ಸೊಲೊ ಪರ್ ಡ್ಯು  – ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್

– ಕೆ.ವಿ.ಶಶಿದರ.

ಸೊಲೊ ಪರ್ ಡ್ಯು ಎಂದರೆ ಕೇವಲ ಇಬ್ಬರಿಗಾಗಿ. ಇಟಲಿ ನಡುವಿನಲ್ಲಿರುವ ವಾಕೋನ್‍ನಲ್ಲಿ ಕೇವಲ ಇಬ್ಬರಿಗಾಗಿಯೇ ಇರುವ ಇದು ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್. ಇದರಲ್ಲಿರುವುದು ಕೇವಲ ಒಂದು ಟೇಬಲ್. ಒಮ್ಮೆ ಇಬ್ಬರು ಮಾತ್ರ ಕುಳಿತುಕೊಳ್ಳಲು ಅವಕಾಶವಿದೆ. ಅತಿ ಕಡಿಮೆ ಸ್ತಳಾವಕಾಶ ಇರುವುದರಿಂದ ಇಲ್ಲಿಗೆ ಬರಲು ಬಯಸುವವರು ಇ-ಮೇಲ್ ಮೂಲಕವಾಗಲಿ ಅತವಾ ಕರೆ ಮಾಡಿ ಸ್ತಳವನ್ನು ಮುಂಗಡ ಕಾದಿರಿಸುವುದು ಅನಿವಾರ‍್ಯ. ಆದ್ದರಿಂದಲೇ ಇಲ್ಲಿ ಸರದಿಯಿಲ್ಲ, ಕಾಯುವಿಕೆಯ ಗೋಳಿಲ್ಲ. ನಿಗದಿತ ಸಮಯಕ್ಕೆ ಬಂದರೆ ಸಾಕು.

ಕೇವಲ ಇಬ್ಬರಿಗಾಗಿಯೇ ತಲೆಯೆತ್ತಿರುವ ಈ ಪುಟ್ಟ ರೆಸ್ಟೋರೆಂಟ್ ಇದಕ್ಕಾಗಿಯೇ ವಿಶ್ವಮಟ್ಟದಲ್ಲಿ ಪ್ರಸಿದ್ದಿ ಪಡೆದಿದೆ. ಇಟಲಿ ಪ್ರವಾಸ ಪೂರ‍್ಣವಾಗಬೇಕಿದ್ದಲ್ಲಿ ಈ ರೆಸ್ಟೋರೆಂಟ್‍ನಲ್ಲಿನ ಅನುಬವ ಅತಿ ಮುಕ್ಯ. ಇದನ್ನು ತಪ್ಪಿಸುವಂತಿಲ್ಲ. ಅದರಲ್ಲೂ ಕಲ್ಪನಾ ಲೋಕದಲ್ಲಿ ವಿಹರಿಸ ಬಯಸುವ ಪ್ರೇಮಿಗಳ ಜೋಡಿಗೆ ಇದು ಬೂಲೋಕದ ಸ್ವರ‍್ಗ.  ಸೊಲೊ ಪರ್ ಡ್ಯು ಮಿನಿ ರೆಸ್ಟೋರೆಂಟನ್ನು ಹೊಂದಿರುವ ಕಲ್ಲಿನ ‘ಪಿಂಕ್’ ಕಟ್ಟಡ 19ನೇ ಶತಮಾನದ್ದು. ಅತ್ಯಂತ ಮಹತ್ವ ಪೂರ‍್ಣವಾದ ಐತಿಹಾಸಿಕ ಸ್ತಳದಲ್ಲಿದೆ ಈ ಕಟ್ಟಡ. ಇದರ ಸುತ್ತ ಮುತ್ತ ಅನೇಕ ರೋಮನ್ ವಿಲ್ಲಾಗಳ ಅವಶೇಶಗಳನ್ನು ಕಾಣಬಹುದು. ಲ್ಯಾಟಿನ್ ಕವಿ ಹೊರೇಸ್‍ಗೆ ಮೆಸೆನಾಟೆ ಈ ವಿಲ್ಲಾವನ್ನು ನೀಡಿದ್ದು ಎಂದು ಕಾರ‍್ಲೋ ಬಾರ‍್ಟೊಲೋಮಿಯಾ ಪಿಯಾಜಾ, 1703, ಗುರುತಿಸಿದ್ದಾನೆ.

ಸೊಲೊ ಪರ್ ಡ್ಯುದ ಹೆಬ್ಬಾಗಿಲಿನಿಂದ ಒಳಹೊಕ್ಕಲ್ಲಿ ಅಕ್ಕಪಕ್ಕದಲ್ಲಿ ಸುಂದರವಾದ ಅತ್ಯದ್ಬುತವಾದ ಪಾಮ್ ತೋಟಗಳಿವೆ. ಟ್ರಚಾರಿಕರ‍್ಶನ್ ಪಾರ‍್ಚೂನಿ, ಟ್ರ್ಯಾಚಿಕರ‍್ಪಸ್ ಮಾರ‍್ಟನಿಯಸ್, ಪೀನಿಕ್ಸ್ ಕ್ಯಾನರಿಯೆನ್ಸಿಸ್, ಪೀನಿಕ್ಸ್ ರೆಕ್ಲನಿಟಾ, ವಾಶಿಂಗ್ಟನ್ನಿಯಾ ಪಿಲಿಪೆರಾ, ಇನ್ನೂ ಬಗೆಬಗೆಯ ಸೈಕಾಸ್ ರೆವೊಲ್ಯುಟ್‍ಗಳನ್ನು ಈ ತೋಟಗಳಲ್ಲಿ ಕಾಣಬಹುದು. ಕಾಲುದಾರಿಯ ಅಲ್ಲಲ್ಲೇ ನೆಲದಲ್ಲಿ ಕಂಡುಬರುವ ದೀಪಗಳು ವಿಶ್ವದ ಈ ಪುಟ್ಟ ರೆಸ್ಟೋರೆಂಟ್‍ಗೆ ಕರೆದೊಯ್ಯುವ ದಾರಿ ದೀಪಗಳಾಗಿವೆ. ಕಟ್ಟಡದ ಒಳ ಹೋದಂತೆ ಅದ್ಬುತ ಕಲಾಕ್ರುತಿಗಳು ಹಾಗೂ ಎದೆಯ ಮಟ್ಟದ ರೋಮ್ ಪ್ರತಿಮೆಗಳು ಕಾಣುತ್ತವೆ.

ಬೆಚ್ಚಗಿನ ಹವಾಮಾನದ ಸಮಯದಲ್ಲಿ ಇಲ್ಲಿಗೆ ಬರುವ ಅತಿತಿಗಳು ತೋಟದಲ್ಲಿ ತಂಪು ನೀಡುವ ವೈನ್ ಮರದಡಿಯಲ್ಲಿ ವಿಶ್ರಮಿಸುತ್ತಾ ಪಕ್ಕದ ಕಣಿವೆಯ, ಮೋಡಿ ಮಾಡುವ ಆಲೀವ್ ತೋಪಿನ ಮತ್ತು ವೈನ್ ಯಾರ‍್ಡ್‍ನ ದ್ರುಶ್ಯವನ್ನು ಆಸ್ವಾದಿಸಬಹುದು. ವಾತಾವರಣ ಬದಲಾಗಿ ತಂಡಿಯ ಗಾಳಿ ಬೀಸ ತೊಡಗಿದಾಗ ಉರಿಯುವ ಮರದ ದಿಮ್ಮಿಯ ಮುಂದೆ ಕುಳಿತು ಮಾದಕ ಪಾನೀಯ ಸವಿಯಬಹುದು.

ಸೊಲೊ ಪರ್ ಡ್ಯುನಲ್ಲಿ ‘ಲಿಬ್ರೋ ಡೆಲ್ ಪೆನ್ಸಿರಿ’ ಅತವಾ ‘ಬುಕ್ ಆಪ್ ತಾಟ್ಸ್’ ಇದೆ. ಅತಿತಿಗಳು ತಮ್ಮ ಅನಿಸಿಕೆಯನ್ನು ಇದರಲ್ಲಿ ದಾಕಲಿಸಬಹುದು. ದೇಶ ವಿದೇಶಗಳಿಂದ ಇಲ್ಲಿಗೆ ಆಗಮಿಸಿದ್ದ ಪ್ರೇಮಿಗಳು ತಮ್ಮ ಪ್ರಣಯದ ರೋಚಕ ಸತ್ಯಗಳನ್ನು, ಅತ್ರುಪ್ತಿಯ ವಿವರಗಳನ್ನು, ದುಕ್ಕದ ಸಂಗತಿಗಳನ್ನು ತಮ್ಮದೇ ಆದ ಶೈಲಿಯಲ್ಲಿ ತಮ್ಮದೇ ಆದ ಬಾಶೆಯಲ್ಲಿ ಇದರಲ್ಲಿ ದಾಕಲಿಸಿದ್ದಾರೆ. ಈ ರೆಸ್ಟೋರೆಂಟಲ್ಲಿ ನೀವು ಊಟಕ್ಕೆ ತಯಾರಾದಾಗ ಅಲ್ಲಿನ ಬೆಳಕು ಮಂದವಾಗುತ್ತಾ ಮಾಂತ್ರಿಕ ವಾತಾವರಣ ಸ್ರುಶ್ಟಿಯಾಗುತ್ತದೆ. ಅವಶ್ಯ ಬಿದ್ದಾಗ ಟೇಬಲ್ ಬಳಿಯಿರುವ ಬೆಳ್ಳಿ ಗಂಟೆಯಿಂದ ಶಬ್ದ ಮಾಡಿದಲ್ಲಿ ಮಾಣಿ ಹಾಜರ್. ಹತ್ತಾರು ವರ‍್ಶಗಳ ಹಳೆಯ ಕಾಲಕ್ಕೆ ಹೋದ ಆನುಬವ ಆಗುತ್ತದೆ ಎಂದು ಬಹಳಶ್ಟು ಅತಿತಿಗಳು ಇಲ್ಲಿನ ವಾತಾವರಣವನ್ನು ಹೊಗಳಿದ್ದಾರೆ.

ವಿಶ್ವದ ಅತಿ ಪುಟ್ಟ ರೆಸ್ಟೋರೆಂಟ್‍ನ ಎಲ್ಲಾ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ತಾಜಾ ಪದಾರ‍್ತಗಳನ್ನು ಉಪಯೋಗಿಸಲಾಗುತ್ತದೆ. ಅದರಲ್ಲೂ ಅಂದಿನ ರುತುವಿನಲ್ಲಿ ದೊರಕುವ ಕಾಯಿ ಪಲ್ಲೆಗಳನ್ನು ಹೆಚ್ಚು ಬಳಸಲಾಗುತ್ತದೆ. ಬಹುಶಹ ಅಗ್ಗ ಎಂಬ ದ್ರುಶ್ಟಿಯಿಂದ ಇರಬಹುದು! ವಾಕೋನ್ ಸುತ್ತಲಿನ ಪ್ರದೇಶವು ಉತ್ತಮ ಗುಣಮಟ್ಟದ ತಾಜಾ ಉತ್ಪನ್ನಗಳ ಸಮ್ರುದ್ದ ಮೂಲವಾಗಿದೆ. ಅತ್ಯತ್ತಮ ಗುಣಮಟ್ಟದ ಆಲೀವ್ ಆಯಲ್, ಕುರಿಯ ಚೀಸ್, ವೈವಿದ್ಯಮಯ ಕಾಡು ಅಣಬೆಗಳು, ಕಾಡು ಹಣ್ಣುಗಳು, ಮನೆಯಲ್ಲೇ ತಯಾರಿಸಿದ ಪಾಸ್ಟಾ ಮತ್ತು ಬ್ರೆಡ್, ಸೊಗಸಾದ ಮಾಂಸ ಮತ್ತು ಇದರ ಜೊತೆಗೆ ಸ್ತಳೀಯವಾಗಿ ತಯಾರಿಸಿದ ಸಿಹಿ ತಿನಿಸುಗಳು ಕೇಕ್‍ಗಳು ಇಲ್ಲಿ ಸಿಗುತ್ತವೆ.

ತಾಜಾ ಹಾಗೂ ಅತ್ಯುತ್ತಮ ಇಟಾಲಿಯನ್ ತಿನಿಸುಗಳ ಆಗರ ಸೊಲೊ ಪರ್ ಡ್ಯು. ಇದರ ಜೊತೆಗೆ ನೆಲಮಾಳಿಗೆಯಲ್ಲಿ ಬಹಳಶ್ಟು ವರ‍್ಶ ಹಳೆಯದಾದ ವೈನ್ ಅನ್ನು ಕೋರಿಕೆಯ ಮೇರೆಗೆ ನೀಡಲಾಗುತ್ತದೆ. ಇಬ್ಬರಿಗೇ ಮೀಸಲಾದ ಸೊಲೊ ಪರ್ ಡ್ಯು ರೆಸ್ಟೋರೆಂಟಲ್ಲಿ ಸ್ವಚ್ಚಂದವಾಗಿ ಕುಳಿತು ಇಲ್ಲೇ ತಯಾರಾದ ವಿಶಿಶ್ಟ ಪದಾರ‍್ತಗಳ ರುಚಿಯನ್ನು ಸವಿದಿದ್ದೇ ಆದಲ್ಲಿ ಇಟಲಿಯನ್ನು ಪೂರ‍್ತಿಯಾಗಿ ನೋಡಿದ ತ್ರುಪ್ತಿ ಹಾಗೂ ಬಣ್ಣಿಸಲಾಗದ ಸುಂದರ ಅನುಬವ ದಕ್ಕುತ್ತದೆ.

(ಮಾಹಿತಿ ಸೆಲೆ: soloperdue.com, johnhedersontravel.comodditycentral.comdailymail.co.uk)

(ಚಿತ್ರ ಸೆಲೆ: keblog.it, huffingtonpost.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: