ಏಸೂರು ಕೊಟ್ಟರೂ ಈಸೂರು ಕೊಡೆವು – ಆಂಗ್ಲರೆದುರು ಮೊಳಗಿದ್ದ ಕನ್ನಡಿಗರ ಕೂಗು

– ನಿತಿನ್ ಗೌಡ.

ನಾವು ಬಯಸಿದಂತೆ ಬದುಕುವ ಸ್ವಾತಂತ್ರ್ಯ
ಯಾವತ್ತೂ ಬಯಾನಕ ಹೋರಾಟದ ಪಲವೇ ಹೊರತೂ
ಸುಲಬಕ್ಕೆ ಸಿಗುವುದಿಲ್ಲ

ಪೂರ್‍ಣಚಂದ್ರ ತೇಜಸ್ವಿ

ತೇಜಸ್ವಿಯವರ ಈ ಹೇಳಿಕೆ ತೀರಾ ಇತ್ತೀಚಿನದಾಗಿರಬಹುದು ಆದರೆ ಈ ದಿಟ ಈಸೂರಿನ ಮಂದಿಗೆ ಹತ್ತಾರು ವರುಶಗಳ ಮೊದಲೇ ಅರಿವಿಗೆ ಬಂದಂತಿದೆ. ಕಾರಣ, ಒಂದು ಪುಟ್ಟ ಹಳ್ಳಿಯಾದರೂ ವಸಾಹತುಶಾಹಿ ಬ್ರಿಟೀಶ್ ಸಾಮ್ರಾಜ್ಯದ ಎದುರು ತೊಡೆ ತಟ್ಟಿ, ಇಂಡಿಯಾದಲ್ಲಿ ಸ್ವತಂತ್ರ ಗೋಶಿಸಿಕೊಂಡ ಮೊದಲ ಹಳ್ಳಿ ಎಂಬ ಹೆಗ್ಗಳಿಕೆ ಪಡೆದಿದ್ದು! ಈಸೂರು ಇಂದಿನ ಶಿವಮೊಗ್ಗ ಜಿಲ್ಲೆಯ, ಶಿಕಾರಿಪುರ ತಾಲೂಕಿನಲ್ಲಿದೆ. ಗಾಂದೀಜಿಯವರು 1942 ಆಗಸ್ಟ್ ನಲ್ಲಿ “ಬ್ರಿಟೀಶರೇ, ಬಾರತ ಬಿಟ್ಟು ತೊಲಗಿ”(Quit India movement) ಎಂಬ ಚಳುವಳಿಗೆ ಕರೆನೀಡುತ್ತಾರೆ. ಇದರಿಂದ ಹುಮ್ಮಸ್ಸು ಪಡೆದ ಈಸೂರಿನ ಮಂದಿ, ಬ್ರಿಟೀಶರಿಗೆ ಕರ(Tax) ನೀಡುವುದನ್ನು ನಿಲ್ಲಿಸುತ್ತಾರೆ. ಅಲ್ಲದೇ 1942 ಸೆಪ್ಟೆಂಬರ್ 26ರಂದು “ಈಸೂರು ಸ್ವತಂತ್ರ ಹಳ್ಳಿ, ಬ್ರಿಟೀಶರು ಒಳಬರುವಂತಿಲ್ಲ”  ಎಂದು ಬರೆದ ಸಣ್ಣ ಹಲಗೆಯನ್ನು ಊರ ಹೆಬ್ಬಾಲಿಗೆ ನೇತು ಹಾಕುತ್ತಾರೆ. “ಏಸೂರು ಕೊಟ್ಟರೂ ಈಸೂರು ಕೊಡೆವು” ಕೂಗು ಕೂಗುತ್ತಾ ಎದೆಗಾರಿಕೆ ತೋರುತ್ತಾರೆ. ಅಲ್ಲದೇ ಊರಿನ ವೀರಬದ್ರ ಗುಡಿಯಲ್ಲಿ ಬಾವುಟವನ್ನು ಹಾರಿಸುವ ಮೂಲಕ, ತಾವು ಸ್ವತಂತ್ರರು ಎನ್ನುವ ಸಂದೇಶವನ್ನು ಸಾರುತ್ತಾರೆ. ಇದರಿಂದ ಬ್ರಿಟೀಶರು ಕೆರಳುತ್ತಾರೆ.

ಈ ಜನರ ಎದೆಗಾರಿಕೆ ಎಶ್ಟಿತ್ತೆಂದರೆ, ಆಟವಾಡುತ್ತಿದ್ದ ಮಕ್ಕಳನ್ನೇ ಊರಿನ ಮುಕ್ಯಸ್ತರನ್ನಾಗಿ ಮಾಡಿದರು. ಹತ್ತು ವರುಶದ ಸಾಹುಕಾರ್  ಜಯಣ್ಣರನ್ನು ಅಮಲ್ದಾರನಾಗಿ ಮತ್ತು ಹನ್ನೆರಡು ವರುಶದ ಕೆ.ಜಿ ಮಲ್ಲಯ್ಯನವರನ್ನು ಪೋಲೀಸ್ ಇನ್ಸ್ಪೆಕ್ಟರ್ ಎಂದು ಗೋಶಿಸಿ ತಮ್ಮದೇ ಸರಕಾರ ಮಾಡಿದರು. ಹಳ್ಳಿಯವರು ಪ್ರತಿದಿನ ಊರಿನ ಸುತ್ತ ಸುತ್ತು ಬರುತ್ತಾ ಬ್ರಿಟೀಶರ ವಿರುದ್ದ ಗೋಶಣೆ ಕೂಗುತ್ತಿದ್ದರು. ಅಲ್ಲದೇ ಪ್ರತಿ ದಿನ ಗುಡಿಯಲ್ಲಿ ಸಬೆ ಸೇರಿ ಹಳ್ಳಿಯ ಆಡಳಿತ ಹೇಗೆ ಮಾಡಬಹುದೆಂಬುದರ ಬಗೆಗೆ ಚರ‍್ಚಿಸಲಾಗುತಿತ್ತು. ಹೀಗೆ ಇದನ್ನು ಕಂಡ ಬ್ರಿಟೀಶ್ ಅದಿಕಾರಿಗಳು ಊರ ಮಂದಿಯಲ್ಲಿ ಕಂದಾಯ ಕೇಳಲು ಬಂದಾಗ, ಲೆಕ್ಕದ ಪುಸ್ತಕವನ್ನು ಕಿತ್ತೆಸೆದು ಅವರನ್ನು ಓಡಿಸಲಾಯಿತು. ಈ ವಿಶಯ ತಿಳಿದು ಊರಿಗೆ ಶಿಕಾರಿಪುರದ ಅಮಲ್ಡಾರ ಚೆನ್ನಕ್ರಿಶ್ಣಪ್ಪ ಮತ್ತು ಸಬ್ ಇನ್ಸ್ಪೆಕ್ಟರ್ ಕೆಂಚೇಗೌಡ ಬರುತ್ತಾರೆ. ಊರ ಹೆಬ್ಬಾಗಿನಲ್ಲಿದ್ದ ಹೆಸರಿನ ಹಲಗೆಯನ್ನು ತೆಗೆದು, ಊರ ಸಬೆ ನಡೆಯುತ್ತಿದ ಗುಡಿಯ ಬಳಿ ಬರುತ್ತಾರೆ. ಆಗ ಹಳ್ಳಿಯವರು ಅವರಿಗೆ ಗಾಂದೀಜಿ ಟೋಪಿ ಹಾಕಿಕೊಳ್ಳಲು ಹೇಳಿದಾಗ, ಸಬ್ ಇನ್ಸ್ಪೆಕ್ಟರ್ ಕೆಂಚೇಗೌಡ ಒಪ್ಪುವುದಿಲ್ಲ. ಅಲ್ಲದೇ ಮಂದಿಯ ಮೇಲೆ ಲಾಟಿ ಚಾರ‍್ಜ್ ಮಾಡಲಾಗಿ, ಗಾಳಿಯಲ್ಲಿ ಗುಂಡು ಹಾರಿಸುವಾಗ ತಪ್ಪಿ ಊರಿನವರಲ್ಲೊಬ್ಬರು ಮಡಿಯುತ್ತಾರೆ. ಇದರಿಂದ ಹಳ್ಳಿಯ ಜನ ಕೆರಳುತ್ತಾರೆ. ಹಳ್ಳಿಯ ಜನ ಮತ್ತು ಇವರ ನಡುವೆ ತಿಕ್ಕಾಟ ಏರ‍್ಪಟ್ಟು ಈ ಇಬ್ಬರೂ ಅದಿಕಾರಿಗಳು ಸಾವನ್ನಪ್ಪುತ್ತಾರೆ. ಈ ವಿಶಯ ದೇಶದೆಲ್ಲೆಡೆ ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಅಲ್ಲದೇ ಇದನ್ನು ಹತ್ತಿಕ್ಕುವ ಸಲುವಾಗಿ ಕಂಪನಿ(ಬ್ರಿಟೀಶ್) ಸರಕಾರ ಹಳ್ಳಿಗೆ ಮಿಲಿಟರಿ ಪಡೆಗಳನ್ನು ನುಗ್ಗಿಸಿ ಅತ್ಯಾಚಾರ, ಲೂಟಿ ಮಾಡಿಸುತ್ತಾರೆ. ಅಲ್ಲದೇ ಇಂತಹ ಸರಕಾರದ ಎದುರು ತೊಡೆ ತಟ್ಟುವ ಚಟುವಟಿಕೆಗಳಿಗೆ ಹಣ ಬೇಕು, ಇದು ಜನರಿಗೆ ಎಲ್ಲಿಂದ ಬರುತ್ತದೆ ಎಂದು ಜಾಡು ಹಿಡಿದು ಹೊರಟಾಗ ಸಾಹುಕಾರ್ ಬಸವಣ್ಯಪ್ಪ ಅವರ ಕಡೆ ಗುಮಾನಿ ಬರುತ್ತದೆ. ಅವರ ಮನೆಯನ್ನು ದೋಚಿ, ಸುಟ್ಟು ಹಾಕಲಾಗುತ್ತದೆ. ಬಸವಣ್ಯಪ್ಪನವರು ಬೂಗತರಾಗುತ್ತಾರೆ. ಅವರು ಕವಲೇದುರ‍್ಗಕ್ಕೆ ಹೋಗಿ ಅಲ್ಲಿಯೇ ಮಡಿದರು ಎನ್ನಲಾಗುತ್ತದೆ. ಅಲ್ಲದೇ ಊರಿನ ಹೈದರೆಲ್ಲಾ ಕಾಡಿಗೆ ಓಡಿಹೋಗುತ್ತಾರೆ. ಬ್ರಿಟೀಶರ ರಕ್ಕಸತನಕ್ಕೆ ಊರೇ ಸುಡುಗಾಡಂತಾಗುತ್ತದೆ.

ಹತ್ತಾರು ಮಂದಿ ದಸ್ತಗಿರಿಗೊಳಪಡುತ್ತಾರೆ. ಹಲವಾರು ಹೋರಾಟಗಾರರ ಮೇಲೆ ದೂರು ದಾಕಲಿಸಿ ಸೆರೆಹಿಡಿಯಲಾಗುತ್ತದೆ. 1943ರ ಮಾರ‍್ಚ್‌ 8ರಂದು ಗ್ರಾಮದ ಗುರಪ್ಪ, ಜೀನಳ್ಳಿ ಮಲ್ಲಪ್ಪ, ಮಾರ‍್ಚ್‌ 9ರಂದು ಸೂರ‍್ಯನಾರಾಯಣಾಚಾರ್ ಮತ್ತು ಬಡಕಳ್ಳಿ ಹಾಲಪ್ಪ ಹಾಗೂ ಮಾರ‍್ಚ್‌ 10ರಂದು ಗೌಡ್ರು ಶಂಕರಪ್ಪ ಸೇರಿ ಒಟ್ಟೂ ಐವರನ್ನು ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿ ಗಲ್ಲಿಗೇರಿಸುತ್ತಾರೆ. ಇಲ್ಲಿ ದಿಟವಾಗಿ ಹೋರಾಟಗಾರ ಅಂಗಡಿ ಹಾಲಪ್ಪನವರು ತಲೆಮರೆಸಿಕೊಂಡಿದ್ದರು ಆದರೆ ಅವರ ಬದಲಾಗಿ ಬಡಕಳ್ಳಿ ಹಾಲಪ್ಪನವರನ್ನು ಗಲ್ಲಿಗೇರಿಸಲಾಯಿತು. ಇವರೆಲ್ಲರ ನೆನಪಿಗಾಗಿ ಊರಿನಲ್ಲಿ ಸ್ಮಾರಕದ ಕಟ್ಟೆ ಕೂಡಾ ಇದೆ. ಇದಲ್ಲದೇ ಹತ್ತಾರು ಜನ ಜೀವಾವದಿ ಶಿಕ್ಶೆಗೊಳಪಡುತ್ತಾರೆ. ಇವರಲ್ಲಿ ಮೈಸೂರು ಮಹಾರಾಜರ ಮಗಳ ಹೆಸರಿಡುವ ಕಾರ‍್ಯಕ್ರಮದ ನೆಪದಲ್ಲಿ 12 ಮಂದಿ ಬಿಡುಗಡೆ ಹೊಂದುತ್ತಾರೆ.

ಈಸೂರಿನ ಹೋರಾಟ ನೆನಯುವ ಅಂಜನಾಪುರ ಕೈತೋಟ

ಶಿಕಾರಿಪುರದಲ್ಲಿ ನೀರಾವರಿಗಾಗಿ ಮತ್ತು ಕುಡಿಯುವ ನೀರಿಗಾಗಿ ಕಟ್ಟಲಾಗಿರುವ ಅಂಜನಾಪುರ ಡ್ಯಾಮ್ ಬಳಿ ಅಂಜನಾಪುರ ಗಾರ‍್ಡನ್ ಕಟ್ಟಲಾಗಿದೆ. ಹಳ್ಳಿಯ ಮಂದಿಯ ಬದುಕಿನ ಚಿತ್ರಣಗಳು, ಅಲ್ಲಿಯ ಸೊಗಡು, ಸಂಸ್ಕ್ರುತಿ, ಆಟ, ಬೇಸಾಯದ ಬಗೆಗೆ ಮತ್ತು ಈಸೂರು ದಂಗೆಯನ್ನು ಬಿಂಬಿಸುವ ಪುತ್ತಳಿಗಳನ್ನು ಇಲ್ಲಿ ಕಾಣಬಹುದು. ಶಿಕಾರಿಪುರದಿಂದ ಈಸೂರಿಗೆ ಸಾಗುವ ದಾರಿಯಲ್ಲಿ (16 KM) ಇದನ್ನು ಕಾಣಬಹುದು. ಇಲ್ಲವೇ ಶಿವಮೊಗ್ಗದಿಂದ ಸಾಗರಕ್ಕೆ ಹೋಗುವ ದಾರಿಯಲ್ಲಿ ಚೋರಡಿ ಬಳಿ ತಿರುವು ಪಡೆದೂ ಸಾಗಬಹುದು.

ಹಳ್ಳಿಯ ಸೊಗಡು

 

ಈಸೂರ ದಂಗೆಯ ಸಲುವಾಗಿ ನೇಣಿಗೀಡಾದವರು

ಈಸೂರು ದಂಗೆಯ ಕತೆ ಒಂದು ಸಿನಿಮಾವಾದಲ್ಲಿ ಈ ವಿಶಯ ಇನ್ನೂ ಹೆಚ್ಚಿನ ಮಂದಿಗೆ ತಿಳಿಯುತ್ತದೆ. ಅಲ್ಲದೇ ಕನ್ನಡದ ಹೆಸರಾಂತ ನಟರೊಬ್ಬರು ಇದನ್ನು ಮಾಡಬಹುದು ಎಂಬ ಸುದ್ದಿಯಿದೆ. ನಮ್ಮ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಈಸೂರ ದಂಗೆಯ ಬಗೆಗೆ ನಾಟಕನ್ನೂ‌ ಮಾಡಲಾಗಿತ್ತು.

ಒಟ್ಟಿನಲ್ಲಿ ಅಂದು ತನ್ನ ನೆತ್ತರಿನ ಓಕುಳಿ ಚೆಲ್ಲಿ, ಒಂದು ಪುಟ್ಟ ಹಳ್ಳಿ ಬ್ರಿಟೀಶರ ಸೊಲ್ಲಡಗಿಸುವ ಮೂಲಕ ಹಳಮೆಯ ಪುಟಗಳಲ್ಲಿ ತನ್ನ ದಿಟ್ಟತನ ಮತ್ತು ತ್ಯಾಗದ ಹಚ್ಚೆಯನ್ನು ಅಚ್ಚಳಿಯದಂತೆ ಮೂಡಿಸಿದೆ. ಸ್ವತಂತ್ರ ಹೋರಾಟ ಎಂದಾಗ, ಮಾತು ಮಾತಿಗೂ ಹೊರಗಿನ ಶೂರರೆಡೆ ಕಣ್ಣು ಹಾಯಿಸುವ ಮುನ್ನ, ನಮ್ಮ ನೆಲದ ದಳವಾಯಿಗಳನ್ನು, ಮಂದಿಯನ್ನು ನೆನೆಯೋಣ. ಕನ್ನಡ ತಾಯಿ ಬಂಜೆಯಲ್ಲ, ಇಂತಹ ಹಲವಾರು ಹುಟ್ಟು ಹೋರಾಟಗಾರ/ಗಾರಿಯರಿಗೆ ಉಸಿರು ಬಸಿದವಳಾಗಿದ್ದಾಳೆ. ಇಂತಹ ಊರೊಂದು ಕರುನಾಡಲ್ಲಿ ಇರುವುದೆಂದರೆ, ಅವೆಲ್ಲವೂ ನಮಗೆ ಹೆಮ್ಮೆಯ ವಿಶಯ.

( ಮಾಹಿತಿ ಮತ್ತು ಚಿತ್ರಸೆಲೆ: kannadaMedium24*7, oneindia.com, Tv5Kannada, vijayKarnataka, kannada.oneindia.com, whatshot.inIndia Flag Free Picture PNG, free-power-point-templates.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: