡಿದ
ಬೈಗುಳಗಳನ್ನು
ಅವರ ಇವರ ಮೇಲೆ ಪ್ರಯೋಗಿಸಿದ್ದೆ

ಆ ಕಪ್ಪು ಹುಡುಗಿಯ ಕೈಯಲ್ಲಿದ್ದ
ಬಿಳಿಯಾದ ಮಲ್ಲಿಗೆ ಹೂವನ್ನು
ಹಾಳುಮಾಡಿದ್ದೇ
ಒಂದೋ ಎರಡೋ ಮೂರೋ
ಸೊನ್ನೆಗಳಿರುವ ನೋಟುಗಳನ್ನು
ಜಂಬದಿಂದ ಹರಿದು ಹಾಕಿದ್ದೆ

ಆ ತೋಟದ ಹಣ್ಣುಗಳಿಗೆ ಕಣ್ಣು ಹಾಕಿ
ಕಿತ್ತು ತಿಂದಿದ್ದೆ
ದೊಡ್ಡವರೆನಿಸಿಕೊಂಡವರು
ಹೇಳಿದ್ದೇ ಹೇಳಿದ್ದು
“ನೀನು ತಪ್ಪು ಮಾಡಿದೆ” ಎಂದು

ಈಗ ನಾನು ದೊಡ್ಡವನಾಗಿರುವೆ
ಎಲ್ಲವನ್ನೂ ತಿಳಿದುಕೊಂಡಿರುವೆ
ಎಲ್ಲರಿಗೂ ಅವರ ತಪ್ಪುಗಳ
ತಿಳುವಳಿಕೆ ನೀಡುವ ಒಳ್ಳೆಯವನಂತೆ

ಆದರೂ ನನಗೆ ಒಂದೇ ಕೊರಗು
ನಾನೀಗಲೂ ತಪ್ಪು ಮಾಡುತ್ತಿರುವೆನೆಂದು
ಅವರಿವರಿಗೆ ಹೊಡೆಯುವೆ
ಕೆಡುಕ ಬಯಸುವೆ ಮನದಲ್ಲಿ

ಅದಾರಿಗೂ ಗೊತ್ತಾಗುತ್ತಲೇ ಇಲ್ಲ
ಆ ಜೀವವ ಕೊಂದರೂ ಅದು ತಪ್ಪಲ್ಲವಂತೆ
ಸವೆದ ಪಾದರಕ್ಶೆಗಳಿಗೆ ಮೋಕ್ಶ ನೀಡದೇ
ಹಿಂಸಿಸುತ್ತಾ ಕುಳಿತಿರುವೆ

ಅಂದು ಮಾಡಿದ ತಪ್ಪುಗಳನ್ನು
ಈಗ ಮಾಡಿದರೂ
ಗೊತ್ತಾಗದು ಯಾರಿಗೂ
ಕಾಲಿಟ್ಟ ಕಡೆ ದಶದಿಕ್ಕುಗಳಲ್ಲೂ
ಹಲವು ತಪ್ಪುಗಳ ಸರಮಾಲೆ

ಆದರೂ ನಾನು ಪ್ರಜ್ನಾವಂತ ನಾಗರಿಕ
ನನ್ನ ತಪ್ಪುಗಳ ಎಣಿಸುವವರು
ಈಗ ಯಾರೂ ಇಲ್ಲ ನನ್ನ ಹೊರತು
ಆಗಾಗ ನನಗನಿಸುತ್ತಲೇ ಇರುತ್ತದೆ
ನಾನೇಕೆ ತಪ್ಪು ಮಾಡಿದೆ…?

(ಚಿತ್ರ ಸೆಲೆ: blog.helpingadvisors.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: