ನಾ ನೋಡಿದ ಸಿನಿಮಾ: ವಿಕ್ರಾಂತ್ ರೋಣ

– ಕಿಶೋರ್ ಕುಮಾರ್

ಕನ್ನಡ ಚಿತ್ರರಂಗಕ್ಕೆ 2022 ಒಂದು ರೀತಿಯ ಹರುಶ ತಂದ ವರುಶ ಅನ್ನಬಹುದು. 2022 ರ ಏಪ್ರಿಲ್ನಲ್ಲಿ ಬಿಡುಗಡೆಯಾಗಿ ಇಡೀ ಇಂಡಿಯಾ ತಿರುಗಿ ನೋಡುವಂತೆ ಮಾಡಿದ ಕೆಜಿಎಪ್-2, ಆಮೇಲೆ ಸದ್ದಿಲ್ಲದೇ ಬಂದು ಎಲ್ಲರ ಮನಗೆದ್ದ ಚಾರ‍್ಲಿ, ಈಗ ನೋಡುಗರಿಗೆ ಹೊಸದೊಂದು ಲೋಕವನ್ನೇ ಕಟ್ಟಿ ಕೊಡುವ ವಿಕ್ರಾಂತ್ ರೋಣ. ಈ ಚಿತ್ರವನ್ನು ಮೊದಲು ಪ್ಯಾಂಟಮ್ ಎಂದು ಕರೆಯಲಾಗಿತ್ತು ಆದರೆ ಮುಂದೆ ವಿಕ್ರಾಂತ್ ರೋಣ ಎಂದು ಬದಲಾಯಿಸಲಾಯಿತು. ಅದಕ್ಕೆ ಕಾರಣವೂ ಇದೆ. ಈ ಚಿತ್ರದ ಚಿತ್ರೀಕರಣ ಮೊದಲಾದಾಗ ಸುದೀಪ್ ರವರು “ವಿಕ್ರಾಂತ್ ರೋಣ ರಿಪೋರ‍್ಟಿಂಗ್ ಟು ಡ್ಯೂಟಿ” ಎಂದು ಬರೆದು ಒಂದು ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆಗ ವಿಕ್ರಾಂತ್ ರೋಣ ಎಂಬ #ಟ್ಯಾಗ್ ಪ್ಯಾಂಟಮ್ ಗಿಂತ ಹೆಚ್ವು ಪ್ರಚಲಿತದಲ್ಲಿತ್ತು ಆದ್ದರಿಂದ ಚಿತ್ರದ ಹೆಸರನ್ನು ಬದಲಾಯಿಸಲಾಯಿತು ಎಂದು ಚಿತ್ರತಂಡ ಹೇಳಿತ್ತು. ಸ್ನೀಕ್ ಪೀಕ್ ಬಿಡುಗಡೆಯಾದ ದಿನವೇ ಎಲ್ಲರಲ್ಲೂ ಕುತೂಹಲ ಹಾಗೂ ಒಳ್ಳೆಯ ಚಿತ್ರವಾಗಿರುತ್ತೆ ಅನ್ನೋ ನಂಬಿಕೆ ಹುಟ್ಟುಹಾಕಿದ್ದ ಚಿತ್ರತಂಡ, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಚಿತ್ರದ ಹೆಸರನ್ನು ‘ಬುರ‍್ಜ್ ಕಲೀಪಾ’ ಮೇಲೆ ಪ್ರದರ‍್ಶಿಸಿದ್ದು ಮತ್ತೊಂದು ಹೆಗ್ಗಳಿಕೆ. ಬುರ‍್ಜ್ ಕಲೀಪಾ ಮೇಲೆ ಕನ್ನಡ ಚಿತ್ರ ಒಂದರ ಹೆಸರು ಅನಾವರಣಗೊಂಡಿದ್ದು ಅದೇ ಮೊದಲು. ಮುಂದೆ ಹಾಡುಗಳು ಹಾಗೂ ಟ್ರೇಲರ್ ಮೂಲಕ ಕುತೂಹಲವನ್ನು ಹೆಚ್ಚಿಸಿಕೊಂಡು ಬಂದಿತ್ತು ವಿಕ್ರಾಂತ್ ರೋಣ. ಇದರಿಂದಾಗಿ ಗುಣಮಟ್ಟದಲ್ಲಿ ಯಾವ ಚಿತ್ರರಂಗಕ್ಕೂ ಕಡಿಮೆ ಇಲ್ಲ ಎನ್ನುವಂತೆ ಇರುತ್ತೆ ಅನ್ನೋದು ನೋಡುಗರಿಗೆ ಮನದಟ್ಟಾಗಿತ್ತು ಎನ್ನಬಹುದು. 

ವಿಕ್ರಾಂತ್ ರೋಣ ಕತೆ ಹುಟ್ಟಿಕೊಂಡಿದ್ದು ಹೇಗೆ ?

ಈ ಚಿತ್ರ ತೆರೆಯಮೇಲೆ ಜೀವತಳೆದಿದ್ದೇ ಒಂದು ಕಾಕತಾಳೀಯ. ಸುದೀಪ್ ಅವರು ಅನೂಪ್ ಅವರ ನಿರ‍್ದೇಶನದಲ್ಲಿ ಬಿಲ್ಲಾ ರಂಗ ಬಾದ್ಶ ಚಿತ್ರ ಮಾಡಬೇಕಿತ್ತು. ಆದರೆ ಈ ಚಿತ್ರದ, ಚಿತ್ರಕತೆ(screen play) ಮಾಡುವಾಗ  ಅದು ಒಂದು ಹಂತಕ್ಕೆ ಬಂದು ನಿಲ್ಲುತ್ತದೆ. ಅದರ ಮುಂದೆ ಹೇಗೆ ಮುಂದುವರೆಯಬೇಕು ಎಂಬುದು ತಂಡಕ್ಕೆ ತೋಚುವುದಿಲ್ಲ. ಆಗ ಸುದೀಪ್ ಅವರ ಮಾತಿನಂತೆ ಬಿಡುವು ತೆಗೆದುಕೊಂಡು ಮತ್ತೆ ಬೇರೆ ಯಾವುದಾದರೂ ಒಳ್ಳೆಯ ಕತೆ ಇದ್ದರೆ ಹೇಳಿ ಎಂದು ಅನೂಪ್ ಅವರಿಗೆ ಹೇಳುತ್ತಾರೆ. ಅನೂಪ್ ಅವರ ಈ ಕತೆಯನ್ನು ಅವರ ಗೆಳೆಯ ಜಾಕ್ ಅವರು ಕೇಳಿ ಇಶ್ಟ ಪಟ್ಟಿರುತ್ತಾರೆ ಮತ್ತು ಸುದೀಪ್ ಅವರ ಹೆಂಡತಿ ಪ್ರಿಯಾ ಅವರ ಮೂಲಕ ಸುದೀಪ್ ಅವರಿಗೆ ಕತೆಯನ್ನು ಕೇಳುವಂತೆ ಮಾಡುತ್ತಾರೆ. ಆಗ ಅನೂಪ್ ಅವರು ಸಣ್ಣ ಮಟ್ಟದಲ್ಲಿ ಮಾಡಲು ಹೊರಟಿದ್ದ ಈ ಕತೆಗೆ, ಸುದೀಪ್ ಅವರ ಬರುವಿಕೆಯಿಂದ ದೊಡ್ಡಮಟ್ಟಕ್ಕೆ ಕಸುವು ಬರುತ್ತದೆ. ಆಮೇಲೆ ಕತೆಯಲ್ಲಿ ರಾಜಿ ಆಗದೇ, ಕಮರ‍್ಶಿಯಲ್ ಆಗಿ ಮಾರ‍್ಪಾಡು ಮಾಡಿಕೊಂಡು 3D ಚಳಕ ಬಳಸಿಕೊಂಡು ಚಿತ್ರ ತೆರೆಗೆ ಬಂದಿದೆ ಹಾಗೂ ಇಶ್ಟು ದಿನ ಹೆಚ್ಚಿಸಿಕೊಂಡು ಬಂದಿದ್ದ ಕುತೂಹಲಕ್ಕೆ ಈಗ ತೆರೆ ಎಳೆದಿದೆ. 

ಹೇಗಿದೆ ಸಿನೆಮಾ?

ಈ ಚಿತ್ರದ ಪಾತ್ರಗಳ ಬಗ್ಗೆ ಹೇಳುವ ಮುನ್ನ ನಿರ‍್ದೇಶಕರು ಹಾಗೂ ತಂತ್ರಜ್ನರ ಬಗ್ಗೆ ಹೇಳಲೇಬೇಕು. ರಂಗಿತರಂಗ ಚಿತ್ರದ ಮೂಲಕ ಚಂದನವನಕ್ಕೆ ಹೊಸ ರಂಗನ್ನು ನೀಡಿದ್ದ ಅನೂಪ್ ಬಂಡಾರಿ ಅವ್ರು ಮತ್ತೆ ತಮ್ಮ ವ್ರುತ್ತಿಪರತೆಯನ್ನು ತೋರಿ ವಿಕ್ರಾಂತ್ ರೋಣ ಲೋಕವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದುದ್ದಕ್ಕೂ ನೋಡುಗರನ್ನು ಮುಂದೇನಾಗಬಹುದು ಎಂಬ ಕುತೂಹಲದಲ್ಲೇ ಇರಿಸಿ, ವಿಕ್ರಾಂತ್ ರೋಣ ಲೋಕದಲ್ಲಿ ಮುಳುಗಿಸುತ್ತಾರೆ ನಿರ‍್ದೇಶಕ ಅನೂಪ್ ಬಂಡಾರಿ ಅವರು. ಅನೂಪ್ ಬಂಡಾರಿ ಅವರು ತಮ್ಮದೇ ಶೈಲಿಯಲ್ಲಿ ಕತೆಯನ್ನು ಹೇಳುವ ಬಗೆ ತುಂಬಾ ಚೆನ್ನಾಗಿದೆ. ರಂಗಿತರಂಗ ಚಿತ್ರದ ನೆರಳಂತೂ ಇಲ್ಲಿ ಇದ್ದೇ ಇದೆ. ಇನ್ನು ವಿಲಿಯಂ ಡೇವಿಡ್ ಅವರ ಸಿನೆಮಾಟೋಗ್ರಪಿ ಬಗ್ಗೆ ಎರಡು ಮಾತಿಲ್ಲ. ಪ್ರತೀ ದ್ರುಶ್ಯವನ್ನು ಕಾಳಜಿ ವಹಿಸಿ ಅಚ್ಚುಕಟ್ಟಾಗಿ ಸೆರೆಹಿಡಿದು ನೋಡುಗರ ಮುಂದಿಟ್ಟಿದ್ದಾರೆ. ವಿಕ್ರಾಂತ್ ರೋಣ ಎನ್ನುವ ಮಾಯಾಲೋಕದ ಮತ್ತೊಬ್ಬ ರೂವಾರಿ ಇವರು ಎಂದರೆ ತಪ್ಪಾಗಲಾರದು. ಜೊತೆಗೆ ಕಲಾ ನಿರ‍್ದೇಶಕರಾದ (art director) ಶಿವಕುಮಾರ್ ರವರ ಅದ್ಬುತ ಕೆಲಸ ಕೆಲಸವನ್ನು ಮೆಚ್ಚಲೇಬೇಕು. ಕೆ.ಜಿ.ಎಪ್ ಚಿತ್ರದಲ್ಲಿ ಇವರು ಹಾಕಿದ್ದ ಸೆಟ್ ಗಳು ಒಂದು ಬಗೆಯದ್ದಾಗಿದ್ದರೆ , ಇಲ್ಲಿ ಹಾಕಿರುವ ಸೆಟ್ ಗಳು ಬೇರೆ ಬಗೆಯವು. ಇಲ್ಲಿ ಕಾಡನ್ನು ಹುಟ್ಟು ಹಾಕಬೇಕಿತ್ತು. ಚಿಕ್ಕವು- ದೊಡ್ಡವೂ ಹೀಗೆ ಎಲ್ಲಾ ಬಗೆಯ ಮರಗಿಡಗಳು, ನದಿ ಮತ್ತು ಹಡಗು – ಈ ಬಗೆಯಾಗಿ ಇದು ಇನ್ನೂ ಕಶ್ಟಕರ ಅನ್ನಬಹುದು. ಏಕಂದರೆ ಇಲ್ಲಿ ಯಾವುದೇ ಬಗೆಯ ಸುಲಬದ ಲೆಕ್ಕಾಚಾರ ಸಿಗುವುದಿಲ್ಲ(Geometry). ಕಾಡಿಗೆ ಬೆಳಕನ್ನು ತಕ್ಕುದಾಗಿ ನೀಡಿದ್ದಾರೆ.

ಇನ್ನು ತಾರಾಗಣಕ್ಕೆ ಬಂದರೆ, ಕಿಚ್ಚ ಸುದೀಪರ ನಟನೆಯ ಕಿಚ್ಚು ಇನ್ನೂ ಹೆಚ್ಚಾಗಿದೆ ಎನ್ನಬಹುದು. ಸುದೀಪ್ ಅವರ ನಟನೆ ಜೊತೆಗೆ ಅವರ ದನಿಯೇ ಅವರ ಮತ್ತೊಂದು ಕಲೆ ಎನ್ನಬಹುದು. ಸುದೀಪ್ ತಮ್ಮ ದನಿಯಿಂದಲೇ ಜನರನ್ನ ಮೋಡಿ ಮಾಡಬಲ್ಲರು. ಸುದೀಪ್ ರವರ ಪಾತ್ರ ನೋಡಿದವರಿಗೆ ಇದು ಸುದೀಪ್ ಅವರಿಂದ ಮಾತ್ರ ಸಾದ್ಯ ಎಂದು ಅನಿಸದೇ ಇರದು. ಇನ್ನು ತಮ್ಮ ಸಹಜ ನಟನೆಯಿಂದಲೇ ಹೆಸರು ಮಾಡಿರುವ ನಿರೂಪ್ ಬಂಡಾರಿ ಅವರು ಮತ್ತೊಮ್ಮೆ ತಮ್ಮ ನಟನೆಯಿಂದ ಜನರನ್ನು ಸೆಳೆಯುತ್ತಾರೆ. ಮದುಸೂದನ್ ರಾವ್ ಅವರ ಪಾತ್ರ ಗಮನ ಸೆಳೆಯುತ್ತದೆ. ಬೇಬಿ ಸಂಹಿತಾ ತಮ್ಮ ಮುದ್ದಾದ ಮಾತುಗಳಿಂದ ನೋಡುಗರ ಮನಗೆಲ್ಲುತ್ತಾರೆ. ಇನ್ನು ಪನ್ನ ಪಾತ್ರದಲ್ಲಿ ನೀತಾ ಅಶೋಕ್ ನಟಿಸಿದ್ದಾರೆ.  “ಗರ ಗರ ಗರ ಗರ‍್ಗರ ಜರ‍್ಬ , ಪಿರ ನಲ್ಕುರಿ ನೆತ್ತರ ಪರ‍್ಬ” ಎಂಬ ತುಳುವಿನ ಈ ಸಾಲಿನಲ್ಲಿ ಚಿತ್ರದ ಕತೆ ನಿಂತಿದೆ ಎಂದರೆ ತಪ್ಪಾಗಲಾರದು.

ವಿಶೇಶತೆಗಳ ಆಗರ ಈ ವಿಕ್ರಾಂತ್ ರೋಣ

ಈ ಚಿತ್ರ 3D ಯಲ್ಲಿ ಬಿಡುಗಡೆಯಾಗಿರೋದು ಮತ್ತೊಂದು ವಿಶೇಶ ಹಾಗೂ ಚಿತ್ರ ಚೆನ್ನಾಗಿ ಮೂಡಿ ಬರಲು ಇದೂ ಕೂಡ ಒಂದು ಕಾರಣ ಎನ್ನಬಹುದು. ಇದುವರೆಗೂ ಕನ್ನಡದಲ್ಲಿ ಇಲ್ಲವೆ, ಇಂಡಿಯಾದ ಇತರೆ 3ಡಿ ಚಿತ್ರಗಳಿಗೆ ಹೋಲಿಸಿದರೆ ವಿಕ್ರಾಂತ್ ರೋಣ ಮೊದಲಲ್ಲಿ ನಿಲ್ಲುತ್ತದೆ. ಪ್ರತೀ ಪಾತ್ರಗಳು ನಮ್ಮ ಮುಂದೆ ಬಂದು ನಟಿಸುತ್ತಿರುವಂತೆ ಅನ್ನಿಸದೇ ಇರದು. ವಿಕ್ರಾಂತ್ ರೋಣ ನೋಡುವವರು 3ಡಿ ಯಲ್ಲೇ ನೋಡಬೇಕು ಎಂದರೆ ತಪ್ಪಾಗಲಾರದು. ಕನ್ನಡದ ಇಲ್ಲವೇ ಇಂಡಿಯಾ ಮಟ್ಟಿಗೆ ಅತ್ತ್ಯುತ್ತಮ 3ಡಿ ಚಿತ್ರ ಎನ್ನಲು ಯಾವುದೇ ಅಡ್ಡಿ ಇಲ್ಲ. ಇದಕ್ಕೆ ದುಡಿದ ಚಿತ್ರತಂಡದ ಶ್ರಮ ನಿಜಕ್ಕೂ ಒಳ್ಳೆಯ ಪಲ ಕೊಟ್ಟಿದೆ. ನಿರ‍್ದೇಶನ, ಸಿನೆಮಾಟೋಗ್ರಪಿ, ನಟರು ಹೀಗೆ ಪ್ರತಿಯೊಂದರಲ್ಲೂ ಚಿತ್ರತಂಡದ ಶ್ರಮ ಎದ್ದು ಕಾಣುತ್ತದೆ. ಇದಕ್ಕಾಗಿ ಹಣ ಹೂಡಿ ನೋಡುಗರಿಗೆ ರಸದೌತಣ ನೀಡಿದ ಶಾಲಿನಿ ಆರ‍್ಟ್ಸ್  ಮಂಜುನಾತ್ ಹಾಗೂ ಇನ್ವೆನಿಯೋ ಒರಿಜಿನ್ ಅಲಂಕಾರ್ ಅವರನ್ನು ಮೆಚ್ಚಲೇ ಬೇಕು. ಈ ಚಿತ್ರ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲೂ ಸಹ ಬಿಡುಗಡೆಯಾಗಿ ಕನ್ನಡೇತರರ ಮನಗೆದ್ದಿರೋದು ಮತ್ತೊಂದು ವಿಶೇಶ. ಹೀಗೆ ಹಲವು ವಿಶೇಶಗಳ ಹೂರಣ ವಿಕ್ರಾಂತ್ ರೋಣ.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Chandan_Sakleshpur says:

    ಕಿಶೋರ್ ಕುಮರ ನಿಮ್ಮ ಬರಹದ ಶೈಲಿ ಬಹಳ ಅದ್ಬುತವಾಗಿದೆ,

ಅನಿಸಿಕೆ ಬರೆಯಿರಿ:

Enable Notifications