ಮನಸೂರೆಗೊಳ್ಳುವ ಲೈಟ್ಲಮ್ ಕಣಿವೆ

– .

ಮೇಗಾಲಯ ರಾಜ್ಯವು ಅನೇಕ ಸುಂದರ ಹಸಿರಿನ ತಾಣಗಳಿಗೆ ಹೆಸರುವಾಸಿ. ಇದು, ತಮಗೆಲ್ಲಾ ತಿಳಿದಿರುವಂತೆ ಗುಹೆಗಳ ಆಲಯ. ಸದಾಕಾಲ ಹಚ್ಚ ಹಸಿರಿನಿಂದ ಕಂಗೊಳಿಸುವ ಲೈಟ್ಲಮ್ ಕಣಿವೆ ಸಹ ಮೇಗಾಲಯದಲ್ಲಿದೆ. ಲೈಟ್ಲಮ್ ಎಂದರೆ ಬೆಟ್ಟಗಳ ಕೊನೆ ಎಂದು ಅನುವಾದಿಸಬಹುದು. ಇದು ನಿಜಕ್ಕೂ ಅನ್ವರ‍್ತನಾಮ. ಲೈಟ್ಲಮ್ ನಂತರ ಯಾವುದೇ ಬೆಟ್ಟಗಳಿಲ್ಲ, ಬದಲಿಗೆ ಇಳಿಜಾರನ್ನು ಕಾಣಬಹುದು. ಈ ವಿಶಿಶ್ಟ ಸ್ತಳದ ಮಾಹಿತಿ ಪ್ರವಾಸಿಗರ ಮಾರ‍್ಗದರ‍್ಶಿಯಲ್ಲಿ ಕಾಣಸಿಗದಿದ್ದರೂ, ಮೇಗಾಲಯ ರಾಜ್ಯದಲ್ಲಿ ಪ್ರವಾಸಿಗರು ಹೆಚ್ಚು ಬೇಟಿ ನೀಡುವ ಪ್ರದೇಶಗಳಲ್ಲಿ ಇದು ಅಗ್ರಸ್ತಾನದಲ್ಲಿದೆ.

ವಿಶಾಲವಾದ ಲೈಟ್ಲಮ್ ಕಣಿವೆ, ಮೇಗಾಲಯದ ರಾಜದಾನಿ ಶಿಲಾಂಗ್ ನಿಂದ ಕೇವಲ 25 ಕಿಮಿ ದೂರದಲ್ಲಿದೆ. ಇಲ್ಲಿಗೆ ತಲುಪಲು ಸ್ಮಿಟ್ ಎಂಬ ಸ್ತಳದ ಮೂಲಕ ಹೋಗದಿರಲು ಮರೆಯದಿರಿ. ಮರೆತರೆ ಕಣಿವೆ ತಲುಪಲು ಬಹಳ ತ್ರಾಸಾಗುತ್ತದೆ. ಏಕೆಂದರೆ ಲೈಟ್ಲಮ್, ಸ್ಮಿಟ್ ನಿಂದ ಕೇವಲ 8-10 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಮೊದಲ ಬಾರಿ ಪ್ರವಾಸ ಹೋಗುವವರು ಮಾರ‍್ಗದರ‍್ಶಿಯ ಜೊತೆಗೆ ಅತವಾ ಈ ಹಿಂದೆ ಹೋದವರ ಜೊತೆ ಹೋಗುವುದು ಒಳ್ಳೆಯದು. ಇಲ್ಲವಾದಲ್ಲಿ ಅಲ್ಲಿನ ರಸ್ತೆಗಳಲ್ಲಿ ಕಳೆದು ಹೋಗುವ ಸಾದ್ಯತೆಯಿದೆ. ಶಿಲಾಂಗ್ನಿಂದ ಟ್ಯಾಕ್ಸಿ ಹಿಡಿದು ಹೋಗಬಹುದಾದರೂ, ಅದೂ ಸಹ ಅಪಾಯಕಾರಿ. ಶಿಲಾಂಗಿನ ಬಹುತೇಕ ಟ್ಯಾಕ್ಸಿ ಚಾಲಕರಿಗೆ ಇದರ ಬಗ್ಗೆ ತಿಳುವಳಿಕೆ ಇಲ್ಲ.

ಲೈಟ್ಲಮ್ ಕಣಿವೆಯ ಮೇಲ್ಗಡೆ ನಿಂತು ನೋಡಿದರೆ, ಕಣಿವೆಯ ನೋಟ ಮನಸೂರೆಗೊಳ್ಳುತ್ತದೆ. ಕಣಿವೆಯ ಪಾತಾಳದಲ್ಲಿ ಒಂದು ಸಣ್ಣ ಕುಗ್ರಾಮವಿದೆ. ಅದರ ಹೆಸರು ರಸಾಂಗ್. ಲೈಟ್ಲಮ್ ಕಣಿವೆಯ ಹಚ್ಚ ಹಸಿರಿನ ನಡುವೆ ಪ್ರಕ್ರುತಿ ಸೌಂದರ‍್ಯದ ತೊಟ್ಟಿಲಿನಲ್ಲಿ ರಸಾಂಗ್ ಕುಗ್ರಾಮ ನೆಲೆಸಿದೆ. ಹಳ್ಳಿಯಲ್ಲಿ ಮುನ್ನೂರು ಜನ ನಿವಾಸಿಗಳಿದ್ದು, ಶಾಲೆ, ಚರ‍್ಚ್ ಮತ್ತು ಸಣ್ಣ ಆಟದ ಮೈದಾನ ಸಹ ಇದೆ. ಈ ಹಳ್ಳಿಗೆ ರಸ್ತೆಯೇ ಇಲ್ಲ. ಇಲ್ಲಿನ ಜನ ತಾವು ಬೆಳೆದ ಸರಕುಗಳನ್ನು ಸಾಗಿಸಲು ಮತ್ತು ಅಲ್ಲಿಂದ ಹಿಂದಿರುಗಲು ರೋಪ್‌ವೇಯನ್ನು ಅವಲಂಬಿಸಿದ್ದಾರೆ. ಮೇಗಾಲಯ ರಾಜ್ಯ ತನ್ನದೇ ದ್ರುಶ್ಟಿಯಲ್ಲಿ ಮಹತ್ತರ ಪ್ರಗತಿ ಸಾದಿಸಿರಬಹುದು, ಆದರೆ ಈ ಕುಗ್ರಾಮ ರಸಾಂಗ್ ಅನ್ನು ಮಾತ್ರ ಸಂಪೂರ‍್ಣವಾಗಿ ಮರೆತಿದೆ.

ರಸಾಂಗ್ ಜನರು ತಮ್ಮ ಅವಶ್ಯಕತೆಯ ವಸ್ತುಗಳನ್ನು ತರಲು ಹಾಗೂ ತಾವು ಬೆಳೆದ ಸರಕುಗಳನ್ನು ಸಾಗಿಸಲು ಸಂಪೂರ‍್ಣವಾಗಿ ರೋಪ್‌ವೇಯನ್ನು ಅವಲಂಬಿಸಿದ್ದಾರೆ. ರೋಪ್‌ವೇ ಮೂಲಕ ವ್ಯವಹಾರ ಮಾಡುವ ಏಕೈಕ ಹಳ್ಳಿ ಬಹುಶಹ ರಸಾಂಗ್ ಮಾತ್ರ. ಅಕಸ್ಮಾತ್ ರೋಪ್‌ವೇ ಹಾಳಾದರೆ ಏನಾಗಬಹುದು? ಅದನ್ನು ದುರಸ್ತಿ ಮಾಡಲು ಹಲವಾರು ದಿನಗಳೇ ಬೇಕಾಗಬಹುದು. ಅಂತಹ ಸಮಯದಲ್ಲಿ ಅಲ್ಲಿನ ಜನ, 600 ಅಡಿ ಎತ್ತರಕ್ಕೆ ತಾವು ಬೆಳೆದ ಸಾಮಾನುಗಳನ್ನು ಬಿದಿರಿನ ಬುಟ್ಟಿಗಳಲ್ಲಿ ತುಂಬಿ ಸಾಗಿಸುವ ಅನಿವಾರ‍್ಯತೆ ಇದೆ. ಕಾಲುದಾರಿಯೂ ಸಹ ಅತ್ಯಂತ ಕಡಿದಾಗಿದ್ದು, ಅತಿ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಈ ಪ್ರದೇಶದಲ್ಲಿ ಪೊರಕೆ ತಯಾರಿಸಲು ಅವಶ್ಯವಿರುವ ಬ್ರೂಮ್ ಅನ್ನು ಹೆಚ್ಚಿಗೆ ಬೆಳೆಯಲಾಗುತ್ತದೆ.

ರಸಾಂಗ್ ಹಳ್ಳಿಯ ಒಂದೇ ಒಂದು ನೀರಿನ ಮೂಲ ಎಂದರೆ ಅದು ಹಳ್ಳಿಯ ಹೊರ ಅಂಚಿನಲ್ಲಿ ಹಾದು ಹೋಗುವ ಸಣ್ಣ ನದಿ. ಈ ಸ್ತಳವು ಟ್ರಕ್ಕಿಂಗ್ ಉತ್ಸಾಹಿಗಳಿಗೆ ಒಂದು ಆಕರ‍್ಶಕ ತಾಣ. ಚಾರಣಿಗರು ಈ ಸ್ತಳಕ್ಕೆ ಆಗಾಗ ಬೇಟಿ ನೀಡುತ್ತಿರುತ್ತಾರೆ. ಇಲ್ಲಿ ಬೇಸಿಗೆಯಲ್ಲಿ ಮದ್ಯಾಹ್ನದ ಹೊತ್ತು ಬಹಳ ಬಿಸಿಯಿಂದ ಕೂಡಿರುತ್ತದೆ. ಚಳಿಗಾಲದಲ್ಲಿ ಮದ್ಯಾಹ್ನ ದಟ್ಟವಾದ ಮಂಜು ಮುಸುಕಿ ದ್ರುಶ್ಟಿಯನ್ನು ಮಸುಕುಗೊಳಿಸುತ್ತದೆ. ಮಳೆಗಾಲದಲ್ಲಿ ಈ ಸ್ತಳ ಪ್ರೇಮಿಗಳ ಸ್ವರ‍್ಗ. ಇಲ್ಲಿನ ವಾತಾವರಣ ಬಹು ಬೇಗ ಬದಲಾವಣೆಗೆ ಗುರಿಯಾಗುತ್ತದೆ. ಪ್ರಕಾಶಮಾನವಾದ ಬೆಳಕು ಮತ್ತು ನಿರ‍್ಮಲವಾದ ವಾತಾವರಣ, ಕ್ಶಣದಲ್ಲಿ ಮಂಜಿನಿಂದ ಸುತ್ತುವರೆಯುತ್ತದೆ. ಗೋಚರತೆ ಬಹುತೇಕ ಸೊನ್ನೆಗೆ ಇಳಿದು ಬಿಡುತ್ತದೆ.

ಈಗಾಗಲೇ ತಿಳಿಸಿರುವಂತೆ ಈ ಸ್ತಳವನ್ನು ತಲುಪುವುದು ಬಹಳ ಕಶ್ಟಕರ. ಈ ಹಾದಿಯಲ್ಲಿ ಹೋಗುವ ಮೊದಲು, ಒಂದು ದಿನದ ಎಲ್ಲಾ ಅವಶ್ಯಕ ವಸ್ತುಗಳನ್ನು ಹೊತ್ತೊಯ್ಯುವುದು ಅನಿವಾರ‍್ಯ. ವಿಶ್ರಾಂತಿ ಪಡೆಯಲು, ನಡೆಯುವ ಹಾದಿಯ ಬದಿಯನ್ನೇ ಆಶ್ರಯಿಸಬೇಕು. ತಿನ್ನಲು ಅತವಾ ಬಾಯಾರಿಕೆಯನ್ನು ತಣಿಸಲು ಇಲ್ಲಿ ಯಾವುದೇ ಸ್ತಳವಿಲ್ಲ. ಈ ವಿಶಾಲವಾದ ಪ್ರದೇಶದಲ್ಲಿ ಒಂದೇ ಒಂದು ಸಣ್ಣ ಅಂಗಡಿಯಿದೆ. ಅಲ್ಲಿ ಮ್ಯಾಗಿ, ಕೆಲವು ಬಿಸ್ಕೆಟ್ಗಳು ಮತ್ತು ಬಾಯಿ ರುಚಿಯ ತಿಂಡಿಗಳನ್ನು ಹೊರತು ಪಡಿಸಿ ಮತ್ತೇನು ಸಿಗುವುದಿಲ್ಲ. ಈ ಅಡೆತಡೆಗಳೇನೇ ಇರಲಿ, ನೀವು ಶಿಲಾಂಗ್ ಗೆ ಹೋಗಿ, ಈ ಸ್ತಳವನ್ನು ನೋಡದೆ ಬಂದಲ್ಲಿ ಏನೂ ನೋಡದೆ ಬಂದಂತಾಗುತ್ತದೆ.

(ಮಾಹಿತಿ ಮತ್ತು ಚಿತ್ರ ಸೆಲೆ: unsplash.com, holidify.com, thebetterindia.com, tripoto.com, tourism-of-india.com, darjeeling-tourism.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: