ಕವಿತೆ: ಅಲೆಮಾರಿ ಕಂದನ ಪ್ರೀತಿ

– ರಾಮಚಂದ್ರ ಮಹಾರುದ್ರಪ್ಪ.

ಪ್ರತೀ ಸಂಜೆ ಓಡಿ ಬಂದು
ನನ್ನ ಅಪ್ಪಿಕೊಳ್ಳುತ್ತಿದ್ದ ಕಂದ,
ದಿನದಿನಕ್ಕೆ ನನಗೆ ಹತ್ತಿರವಾದೆ
ನಿನ್ನ ಎತ್ತಿ ಮುದ್ದಾಡುತ್ತಾ

ನಿನ್ನ ಪ್ರೀತಿಯ ಸವಿ ಉಂಡೆ
ನಿನ್ನ ನಗುವು ದಿನದ ಆಯಾಸವ ತಣಿಸಲು
ನೀ ತೊದಲು ನುಡಿಯಲಿ ಮಾಮಾ ಎನ್ನಲು
ನನಗನಿಸಿದ ಹಿತ ಹೇಳತೀರದು!

ನಿನ್ನೊಂದಿಗೆ ಆಟವಾಡಿ, ಕುಣಿದು ನಲಿದೆ
ಆದರೆ ನೀ ಇಂದು ಗಂಟು-ಮೂಟೆ ಕಟ್ಟಿ
ಬರುವೆನು ಮಾಮಾ ಎಂದೂ ಹೇಳದೆ
ಏಕಾಏಕಿ ಹೆತ್ತವರೊಂದಿಗೆ ಊರ ಬಿಟ್ಟೆ

ಮತ್ತೆಂದೂ ನಿನ್ನ ನೋಡಲಾರೆನು
ನಿನ್ನೊಡನೆ ಆಡಲಾರೆನು, ನಲಿಯಲಾರೆನು
ಈ ದಿಟವ ಹೇಗೆ ಅರಗಿಸಿಕೊಳ್ಳಲಿ?
ನಿನ್ನ ತುಂಟ ನಗು ಕಾಡುತಿದೆ
ನೀ ಇನ್ನೊಮ್ಮೆ ಬಾ ಕಂದ!

( ಚಿತ್ರ ಸೆಲೆ: freegreatpicture.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: