ಆರ‍್ಸೆನಾಲ್ನಾ – ವಿಶ್ವದ ಅತ್ಯಂತ ಆಳದಲ್ಲಿರುವ ಮೆಟ್ರೋ ನಿಲ್ದಾಣ

– .

ಮುಗಿಲುಮುಟ್ಟುವ ಎತ್ತರದಲ್ಲಿ ಹಾಗೂ ಪಾತಾಳದಲ್ಲಿ ಓಡಾಡುವ ಮೆಟ್ರೋ ಇಂದು ಜಗತ್ತಿನಲ್ಲೇ ಅತ್ಯಂತ ಜನಪ್ರಿಯ ಸಾರಿಗೆ ವ್ಯವಸ್ತೆಯಾಗಿ ಹೊರಹೊಮ್ಮಿದೆ. ಅದರಲ್ಲೂ ದಿನೇ ದಿನೇ ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ರಸ್ತೆಯ ಮೇಲೆ ಪ್ರತಿ ಕಿಲೋಮೀಟರ್ ಕ್ರಮಿಸಲು ಕಡಿಮೆ ಎಂದರೂ ಹತ್ತರಿಂದ ಹದಿನೈದು ನಿಮಿಶ ಹಾಗೂ ಸಿಗ್ನಲ್ಗಳು ಬಂದಲ್ಲಿ, ಇನ್ನೂ ಹೆಚ್ಚಿನ ಸಮಯ ಹಿಡಿಯುವ ಇಂದಿನ ದಿನಗಳಲ್ಲಿ, ಮೆಟ್ರೋ ಒಂದು ವರದಾನವೆಂದೇ ಹೇಳಬೇಕು. ಬೆಂಗಳೂರನ್ನೇ ಉದಾಹರಣೆಗೆ ತೆಗೆದುಕೊಂಡರೆ, ಕೆಂಪೇಗೌಡ ಬಸ್ ನಿಲ್ದಾಣದಿಂದ ನಾಗಸಂದ್ರದವರೆಗೆ ಹೋಗಲು ಬಸ್ಸಿನಲ್ಲಿ ಕಡಿಮೆ ಎಂದರೂ ಎರಡು ತಾಸು ಬೇಕು. ಆಟೋ ಅತವಾ ಕ್ಯಾಬ್ ಆದಲ್ಲಿ, ಕೊಂಚ ಬೇಗ ತಲುಪಬಹುದು. ಪೀಕ್ ಅವರ‍್ಸ್ ನಲ್ಲಿ ಪ್ರಯಾಣದ ಸಮಯ ಇನ್ನೂ ಹೆಚ್ಚಾಗುತ್ತದೆ. ಅದೇ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರೆ, ಕೇವಲ ಇಪ್ಪತ್ತು ನಿಮಿಶದಲ್ಲಿ ತಲುಪಬಹುದು. ಈಗೀಗ ಜಗತ್ತಿನೆಲ್ಲೆಡೆ ಮೆಟ್ರೋ ಸಾರಿಗೆ ಹೆಚ್ಚುತ್ತಿದೆ.

ಮೆಟ್ರೋ ಬಾರತಕ್ಕೆ ಕಾಲಿಟ್ಟಿದ್ದು 1984ರಲ್ಲಿ. ಮೆಟ್ರೋ ಅಶ್ಟು ಬೇಗ ಸಂಚರಿಸಲು ಮೂಲ ಕಾರಣ, ಅದು ಹಾದುಹೋಗುವ ಮಾರ‍್ಗಗಳು. ನೆಲದ ಕೆಳಗಿನ ಸುರಂಗಗಳಲ್ಲಿ, ನೆಲದ ಮೇಲಿನ ಸೇತುವೆಗಳ ಮೇಲೆ ಇದರ ಪ್ರಯಾಣ ಸಾಗುತ್ತಿದ್ದು, ದಾರಿಯುದ್ದಕ್ಕೂ ಯಾವುದೇ ಅಡಚಣೆ ಇರುವುದಿಲ್ಲ. ಹಾಗಾಗಿ ಇದು ಕಡಿಮೆ ಸಮಯದಲ್ಲಿ ಹೆಚ್ಚು ದೂರವನ್ನು ಕ್ರಮಿಸಲು ಸಾದ್ಯವಾಗಿದೆ. ತುಂಬಾ ವಾಹನ ದಟ್ಟಣೆಯಿರುವಲ್ಲಿ, ಮೆಟ್ರೋ ಸುರಂಗ ದಾರಿಯಲ್ಲಿ ಸಂಚರಿಸುತ್ತದೆ, ಇಂತಹ ಸುರಂಗ ದಾರಿಗಳಲ್ಲೇ ಮೆಟ್ರೋ ನಿಲ್ದಾಣಗಳನ್ನು ನಿರ‍್ಮಿಸಿದ್ದು, ಅಲ್ಲಿಂದ ಮೇಲಕ್ಕೆ ಬರಲು ಲಿಪ್ಟ್ ಮತ್ತು ಏರಿಳಿಗಳನ್ನು (ಎಸ್ಕಲೇಟರ್) ಅಳವಡಿಸಿರುತ್ತಾರೆ. ಅಂತಹ ಸುರಂಗ ನಿಲ್ದಾಣಗಳಲ್ಲಿ ಅತ್ಯಂತ ಆಳದಲ್ಲಿರುವ ನಿಲ್ದಾಣ, ರಶ್ಯಾದ ಕೈವ್ ನಲ್ಲಿರುವ ಆರ‍್ಸೆನಾಲ್ನಾ ಮೆಟ್ರೋ ನಿಲ್ದಾಣ. ಆರ‍್ಸೆನಾಲ್ನಾ ನಿಲ್ದಾಣವು ಬೂಮಿಯ ಮೇಲ್ಪದರದಿಂದ 105.5 ಮೀಟರ್ (346 ಅಡಿ) ಆಳದಲ್ಲಿದೆ. ಇದು ಸಾರ‍್ವಜನಿಕರಿಗೆ ತೆರೆದಿದ್ದು 1960ರ ನವೆಂಬರ್ 6 ರಂದು. ಈ ನಿಲ್ದಾಣವು ಉತ್ತರ ಕೊರಿಯಾದ ಪ್ಯೊಂಗ್ಯಾಂಗ್ ಮೆಟ್ರೋ ನಿಲ್ದಾಣಕ್ಕಿಂತ ಸುಮಾರು 5.5 ಮೀಟರ್ ಆಳದಲ್ಲಿದೆ. ಅಮೇರಿಕಾದ ಸ್ಟಾಚೂ ಆಪ್ ಲಿಬರ‍್ಟಿ (92.99 ಮೀಟರ‍್ಗಳು) ಯನ್ನು ನೇರವಾಗಿ ಇದರಲ್ಲಿ ಇಳಿಸಿದರೆ, ಇನ್ನೂ ಹನ್ನೆರಡು ಮೀಟರ್ ನಶ್ಟು ಸ್ತಳಾವಕಾಶ ಕಾಲಿ ಉಳಿಯುತ್ತದೆ.

ಆರ‍್ಸೆನಾಲ್ನಾ ನಿಲ್ದಾಣವನ್ನು ಅತ್ಯಂತ ಆಳವಾಗಿ ನಿರ‍್ಮಿಸಲು ಅದರ ಸುತ್ತಲಿನ ಬೌಗೋಳಿಕ ನೆಲೆ ಮೂಲ ಕಾರಣ. ಕೈವ್ ನಗರವನ್ನು ಡ್ನೀಪರ್ ನದಿಯು ಇಬ್ಬಾಗಿಸುತ್ತದೆ. ಹಾಗಾಗಿ ಈ ಮೆಟ್ರೋ ನಿಲ್ದಾಣದ ಒಳ ಬರುವ ಬಾಗಿಲು, ನದಿಯ ಎತ್ತರದ ದಡದ ಮೇಲ್ಬಾಗದಲ್ಲಿದೆ. ಈ ನಿಲ್ದಾಣದಲ್ಲಿ ಬರುವ ಮತ್ತು ಹೋಗುವ ಪ್ಲಾಟ್ ಪಾರಂಗಳನ್ನು ಬೇರೆ ಬೇರೆಯಾಗಿ ವಿನ್ಯಾಸಗೊಳಿಸಲಾಗಿದೆ. ಒಳ ಬರುವ ಬಾಗಿಲಿನಿಂದ ಪ್ಲಾಟ್ ಪಾರಂ ತಲುಪಲು ಎಸ್ಕಲೇಟರ್ ಗಳಿವೆ. ಒಂದೇ ಎಸ್ಕಲೇಟರ್ ಇಶ್ಟು ಆಳ ತೆಗೆದುಕೊಂಡು ಹೋಗಲು ಸಾದ್ಯವಿಲ್ಲದ ಕಾರಣ, ಎರಡು ಎಸ್ಕಲೇಟರ್ ಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರು ಒಂದರಿಂದ ಮತ್ತೊಂದಕ್ಕೆ ಬದಲಾಯಿಸಿಕೊಂಡು ಪ್ಲಾಟ್ ಪಾರಂ ತಲುಪಬೇಕಿದೆ. ಒಳ ಬರುವ ಬಾಗಿಲಿನಿಂದ ಪ್ಲಾಟ್ ಪಾರಂ ತಲುಪಲು ತಗಲುವ ಒಟ್ಟು ಸಮಯ, ನಾಲ್ಕು ನಿಮಿಶ ಹನ್ನೊಂದು ಸೆಕೆಂಡುಗಳು.

ಕೈವ್ ನಗರದ ಅತ್ಯಂತ ಪ್ರಸಿದ್ದ ಕಾರ‍್ಕಾನೆಗಳಲ್ಲಿ ಒಂದಾದ ಆರ‍್ಸೆನಲ್ ಸ್ಪೆಶಲ್ ಡಿವೈಸ್ ಪ್ರೊಡಕ್ಶನ್ ಸ್ಟೇಟ್ ಎಂಟರಪ್ರೈಸಸ್ ನಿಂದ ಈ ನಿಲ್ದಾಣಕ್ಕೆ ಆ ಹೆಸರು ಬಂದಿದೆ. ನಿಲ್ದಾಣದ ನೋಟವು ಬಹುಪಾಲು ಒಂದೇ ಬಣ್ಣದ್ದಾಗಿದ್ದು, ಸೆರಾಮಿಕ್ ಟೈಲುಗಳಿಂದ ಗೋಡೆಗಳನ್ನು ಅಲಂಕರಿಸಲಾಗಿದೆ. ಆರ‍್ಸೆನಾಲ್ನಾ ನಿಲ್ದಾಣವನ್ನು ಹೊಸದಾಗಿಸುವ ಸಲುವಾಗಿ 2020 ರಲ್ಲಿ ಮುಚ್ಚಿ, 2021ರಲ್ಲಿ ಪುನಹ ತೆರೆಯಲಾಯಿತು. ಇಶ್ಟು ಆಳದಲ್ಲಿ ಒಂದು ಮೆಟ್ರೋ ನಿಲ್ದಾಣವನ್ನು ಕಟ್ಟಿರುವ ಎಂಜಿನಿಯರ್ ಗಳ ಕೆಲಸವನ್ನು ಮೆಚ್ಚಲೇಬೇಕು.

(ಮಾಹಿತಿ ಮತ್ತು ಚಿತ್ರ ಸೆಲೆ: unsplash.com, youngpioneertours.com, atlasobscura.com, amusingplanet.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: