ಕರ‍್ನಾಟಕ ರಣಜಿ ತಂಡದ ಏಳು-ಬೀಳು

– ರಾಮಚಂದ್ರ ಮಹಾರುದ್ರಪ್ಪ.

 

ಕಳೆದ ಒಂದೂವರೆ ದಶಕದಿಂದ ಬಾರತದ ದೇಸೀ ಕ್ರಿಕೆಟ್ ನಲ್ಲಿ ಅದರಲ್ಲೂ ಮುಕ್ಯವಾಗಿ ರಣಜಿ ಟೂರ‍್ನಿಯಲ್ಲಿ ಹೆಚ್ಚು ಪ್ರಾಬಲ್ಯ ಮೆರೆದ ತಂಡವೆಂದರೆ ಅದು ನಿಸ್ಸಂದೇಹವಾಗಿ ಕರ‍್ನಾಟಕ. ಹಾಗೆ ನಿಯಮಿತ ಓವರ್ ಗಳ ವಿಜಯ್ ಹಜಾರೆ ಮತ್ತು ಸಯ್ಯದ್ ಮುಶ್ತಾಕ್ ಅಲಿ ಟೂರ‍್ನಿಗಳಲ್ಲೂ ಕರ‍್ನಾಟಕದ ಗೆಲುವಿನ ನಾಗಾಲೋಟ ಸಾಗಿರುವುದು ತಂಡದ ಒಟ್ಟಾರೆ ಸಾಮರ‍್ತ್ಯಕ್ಕೆ ಸಾಕ್ಶಿ ಎಂದರೆ ತಪ್ಪಾಗಲಾರದು. ಈ ಅವದಿಯಲ್ಲಿ ಎಲ್ಲಾ ದೇಸೀ ತಂಡಗಳಿಗಿಂತ ಅತಿ ಹೆಚ್ಚು ರಣಜಿ ಪಂದ್ಯಗಳನ್ನು ಗೆದ್ದಿರುವ ಹಿರಿಮೆ ಕೂಡ ಕನ್ನಡಿಗರ ಪಡೆಗೆ ದಕ್ಕಿದರೂ ಹಲವಾರು ಬಾರಿ ನಾಕೌಟ್ ಹಂತದಲ್ಲಿ ಎಡವಿ ಎರಡು ರಣಜಿ ಟೂರ‍್ನಿಗಳನ್ನಶ್ಟೇ ಗೆಲ್ಲುವಲ್ಲಿ ತಂಡ ಸಪಲವಾಗಿರುವುದು ಬೇಸರದ ಸಂಗತಿ. ಈ ವಾಡಿಕೆ ಇತ್ತೀಚಿಗೆ ಮುಕ್ತಾಯಗೊಂಡ 2021/22 ರ ಸಾಲಿನಲ್ಲೂ ಮುಂದುವರೆದಿದ್ದು, ಅಬಿಮಾನಿಗಳಿಗೆ ತೀವ್ರ ನಿರಾಸೆ ಉಂಟುಮಾಡಿದೆ. ಅಲ್ಲದೆ ಉತ್ತರ ಪ್ರದೇಶದ ಎದುರಿನ ಕ್ವಾರ‍್ಟರ್ ಪೈನಲ್ ನ ಅನಿರೀಕ್ಶಿತ ಸೋಲು ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಸುಳ್ಳಲ್ಲ. ಇಶ್ಟೆಲ್ಲಾ ದೊಡ್ಡ ಆಟಗಾರರ ಹೆಸರಿರುವ ಕರ‍್ನಾಟಕ ತಂಡ ಹೋರಾಡದೆ ಪದೇಪದೇ ಸುಳುವಾಗಿ ಸೋಲುವುದು ನೋಡುಗರಿಗೆ ರೇಜಿಗೆ ಹುಟ್ಟಿಸಿದೆ.

2021/22 ರಣಜಿ ಟೂರ‍್ನಿ: ಮುಳುವಾದ ಉತ್ತರ ಪ್ರದೇಶ

ಕೋವಿಡ್ ನಿಂದಾಗಿ ಕೇವಲ ಮೂರು ಲೀಗ್ ಪಂದ್ಯಗಳ ಸ್ವರೂಪದ ಪಂದ್ಯಾವಳಿಯ ಎಲೈಟ್ ಸಿ ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಎರಡನ್ನು ಗೆದ್ದು ನಿರಾಯಾಸವಾಗಿ ನಾಕೌಟ್ ಹಂತ ತಲುಪಿದ್ದ ಕರ‍್ನಾಟಕ ವಿಶ್ವಾಸದಿಂದ ಬೀಗುತ್ತಿತ್ತು. ಆದರೆ ಗೆದ್ದ ಎರಡೂ ಪಂದ್ಯಗಳೂ ದುರ‍್ಬಲ ತಂಡಗಳಾದ ಜಮ್ಮು- ಕಾಶ್ಮೀರ ಮತ್ತು ಪುದುಚೆರಿ ಎದುರು ಎಂಬುದನ್ನು ಕಡೆಗಣಿಸುವಂತಿರಲಿಲ್ಲ. ಪ್ರಸಿದ್ ಮತ್ತು ರಾಹುಲ್ ರ ಹೊರತಾಗಿ ಎಲ್ಲಾ ಪ್ರಮುಕ ಆಟಗಾರರ ಸೇವೆ ನಾಕೌಟ್ ಹಂತಕ್ಕೆ ಸರಿಯಾಗಿ ಸಿಕ್ಕಿದ್ದು ತಂಡಕ್ಕೆ ಇಂಬು ನೀಡಿತ್ತು. ಹಿಂದೆಂದೂ ಉತ್ತರ ಪ್ರದೇಶದ ಎದುರು ಸೋಲದ ದಾಕಲೆಯ ಜೊತೆಗೆ ತವರು ಬೆಂಗಳೂರಿನ ಆಲೂರಿನ ಅಂಕಣದಲ್ಲಿ ಈ ಕ್ವಾರ‍್ಟರ್ ಪೈನಲ್ ನಡೆಯಲಿದ್ದುದು ಕರ‍್ನಾಟಕಕ್ಕೆ ವರವಾಗಿತ್ತು. ಆದರೆ ಮನೀಶ್ ರ ಪಡೆ ಮೊದಲನೇ ಇನ್ನಿಂಗ್ಸ್ ನಲ್ಲಿ 98 ರನ್ ಗಳ ದೊಡ್ಡ ಮುನ್ನಡೆ ಸಾದಿಸಿದ ಬಳಿಕ ಎರಡನೇ ಇನ್ನಿಂಗ್ಸ್ ಲಿ ಕಳಪೆ ಬ್ಯಾಟಿಂಗ್ ನಿಂದ 114 ರನ್ ಗಳಿಗೆ ಕುಸಿದು ಪಂದ್ಯವನ್ನು 5 ವಿಕೆಟ್ ಗಳಿಂದ ಸುಲಬವಾಗಿ ಸೋತು ಟೂರ‍್ನಿಯಿಂದ ಹೊರನಡೆಯಿತು. ನಾಲ್ಕು ಅಂತರಾಶ್ಟ್ರೀಯ ಆಟಗಾರರಿದ್ದ ಬಲಾಡ್ಯ ಕರ‍್ನಾಟಕ ಅನಾನುಬವಿಗಳಿಂದ ಕೂಡಿದ್ದ ಉತ್ತರಪ್ರದೇಶದ ಎದುರು ನೆಲಕಚ್ಚಿದ್ದು ಎಲ್ಲರ ಸೋಜಿಗಕ್ಕೆ ಕಾರಣವಾಯಿತು. ದೇವದತ್ ಪಡ್ಡಿಕಲ್ ರಂತಹ ಅಳವುಳ್ಳ ಬ್ಯಾಟ್ಸ್ಮನ್ ಗೆ ನಾಯಕ ಮನೀಶ್ ಆಡುವ ಹನ್ನೊಂದರಲ್ಲಿ ಎಡೆ ನೀಡದದ್ದು ಕ್ರಿಕೆಟ್ ಪಂಡಿತರ ಅಚ್ಚರಿಗೆ ಕಾರಣವಾಯಿತು. ಆದರೂ ತಂಡದ ಸಮತೋಲನದ ದ್ರುಶ್ಟಿಯಿಂದ ಮೇಲ್ನೋಟಕ್ಕೆ ಅದು ಸರಿಯಾದ ತೀರ‍್ಮಾನವೇ ಆಗಿತ್ತು. ಏಕೆಂದರೆ ಸೊಗಸಾದ ಲಯದಲಿದ್ದ ಉಪನಾಯಕ ಸಮರ‍್ತ್, ಸಿದ್ದಾರ‍್ತ್, ಮನೀಶ್, ಕರುಣ್ ನಾಯರ್ ಮತ್ತು ಅಂತರಾಶ್ಟ್ರೀಯ ಕ್ರಿಕೆಟ್ ನಿಂದ ಹಿಂದಿರುಗಿದ್ದ ಮಾಯಾಂಕ್ ರಲ್ಲಿ ಯಾರನ್ನೂ ಕೈಬಿಡುವಂತಿರಲಿಲ್ಲ. ಆದರೆ ಎರಡನೇ ಇನ್ನಿಂಗ್ಸ್ ನಲ್ಲಿ ಈ ಎಲ್ಲಾ ಅನುಬವಿ ಆಟಗಾರರ ಬೇಜವಾಬ್ದಾರಿ ಬ್ಯಾಟಿಂಗ್‍‍ನಿಂದ ಹಿಡಿತದಲ್ಲಿದ್ದ ಪಂದ್ಯ ಕರ‍್ನಾಟಕದ ಕೈತಪ್ಪುವಂತಾಯಿತು. ಮಾಯಾಂಕ್ ಟಿ-20 ಮಾದರಿಯ ಒಂದು ಕೆಟ್ಟ ಹೊಡೆತಕ್ಕೆ ಬಲಿಯಾದರೆ, ನಾಯಕ ಮನೀಶ್ ಇಲ್ಲದ ರನ್ ಕದಿಯಲು ಹೋಗಿ ರನ್ ಔಟ್ ಆಗಿದ್ದು ಇನ್ನಿಂಗ್ಸ್ ಗೆ ಮಾರಕವಾಯಿತು. ಇನ್ನು ನಾಲ್ಕು ವರ‍್ಶಗಳಿಂದ ತಂಡದ ಬಿಳಿ ಆನೆ ಎಂದೇ ಟೀಕೆಗೆ ಗುರಿಯಾಗುತ್ತಿರುವ ಕರುಣ್ ರಿಂದ ರನ್ ನಿರೀಕ್ಶೆ ಇಟ್ಟುಕೊಳ್ಳುವುದೇ ವ್ಯರ‍್ತ ಎಂಬುವ ಮಟ್ಟಕ್ಕೆ ಅವರ ಬ್ಯಾಟಿಂಗ್ ಮಟ್ಟ ಕುಸಿದಿದೆ. ಅವರೂ ಮತ್ತೊಮ್ಮೆ ವೈಪಲ್ಯ ಕಂಡದ್ದು ಯಾರಿಗೂ ಅಚ್ಚರಿ ಮೂಡಿಸಲಿಲ್ಲ. ಕಡೆಗೆ ನಾಲ್ಕನೇ ಇನ್ನಿಂಗ್ಸ್ ನಲ್ಲಿ ಎದುರಾಳಿಗೆ 213 ರನ್ ಗಳ ಸಾದಾರಣ ಗುರಿ ನೀಡಿದ ಬಳಿಕ ಕೊನೆ ಗಳಿಗೆವರೆಗೂ ಹೋರಾಡದೆ ಪಂದ್ಯವನ್ನು ಮೊದಲೇ ಕೈಚೆಲ್ಲಿ ಕೂತಂತೆ ಆಟಗಾರರ ಹಾವಬಾವ ಸಾರಿ ಹೇಳುತ್ತಿತ್ತು. ಹೌದು! ಮೊದಲಿನಂತೆ ಬೌಲಿಂಗ್ ವಿಬಾಗದಲ್ಲಿ ಕರ‍್ನಾಟಕಕ್ಕೆ ವಿನಯ್, ಮಿತುನ್ ಹಾಗೂ ಅರವಿಂದ್ ರಂತಹ ದಿಗ್ಗಜರ ಶಕ್ತಿ ಈಗಿಲ್ಲ. ಆದರೂ ಒಂದು ವ್ರುತ್ತಿಪರ ತಂಡದಲ್ಲಿ ಇರಬೇಕಾದ ಕಸುವು ಹಾಗೂ ಆಟದಲ್ಲಿರಬೇಕಾದ ತೀವ್ರತೆ ಕ್ವಾರ‍್ಟರ‍್ ಪೈನಲ್ ಪಂದ್ಯದ ಮೂರೂ ದಿನಗಳಲ್ಲಿ ಕಣದಲ್ಲಿದ್ದ ಕರ‍್ನಾಟಕ ತಂಡದಲ್ಲಿ ಕಂಡುಬರಲಿಲ್ಲ. ಹಾಗಾಗಿ ಪಂದ್ಯದ ಬಳಿಕ ನೇರುಲಿಗರು ಕೂಡ ಕರ‍್ನಾಟಕ ಸೋತದ್ದು ಅಚ್ಚರಿ ಪಡುವಂತಹ ಸಂಗತಿಯೇನಲ್ಲ, ಕಳೆದ ಹಲವು ರುತುಗಳಿಂದ ತಂಡ ಪದೇಪದೇ ಬ್ಯಾಟಿಂಗ್ ವೈಪಲ್ಯ ಕಂಡಿದೆ, ಆದರೂ ಹೊಸ ಆಟಗಾರರಿಗೆ ಅವಕಾಶ ನೀಡದೆ ತಪ್ಪುಗಳನ್ನು ಮುಂದುವರೆಸುತ್ತಿದೆ ಎಂದು ಕಟುವಾಗಿಯೇ ಟೀಕಿಸಿದರು. ಅವರ ಮಾತುಗಳಲ್ಲಿ ಹುರುಳಿಲ್ಲದೆ ಇರಲಿಲ್ಲ. ಕೆಲವು ಆಯ್ಕೆಗಳು ಹಾಗೂ ಪಂದ್ಯದಲ್ಲಿ ಕೈಗೊಂಡ ಹಲವು ತಾಂತ್ರಿಕ ತೀರ‍್ಮಾನಗಳು ಕ್ರಿಕೆಟ್ ಬಲ್ಲ ಅಬಿಮಾನಿಗಳ ಹುಬ್ಬೇರಿಸಿದ್ದು ಸುಳ್ಳಲ್ಲ. ಕೋಚ್ ಗಳಾದ ಯರ‍್ರೇ ಗೌಡ ಹಾಗೂ ಅರವಿಂದ್ ಕೂಡ ಕಳೆದ ಮೂರ‍್ನಾಲ್ಕು ವರ‍್ಶಗಳಿಂದ ನೆನೆಯುವಂತಹ ಕೊಡುಗೆ ನೀಡುವಲ್ಲಿ ಸೋತಿದ್ದಾರೆ. ಹಿಂದೊಮ್ಮೆ ತಂಡ ಕಣಕ್ಕಿಳಿದರೆ ಸಾಕು, ಗೆಲುವು ಕಟ್ಟಿಟ್ಟ ಬುತ್ತಿ ಎಂಬಂತ್ತಿದ್ದ, ಎದುರಾಳಿಗಳನ್ನು ಇನ್ನಿಲ್ಲದಂತೆ ಕಾಡಿದ ಮಹಾನ್ ನಾಯಕ ವಿನಯ್ ಕುಮಾರ‍್ ಕಟ್ಟಿದ್ದ ಈ ತಂಡ ಕೆಲವೇ ವರ‍್ಶಗಳಲ್ಲಿ ಹಳಿ ತಪ್ಪಿದ್ದು ಹೇಗೆ? ಮತ್ತೆ ಗೆಲುವಿನ ಹಾದಿಗೆ ಮರಳಲು ತುರ‍್ತಾಗಿ ಆಗಬೇಕಾದ್ದೇನು ಎಂಬುದು ಈಗ ರಾಜ್ಯ ಕ್ರಿಕೆಟ್ ಸಂಸ್ತೆಯ ಮುಂದಿರುವ ಸವಾಲು!

ಕರ‍್ನಾಟಕ ತಂಡದ ಮುಂದಿನ ಹಾದಿ

ಹಾಳೆ ಮೇಲೆ ನೋಡಿದಾಗ ಈಗಲೂ ಕರ‍್ನಾಟಕ ತಂಡ ಅನುಬವಿಗಳುಳ್ಳ ಒಂದು ಬಲಿಶ್ಟ ತಂಡವಾಗಿಯೇ ಕಾಣುತ್ತದೆ. ಆದರೆ ಕಳೆದ ಏಳು ವರುಶಗಳಿಂದ ರಣಜಿ ಟೂರ‍್ನಿಯಲ್ಲಿ ಎಡವುತ್ತಾ ಪದೇಪದೇ ಅವೇ ತಪ್ಪುಗಳನ್ನು ಮಾಡುತ್ತಿರುವುದು ತಂಡದ ಕುಂದಿಗೆ ಸಾಕ್ಶಿಯಾಗಿದೆ. ಒಂದು ವ್ರುತ್ತಿಪರ ತಂಡ ಅಶ್ಟು ವರುಶಗಳ ಕಾಲ ತಪ್ಪುಗಳನ್ನು ತಿದ್ದಿಕೊಳ್ಳದೆ ಉದ್ದಟತನ ತೋರುತ್ತಿರುವುದು ಸೊಜಿಗವೇ ಸರಿ. ಒತ್ತಡದಲ್ಲಿ ಇನ್ನಿಲ್ಲದಂತೆ ಕುಸಿಯುವ ಈ ತಂಡದಲ್ಲಿ ಒಂದು ದೊಡ್ಡ ಮಟ್ಟದ ಮಾರ‍್ಪಾಡು ಆಗುವವರೆಗೂ ಗೆಲುವು ಗಗನಕುಸುಮವಾಗಿಯೇ ಉಳಿಯುವುದರಲ್ಲಿ ಎರಡು ಮಾತಿಲ್ಲ. ಹಲವಾರು ವಿಶಯಗಳಲ್ಲಿ ಈಗಿನ ತಂಡ 2002-04 ರ ವರೆಗೂ ಕರ‍್ನಾಟಕದ ಪರ ಅತೀ ಸಾದಾರಣ ಪ್ರದರ‍್ಶನ ನೀಡಿದ ತಂಡವನ್ನು ಹೋಲುತ್ತದೆ. ಈಗಿನಂತೆ ಆಗಲೂ ಕೂಡ ಪ್ರಸಾದ್, ಬಾರದ್ವಾಜ್, ಜೋಶಿರಂತಹ ಅಂತರಾಶ್ಟ್ರೀಯ ಆಟಗಾರರು ಮರಳಿ ತಂಡಕ್ಕೆ ಬಲತುಂಬುವ ಬದಲು ಹೊರೆಯಾಗಿದ್ದರು. ಒಂದು ವರುಶ ಕಳಪೆ ಪ್ರದರ‍್ಶನದಿಂದ ಪ್ಲೇಟ್ ಗುಂಪಿಗೆ ಕೂಡ ತಳ್ಳಲ್ಪಟ್ಟು ತಂಡ ತೀವ್ರ ಮುಜುಗುರಕ್ಕೆ ಒಳಗಾಗಿತ್ತು. ಅಂತಹ ಅವಗಡ ಈಗ ನಡೆಯದಂತೆ ತಪ್ಪಿಸಲು ರಾಜ್ಯ ಕ್ರಿಕೆಟ್ ಸಂಸ್ತೆ ಮುಲಾಜಿಲ್ಲದೆ ತುರ‍್ತಾಗಿ ಕೆಲವು ಕಟಿಣ ತೀರ‍್ಮಾನಗಳನ್ನು ಕೈಗೊಳ್ಳಬೇಕಿದೆ. ಆಟಗಾರರ ವರ‍್ಚಸ್ಸು ಹಾಗೂ ಹಳೆಯ ದಾಕಲೆಗಳನ್ನು ನೋಡದೆ ಹಾಲಿ ಪ್ರದರ‍್ಶನ ಹಾಗೂ ತಂಡಕ್ಕೆ ಅವರೆಶ್ಟು ಉಪಯುಕ್ತರಾಗಲಿದ್ದಾರೆ ಎಂಬುದನ್ನರಿತು ಆಯ್ಕೆಗಾರರು ಮುಂದಿನ ಹೆಜ್ಜೆ ಇಡಬೇಕಿದೆ. ಇದೇ ಹೊತ್ತಿಗೆ ಸರಿಯಾಗಿ ಕೆಪಿಎಲ್ ಮೂರು ವರ‍್ಶಗಳ ಬಳಿಕ ಮಹಾರಾಜ ಟ್ರೋಪಿ ಎಂಬ ಹೊಸ ಸ್ವರೂಪದಲ್ಲಿ ಮರಳುತ್ತಿರುವುದು ಹೊಸ ಪ್ರತಿಬೆಗಳನ್ನು ಗುರುತಿಸುವಲ್ಲಿ ಕಂಡಿತ ಸಹಕಾರಿಯಾಗಲಿದೆ. ಮನೀಶ್, ಕರುಣ್, ಮಾಯಾಂಕ್, ಗೌತಮ್, ಶ್ರೇಯಸ್ ಮತ್ತು ರೋನಿತ್ ಮೊರೆ ರಂತಹ ಹಿರಿಯ ಆಟಗಾರರೊಂದಿಗೆ ಸಮಾಲೋಚನೆ ನಡೆಸಿ ತಂಡದಲ್ಲಿ ಅವರ ಬವಿಶ್ಯವೇನೆಂದು ಒಪ್ಪಂದಕ್ಕೆ ಬಂದು, ತಂಡ ಮುಂದೆ ಸಾಗಬೇಕಾದ ಹಾದಿಯ ಕುರಿತು ಒಂದು ನೀಲಿನಕ್ಶೆ ಸಿದ್ದಪಡಿಸಿದರೆ ಉಚಿತ. ಕನಿಶ್ಟ ಮುಂದಿನ ಮೂರ‍್ನಾಲ್ಕು ವರ‍್ಶಗಳ ಕಾಲ ಸೇವೆ ಸಲ್ಲಿಸಬಹುದಾದ ಒಬ್ಬ ಅಳವುಳ್ಳ ನಾಯಕನನ್ನು ನೇಮಿಸಿ ಯುವ ಆಟಗಾರರಿಗೆ ಅವಕಾಶ ನೀಡುತ್ತಾ ಬವಿಶ್ಯದ ತಂಡ ಕಟ್ಟಬೇಕಿದೆ. ಬ್ಯಾಟಿಂಗ್ ವಿಬಾಗದಲ್ಲಿ ಪ್ರತಿಬೆಯ ಕೊರತೆ ಇಲ್ಲವೆಂಬುದು ದೇವದತ್, ಸಿದ್ದಾರ‍್ತ್, ಸಮರ‍್ತ್, ಅಬಿನವ್ ಮನೋಹರ‍್, ನಿಶ್ಚಲ್ ರಂತಹ ಆಟಗಾರರ ಹೆಸರು ನೋಡಿದರೆ ತಿಳಿಯುತ್ತದೆ. ಇನ್ನು ಇಬ್ಬರು ಶರತ್ ಗಳ ಹೊರತಾಗಿ ಒಬ್ಬ ಸಮರ‍್ತ ವಿಕೆಟ್ ಕೀಪರ‍್ ಬ್ಯಾಟ್ಸ್ಮನ್ ನನ್ನು ಕೂಡಲೇ ಆಯ್ಕೆಗಾರರು ಗುರುತಿಸಿ ಮುನ್ನೆಲೆಗೆ ತರಬೇಕಾಗಿದೆ. ಕಳೆದ ನಾಲ್ಕು ವರ‍್ಶಗಳಿಂದ ಇಬ್ಬರೂ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳದೆ ಕೈಚೆಲ್ಲುತ್ತಾ ತಂಡಕ್ಕೆ ಹೊರೆಯಾಗಿರುವುದು ಸುಳ್ಳಲ್ಲ. ಸ್ಪಿನ್ ವಿಬಾಗದಲ್ಲಿ ಶುಬಾಂಗ್ ಹೆಗ್ಡೆ, ಕಾರಿಯಪ್ಪ ಕಳೆದ ಮೂರು ವರುಶಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದರೆ ಸುಚಿತ್ ಕೂಡ ಎಡಬಿಡದೆ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ. ಇಂತಹ ಅವಕಾಶವಂಚಿತ ಪ್ರತಿಬೆಗಳನ್ನು ಇನ್ನು ಮುಂದಾದರೂ ಸೂಕ್ತವಾಗಿ ಬಳಸಿಕೊಳ್ಳುವ ಹೊಣೆ ಆಯ್ಕೆಗಾರರ ಮೇಲಿದೆ. ಕಡೆಯದಾಗಿ, ಅತೀ ಹೆಚ್ಚು ಸೊರಗಿರುವ ವೇಗದ ಬೌಲಿಂಗ್ ವಿಬಾಗವನ್ನು ಆದಶ್ಟು ಬೇಗ ಬಲಗೊಳ್ಳಿಸಬೇಕಿದೆ. ತಂಡದ ಏಳಿಗೆಯ ದ್ರುಶ್ಟಿಯಿಂದ ಇದು ತುರ‍್ತಾಗಿ ಆಗಬೇಕಾದ ಕೆಲಸ. ಪ್ರಸಿದ್ ಸದ್ಯಕ್ಕೊಂತೂ ಬಾರತ ತಂಡದ ಕಾಯಮ್ ಸದಸ್ಯರಾಗುವತ್ತ ದಾಪುಗಾಲಿಟ್ಟುರುವುದರಿಂದ, ಅವರನ್ನು ನೆಚ್ಚಿಕೊಳ್ಳದೆ ಬೇರೆ ವೇಗಿಗಳಿಗೆ ಮಣೆಹಾಕುವುದೇ ಜಾಣ್ಮೆಯ ನಡೆ. ವೈಶಾಕ್, ವಿದ್ಯಾದರ್ ಪಾಟೀಲ್, ವಿದ್ವತ್ ಕಾವೇರಿಯಪ್ಪ, ದರ‍್ಶನ್ ಮತ್ತು ಕೌಶಿಕ್ ಬರವಸೆ ಮೂಡಿಸಿದ್ದರೂ ಇವರೆಲ್ಲಾ ಇನ್ನೂ ಸಾಕಶ್ಟು ಪಳಗಬೇಕಿದೆ. ಇವರನ್ನು ಪಕ್ವಗೊಳಿಸಲು ವಿನಯ್ ಕುಮಾರ್ ರ ನೆರವು ಪಡೆಯುವಲ್ಲಿ ರಾಜ್ಯ ಕ್ರಿಕೆಟ್ ಸಂಸ್ತೆ ಹಿಂದೇಟು ಹಾಕಕೂಡದು.

2022/23 ದೇಸೀ ರುತು

ಮೊನ್ನೆಯಶ್ಟೇ ಬಿ.ಸಿ.ಸಿ.ಐ ಈ ವರುಶದ ಎಲ್ಲಾ ಮಾದರಿಯ ದೇಸೀ ಪಂದ್ಯಾವಳಿಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಪೂರ‍್ಣಪ್ರಮಾಣದ ರಣಜಿ ಟೂರ‍್ನಿ ಮರಳಿರುವುದು ಅಬಿಮಾನಿಗಳಿಗೆ ಸಿಹಿ ಸುದ್ದಿ. 2022ರ ಸೆಪ್ಟೆಂಬರ್ ನಲ್ಲಿ ಮೊದಲ್ಗೊಳ್ಳುವ ರುತು 2023ರ ಮಾರ‍್ಚ್ ನಲ್ಲಿ ಕೊನೆಗೊಳ್ಳಲಿದೆ. ಹಾಗಾಗಿ ಕರ‍್ನಾಟಕ ಕ್ರಿಕೆಟ್ ಸಂಸ್ತೆಗೆ ಕೇವಲ ಇನ್ನೆರಡು ತಿಂಗಳಲ್ಲಿ ಒಂದು ಸದ್ರುಡ ತಂಡ ಕಟ್ಟುವ ದೊಡ್ಡ ಜವಾಬ್ದಾರಿ ಹೆಗಲೇರಿದೆ. ಕೆ.ಎಸ್.ಸಿ.ಎ ಮೇಲೆ ಕ್ಲಬ್ ಲಾಬಿ, ಪರರಾಜ್ಯದ ವಲಸೆ ಆಟಗಾರರಿಗೆ ಅನುಕೂಲವಾಗುವಂತಹ ಕಾನೂನು ತಿದ್ದುಪಡಿ ಹಾಗೂ ಬದಿಯೊಲವಿನಂತಹ ಹಲವಾರು ಆರೋಪಗಳು ಕೆಲ ವರ‍್ಶಗಳಿಂದ ಕೇಳಿಬರುತ್ತಿವೆ. ಇದಕ್ಕೆ ಪುಶ್ಟಿ ನೀಡುವಂತೆಯೇ ಕಳಪೆ ಪ್ರದರ‍್ಶನ ತೋರಿದ ಹಲವಾರು ಆಟಗಾರರಿಗೆ ಸಾಲುಸಾಲು ಅವಕಾಶ ನೀಡಲಾಗಿತ್ತು. ಹಾಗಾಗಿ ಈ ಆರೋಪಗಳನ್ನು ತಳ್ಳಿಹಾಕುವಂತೇನೂ ಇಲ್ಲ. ಇನ್ನಾದರೂ ತಪ್ಪುಗಳನ್ನು ತಿದ್ದುಕೊಂಡು ಕರ‍್ನಾಟಕದ ಬವ್ಯ ಕ್ರಿಕೆಟ್ ಪರಂಪರೆಗೆ ಚ್ಯುತಿ ಬಾರದಂತೆ ಸಂಸ್ತೆಯ ಸಿಬ್ಬಂದಿ ನಡೆದುಕೊಂಡು ಒಂದು ಸಮರ‍್ತ ತಂಡ ಕಟ್ಟಿ ರಣಜಿ ಟೂರ‍್ನಿ ಮುಡಿಗೇರಿಸಿಕೊಳ್ಳಲು ನೆರವಾಗಲಿ ಎಂದು ಹರಸೋಣ.

(ಚಿತ್ರ ಸೆಲೆ: thequint.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks