ಕುಮ್ಮಕಿವಿ – ಬ್ಯಾಲೆನ್ಸಿಂಗ್ ರಾಕ್

– .

ಕುಮ್ಮಕಿವಿ ಎನ್ನುವುದು ಸಣ್ಣ ಅಡಿಪಾಯದ ಮೇಲೆ ಸಮತೋಲನ ಕಾಪಾಡಿಕೊಂಡು ನಿಂತಿರುವ ದೊಡ್ಡ ಬಂಡೆ. ಪಿನ್‌ಲ್ಯಾಂಡಿನ ಆಗ್ನೇಯ ಬಾಗದಲ್ಲಿರುವ ದಕ್ಶಿಣ ಕರೆಲಿಯಾ ಪ್ರದೇಶದ ಪುರಸಬೆಯಾದ ರುಕೊಲಾಹ್ತಿಯಾದ ಸುಂದರ ಕಾಡಿನಲ್ಲಿ ಈ ಬಂಡೆ ಕಂಡುಬರುತ್ತದೆ. ಕುಮ್ಮಕಿವಿಯ ವಿಶೇಶತೆಯೆಂದರೆ ಇದು ಸಣ್ಣದಾದ ಉಬ್ಬು ತಳಪಾಯದ ಮೇಲೆ ನಿಂತಿರುವುದು. ಕುಮ್ಮಕಿವಿ ಎಶ್ಟು ಬದ್ರವಾಗಿ ನಿಂತಿದೆಯೆಂದರೆ ಮಾನವ ಬಲದಿಂದ ಅದನ್ನು ಅಲುಗಾಡಿಸಲು ಸಾದ್ಯವಿಲ್ಲವಾಗಿದೆ. ಕುಮ್ಮಕಿವಿ ಸಮತೋಲನದ ಬಂಡೆಯ ವೈಶಿಶ್ಟ್ಯವೆಂದರೆ, ಇದರಲ್ಲಿ ಎರಡು ಬಂಡೆಗಳನ್ನು ಕಾಣಬಹುದು. ಇಲ್ಲಿ ಒಂದರ ಮೇಲೆ ಇನ್ನೊಂದು ಬಂಡೆ ನಿಂತಿದ್ದು. ನೋಡುಗರಿಗೆ ಇದು ಯಾವ ಸಮಯದಲ್ಲಾದರೂ ಉರುಳುತ್ತದೆ ಎಂದು ಎನಿಸದಿರದು. ಇಶ್ಟು ದಿನಗಳಲ್ಲಿ ಮಾನವ ಅನೇಕ ಬಾರಿ ಈ ಬಂಡೆಯನ್ನು ಉರುಳಿಸಲು ಅತವಾ ಅಲುಗಾಡಿಸಲು ಪ್ರಯತ್ಮಿಸಿದರೂ, ಇದು ಕೊಂಚವೂ ಅಲುಗಾಡದೆ ಗಟ್ಟಿಯಾಗಿ ನಿಂತಿದೆ.

ಪಿನ್ನಿಶ್ ಬಾಶೆಯಲ್ಲಿ ಕುಮ್ಮಕಿವಿ ಎಂದರೆ ವಿಚಿತ್ರ ಬಂಡೆ ಎಂದರ‍್ತ. ಇಲ್ಲಿರುವ ಎರಡು ಬಂಡೆಗಳಲ್ಲಿ ಒಂದು ಕೆಳಬಾಗದಲ್ಲಿನ ಬಂಡೆ, ಬೂಮಿಯಲ್ಲಿ ಅಡಗಿದೆ. ಇದು ಬಾಗಿದ ದಿಬ್ಬದ ಆಕಾರ ಹೊಂದಿದ್ದು, ಇದರ ಮೇಲ್ಮೈ ನುಣುಪಾಗಿ ಉಬ್ಬಾಗಿದೆ. ಇದರ ಮೇಲೆ ಮತ್ತೊಂದು ದೊಡ್ಡ ಬಂಡೆ ನಿಂತಿದ್ದು, ಈ ಎರಡು ಬಂಡೆಗಳ ನಡುವಿನ ಸಂಪರ‍್ಕ ಬಿಂದು ಅತ್ಯಂತ ಚಿಕ್ಕದಾಗಿದೆ. ಇದನ್ನು ಗಮನಿಸಿದರೆ, ಮೇಲಿನ ಬಂಡೆಯು ಆಶ್ಚರ‍್ಯಕರ ರೀತಿಯಲ್ಲಿ ಸಮತೋಲನವನ್ನು ಕಾಯ್ದುಕೊಂಡಿದೆ ಎನಿಸದಿರದು. ಇಂತಹ ಪ್ರಕ್ರುತಿಯ ವೈಚಿತ್ರ ಕಂಡಾಗ ಮಾನವನ ಮನದಲ್ಲಿ ಸಾಮಾನ್ಯವಾಗಿ ಅದನ್ನು ಬಗೆದು ನೋಡುವ ಹವ್ಯಾಸ ಗರಿಗೆದರುತ್ತೆ. ಈ ನಿಟ್ಟಿನಲ್ಲಿ ಹಲವಾರು ಜನರ ಗುಂಪು ಈ ಸಮತೋಲನದ ಬಂಡೆಯನ್ನು ತಮ್ಮ ಕೈಗಳಿಂದ ಪಕ್ಕಕ್ಕೆ ಉರುಳಿಸುವ ಪ್ರಯತ್ನ ಮಾಡಿರಲಿಕ್ಕೂ ಸಾಕು. ಸಾದ್ಯವಾಗದಿದ್ದಾಗ ಅತಿಮಾನುಶ ಅಲೌಕಿಕ ಶಕ್ತಿಯೇ ಇದಕ್ಕೆ ಕಾರಣ ಎಂದು ಊಹಿಸಿ, ಅದಕ್ಕೆ ಸರಿ ಹೊಂದುವಂತಹ ದಂತ ಕತೆಗಳನ್ನು ಸ್ರುಶ್ಟಿಸಿದ್ದಾರೆ.

ಪಿನ್‌ಲ್ಯಾಂಡಿನ ಪುರಾಣವು ರಾಕ್ಶಸರ ಮತ್ತು ದೈತ್ಯರಂತಹ ಅಲೌಕಿಕ ಜೀವಿಗಳಿಂದ ತುಂಬಿದೆ. ಈ ದೈತ್ಯರು ಮತ್ತು ರಾಕ್ಶಸರು ಅತಿಮಾನುಶ ಶಕ್ತಿಯನ್ನು ಹೊಂದಿದ್ದು, ಹಲವಾರು ಮಾನವರು ಸೇರಿ ಮಾಡಲಾಗದ ಕೆಲಸವನ್ನು, ಒಂದೇ ಕ್ಶಣಾರ‍್ದದಲ್ಲಿ ಮಾಡಲು ಶಕ್ತವಾಗಿದ್ದರಂತೆ. ಪಿನ್ನಿಶ್ ದಂತಕತೆಯಲ್ಲಿ ಬರುವ ಹೈಸಿ ಒಂದು ಬಗೆಯ ದೈತ್ಯವಾಗಿದ್ದು, ಇದು ಕಲ್ಲಿನ ಜೊತೆ ಬಾಂದವ್ಯ ಹೊಂದಿತ್ತು ಎನ್ನುತ್ತವೆ ಪುರಾಣಗಳು. ಈ ದೈತ್ಯ ಜೀವಿಗಳಿಗೆ, ದೊಡ್ಡ ದೊಡ್ಡ ಕಲ್ಲಿನ ಬಂಡೆಗಳನ್ನು ಮನಬಂದಂತೆ ಎಸೆಯುವ, ಬಂಡೆಗಳಲ್ಲಿ ತೂತು ಕೊರೆಯುವ ಅಬ್ಯಾಸವಿತ್ತೆಂದು ಸ್ತಳೀಯರು ಹೇಳುತ್ತಾರೆ. ಈ ದೈತ್ಯರು ಅತವಾ ರಾಕ್ಶಸರು ಕುಮ್ಮಕಿವಿ ಬಂಡೆಯನ್ನು ತಂದು ಇಲ್ಲಿ ಜೋಡಿಸಿದ್ದಾರೆ ಎಂಬುದು ಅಲ್ಲಿಯವರ ನಂಬಿಕೆ. ಆದ್ದರಿಂದಲೇ ಇದನ್ನು ಮನುಶ್ಯರಿಂದ ಅಲುಗಾಡಿಸಲಾಗಿಲ್ಲ ಎನ್ನುವುದು ಅವರ ಅಂಬೋಣ.

ಕುಮ್ಮಕಿವಿ ಬ್ಯಾಲೆನ್ಸಿಂಗ್ ಬಂಡೆಯ ಬಗ್ಗೆ ಬೂವಿಜ್ನಾನಿಗಳು ಬೇರೆಯದೇ ಪರ‍್ಯಾಯ ವಿವರಣೆಯನ್ನು ನೀಡಿದ್ದಾರೆ. ಸರಿ ಸುಮಾರು 12,000 ವರ‍್ಶಗಳ ಹಿಂದೆ, ಹಿಮನದಿಯ ಅವದಿಯಲ್ಲಿ, ಹಿಮನದಿಯು ದೊಡ್ಡ ಬಂಡೆಗಳನ್ನು ಹೊತ್ತು ತಂದಿತ್ತು. ಮತ್ತೆ ಹಿಮನದಿ ಹಿಂದಕ್ಕೆ ಸರಿದಾಗ, ಅನೇಕ ಬಂಡೆಗಳು ಹಿಂದಕ್ಕೆ ಹೋಗದೆ ಅಲ್ಲಲ್ಲೇ ಉಳಿದವು. ಅವುಗಳಲ್ಲಿ ಈ ದೊಡ್ಡ ಬಂಡೆಯೂ ಒಂದು. ಅದು ಬ್ಯಾಲೆನ್ಸಿಂಗ್ ಬಂಡೆಯಾಗಿ ಮತ್ತೊಂದು ಬಂಡೆಯ ಮೇಲೆ ಉಳಿಯಿತು. ಇದನ್ನು ಸ್ತಳೀಯರು ಕುಮ್ಮಕಿವಿ ವಿಚಿತ್ರ ಬಂಡೆ ಎಂದು ಹೆಸರಿಸಿದರು. ಈ ವೈಜ್ನಾನಿಕ ವಿವರಣೆ ನಿಜಕ್ಕೂ ಸರಿ ಎನಿಸುತ್ತದಲ್ಲವೇ?

ಬ್ಯಾಲೆನ್ಸಿಂಗ್ ರಾಕ್ ನಂತಹ ಬಂಡೆಗಳು ವಿಶ್ವದ ಅನೇಕ ದೇಶಗಳಲ್ಲಿ ಕಂಡು ಬರುತ್ತವೆ. ಅವುಗಳಿಗೂ ಈ ಕುಮ್ಮಕಿವಿಗೂ ಇರುವ ವ್ಯತ್ಯಾಸವೆಂದರೆ ಗಾತ್ರ ಮಾತ್ರ. ಈ ಬಂಡೆ ಏಳು ಮೀಟರ್ ಅಗಲ ಮತ್ತು ಐದು ಮೀಟರ್ ಎತ್ತರವಿದ್ದು, ಒಂದು ಅಂದಾಜಿನ ಪ್ರಕಾರ ಐದು ನೂರು ಟನ್ ತೂಕವಿದೆಯಂತೆ. ಇಶ್ಟು ದೊಡ್ಡ ಗಾತ್ರದ ಬ್ಯಾಲೆನ್ಸಿಂಗ್ ಬಂಡೆ ಬೇರಾವ ದೇಶದಲ್ಲೂ ಇಲ್ಲ.

(ಮಾಹಿತಿ ಮತ್ತು ಚಿತ್ರ ಸೆಲೆ: atlasobscura.com, outinthenature.com, finlandnaturally.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: