ಕಬ್ಬು ಮತ್ತು ಕಬ್ಬಿನ ಹಾಲಿನ ಮಹತ್ವ

– ಶ್ಯಾಮಲಶ್ರೀ.ಕೆ.ಎಸ್.

ಚಿಣ್ಣರಾದಿಯಾಗಿ ಹಿರಿಯರು ಇಶ್ಟ ಪಡುವಂತಹ ಸಿಹಿ ಪಾನೀಯ ಕಬ್ಬಿನ ಹಾಲು. ವರ‍್ಶವಿಡೀ ಸದಾಕಾಲ ರಸ್ತೆಯ ಇಕ್ಕೆಲಗಳಲ್ಲಿ ಯಂತ್ರದ ಮೂಲಕ ಕಬ್ಬಿನ ಜ್ಯೂಸ್ ತಯಾರಿಸುವ ದ್ರುಶ್ಯ ಕಂಡುಬರುವುದು. ಬೇರೆ ದಿನಗಳಿಗಿಂತ ಬೇಸಿಗೆಯಲ್ಲಿ ಈ ಕಬ್ಬಿನ ಹಾಲಿಗೆ ಒಮ್ಮೆಲೇ ಬೇಡಿಕೆ ಹೆಚ್ಚಾಗಿಬಿಡುತ್ತದೆ. ಕಾರಣ ಉರಿಬಿಸಿಲಿನಿಂದ ಎರಗುವ ದಣಿವನ್ನು ತೀರಿಸಿಕೊಳ್ಳಲು ಜನರು ಹಣ್ಣಿನ ಜ್ಯೂಸ್, ಎಳನೀರು ಗಳಿಗೆ ಮೊರೆಹೋದಂತೆ ಕಬ್ಬಿನ ಜ್ಯೂಸ್ ಗೂ ಮುಗಿ ಬೀಳುತ್ತಿರುತ್ತಾರೆ. ಕಬ್ಬಿನ ಜ್ಯೂಸ್ ನ ರುಚಿ ಎಶ್ಟು ಹಿತವಾದುದೆಂಬುದು ಎಲ್ಲರಿಗೂ ತಿಳಿದಿದೆ. ಒಂದು ಗ್ಲಾಸ್ ಕಬ್ಬಿನ ಹಾಲಿಗೆ ಒಂದು ಚೂರು ಶುಂಟಿ, ಸ್ವಲ್ಪ ನಿಂಬೆಯ ರಸದ ಜೊತೆಗೆ ‌ ಚಿಟಿಕೆ ಉಪ್ಪು ಮತ್ತು ಕಾಳು ಮೆಣಸಿನ ಪುಡಿಯನ್ನು ಸೇರಿಸಿ ಕುಡಿದರೆ ಆಯಾಸ ದಣಿವು ದಿಡೀರನೆ ದೂರವಾಗಿಬಿಡುವುದು. ಈ ಸಿಹಿ ಪೇಯವನ್ನು ಕೊಡುಗೆ ನೀಡಿರುವ ಕಬ್ಬು ನಮ್ಮ ಕರ‍್ನಾಟಕದ ಮೈಸೂರು, ಮಂಡ್ಯ ಅಲ್ಲದೇ ನಾನಾ ಕಡೆ ಬೆಳೆಯುವಂತಹ ಪ್ರಮುಕ ವಾಣಿಜ್ಯ ಬೆಳೆ. ಅಶ್ಟೇ ಅಲ್ಲದೆ ಪ್ರಾಚೀನ ಬೆಳೆಯೂ ಹೌದು. ಅತರ‍್ವಣ ವೇದದಲ್ಲಿ ಇದರ ಬಗ್ಗೆ ಉಲ್ಲೇಕವಿಹುದೆಂದು ಹೇಳಲಾಗುತ್ತದೆ.

ಸ್ಯಾಕರಮ್ ಅಪಿಸಿನಾರಮ್ (Saccharum officinarum) ಎಂಬುದು ಕಬ್ಬಿನ ವೈಜ್ನಾನಿಕ ಹೆಸರು. ಬ್ರೆಜಿಲ್ ಮತ್ತು ಬಾರತ ಅತೀ ಹೆಚ್ಚು ಕಬ್ಬು ಬೆಳೆಯುವ ದೇಶಗಳಾಗಿವೆ. ಸಿಹಿ ತಿನಿಸುಗಳ ತಯಾರಿಕೆಗೆ ಬೇಕಾಗುವ ಸಕ್ಕರೆ ಮತ್ತು ಬೆಲ್ಲಗಳ ತಯಾರಿಕೆಯಲ್ಲಿ ಬಳಸುವ ಮುಕ್ಯವಾದ ಮೂಲ ಪದಾರ‍್ತ ಕಬ್ಬು. ಕಬ್ಬಿನ ರಸದಲ್ಲಿರುವ ಸಿಹಿ ಅದೆಶ್ಟು ಹಿತವಾದುದೆಂಬುದು ಇದರಿಂದಲೇ ತಿಳಿಯುತ್ತದೆ. ವಾರ‍್ಶಿಕ ಬೆಳೆಯಾಗಿರುವ ಕಬ್ಬು ಹೆಚ್ಚು ನೀರಾವರಿಯನ್ನು ಆಶ್ರಯಿಸುತ್ತದೆ. ಕಬ್ಬಿನ ಗಿಡದಲ್ಲಿ ಅದರ ಕಾಂಡವೇ ಕಬ್ಬು. ಕಬ್ಬಿನ ಜಲ್ಲೆಯು ಸುಮಾರು 2 ರಿಂದ 6 ಮೀಟರ್ ಎತ್ತರಕ್ಕೆ ಬೆಳೆಯುವುದು. ಸಾಮಾನ್ಯವಾಗಿ ಕಬ್ಬಿನ ತುಂಡುಗಳನ್ನು ನಾಟಿ ಮಾಡಿ ಕಬ್ಬಿನ ಗಿಡಗಳನ್ನು ಬೆಳೆಸುತ್ತಾರೆ. ಕಾಂಡದಲ್ಲೇ ಬೀಜಗಳು ಸಹ ಇರುವುದನ್ನು ವಿಜ್ನಾನಿಗಳು 19ನೇ ಶತಮಾನದಲ್ಲೇ ಪ್ರಯೋಗದ ಮೂಲಕ ತೋರಿಸಿ ಕೊಟ್ಟಿದ್ದಾರೆ. ಕಬ್ಬಿನ ಎಲೆ ಅತವಾ ಗರಿಗಳು ಕತ್ತಿಯಾಕಾರದಲ್ಲಿದ್ದು ಜೋಳದ ಗಿಡದ ಎಲೆಗಳನ್ನು ಹೋಲುತ್ತವೆ. ಕಬ್ಬಿನ ಜಲ್ಲೆಯ ಅಲ್ಲಲ್ಲಿ ನಿರ‍್ದಿಶ್ಟವಾದ ಅಂತರದಲ್ಲಿ ಗಿಣ್ಣುಗಳಿರುತ್ತವೆ. ಕೆಲವೊಮ್ಮೆ ಮಣ್ಣಿನ ಒಳಗಿರುವ ಗಿಣ್ಣುಗಳಿಂದ ಹಲ‌ವು ಕಬ್ಬಿನ ಕಾಂಡಗಳು ಚಿಗು‌ರೊಡೆದು ಗುಂಪುಗುಂಪಾಗಿಯು ಬೆಳೆಯುತ್ತವೆ.

ಕಬ್ಬಿನಲ್ಲಿ ಹಲವು ತಳಿಗಳಿದ್ದರೂ ಸಂಕ್ರಾಂತಿಯ ಸಡಗರದ ಆಚರಣೆಗೆ ಕರಿಕಬ್ಬಿಗೆ ಮೊದಲ ಆದ್ಯತೆ. ಎಲ್ಲರೊಡನೆ ಸ್ನೇಹ ಸೌಹಾರ‍್ದತೆಯಿಂದಿರಲು ಎಳ್ಳು-ಬೆಲ್ಲದ ಜೊತೆ ಕಬ್ಬಿನ ತುಂಡನ್ನಿಟ್ಟು ಬೀರುವುದು ನಮ್ಮ ಪೂರ‍್ವಜರ ಕಾಲದಿಂದಲೂ ನಡೆದು ಬಂದಿರುವ ಒಂದು ವಿಶೇಶ ಸಂಪ್ರದಾಯ.

ಕಬ್ಬು ಎಂದರೆ ಆನೆಗಳಿಗೆ ತುಂಬಾ ಪ್ರಿಯವಾದುದು. ಕಬ್ಬಿನ ಗದ್ದೆಗಳಿಗೆ ನುಗ್ಗಿ ದಾಳಿ ಮಾಡಿ ದಾಂದಲೆ ಎಬ್ಬಿಸುವ ಸುದ್ದಿಯನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಗ್ರಾಮೀಣ ಬಾಗಗಳಲ್ಲಿ ರಸ ಹಿಂಡಿದ ಕಬ್ಬಿನ ಸಿಪ್ಪೆಗಳನ್ನು ಉರುವಲಾಗಿ, ಹಸು ಎಮ್ಮೆ ಕರುಗಳಿಗೆ ಆಹಾರವಾಗಿ, ಹೊಲಗದ್ದೆಗಳಿಗೆ ನೈಸರ‍್ಗಿಕ ಗೊಬ್ಬರವಾಗಿಯೂ ,ಕಾಗದದ ತಯಾರಿಕೆಗೆ ಕಚ್ಚಾ ಪದಾರ‍್ತವಾಗಿ ಬಳಕೆಯಾಗುವುದು.

ಉದ್ದನೆಯ ಬೆತ್ತವನ್ನು ಬಿಂಬಿಸುವ ಕಬ್ಬಿನ ಜಲ್ಲೆ ತನ್ನೊಳಗೆ ನಾರಿನಿಂದ ಕೂಡಿದ ಸಿಹಿಯಾದ ಅಮ್ರುತವನ್ನು ಇರಿಸಿಕೊಂಡಿದೆ. ಇದರ ಸಿಪ್ಪೆಯನ್ನು ಬಾಯಿಯ ಹಲ್ಲುಗಳ ಮೂಲಕ ಸುಲಿದು ರಸವನ್ನು ಕುಡಿಯುವುದರಿಂದ ನಮ್ಮ ದಂತಪಂಕ್ತಿಗಳ ಬಲವರ‍್ದನೆಯಾಗುತ್ತದೆ ಹಾಗೂ ಬಾಯಿಯ ದುರ‍್ವಾಸನೆಗೆ ಮುಕ್ತಿ ನೀಡುವುದು. ಕಬ್ಬಿನ ರಸವನ್ನು ಆಗಾಗ್ಗೆ ಕುಡಿಯುವುದರಿಂದ ಜಾಂಡೀಸ್ ಅತವಾ ಕಾಮಾಲೆ ರೋಗವನ್ನು ದೂರವಿಡಬಹುದೆಂದು ತಜ್ನರು ದ್ರುಡಪಡಿಸಿದ್ದಾರೆ. ವಾಕರಿಕೆ, ಅಜೀರ‍್ಣತೆಗೆ ವಿದಾಯ ಹೇಳಬಹುದು. ನೈಸರ‍್ಗಿಕ ರಸವಾದ್ದರಿಂದ ಕಬ್ಬಿನ ಹಾಲಿನ ಅತೀಯಾದ ಸೇವನೆಯಿಂದ ಕಿಡ್ನಿಯ ಕಲ್ಲುಗಳನ್ನು ಕರಗಿಸಬಹುದಂತೆ.

ಆಗಾಗ್ಗೆ ಶುಚಿಗೊಳಿಸದೇ ಇರುವ ಯಂತ್ರಗಳಿಂದಲೂ ತಯಾರಿಸಿ ಕೊಡುವ ಕಬ್ಬಿನ ಜ್ಯೂಸ್ ನಿಂದ ಬೇರೆ ಬೇರೆ ರೋಗಗಳಿಗೆ ಎಡೆ ಮಾಡಿಕೊಡಬಹುದು. ನಮ್ಮ ನಮ್ಮ ಮನೆಗಳಲ್ಲಿಯೂ ಕಬ್ಬನ್ನು ಅತೀ ಸಣ್ಣ ತುಂಡುಗಳಾಗಿ ಮಾಡಿ ಮಿಕ್ಸರ್‌ನಲ್ಲಿ ಜ್ಯೂಸ್ ತಯಾರಿಸಿ ಸವಿಯಬಹುದು. ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ, ಚಳಿಗಾಲದಲ್ಲಿ ಶರೀರಕ್ಕೆ ಶಾಕವನ್ನು ನೀಡುವಂತಹ ಗುಣ ಕಬ್ಬಿನ ರಸಕ್ಕಿದೆ ಎಂಬದೇ ವಿಶೇಶವಾದುದು. ಕಬ್ಬಿನ ರಸದ ಸೇವನೆ ಪ್ರಮುಕವಾಗಿ ನಿರ‍್ಜಲೀಕರಣದಿಂದ ಬಳಲುವವರಿಗೆ ಪುಶ್ಟಿಯನ್ನು ನೀಡುವ ಪುಶ್ಟಿವರ‍್ದಕವೂ ಆಗಿದೆ.

(ಚಿತ್ರ ಸೆಲೆ: maxpixel.net, wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: