ಕವಿತೆ: ಏಸೂರು ಕೊಟ್ಟರೂ ಈಸೂರು ಕೊಡೆವು
– ನಿತಿನ್ ಗೌಡ.
ಕರೆಯಿತ್ತರು ಗಾಂದೀಜಿ ಅಂದು
ಬ್ರಿಟೀಶರೇ, ಬಾರತ ಬಿಟ್ಟು ತೊಲಗಿ ಎಂದು!
ಸಾಕಾಗಿತ್ತು ಇಶ್ಟು, ಹುದುಗಿದ ಸ್ವಾಬಿಮಾನವ ಕೆರಳಿಸಲು;
ಕರವ ನೀಡಲೊಲ್ಲೆವೆನ್ನುತ ಬಂಡಾಯದ ಬಾವುಟ ಹಾರಿಸಲು
ಅದು ತೋರಿಕೆಯ ಕಿಚ್ಚಲ್ಲ
ಮಲಗಿದ ಸ್ವಾಬಿಮಾನವ,
ಬಡಿದೆಬ್ಬಿಸಿದ ಕಾಡ್ಗಿಚ್ಚು;
ಸುಡದೆ ಬಿಡಲಿಲ್ಲವದು ಬ್ರಿಟೀಶರ ಇಂಚಿಚು
ತೋರಿದೆವು ಕನ್ನಡಿಗರ ಎದೆಗಾರಿಕೆಯ
ಕೂಗಿ ಸಾರಿದೆವು ಮೊದಲಿಗರಾಗಿ
ನಾವು ಸ್ವತಂತ್ರರೆಂದು,
ಏಸೂರು ಕೊಟ್ಟರೂ ಈಸೂರ ಕೊಡಲೊಲ್ಲೆವೆಂದು
ಸೆಡ್ಡು ಹೊಡೆಯಲೇಬೇಕಿತ್ತು,
ಈಸೂರಂಗಳದಲಿ ಆಟವಾಡುವ ಮಕ್ಕಳೇ ಅದಕೆ ಸಾಕಾಗಿತ್ತು
ಮಾಡಲಾಯಿತು ಅವರನು ಊರ ಸುಬೇದಾರರಾಗಿ
ಊರ ಗದ್ದುಗೆಯ ದಳಪತಿಯಾಗಿ
ಊರ ಹೆಬ್ಬಾಗಿಲ ತುಳಿಯದಿರರೆನ್ನಲು
ಕೆರಳಿಸಿತದು ಆಂಗ್ಲರ ಕಣ್ಣನು
ನಾಟಿತ್ತು ಅವರೆದೆಗಂದು, ಬಂಡಾಯದ ಗುಂಡು
ಕಳುಹಿಸಿದರು ಪಡೆಯ, ಊರ ಬಯಲಿಗೆ
ಕೆಚ್ಚೆದೆಯ ಕಟ್ಟಾಳುಗಳ ಸದೆಬಡೆಯಲೆಂದು
ಅಟ್ಟಾಡಿಸಿ ಕೊಂದರು, ಉರುಳಿಗೇರಿಸಿದರು
ಒಕ್ಕಲೆಬ್ಬಿಸಿ, ಅಲೆಸಿದರು ಕಾಡು ಮೇಡನು
ಮಾನ ದೋಚಿ, ಮಂದಿಯ ಲೂಟಿಗೈದರು
ಪರಂಗಿಯವರು, ಅದಿಕಾರದ ಮದದಲಿ
ನೆತ್ತರ ಹೊಳೆಯೇ ಹರಿಯಿತು
ಬಯಸಿದ ಬದುಕ ಪಡೆಯಲು,
ತನ್ನತನವ ಉಳಿಸಿಕೊಳ್ಳಲು ಕೊನೆವರೆಗೆ
ಅಚ್ಚಳಿಯದೆ ಉಳಿದು ಸಾಗಲಿದೆ
ನಿಮ್ಮ ತ್ಯಾಗ ಬಲಿದಾನದ ನೆನಹುಗಳು
ಈಸೂರ ನೆಲದಲಿ, ಮಾಸದೆ ನಮ್ಮ ಮನದಲಿ
ಏಸೂರು ಕೊಟ್ಟರೂ ಈಸೂರ ಕೊಡಲಿಲ್ಲವೆಂಬುದು
(ಚಿತ್ರಸೆಲೆ: kannada.oneindia.com, India Flag Free Picture PNG, free-power-point-templates.com )
ಇತ್ತೀಚಿನ ಅನಿಸಿಕೆಗಳು