ಕವಿತೆ: ಮನ್ವಂತರ

– ವೆಂಕಟೇಶ ಚಾಗಿ.

ನಾನೇ ಚಂದ
ನಾ ಗೇದುದೆ ಚಂದ
ನನಗಾಗಿಯೇ ಈ ಚಂದ
ನನ್ನಿಂದಲೇ ಈ ಚಂದ ಈ ಅಂದ
ಅವನೆಂದ

ಇನ್ನವನು ಅಲ್ಲ ಚಂದ
ಅವಗೈದವನಲ್ಲ ಚಂದ
ಅವನಿಂದಾದದ್ದಲ್ಲ ಚಂದ
ಚಂದವದು ಅವಗಲ್ಲ
ಆ ಚಂದ ಚಂದವೇ ಅಲ್ಲ
ನನ್ನದಲ್ಲದ ಚಂದ ಚಂದವೇ ಅಲ್ಲ
ಅವನೆಂದ

ಅವ ಚಂದವೆಂದರೆ
ಜಂಬವೆಂದನು ಇವ
ಸುಮ್ಮನೆ ಅಂದ ಅದು ಚಂದ
ಅನ್ನದಿದ್ದರೆ ಇವ ನೊಂದ
ಅಂದರೆ ಅವ ಬೆಂದ
ಈ ಬಂದ ಚಂದ
ಬಂದನದ ಬಂದ
ಬೆಂದವನ ಗೈವ ಗಾರುಡಿ ಚಂದ
ಚಂದ ಇರುವದು ಚಂದವಾಗಲು ಚಂದ
ತಾನೆನ್ನಬೇಕು ಅದು ಚಂದ
ಅವನೆಂದ

ಹಿಂದೊಂದು ದಿನದ ಚಂದ
ಮುಂದೊಂದು ದಿನಕ ಚಂದ
ಇಂದಿಂದ ಇಂದ ಚಂದಾನಚಂದ
ಯಾರು ಗೈದದ್ದು ಚಂದ?
ಆ ಚಂದ ಈಗಿಲ್ಲ
ಈ ಚಂದ ಮುಂದಿಲ್ಲ
ಮಾತೊಂದ ಬಲು ಚಂದ
ಮೇಲೌನೆ ಮಾಡಿದ್ದು ಚಂದ
ನಂದ ನಿಂದ ಚಂದ ಅಂದ
ಇರುತನಕ
ಚಂದಾತಿ ಚಂದ ಅದೇ ಚಂದ
ಕೊನೆತನಕ ಹೊಸತನಕ
ಅವನೆಂದ

(ಚಿತ್ರ ಸೆಲೆ: pxhere.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: