ಜುವಾನಿಟಾ: ಪ್ರಕ್ರುತಿಯೇ ಕಾಪಿಟ್ಟ ‘ಮಮ್ಮಿ’ !
– ಕೆ.ವಿ.ಶಶಿದರ.
ಮಮ್ಮಿ ಜುವಾನಿಟಾ ಎಂದು ಹೆಸರುವಾಸಿಯಾಗಿರುವುದು, ಸುಮಾರು 500 ವರ‍್ಶಗಳ ಹಿಂದೆ ಬಲಿದಾನಕ್ಕೆ ಗುರಿಯಾದ ಎಳೆಯ ವಯಸ್ಸಿನ ಇಂಕಾ ಹುಡುಗಿಯ ದೇಹ. ಹೆಪ್ಪುಗಟ್ಟಿದ ಸ್ತಿತಿಯಲ್ಲಿರುವ ಈ ದೇಹ ಕ್ರಿ. ಶ. 1440 ಮತ್ತು 1480 ನಡುವಿನದ್ದು ಎಂದು ಅನೇಕಾನೇಕ ಪರೀಕ್ಶೆಗಳಿಂದ ದ್ರುಡಪಟ್ಟಿದೆ. ಆಕೆಯ ಒಳಗಿನ ಅಂಗಗಳು, ಕೂದಲು, ಚರ‍್ಮ ಮತ್ತು ರಕ್ತವನ್ನು ವಿಶ್ಲೇಶಿಸಿದ ವಿಜ್ನಾನಿಗಳ ಸಂಶೋದನೆಯು, ಇಂಕಾ ಪಚಕುಟಿಯ ಆಳ್ವಿಕೆಯ ಕಾಲದಲ್ಲಿನ ಇಂಕಾ ಸಾಂಸ್ಕ್ರುತಿಕ ಮತ್ತು ಸಾಮಾಜಿಕ ಅಬ್ಯಾಸಗಳ ಬಗ್ಗೆ ಬೆಳಕು ಚೆಲ್ಲಿತ್ತು.
ಮಮ್ಮಿ ಜುವಾನಿಟಾ ಯಾರು?
ಇಂಕಾ ಆಡಳಿತದ ಅವದಿಯಲ್ಲಿ ಕ್ಯಾಪಕೋಚಾ ಎಂದು ಕರೆಯಲ್ಪಡುವ (ಅತವಾ ಕಪಾಕ್ ಹುಚಾ) ಬಲಿದಾನವನ್ನು, ಯುದ್ದದ ಗೆಲುವನ್ನು ಕೊಂಡಾಡುವ ಸಮಯದಲ್ಲಿ, ಸಾವಿನಲ್ಲಿ ಅತವಾ ಇಂಕಾ ರಾಜಮನೆತನದ ಶುಬ ಸಮಾರಂಬಗಳ ಸಮಯದಲ್ಲಿ ನೀಡುತ್ತಿದ್ದರು. ಇದಕ್ಕೆ ಬಲಿಯಾಗುತ್ತಿದ್ದವರು 11 ರಿಂದ 15ರ ವಯಸ್ಸಿನ ಹೆಣ್ಣು ಮಕ್ಕಳು. ಇವುಗಳೊಡನೆ ನೈಸರ‍್ಗಿಕ ವಿಕೋಪಗಳು, ಬೂಕಂಪ, ಅತಿವ್ರುಶ್ಟಿ, ಅನಾವ್ರುಶ್ಟಿಯ ದಿನಗಳನ್ನು ತಡೆಗಟ್ಟಲು ಆಚರಿಸುವ ಆಚರಣೆಗಳಲ್ಲೂ ಹೆಣ್ಣು ಮಕ್ಕಳನ್ನು ಬಲಿ ಕೊಡಲಾಗುತ್ತಿತ್ತು. ಈ ರೀತಿಯಲ್ಲಿ ಬಲಿಕೊಟ್ಟವರಲ್ಲಿ ಮಮ್ಮಿ ಜುವಾನಿಟಾ ಕೂಡ ಒಬ್ಬಳು.
ಜುವಾನಿಟಾಳ ಹಿನ್ನೆಲೆ
ಮಮ್ಮಿ ಜುವಾನಿಟಾ ಕುಸ್ಕೋದ ಗಣ್ಯರು ದರಿಸುವಂತಹ ಬಟ್ಟೆಯನ್ನು ದರಿಸಿರುವುದು ಕಂಡು ಬಂದಿದೆ. ಬಲಿದಾನದ ಬೌಗೋಳಿಕ ಸ್ತಳಗಳೊಂದಿಗೆ ತಾಳೆ ಮಾಡಿ ನೋಡಿದ ಪುರಾತತ್ವ ಶಾಸ್ತ್ರಜ್ನರು, ಈ ಹುಡುಗಿ ಕುಸ್ಕೋದ ಶ್ರೀಮಂತ ಮನೆತನದವಳಿರಬಹುದೆಂದು ಅಂದಾಜಿಸಿದ್ದಾರೆ. ಇದಕ್ಕೆ ಪುರಾವೆಯಾಗಿ, ಆಕೆಯ ಕೂದಲನ್ನು ವಿಶ್ಲೇಶಿಸಿದ ವಿಜ್ನಾನಿಗಳಿಗೆ, ಆಕೆ ಬಲಿದಾನಕ್ಕೆ ಮುನ್ನ ಜೋಳ ಮತ್ತು ಪ್ರಾಣಿಯ ಮಾಂಸ ತಿಂದಿದ್ದಳು ಎಂಬ ಅಂಶ ಸಹ ಪೂರಕವಾಗಿ ದೊರೆತಿದೆ. ಜೋಳ ಮತ್ತು ಪ್ರಾಣಿಗಳ ಮಾಂಸ ಅಂದಿನ ದಿನದ ಗಣ್ಯರ ಆಹಾರದ ಬಾಗವಾಗಿತ್ತು. ಆದ್ದರಿಂದ ಈಕೆ ಸಹ ಗಣ್ಯರ ಮನೆತನಕ್ಕೆ ಸೇರಿದ್ದಳು ಎಂದು ಹೇಳಲಾಗಿದೆ. ವಿಜ್ನಾನಿಗಳು ಆಕೆಯ ಕೂದಲನ್ನು ವಿಶ್ಲೇಶಿಸಿದಾಗ, ಆಕೆಗಿಂತ ಮುಂಚಿತವಾಗಿ ಬಲಿ ನೀಡಲಾಗಿದ್ದ ಮಕ್ಕಳಿಗೆ ನೀಡುವಂತೆ ಈಕೆಗೂ ಸಹ ಹೆಂಡ (ಚಿಚಾ) ಮತ್ತು ಕೋಕಾವನ್ನು ನೀಡಿರುವುದು ಕಂಡುಬಂದಿದೆ .
ಈ ಮಮ್ಮಿ ಸಿಕ್ಕಿದ್ದು ಹೇಗೆ?
ಅಮೇರಿಕನ್ ಮಾನವ ಶಾಸ್ತ್ರಜ್ನ ಜೋಹಾನ್ ರೇನ್ಹಾರ‍್ಡ್ ಅವರು ಸರಿಸುಮಾರು 20,630 ಅಡಿಗಳಶ್ಟು ಎತ್ತರದಲ್ಲಿನ ಅರೆಕ್ವಿಪಾ ಮೌಂಟ್ ಅಂಪಾಟೊ ಜ್ವಾಲಾಮುಕಿಯಿಂದುಟಾದ ಕುಳಿಯಲ್ಲಿ, ಜುವಾನಿಟಾಳ ಮಮ್ಮಿಯನ್ನು 1995ರಲ್ಲಿ ಕಂಡು ಹಿಡಿದಿದ್ದರು. ಹೆಪ್ಪುಗಟ್ಟಿದ ಸ್ತಿತಿಯಲ್ಲಿದ್ದ ಜುವಾನಿಟಾಳ ಮಮ್ಮಿಯನ್ನು ಅಲ್ಲಿಂದ ಅರೆಕ್ವಿಪಾದಲ್ಲಿರುವ ಸಾಂಟಾ ಮಾರಿಯಾದ ಕ್ಯಾತೋಲಿಕ್ ವಿಶ್ವವಿದ್ಯಾಲಯಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಅದರ ವಿಶ್ಲೇಶಣೆ ಪ್ರಾರಂಬವಾಯಿತು. ಅದರ ತೂಕ 90 ಪೌಂಡ್ (40.82ಕೆಜಿ) ಇತ್ತು. ಇಲ್ಲಿ ಆ ಮಮ್ಮಿಯ ದೇಹಕ್ಕೆ ಜುವಾನಿಟಾ ಎಂದು ಹೆಸರಿಡಲಾಯಿತು. ಇದನ್ನು ‘ಲೇಡಿ ಆಪ್ ಅಂಪಾಟೊ’ ಮತ್ತು ‘ಇಂಕಾ ಐಸ್ ಮೇಡನ್’ ಎಂದೂ ಗುರುತಿಸುವ ಪರಿಪಾಟ ಆರಂಬವಾಯಿತು. ಆಕೆಯ ದೇಹದ ಸುತ್ತಲೂ ಲಾಮಾ ಪ್ರತಿಮೆ ಮತ್ತು ಕುಂಬಾರಿಕೆ ಸೇರಿದಂತೆ ವಿವಿದ ಕಲಾಕ್ರುತಿಗಳು ಕಂಡು ಬಂದಿವೆ. ಈ ಮಮ್ಮಿಯು ಸಿಕ್ಕ ನಂತರ ಮತ್ತೆ ಹುಡುಕಾಡಲು ಪ್ರಾರಂಬಿಸಿದಾಗ ಅಕ್ಟೋಬರ್ 1995 ರಲ್ಲಿ ಹುಡುಗ ಮತ್ತು ಹುಡುಗಿಯ ಮಮ್ಮಿಗಳು ಸಿಕ್ಕರೆ ಮತ್ತೆ 1997 ರಲ್ಲಿ ಒಂದು ಹುಡುಗಿಯ ಮಮ್ಮಿ ಸಿಕ್ಕಿತು.
ಮಮ್ಮಿ ಜುವಾನಿಟಾವನ್ನು ಅರೆಕ್ವಿಪಾದಲ್ಲಿರುವ ವಿಶ್ವವಿದ್ಯಾಲಯದಲ್ಲಿನ ಆಂಡಿಯನ್ ಆಬಯಾರಣ್ಯದ ವಸ್ತು ಸಂಗ್ರಹಾಲಯದಲ್ಲಿ ಪ್ರದರ‍್ಶನಕ್ಕೆ ಇಡಲಾಗಿದೆ. ಜುವಾನಿಟಾವನ್ನು 1995ರಲ್ಲಿ ವಾಶಿಂಗ್ಟನ್ ಡಿ.ಸಿ. ಯಲ್ಲಿರುವ ನ್ಯಾಶನಲ್ ಜಿಯಾಗ್ರಾಪಿಕ್ ಸೊಸೈಟಿಯ ಪ್ರದಾನ ಕಚೇರಿಯಲ್ಲೂ ಮತ್ತು 1999 ರಲ್ಲಿ ಜಪಾನ್ ದೇಶದಲ್ಲೂ ಪ್ರದರ‍್ಶಿಸಲಾಯಿತು. ಆಂಡಿಯನ್ ಅಬಯಾರಣ್ಯಗಳಲ್ಲಿ ನೆಲೆಗೊಂಡಿರುವ ಮಮ್ಮಿ ಜುವಾನಿಟಾ ಮತ್ತು ಮೌಂಟ್ ಅಂಪಾಟೋದಲ್ಲಿ ಕಂಡು ಬಂದ ಇತರ ಕೊಲಂಬಿಯನ್ ಪೂರ‍್ವದ ಕಲಾಕ್ರುತಿಗಳನ್ನು ರಾಶ್ಟ್ರದ ಸಾಂಸ್ಕ್ರುತಿಕ ಪರಂಪರೆಯ ಕುರುಹುಗಳು ಎಂದು ಗುರುತಿಸಿ ಕಾಪಾಡಲಾಗಿದೆ.
ವೆಲ್ ಪ್ರಿಸವ್ರ‍್ಡ್ ಮಮ್ಮಿ ಎವರ್
ಬಲಿದಾನದ ಮೊದಲು ಜುವಾನಿಟಾ ತಿಂದಿದ್ದ ಆಹಾರವು ಅವಳ ಹೊಟ್ಟೆಯಲ್ಲಿ ಇನ್ನೂ ಜೀರ‍್ಣಕ್ರಿಯೆಯ ಪ್ರಕ್ರಿಯೆಯಲ್ಲಿದೆ, ಪರ‍್ವತದ ಹವಾಮಾನದಿಂದಾಗಿ ಚರ‍್ಮ, ಕೂದಲು, ರಕ್ತ ಮತ್ತು ಆಂತರಿಕ ಅಂಗಗಳು ಸಹ ಹೆಪ್ಪುಗಟ್ಟಿದ್ದವು. ದೇಹ ಸಾಮಾನ್ಯವಾಗಿ ಐದು ಗಂಟೆಯ ನಂತರ ಕೊಳೆಯಲು ಶುರುವಾಗುತ್ತದೆ, ಅಶ್ಟರಲ್ಲಿ ಜುವಾನಿಟಾಳ ದೇಹವನ್ನು ಹೆಪ್ಪುಗಟ್ಟಿಸಿ ಕಾಪಾಡಲಾಗಿದೆ ಎಂಬುದು ವಿಜ್ನಾನಿಗಳ ಆಬಿಮತ. ಆದ್ದರಿಂದ ಇದನ್ನು ವೆಲ್ ಪ್ರಿಸವ್ರ‍್ಡ್ ಮಮ್ಮಿ ಎವರ್ ಎಂದು ಕರೆಯಲಾಗುತ್ತದೆ.
(ಮಾಹಿತಿ ಮತ್ತು ಚಿತ್ರ ಸೆಲೆ: bbc.com, livinginperu.com, efe.com, ancient-origins.net, allthatsinteresting.com, medium.com, peruforless.com )
ಮುನ್ನೂರನೆ ಬರಹವನ್ನು ಪ್ರಕಟಿಸೆದ್ದಕ್ಕೆ ಹೊನಲು ತಂಡಕ್ಕೆ ಧನ್ಯವಾದಗಳು