ಉರಿಲಿಂಗಪೆದ್ದಿ ವಚನಗಳ ಓದು – 2ನೇ ಕಂತು

– ಸಿ.ಪಿ.ನಾಗರಾಜ.

ವಚನಗಳು, Vachanas

ವೇದ ಶಾಸ್ತ್ರ ಪುರಾಣಾಗಮ ಗ್ರಂಥಂಗಳ

ನೋಡಿದವರೆಲ್ಲರೇನು ಹಿರಿಯರೆಂಬೆನೆ
ಅಲ್ಲಲ್ಲ ನಿಲ್ಲು ಮಾಣು
ಅವರೇ ಹಿರಿಯರಾದಡೆ
ನಟ್ಟುವೆ ಗಳೆಯಾಟ ಮಿಣಿಯಾಟ
ಅದೃಶ್ಯಕರಣ ಅಗ್ನಿಸ್ತಂಭ ಆಕರ್ಷಣ
ಚೌಷಷ್ಠಿ ಕಲಾ ವಿದ್ಯೆ ಸಾಧಿಸಿದ
ಡೊಂಬನೇನು ಕಿರಿಯನೇ
ಇದು ಹಿರಿದು ಕಿರಿದಿನ ಪರಿಯಲ್ಲ
ಹಿರಿದು ಕಿರಿದಿನ ಪರಿ ಬೇರೆ ಕಾಣಿರಣ್ಣಾ
ಇದು ಉದರಪೋಷಣ ವಿದ್ಯೆ ಎನಿಸುವುದು
ಅವರನೆಂತು ಸರಿ ಎಂಬೆನಯ್ಯ
ಲಿಂಗವಂತಂಗೆ ಇದು ಕಾರಣ
ಗುಣ ಜ್ಞಾನ ಧರ್ಮ ಆಚಾರ ಶೀಲ
ಸಾಧಿಸಿದಾತನೇ ಹಿರಿಯ ಕಾಣಾ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ನಿಜಜೀವನದಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳುತ್ತಿರುವ ವ್ಯಕ್ತಿಯು ಹಿರಿಯನೇ ಹೊರತು ಓದುಬರಹದ ವಿದ್ಯೆಯಲ್ಲಿ ಪರಿಣತನಾಗಿ ತನ್ನ, ತನ್ನ ಕುಟುಂಬದ ಮತ್ತು ತನ್ನ ಜಾತಿ ಮತ್ತು ವರ‍್ಗದ ಹಿತಕ್ಕಾಗಿ ಬಾಳುವವನು ಹಿರಿಯನಲ್ಲ ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ಸಮಾಜದಲ್ಲಿ ವ್ಯಕ್ತಿಗೆ ಹಿರಿತನವೆಂಬುದು ಸಾಮಾನ್ಯವಾಗಿ “ವಯಸ್ಸು / ಜಾತಿ / ಸಂಪತ್ತು / ವಿದ್ಯೆ / ಆಡಳಿತದ ಗದ್ದುಗೆ”ಯಿಂದ ದೊರೆಯುತ್ತದೆ. ಹಿಂದಿನಿಂದಲೂ ಜನಮನದಲ್ಲಿರುವ ಸಾಮಾಜಿಕ ಮನ್ನಣೆಯ ಈ ಬಗೆಯ ಅಳತೆಗೋಲನ್ನು ಹನ್ನೆರಡನೆಯ ಶತಮಾನದ ಈ ವಚನಕಾರನು ನಿರಾಕರಿಸಿ, ಒಳ್ಳೆಯ ನಡೆನುಡಿಯುಳ್ಳವರು ಮಾತ್ರ ‘ಹಿರಿಯರು’ ಎಂಬುದನ್ನು ಪ್ರತಿಪಾದಿಸಿದ್ದಾನೆ.

“ಒಳ್ಳೆಯ ನಡೆನುಡಿ” ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ತನ್ನ ಮತ್ತು ತನ್ನ ಕುಟುಂಬದ ಹಿತವನ್ನು ಕಾಪಾಡುವಂತೆಯೇ ಸಹಮಾನವರ ಮತ್ತು ಸಮಾಜದ ಹಿತವನ್ನು ಕಾಪಾಡುವುದು.

ವೇದ=ರುಗ್ವೇದ-ಯಜುರ‍್ವೇದ-ಸಾಮವೇದ-ಅತರ‍್ವಣ ವೇದ ಎಂಬ ನಾಲ್ಕು ಬಗೆಯ ಹೊತ್ತಿಗೆಗಳು ಇವೆ. ಈ ಹೊತ್ತಿಗೆಗಳಲ್ಲಿ ಇಂಡಿಯಾ ದೇಶದಲ್ಲಿದ್ದ ಪ್ರಾಚೀನ ಜನಸಮುದಾಯದವರು ನಿಸರ‍್ಗದಲ್ಲಿ ಕಂಡುಬರುವ ವಸ್ತು, ಜೀವಿ ಮತ್ತು ಕ್ರಿಯೆಗಳನ್ನು ದೇವತೆಗಳೆಂದು ಕಲ್ಪಿಸಿಕೊಂಡು, ಅವರಿಂದ ಅನುಗ್ರಹವನ್ನು ಪಡೆಯಲೆಂದು ಪೂಜಿಸುವಾಗ ಮಾಡುವ ಆಚರಣೆಗಳ ಮತ್ತು ಉಚ್ಚರಿಸುವ ನುಡಿಗಳ ವಿವರವಿದೆ;

ಶಾಸ್ತ್ರ=ದೇವತೆಗಳನ್ನು ಪೂಜಿಸುವಾಗ ಮತ್ತು ಹುಟ್ಟು ಮದುವೆ ಸಾವಿನ ಸನ್ನಿವೇಶಗಳಲ್ಲಿ ಚಾಚುತಪ್ಪದೆ ಅನುಸರಿಸಬೇಕಾದ ಕಟ್ಟುಪಾಡುಗಳು; ಪುರಾಣ+ಆಗಮ;

ಪುರಾಣ=ಮಾನವ ಸಮುದಾಯದ ಜೀವನದ ವಾಸ್ತವ ಸಂಗತಿಗಳ ಜತೆಗೆ ಕಲ್ಪನೆಯ ವಿಚಾರಗಳನ್ನು ಹೆಣೆದು ಕಟ್ಟಿರುವ ಕತೆಗಳು. ಇಂಡಿಯಾ ದೇಶದ ಪ್ರಾಚೀನ ಜನಸಮುದಾಯದಲ್ಲಿ ಹದಿನೆಂಟು ಪುರಾಣಗಳು ರಚನೆಗೊಂಡಿವೆ;

ಆಗಮ=ಪ್ರಾಚೀನ ಜನಸಮುದಾಯದವರ ಸಂಪ್ರದಾಯಗಳನ್ನು , ನಂಬಿಕೆಗಳನ್ನು ಮತ್ತು ಆಚರಣೆಗಳನ್ನು ವಿವರಿಸುವ ಹೊತ್ತಿಗೆ; ನೋಡಿದವರು+ಎಲ್ಲರು+ಏನು; ನೋಡು=ವಿಚಾರಮಾಡು/ಆಲೋಚಿಸು; ಹಿರಿಯರು+ಎಂಬೆನೆ; ಹಿರಿಯರು=ದೊಡ್ಡವರು/ತಿಳಿದವರು/ಸಾಮಾಜಿಕವಾಗಿ ಮನ್ನಣೆಯನ್ನು ಪಡೆದವರು; ಎಂಬೆನೆ=ಎನ್ನುತ್ತೇನೆಯೆ;

ವೇದ ಶಾಸ್ತ್ರ ಪುರಾಣಾಗಮ ಗ್ರಂಥಗಳ ನೋಡಿದವರೆಲ್ಲರೇನು ಹಿರಿಯರೆಂಬೆನೆ=ವೇದ, ಶಾಸ್ತ, ಪುರಾಣ, ಆಗಮದ ಹೊತ್ತಿಗೆಗಳನ್ನು ಚೆನ್ನಾಗಿ ಓದಿ ತಿಳಿದುಕೊಂಡಿವವರನ್ನು ನಾನು ಹಿರಿಯರು ಎಂದು ಕರೆಯುತ್ತೇನೆಯೇ. ಅಂದರೆ ಓದಿನಲ್ಲಿ ಪರಿಣತಿಯನ್ನು ಪಡೆದ ಮಾತ್ರಕೆ ಅವರೆಲ್ಲರನ್ನೂ ನಾನು ಹಿರಿಯರೆಂದು ಒಪ್ಪಿಕೊಳ್ಳುವುದಿಲ್ಲ;

ಮಾಣು=ಸುಮ್ಮನಿರು; ಅಲ್ಲಲ್ಲ ನಿಲ್ಲು ಮಾಣು=ಓದು ಬರಹದಲ್ಲಿ ಪರಿಣತರಾದವರೆಲ್ಲರೂ ಹಿರಿಯರು ಎಂದು ತೀರ‍್ಮಾನಿಸುವುದಕ್ಕೆ ಆತುರಪಡಬೇಡ. ಅದಕ್ಕೆ ಮುಂಚೆ ಸ್ವಲ್ಪ ಯೋಚಿಸಿ ನೋಡು; ಹಿರಿಯರ್+ಆದಡೆ; ಆದಡೆ=ಆದರೆ;

ಅವರೇ ಹಿರಿಯರಾದಡೆ=ವೇದ ಶಾಸ್ತ್ರ ಪುರಾಣ ಆಗಮಗಳನ್ನು ಓದಿದವರನ್ನು ಹಿರಿಯರೆಂದು ಕರೆದು ಮನ್ನಣೆ ನೀಡುವುದಾದರೆ;

ನಟ್ಟುವೆ=ಕುಣಿತ; ಗಳೆ+ಆಟ; ಗಳೆ=ಬಿದಿರಿನ ಉದ್ದನೆಯ ಕೋಲು/ಗಳ; ಗಳೆಯಾಟ=ಬಿದಿರಿನ ಗಳವನ್ನು ಹಿಡಿದುಕೊಂಡು ನಾನಾ ವರಸೆಗಳಲ್ಲಿ ನೆಗೆಯುವುದು/ಉದ್ದನೆಯ ಹಾಗೂ ಗಟ್ಟಿಯಾದ ಗಳವನ್ನು ನೆಲದಲ್ಲಿ ನೆಟ್ಟು, ಅದನ್ನು ಹತ್ತಿಹೋಗುವುದು;

ಮಿಣಿ+ಆಟ; ಮಿಣಿ=ತೊಗಲಿನ ಹಗ್ಗ/ಚರ‍್ಮವನ್ನು ಹದಗೊಳಿಸಿ ಮಾಡಿರುವ ಹುರಿ; ಮಿಣಿಯಾಟ=ಎರಡು ಮರದ ಕಂಬಗಳನ್ನು ದೂರ ದೂರ ನೆಟ್ಟು ಅವಕ್ಕೆ ಹಗ್ಗವನ್ನು ಕಟ್ಟಿ, ಹಗ್ಗದ ಮೇಲೆ ನಡೆಯುವ ಆಟ;

ಅದೃಶ್ಯಕರಣ=ಕಣ್ಣ ಮುಂದೆ ಇರುವ ವಸ್ತುಗಳು ಇದ್ದಕ್ಕಿದ್ದಂತೆಯೇ ಮಾಯಾವಾಗುವಂತೆ ಮಾಡಿ, ಮತ್ತೆ ಅವು ಕಾಣಿಸಿಕೊಳ್ಳುವಂತೆ ಮಾಡುವುದು; ಅಗ್ನಿಸ್ತಂಭ=ವ್ಯಕ್ತಿಯು ದಗದಗನೆ ಉರಿಯುತ್ತಿರುವ ಬೆಂಕಿಯ ಕುಂಡದ ನಡುವೆ ನಿಂತುಕೊಂಡಿದ್ದರೂ ಉರಿಯ ತಾಪ ತಟ್ಟದಿರುವುದು; ಆಕರ್ಷಣ=ವ್ಯಕ್ತಿಯ ಮಯ್ ಮನವನ್ನು ವಶಕ್ಕೆ ತೆಗೆದುಕೊಂಡು, ಅವನನ್ನು ತಮ್ಮ ಇಚ್ಚೆಗೆ ತಕ್ಕಂತೆ ಆಡಿಸುವುದು;

ಅದೃಶ್ಯಕರಣ/ಅಗ್ನಿಸ್ತಂಭ/ಆಕರ್ಷಣ-ಈ ಮೂರು ಬಗೆಯ ಆಟಗಳನ್ನು ‘ಕಣ್ಕಟ್ಟು’ ಎಂದು ಕರೆಯುತ್ತಾರೆ. ನೋಡುತ್ತಿರುವವರ ಕಣ್ಣಿಗೆ ವಾಸ್ತವ ಎಂಬುದು ಮರೆಯಾಗಿ, ಆಟವನ್ನು ಕಟ್ಟಿರುವವನ ಮಾತಿಗೆ ತಕ್ಕಂತಹ ನೋಟಗಳನ್ನೇ ನೋಡುಗರ ಕಣ್ಮನಗಳು ಕಾಣುತ್ತಿರುತ್ತವೆ;

ಚೌಷಷ್ಠಿ=ಅರವತ್ನಾಲ್ಕು; ಕಲಾ=ನಟನೆ, ಹಾಡು, ಚಿತ್ರ, ಶಿಲ್ಪ ಮುಂತಾದ ಕುಶಲ ಪ್ರಕಾರಗಳು; ಸಾಧಿಸು=ಪಡೆದುಕೊಳ್ಳುವುದು/ದೊರಕಿಸಿಕೊಳ್ಳುವುದು; ಡೊಂಬನ್+ಏನು;

ಡೊಂಬ=ಬಿದಿರಿನ ಗಳು, ಬೊಂಬು , ತೊಗಲಿನ ಹಗ್ಗ ಮುಂತಾದ ವಸ್ತುಗಳನ್ನು ಬಳಸಿಕೊಂಡು ತನ್ನ ದೇಹವನ್ನು ಬಗೆಬಗೆಯಲ್ಲಿ ಬಳುಕಿಸುತ್ತ, ಹಗ್ಗದ ಮೇಲೆ ನಡೆಯುತ್ತ, ಡೋಲನ್ನು ಬಾರಿಸುತ್ತ, ಕಯ್ ಚಳಕದ ಮೂಲಕ ನೋಡುಗರ ಕಣ್ಮನಗಳನ್ನು ತಣಿಸುವಂತೆ ಆಟಗಳನ್ನು ಕಟ್ಟುವವನು; ಕಿರಿಯ=ಚಿಕ್ಕವನು/ಸಾಮಾಜಿಕ ಮನ್ನಣೆಯಿಲ್ಲದವನು;

ಡೊಂಬನೇನು ಕಿರಿಯನೇ=ಡೊಂಬನು ಸಾಮಾಜಿಕವಾಗಿ ಮನ್ನಣೆಯಿಲ್ಲದವನೇ; ಪರಿ+ಅಲ್ಲ; ಪರಿ=ರೀತಿ;

ಇದು ಹಿರಿದು ಕಿರಿದಿನ ಪರಿಯಲ್ಲ=ಈ ರೀತಿಯಲ್ಲಿ ವ್ಯಕ್ತಿಯ ವ್ಯಕ್ತಿತ್ವವನ್ನು ಅವನು ಕಲಿತಿರುವ ವಿದ್ಯೆ ಇಲ್ಲವೇ ಮಾಡುತ್ತಿರುವ ಕಸುಬಿನಿಂದ ದೊಡ್ಡದು ಇಲ್ಲವೇ ಚಿಕ್ಕದು ಎಂದು ಅಳೆಯಬಾರದು;

ಕಾಣಿರಿ+ಅಣ್ಣಾ; ಕಾಣಿರಿ=ತಿಳಿಯಿರಿ;

ಹಿರಿದು ಕಿರಿದಿನ ಪರಿ ಬೇರೆ ಕಾಣಿರಣ್ಣಾ=ದೊಡ್ಡದು ಚಿಕ್ಕದು ಎನ್ನುವುದನ್ನು ಗೊತ್ತುಪಡಿಸುವ ರೀತಿಯೇ ಬೇರೆ ಎಂಬುದನ್ನು ತಿಳಿಯಿರಿ. ಅಂದರೆ ಹಿರಿದು ಕಿರಿದು ಎಂಬುದನ್ನು ವ್ಯಕ್ತಿಯು ಹೊಂದಿರುವ ಒಳ್ಳೆಯ ನಡೆನುಡಿಯಿಂದ ಮಾತ್ರ ಅಳೆಯಬೇಕು;

ಉದರ=ಹೊಟ್ಟೆ; ಪೋಷಣ=ಕಾಪಾಡುವುದು; ಉದರಪೋಷಣ=ಹೊಟ್ಟೆಪಾಡು;

ಇದು ಉದರಪೋಷಣ ವಿದ್ಯೆ ಎನಿಸುವುದು=ವೇದ ಶಾಸ್ತ್ರ ಪುರಾಣ ಆಗಮಗಳಲ್ಲಿ ಪರಿಣತರಾದವನು ಮತ್ತು ಅರವತ್ನಾಲ್ಕು ಬಗೆಯ ಡೊಂಬ ವಿದ್ಯೆಗಳಲ್ಲಿ ಕುಶಲನಾದನು-ಈ ಇಬ್ಬರು ಮಾಡುತ್ತಿರುವುದು ತಮ್ಮ ತಮ್ಮ ಹೊಟ್ಟೆಪಾಡನ್ನು ನೀಗಿಸಿಕೊಳ್ಳುವುದಕ್ಕಾಗಿಯೇ ಹೊರತು ಮತ್ತೇನು ಅಲ್ಲ.

ಅವರನ್+ಎಂತು; ಅವರನ್=ಓದುಬರಹ ಬಲ್ಲವರನ್ನು; ಎಂತು=ಯಾವ ರೀತಿ; ಎಂಬೆನ್+ಅಯ್ಯಾ;

ಅವರನೆಂತು ಸರಿ ಎಂಬೆನಯ್ಯ=ಪ್ರಾಚೀನ ಕಾಲದಿಂದಲೂ ‘ಬ್ರಾಹ್ಮಣ-ಕ್ಶತ್ರಿಯ-ವೈಶ್ಯ-ಶೂದ್ರ’ ಎಂಬ ಮೇಲು ಕೀಳಿನ ಮೆಟ್ಟಲುಗಳಿಂದ ಕೂಡಿದ ವರ‍್ಣವ್ಯವಸ್ತೆಯು ನಮ್ಮ ಸಮಾಜದಲ್ಲಿತ್ತು. ಚಂಡಾಲರೆಂಬ ಮತ್ತೊಂದು ವರ‍್ಗದವರನ್ನು ಮಾನವ ಜೀವಿಗಳೆಂದೇ ನಮ್ಮ ಸಮಾಜ ಪರಿಗಣಿಸಿರಲಿಲ್ಲ. ವಿದ್ಯೆ, ಸಂಪತ್ತು ಮತ್ತು ಆಡಳಿತದ ಗದ್ದುಗೆಯು ಮೊದಲ ಮೂರು ವರ‍್ಣದವರಿಗೆ ಮಾತ್ರ ಮೀಸಲಾಗಿತ್ತು. ಶೂದ್ರರು ಮೊದಲ ಮೂರು ವರ‍್ಣದವರಿಗೆ ದಾಸರಾಗಿ ಸೇವೆಯನ್ನು ಮಾಡುವುದರಲ್ಲಿಯೇ ತಮ್ಮ ಬದುಕನ್ನು ಕಳೆಯಬೇಕಿತ್ತು.

ವೇದ, ಶಾಸ್ತ್ರ, ಪುರಾಣ, ಆಗಮಗಳಲ್ಲಿ ಪರಿಣತಿಯನ್ನು ಪಡೆದಿದ್ದ ಮೇಲು ವರ‍್ಣದವರು ನಾಡಿನ ಒಟ್ಟು ಜನಸಮುದಾಯದಲ್ಲಿ ಶೇ 80 ರಶ್ಟಿದ್ದ ಶೂದ್ರರನ್ನು ಮತ್ತು ಚಂಡಾಲರನ್ನು ಹಸಿವು, ಬಡತನ ಮತ್ತು ಅಪಮಾನದ ಬದುಕಿನ ಕಡೆಗೆ ತಳ್ಳಿ, ಅವರ ದುಡಿಮೆಯ ಉತ್ಪನ್ನದಲ್ಲಿ ದೊಡ್ಡ ಪಾಲನ್ನು ತಮ್ಮದಾಗಿಸಿಕೊಳ್ಳುತ್ತಿದ್ದರು. ಇಂತಹ ವಂಚಕರನ್ನು ‘ಹಿರಿಯರು’ ಎಂದು ಕರೆಯಲು ವಚನಕಾರನ ಮನಸ್ಸು ಒಪ್ಪುತ್ತಿಲ್ಲ; ಜನಸಮುದಾಯಕ್ಕೆ ಕೇಡನ್ನು ಬಗೆಯುವವರು ಯಾವುದೇ ರೀತಿಯಿಂದಲೂ ‘ಹಿರಿಯರಲ್ಲ’ ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು;

ಲಿಂಗವಂತಂಗೆ=ಲಿಂಗವಂತನಿಗೆ; ಲಿಂಗವಂತ=ಒಳ್ಳೆಯ ನಡೆನುಡಿಗಳನ್ನೇ ಶಿವನೆಂದು ತಿಳಿದು ಬಾಳುತ್ತಿರುವ ವ್ಯಕ್ತಿ; ಇದು ಕಾರಣ=ಈ ಹಿನ್ನೆಲೆಯಿಂದ ಗಮನಿಸಿದಾಗ;

ಜ್ಞಾನ=ತಿಳುವಳಿಕೆ; ಧರ್ಮ=ಒಲವು,ಕರುಣೆ ಮತ್ತು ಸಮಾನತೆಯಿಂದ ಕೂಡಿದ ನಡೆನುಡಿ; ಆಚಾರ=ಒಳ್ಳೆಯ ವರ‍್ತನೆ; ಶೀಲ=ಒಳ್ಳೆಯ ಗುಣ; ಕಾಣು=ನೋಡು; ಕಾಣಾ=ತಿಳಿದುನೋಡು;

ಗುಣ ಜ್ಞಾನ ಧರ್ಮ ಆಚಾರ ಶೀಲ ಸಾಧಿಸಿದಾತನೇ ಹಿರಿಯ ಕಾಣಾ=ಅರಿವನ್ನು ಪಡೆದುಕೊಂಡು ಒಳ್ಳೆಯ ನಡೆನುಡಿಗಳಿಂದ ಎಲ್ಲರ ಒಳಿತಿಗಾಗಿ ಬಾಳುತ್ತಿರುವವನೇ ‘ಹಿರಿಯ’ ಎಂಬುದನ್ನು ಮನಗಾಣು.

ವಿಶ್ವೇಶ್ವರ=ಶಿವನ ಮತ್ತೊಂದು ಹೆಸರು; ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ=ಉರಿಲಿಂಗಪೆದ್ದಿಯ ವಚನಗಳ ಅಂಕಿತನಾಮ;

( ಚಿತ್ರ ಸೆಲೆ: sugamakannada.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: