ತಟ್ಟನೆ ಮಾಡಿನೋಡಿ ತಿಳಿಸಾರು

– ನಿತಿನ್ ಗೌಡ.

ಬೇಕಾಗುವ ಸಾಮಾನುಗಳು

  • ಟೋಮೋಟೋ – 3
  • ಈರುಳ್ಳಿ – 1
  • ಜೀರಿಗೆ – ಅರ‍್ದ ಚಮಚ
  • ಸಾಸಿವೆ – ಸ್ವಲ್ಪ
  • ಕರಿಬೇವಿನ ಸೊಪ್ಪು – ಸ್ವಲ್ಪ
  • ಹಸಿಕಾಯಿ ತುರಿ – ಕಾಲು ಹೊಳಕೆ (ಅಂದಾಜಿಗೆ)
  • ಅರಿಶಿಣ – ಅರ‍್ದ ಚಿಕ್ಕ ಚಮಚ
  • ಕಾರದ ಪುಡಿ – 2 ರಿಂದ 3 ಚಮಚ
  • ಹಸಿ ಮೆಣಸಿನ ಕಾಯಿ – 1
  • ಬೆಳ್ಳುಳ್ಳಿ – 14 ಎಸಳು
  • ಎಣ್ಣೆ – ಸ್ವಲ್ಪ
  • ಉಪ್ಪು – ರುಚಿಗೆ ತಕ್ಕಶ್ಟು
  • ನೀರು – 1-1.5 ಲೀಟರ್
  • ಕೊತ್ತಂಬರಿ ಸೊಪ್ಪು – ಚೂರು (ಚೆಂದಕಾಣಿಸಲು)

ಮಾಡುವ ಬಗೆ:

ಮೊದಲಿಗೆ ಈರುಳ್ಳಿ, ಮೆಣಸಿನ ಕಾಯಿ ಮತ್ತು ಟೋಮೋಟೋವನ್ನು ಹೆಚ್ಚಿಟ್ಟುಕೊಳ್ಳಿರಿ. ಆಮೇಲೆ ಬೆಳ್ಳುಳ್ಳಿ ಬಿಡಿಸಿಟ್ಟುಕೊಳ್ಳಿರಿ. ಈಗ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ,ಜೀರಿಗೆ, ಕರಿಬೇವು ಮತ್ತು ಬೆಳ್ಳುಳ್ಳಿಯನ್ನು ಹಾಕಿರಿ. ಬೆಳ್ಳುಳ್ಳಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ, ಈರುಳ್ಳಿಯನ್ನು ಹಾಕಿರಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗುತ್ತಿದ್ದಂತೆ, ಹೆಚ್ಚಿಟ್ಟುಕೊಂಡ ಟೋಮೋಟೋ ಹಾಕಿಕೊಳ್ಳಿರಿ. ಈಗ ಅರಿಶಿಣ ಮತ್ತು ಉಪ್ಪನ್ನು ಹಾಕಿರಿ. ಟೋಮೋಟೋ ಕರಗಲು ಮೊದಲಾಗುತ್ತದೆ. ಟೋಮೋಟೋ ಚೆನ್ನಾಗಿ ಕರಗಿ ಮೆತ್ತಗಾದಮೇಲೆ, ಕಾರದ ಪುಡಿ ಮತ್ತು ನೀರು ಹಾಕಿರಿ. ಈಗ ಇದು ಚೂರು ಬಿಸಿಯಾಗುತ್ತಿದ್ದಂತೆ ತುರಿದಿಟ್ಟುಕೊಂಡ ಕಾಯಿ ತುರಿಯನ್ನು ಹಾಕಿರಿ. ಉಪ್ಪು ಮತ್ತು ಕಾರ ನೋಡಿ ಬೇಕಾದಲ್ಲಿ ಹಾಕಿಕೊಳ್ಳಬಹುದು. ಈಗ ಸಾರು ಕೊತಕೊತ ಕುದಿಯುತ್ತಿದ್ದಂತೆ ಒಲೆ ಆರಿಸಿ. ತಿಳಿ ಸಾರಿನ ಮೇಲೆ ಕೊತ್ತಂಬರಿ ಸೊಪ್ಪಿನ ಒಂದೆರಡು ಎಳೆಯನ್ನು ಹಾಕಿರಿ. ಈಗ ಬಿಸಿ ಬಿಸಿ ತಿಳಿಸಾರು ತಯಾರಿದ್ದು ಅನ್ನದ ಜೊತೆ ಸವಿಯಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಸಾರು ತಯಾರಿಕೆ ಸುಲಭವಾಯಿತು.

ಅನಿಸಿಕೆ ಬರೆಯಿರಿ: