ಅಮುಗೆ ರಾಯಮ್ಮನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ.

ಅಮುಗಿದೇವಯ್ಯ, AmugiDevayya

ಆಸೆಯುಳ್ಳವಂಗೆ ಮಾಟಕೂಟವಲ್ಲದೆ
ನಿರಾಶೆಯುಳ್ಳವಂಗೆ ಮಾಟಕೂಟವೇಕೆ
ಮನಪರಿಣಾಮಿಗೆ ಮತ್ಸರವೇಕೆ
ಸುತ್ತಿದ ಮಾಯಾ ಪ್ರಪಂಚವ ಜರಿದವಂಗೆ
ಅಂಗನೆಯರ ಹಿಂದು ಮುಂದು ತಿರುಗಲೇಕೆ
ಅಮುಗೇಶ್ವರನೆಂಬ ಲಿಂಗವನರಿದವಂಗೆ
ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ.

ಒಳ್ಳೆಯ ನಡೆನುಡಿಗಳಿಂದ ಬಾಳುತ್ತಿರುವ ವ್ಯಕ್ತಿಗೆ ದೇವರನ್ನು ಪೂಜಿಸುವ ಇಲ್ಲವೇ ಮಾಟಮಂತ್ರಗಳ ಆಚರಣೆಯಲ್ಲಿ ತೊಡಗುವ ಅಗತ್ಯವಿಲ್ಲವೆಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

‘ಒಳ್ಳೆಯ ನಡೆನುಡಿ’ ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ಅವನಿಗೆ, ಅವನ ಕುಟುಂಬಕ್ಕೆ ಒಲವು, ನಲಿವು ಮತ್ತು ನೆಮ್ಮದಿಯನ್ನು ತರುವಂತೆಯೇ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವುದು;

ಆಸೆ+ಉಳ್+ಅವಂಗೆ; ಆಸೆ=ಬಯಕೆ; ಉಳ್=ಇರು; ಅವಂಗೆ=ಅವನಿಗೆ/ವ್ಯಕ್ತಿಗೆ;

ಆಸೆಯುಳ್ಳವಂಗೆ=ಸಂಪತ್ತನ್ನು ಗಳಿಸಬೇಕೆಂಬ, ಆಡಳಿತದ ಗದ್ದುಗೆಯನ್ನು ಏರಬೇಕೆಂಬ, ದೇಹದ ಕಾಮದ ತುಡಿತವನ್ನು ತೀರಿಸಿಕೊಳ್ಳಬೇಕೆಂಬ ಮತ್ತು ಇನ್ನಿತರ ಆಸೆಗಳನ್ನು ಮಯ್ ಮನದಲ್ಲಿ ತುಂಬಿಕೊಂಡಿರುವ ವ್ಯಕ್ತಿಗೆ;

ಮಾಟ+ಕೂಟ+ಅಲ್ಲದೆ; ಮಾಟ=ವ್ಯಕ್ತಿಯು ತನ್ನ ಆಸೆಗಳನ್ನು ಈಡೇರಿಸಿಕೊಳ್ಳಲೆಂದು ಮಂತ್ರತಂತ್ರಗಳ ಮೂಲಕ ದೇವತೆ ಹೆಸರನ್ನು ಉಚ್ಚರಿಸುತ್ತ, ನರಬಲಿ ಇಲ್ಲವೇ ಪ್ರಾಣಿಬಲಿಯನ್ನು ಕೊಡುವಂತಹ ಕ್ರೂರವಾದ ಆಚರಣೆ; ಕೂಟ=ಇಂದ್ರಜಾಲ/ಮೋಸ;

ಮಾಟಕೂಟ=ದೇವತೆಯನ್ನು ಒಲಿಸಿಕೊಳ್ಳಲು ಮಾಡುವ ಆಚರಣೆಗಳು. ವ್ಯಕ್ತಿಯು ತನ್ನ ಹಗೆಯನ್ನು ಕೊಲ್ಲಿಸುವುದಕ್ಕಾಗಿ ಇಲ್ಲವೇ ಹಗೆಯ ಸಂಪತ್ತನ್ನು ನಾಶಗೊಳಿಸುವುದಕ್ಕಾಗಿ ಇಲ್ಲವೇ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಮಂತ್ರವಾದಿಗಳಿಂದ ಮಾಡಿಸುವ ಬಹುಬಗೆಯ ಆಚರಣೆಗಳು; ಮನದ ಬಯಕೆಗಳನ್ನು ಈಡೇರಿಸಿಕೊಡಬಲ್ಲ ಶಕ್ತಿಯು ಕೆಲವು ದೇವತೆಗಳಲ್ಲಿದೆ ಎಂಬ ನಂಬಿಕೆಯು ಮಾನವ ಸಮುದಾಯದ ಮನದಲ್ಲಿ ನೆಲೆಗೊಂಡಿದೆ;

ಅಲ್ಲದೆ=ಹೊರತು; ನಿರಾಶೆ+ಉಳ್+ಅವಂಗೆ; ನಿರಾಶೆ=ಯಾವುದೇ ಬಗೆಯ ಕೆಟ್ಟ ಬಯಕೆಗಳು ಇಲ್ಲದಿರುವುದು; ಮಾಟಕೂಟ+ಏಕೆ;

ಆಸೆಯುಳ್ಳವಂಗೆ ಮಾಟಕೂಟವಲ್ಲದೆ ನಿರಾಶೆಯುಳ್ಳವಂಗೆ ಮಾಟಕೂಟವೇಕೆ=ಮನದಲ್ಲಿ ಬಹುಬಗೆಯ ಆಸೆಯುಳ್ಳವನು ಮಾಟಕೂಟಗಳಲ್ಲಿ ತೊಡಗುತ್ತಾನೆಯೇ ಹೊರತು, ಪರರ ಸಂಪತ್ತಿಗಾಗಿ ಹಂಬಲಿಸದ, ಆಡಳಿತದ ಗದ್ದುಗೆಯನ್ನು ಬಯಸದ ಇಲ್ಲವೇ ಶತ್ರುವಿನ ನಾಶಕ್ಕಾಗಿ ಹಾತೊರೆಯದ ವ್ಯಕ್ತಿಗೆ ಮಾಟಕೂಟಗಳನ್ನು ಮಾಡುವ ಅಗತ್ಯವೇ ಇಲ್ಲ; ಅಂದರೆ ಮಾಟಕೂಟಗಳಲ್ಲಿ ತೊಡಗುವ ವ್ಯಕ್ತಿಗಳು ತಮ್ಮ ಹಿತಕ್ಕಾಗಿ ಸಹಮಾನವರಿಗೆ ಮತ್ತು ಸಮಾಜಕ್ಕೆ ಕೇಡನ್ನು ಬಗೆಯುವ ವ್ಯಕ್ತಿಗಳಾಗಿರುತ್ತಾರೆ;

ಮನ=ಮನಸ್ಸು; ಪರಿಣಾಮಿ=ತಾಳ್ಮೆಯ, ಸಮಚಿತ್ತದ, ಶಾಂತಿಯ ನಡೆನುಡಿಯಿಂದ ಸಹಮಾನವರಿಗೆ ಒಳಿತನ್ನು ಮಾಡುವ ವ್ಯಕ್ತಿ; ಮನಪರಿಣಾಮಿ=ತನ್ನ ಮಯ್ ಮನವನ್ನು ಹತೋಟಿಯಲ್ಲಿಟ್ಟುಕೊಂಡು ಬಾಳುತ್ತಿರುವ ವ್ಯಕ್ತಿ; ಮತ್ಸರ+ಏಕೆ; ಮತ್ಸರ=ಹೊಟ್ಟೆಕಿಚ್ಚು/ಪರರಿಗೆ ಒಳಿತಾಗುವುದನ್ನು ಕಂಡು ಅಸೂಯೆಯಿಂದ ನರಳುತ್ತ, ಅವರಿಗೆ ಕೇಡನ್ನು ಬಗೆಯಲು ಚಿಂತಿಸುವುದು;

ಮನಪರಿಣಾಮಿಗೆ ಮತ್ಸರವೇಕೆ=ತಾಳ್ಮೆಯ ನಡೆನುಡಿಯುಳ್ಳ ವ್ಯಕ್ತಿಯಲ್ಲಿ ಮತ್ಸರದ ಒಳಮಿಡಿತಗಳು ಏಕಿರಬೇಕು?. ಈ ಪ್ರಶ್ನೆಯು ಒಂದು ಸಾಮಾಜಿಕ ವಾಸ್ತವವನ್ನು ತಿಳಿಸುತ್ತಿದೆ. ಅದೇನೆಂದರೆ ಜಾತಿ, ಮತ, ದೇವರ ಹೆಸರಿನ ಸಾಮಾಜಿಕ ಒಕ್ಕೂಟಗಳಲ್ಲಿ ಉನ್ನತ ಗದ್ದುಗೆಯಲ್ಲಿರುವ ವ್ಯಕ್ತಿಗಳು ಹೊರನೋಟಕ್ಕೆ ಎಲ್ಲರೊಡನೆ ಪ್ರೀತಿ, ಕರುಣೆ ಮತ್ತು ಸಮಾನತೆಯಿಂದ ನಡೆದುಕೊಳ್ಳುವಂತೆ ಕಂಡುಬರುತ್ತಾರೆ.ಆದರೆ ಇನ್ನಿತರ ಜಾತಿ ಮತಕ್ಕೆ ಸೇರಿದ ಮತ್ತು ತಮ್ಮದಲ್ಲದ ದೇವರನ್ನು ಪೂಜಿಸುವ ಜನಸಮುದಾಯದ ಬಗ್ಗೆ ಅತ್ಯಂತ ಆಕ್ರೋಶ, ಅಸೂಯೆ, ತಿರಸ್ಕಾರ ಮತ್ತು ಕ್ರೂರತನದಿಂದ ನಡೆದುಕೊಳ್ಳುತ್ತಾರೆ;

ಸುತ್ತಿದ=ಆವರಿಸಿದ/ಕೂಡಿರುವ; ಮಾಯಾ/ಮಾಯೆ=ಇಲ್ಲದ್ದನ್ನು ಇದೆಯೆಂದು, ಇರುವುದನ್ನು ಇಲ್ಲವೆಂದು ತಿಳಿಯುವಂತೆ ಮಾಡುವುದು; ಪ್ರಪಂಚ=ಜಗತ್ತು; ಜರಿ+ದ+ಅವಂಗೆ; ಜರಿ=ನಿಂದಿಸು/ತೆಗಳು; ಅಂಗನೆ=ಹೆಣ್ಣು; ತಿರುಗಲ್+ಏಕೆ; ತಿರುಗು=ಅಲೆದಾಡು/ಸುತ್ತು/ಹಿಂದೆ ಹೋಗು ;

ಸುತ್ತಿದ ಮಾಯಾ ಪ್ರಪಂಚವ ಜರಿದವಂಗೆ ಅಂಗನೆಯರ ಹಿಂದು ಮುಂದು ತಿರುಗಲೇಕೆ = “ಈ ಜಗತ್ತಿನಲ್ಲಿ ಇರುವುದನ್ನು ದಿಟವೆಂದು ನಂಬಬೇಡಿರಿ. ಇದೆಲ್ಲವೂ ಕೇವಲ ಕಣ್ಕಟ್ಟು. ಇದಾವುದು ಶಾಶ್ವತವಲ್ಲ. ಎಲ್ಲವೂ ನಶ್ವರ. ಆದ್ದರಿಂದ ಹೆಣ್ಣು ಹೊನ್ನು ಮಣ್ಣಿನಿಂದ ದೂರವಿರಬೇಕು” ಎಂಬ ವಿರಕ್ತಿಯ ಮಾತುಗಳನ್ನಾಡುತ್ತಿರುವ ವ್ಯಕ್ತಿಯು ತನ್ನ ದೇಹದ ಕಾಮವನ್ನು ಹಿಂಗಿಸಿಕೊಳ್ಳಲು ಹೆಣ್ಣುಗಳಿಗಾಗಿ ಹಂಬಲಿಸುವುದೇಕೆ; ವಿರಕ್ತರಂತೆ ಉಡುಗೆತೊಡುಗೆಗಳನ್ನು ತೊಟ್ಟು , “ಈ ಜಗತ್ತೆಲ್ಲವೂ ಮಾಯೆ” ಎಂದು ಜನಗಳ ಮುಂದೆ ಬಹಿರಂಗದಲ್ಲಿ ಹೇಳುತ್ತ, ನಿಜ ಜೀವನದಲ್ಲಿ ಸಕಲ ಬಗೆಯ ಸವಲತ್ತುಗಳನ್ನು ಹೊಂದಿ, ಅಂತರಂಗದಲ್ಲಿ ಎಲ್ಲ ಬಗೆಯ ಕಾಮನೆಗಳಲ್ಲಿಯೂ ಮುಳುಗಿರುವ ವಂಚಕರ ಕೆಟ್ಟ ನಡೆನುಡಿಗಳನ್ನು ಪ್ರಶ್ನಿಸಲಾಗಿದೆ;

ಅಮುಗೇಶ್ವರನ್+ಎಂಬ; ಅಮುಗೇಶ್ವರ=ಶಿವ/ಅಮುಗೆ ರಾಯಮ್ಮನವರ ವಚನಗಳ ಅಂಕಿತನಾಮ; ಎಂಬ=ಎನ್ನುವ ; ಲಿಂಗ+ಅನ್+ಅರಿದ+ಅವಂಗೆ; ಲಿಂಗ=ಶಿವ; ಅನ್=ಅನ್ನು; ಅರಿದ=ತಿಳಿದ ; ಲಿಂಗವನರಿದವಂಗೆ=ಲಿಂಗವನ್ನು ತಿಳಿದವನಿಗೆ;

ಅಷ್ಟ+ವಿಧ+ಅರ್ಚನೆ; ಅಷ್ಟ=ಎಂಟು; ವಿಧ=ಬಗೆ/ರೀತಿ; ಅರ್ಚನೆ=ಪೂಜೆ; ಅಷ್ಟವಿಧಾರ್ಚನೆ=ಅರಿಸಿನ ಬೆರೆತಿರುವ ಅಕ್ಕಿ, ನೀರು, ಗಂದ, ಹೂವು, ದೂಪ, ದೀಪ, ಹಣ್ಣುಕಾಯಿ, ತಾಂಬೂಲ-ಈ ಎಂಟು ವಸ್ತುಗಳನ್ನು ಬಳಸಿ ಮಾಡುವ ಪೂಜೆ;

ಷೋಡಶ+ಉಪಚಾರದ; ಷೋಡಶ=ಹದಿನಾರು; ಉಪಚಾರ=ಸೇವೆ; ಷೋಡಶೋಪಚಾರ=ದೇವರ ವಿಗ್ರಹಕ್ಕೆ ಹದಿನಾರು ಬಗೆಯಲ್ಲಿ ಸೇವೆಯನ್ನು ಮಾಡುವುದು; ಹಂಗು+ಏಕೆ; ಹಂಗು=ರುಣ/ಅವಲಂಬನೆ;

ಅಮುಗೇಶ್ವರನೆಂಬ ಲಿಂಗವನರಿದವಂಗೆ ಅಷ್ಟವಿಧಾರ್ಚನೆ ಷೋಡಶೋಪಚಾರದ ಹಂಗೇಕೆ= ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ತಿಳಿದು ಬಾಳುತ್ತಿರುವ ವ್ಯಕ್ತಿಗೆ ದೇವರನ್ನು ಒಲಿಸಿಕೊಳ್ಳಲೆಂದು ಇಲ್ಲವೇ ದೇವರ ಅನುಗ್ರಹವನ್ನು ಪಡೆಯಲೆಂದು ಜನರು ಮಾಡುತ್ತಿರುವ ಯಾವುದೇ ಬಗೆಯ ಆಚರಣೆಗಳ ಅಗತ್ಯವಿಲ್ಲ. ಏಕೆಂದರೆ ಹನ್ನೆರಡನೆಯ ಶತಮಾನದ ಶಿವಶರಣಶರಣೆಯರ ನಿಲುವಿನಲ್ಲಿ ವ್ಯಕ್ತಿಯು ಒಳ್ಳೆಯ ನಡೆನುಡಿಯಿಂದ ಬಾಳುವುದೇ ದೇವರಿಗೆ ಮಾಡುವ ಪೂಜೆಯಾಗಿತ್ತು.

(ಚಿತ್ರ ಸೆಲೆ: lingayatreligion.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: