ಮಲೆನಾಡಿನ‌ ಶಿಕಾರಿ ಸಂಸ್ಕ್ರುತಿ : ಕಂತು-1

– ಅಮ್ರುತ್ ಬಾಳ್ಬಯ್ಲ್.

ಕಂತು-2

ಸಾವಿರಾರು ವರುಶಗಳ ಕಾಲ ಕ್ರುಶಿಯ ಅರಿವಿಲ್ಲದಿದ್ದ ಅಲೆಮಾರಿ ಮಾನವ ಬೇಟೆಯಿಂದಲೂ ಸಹ ತನ್ನ ಆಹಾರವನ್ನು ಹುಡುಕಿಕೊಳ್ಳುತ್ತಿದ್ದ. ನಂತರ ಮಾನವ ಕ್ರುಶಿ ಮಾಡಲು‌ ಶುರು ಮಾಡಿದಾಗ ಆಹಾರದ ಜೊತೆ ತನ್ನ ಬೆಳೆಗಳನ್ನು ಕಾಪಾಡಲು ಸಹ ಬೇಟೆ ಆಡುವುದನ್ನು ರೂಡಿಸಿಕೊಂಡ. ಬೇಟೆ ವಸಾಹತು ಕಾಲದಲ್ಲಿ ಹವ್ಯಾಸವಾಗಿಯೂ ಸಹ ಕಾಣಸಿಗುತ್ತದೆ. ಈ ಹಳೆಯ ಬೇಟೆ ಸಂಸ್ಕ್ರುತಿ ಕಳೆದ ಕೆಲವು ದಶಕಗಳವರೆಗೂ ಹೆಚ್ಚಾಗಿ ಮಲೆನಾಡಿನಲ್ಲಿ ಕಾಣಸಿಗುತ್ತಿತ್ತು.

ಮಲೆನಾಡು ಕಾಡು, ಮಳೆ ಮತ್ತು ಕ್ರುಶಿ ಆದಾರಿತ ಮಾನವ ಸಂಸ್ಕ್ರುತಿಗೆ ಹೆಸರುವಾಸಿಯಾಗಿದೆ. 1972ರ ವನ್ಯಜೀವಿ ಸಂರಕ್ಶಣ ಕಾಯಿದೆ ಪ್ರಕಾರ ಕಾಡುಪ್ರಾಣಿಗಳನ್ನು ಬೇಟೆಯಾಡುವುದನ್ನು ನಿಶೇದ ಮಾಡಲಾಯಿತು. ಅಲ್ಲಿಯವರೆಗೂ ಬೇಟೆ ಎಂಬುದು ಮಲೆನಾಡಿಗರ ಸಂಸ್ಕ್ರುತಿಯ ಅವಿಬಾಜ್ಯ ಅಂಗವಾಗಿತ್ತು. ಮಲೆನಾಡಿಗರು ಆಹಾರಕ್ಕಾಗಿ,‌ ಬೆಳೆ‌ಗಳನ್ನು ಕಾಪಾಡಲು, ತಮ್ಮ ರಕ್ಶಣೆಗಾಗಿ ಮತ್ತು ಹವ್ಯಾಸಕ್ಕಾಗಿ ಬೇಟೆಯನ್ನು ಆಡುತ್ತಿದ್ದರು. ಈಗ ಪರಿಸ್ತಿತಿ ಬದಲಾಗಿದೆ. ಮಲೆನಾಡಿಗರಿಗೆ ದೊಡ್ಡ ಸವಾಲಾಗಿದ್ದ ಕಾಡು ಈಗ ಬಡಕಲಾಗಿದೆ. ಕಾಡನ್ನು ಉಳಿಸುವುದೇ ಸವಾಲಾಗಿದೆ! ಈಗ ಬೇಟೆಯು ಅನಿವಾರ್‍ಯವಾಗಿ ಉಳಿದಿಲ್ಲ. ಅಲ್ಲಲ್ಲಿ ಕದ್ದು ಕೆಲವರು ಕಾನೂನಿಗೆ ವಿರುದ್ದವಾಗಿ ಕಳ್ಳಬೇಟೆಯನ್ನು ಆಡುತ್ತಾರೆ. ಬೇಟೆಯಿಂದ ಅನೇಕ ಜಾತಿಯ ಪ್ರಾಣಿಗಳು ಅಳಿದಿವೆ/ಅಳಿಯುವ ಹಂತ ತಲುಪಿವೆ. ಹಾಗಾಗಿ‌ ಕಳ್ಳ ಬೇಟೆಯನ್ನು ಆಡುವವರು ಸಹ ಬೇಟೆಯನ್ನು ಬಿಟ್ಟು ಬಿಡುವುದೇ ಸರಿಯಾದ ಆಯ್ಕೆಯಾಗಿದೆ.

ಬೇಟೆ ಹೇಗೆ ಮಲೆನಾಡ ಸಂಸ್ಕ್ರುತಿಯ ಅವಿಬಾಜ್ಯ ಅಂಗವಾಗಿತ್ತು ಎಂದು ಅರಿಯುವ ಪ್ರಯತ್ನ ಮಾಡಿದರೆ, ಶಿಕಾರಿಯ ರೋಚಕ ಮಜಲುಗಳು ತೆರೆದುಕೊಳ್ಳುತ್ತವೆ. ಶಿಕಾರಿಯ ಬಗೆಗಳು, ಶಿಕಾರಿ ಕಟ್ಟುವ ರೀತಿ, ಬೇಟೆಗಾರರು‌ ನಂಬುವ ಬೇಟೆ ದೇವರು, ಅವರು ಅನುಸರಿಸುವ ಶಿಕಾರಿ ನಿಯಮಗಳು, ಮಾಂಸದ ಪಾಲನ್ನು ಹಂಚಿಕೊಳ್ಳುವ ಬಗೆ, ಅವುಗಳಿಗೆ ಅವರು ಹೆಸರಿಸಿರುವ ಕನ್ನಡ ಹೆಸರುಗಳು ಸೋಜಿಗವಾಗಿವೆ.

ಶಿಕಾರಿಯ ಬಗೆಗಳು:

ಕೂಡು ಬೇಟೆ:

ಇದಕ್ಕೆ ದೊಡ್ಡ ಬೇಟೆ ಎಂದು ಸಹ ಕರೆಯುತ್ತಾರೆ. ಹಲವಾರು ಜನರು ಸೇರಿ ಮಾಡುವ ಬೇಟೆ ಇದು. ಇದರಲ್ಲಿ ಹಳುವಿನವರು ಮತ್ತು ಬಿಲ್ಲಿನವರು ಇರುತ್ತಾರೆ. ಹಳುವಿನವರು ನಾಯಿಗಳ ಜೊತೆ ಕಾಡಲ್ಲಿ ಕೂಗು-ಕೇಕೆ ಹಾಕುತ್ತಾ‌ ಅಡಗಿರುವ ಪ್ರಾಣಿಗಳನ್ನು ಓಡಿಸುತ್ತಾ ಬರುತ್ತಾರೆ. ಆಗ ಮೊದಲೇ ಗುರುತು ಮಾಡಿರುವ ಪ್ರಾಣಿಗಳು ಕಾಡಿನಿಂದ ಹೊರಬಂದು ಬಯಲಿಗೆ ಹಾರುವ ಕಂಡಿಯಲ್ಲಿ (ಕಿಂಡಿ=an opening) ಕೋವಿ ಹಿಡಿದ ಬಿಲ್ಲಿನವರು ಪ್ರಾಣಿಯನ್ನು ಹೊಡೆದು ಕೆಡವುತ್ತಾರೆ.

ಸಾರಿಕೆ ಬೇಟೆ:

ಈ ಬಗೆಯ ಬೇಟೆಯಲ್ಲಿ ಬೇಟೆಗಾರ ಒಬ್ಬನೆ(ನಾಯಿಗಳ ಸಹಾಯವಿಲ್ಲದೆ) ಕೋವಿ ಹಿಡಿದು ಕಾಡಿನಲ್ಲಿ ತಿರುಗುತ್ತಾನೆ. ಯಾವುದಾದರೂ ಪ್ರಾಣಿ ಕಂಡರೆ ಗುಂಡು ಹಾರಿಸಿ ಶಿಕಾರಿ ಮಾಡುತ್ತಾನೆ.

ಮರಸು ಬೇಟೆ:

ಪ್ರಾಣಿಗಳು ಕಾಡಿನಲ್ಲಿ ಕೆಲವು ಬಗೆಯ ಹಣ್ಣುಗಳನ್ನು ತಿನ್ನಲು, ನೀರು ಕುಡಿಯಲು ಬರುವ ಜಾಗಗಳನ್ನು ಗುರುತಿಸಿ ಬೇಟೆಗಾರ ಮರೆಯಾಗಿ ಕುಳಿತು, ಕೆಲವೊಮ್ಮೆ ಮರದ ಮೇಲೆ ಅಟ್ಟಣಿಕೆ (watch tower) ಮಾಡಿ ಕುಳಿತು ಕಾಯುತ್ತಾನೆ. ಪ್ರಾಣಿ ಬಂದಾಗ ಗುಂಡು ಹಾರಿಸಿ ಹೊಡೆದು ಕೆಡವುತ್ತಾನೆ.

ಸುಡಕ್ಕಿ ಬೇಟೆ:

ಚಳಿಗಾಲದ ಸಮಯದಲ್ಲಿ ಕದ್ದಿಂಗಳು(ಅಮವಾಸೆಯ ಸಮಯ) ಇರುವಾಗ ಮೂರು-ನಾಲ್ಕು ಜನ ಸೇರಿ ದೊಂದಿ (ದೊಂದಿ=ಪಂಜು, torch, fire brand) ಹೊತ್ತಿಸಿಕೊಂಡು‌ ಜಮೀನು, ಹಳ್ಳ, ಕೆರೆಗಳ ಬಳಿ ಹೋಗಿ ಮಲಗಿರುವ ಹುಂಟುಕೋಳಿ, ಕೊಕ್ಕರೆ, ಗರಗೆ ಹಕ್ಕಿ ಹೀಗೆ ಕೆಲ ಜಾತಿಯ ಹಕ್ಕಿಗಳನ್ನು ದೊಣ್ಣೆಯಿಂದ ಹೊಡೆದು ಕೊಲ್ಲುತ್ತಾರೆ. ನಂತರ‌ ಒಂದು ಬಯಲಿಗೆ ಹೋಗಿ ಹೊಡೆದ ಹಕ್ಕಿಗಳ ಹಸಿಗೆ(ಮಾಂಸವನ್ನು ಚೊಕ್ಕ ಮಾಡಿ ಹೆಚ್ಚುವುದು) ಮಾಡಿ ಮಾಂಸವನ್ನು ಮರದ ಕೊಂಬೆಯ ಹಸಿಕಡ್ಡಿಗಳಿಗೆ ಸಿಕ್ಕಿಸಿ ಸುಟ್ಟು ತಿನ್ನುತ್ತಾರೆ. ಈ ಮಾಂಸವನ್ನು ಮನೆಗೆ‌ ತೆಗೆದುಕೊಂಡು ‌ಹೋಗುವುದಿಲ್ಲ. ಹಾಗಾಗಿ‌ ಇದಕ್ಕೆ ಸುಡಕ್ಕಿ‌ಬೇಟೆ ಎಂದು‌ ಹೆಸರು.

ಕೋವಿ ಕಟ್ಟುವುದು/ಶಿಸ್ತು ಶಿಕಾರಿ:

ಹಂದಿ/ಹುಲಿಯನ್ನು‌ ಬೇಟೆಯಾಡಲು ಈ ಕ್ರಮವನ್ನು ಬಳಸುತ್ತಿದ್ದರು. ಪ್ರಾಣಿಗಳು ಒಡಾಡುವ ಹಾದಿಯಲ್ಲಿ ಒಂದು ಕಂಡಿಯನ್ನು ಗುರುತು ಮಾಡಿ ಗೂಟಗಳನ್ನು ನಿಲ್ಲಿಸಿ ಅದರ ಮೆಲೆ ಕೋವಿಯನ್ನು ಪ್ರಾಣಿಗಳು ಓಡಾಡುವ ಕಡೆಗೆ ಗುರಿ ಮಾಡಿ ಇಡುತ್ತಾರೆ. ಕೋವಿಗೆ ಮಸಿ-ಗುಂಡು‌ ತುಂಬಿ ತಯಾರು ಮಾಡಿ ಅದರ ಕುದುರೆಗೆ ಒಂದು ದಾರವನ್ನು ಕಟ್ಟಿ ಎಳೆದು ತಂದು ಕಂಡಿಯ ಪಕ್ಕ ಇರುವ ಇನ್ನೊಂದು ಗೂಟಕ್ಕೆ ಕಟ್ಟಿ ಇಟ್ಟು ಬರುತ್ತಾರೆ. ಯಾವಾಗ ಪ್ರಾಣಿಗಳು ಬಂದು ಕಟ್ಟಿರುವ ದಾರವನ್ನು ಎಳೆದುಕೊಂಡು ದಾಟುತ್ತವೋ ಆಗ ಕೋವಿಯಿಂದ ಗುಂಡು ಹಾರಿ ಪ್ರಾಣಿಯನ್ನು ಕೊಲ್ಲುತ್ತದೆ. ಇದು ಬಹಳ ಅಪಾಯದ ಶಿಕಾರಿ, ಅನೇಕರು ಕೋವಿ ಕಟ್ಟಿರುವುದು ಗೊತ್ತಿಲ್ಲದೆ ಕಂಡಿ ದಾಟಿ ಸತ್ತಿದ್ದಾರೆ.

ಸಣ್ಣ ಶಿಕಾರಿ:

ಹಣ್ಣು ತಿನ್ನಲು ಬರುವ ಮಂಗಟ್ಟೆ ಹಕ್ಕಿ, ಕಾಡುಕೋಳಿಯಂತಹ ಹಕ್ಕಿಗಳನ್ನು ಹೊಡೆಯುವುದನ್ನು ಸಣ್ಣ ಶಿಕಾರಿ ಎನ್ನುತ್ತಾರೆ.

ಬ್ಯಾಟರಿ ಶಿಕಾರಿ:

ಬ್ಯಾಟರಿ ಶಿಕಾರಿ ಹೊಸದಾಗಿ ಸೇರ್‍ಪಡೆಯಾದ ಶಿಕಾರಿ ವಿದಾನ. ಬೇಸಿಗೆ ಕಾಲದಲ್ಲಿ ಕದ್ದಿಂಗಳು ಇರುವಾಗ ಬೇಟೆಗಾರರು ಕಾಡುಗಳ ಮದ್ಯ ಇರುವ ಬಯಲಿನಲ್ಲಿ, ಗದ್ದೆ ಬಯಲಿನಲ್ಲಿ ಬ್ಯಾಟರಿ ಬೆಳಕನ್ನು ಬಿಡುತ್ತಾ ಹೋಗುತ್ತಾರೆ. ಕೆಲವು ಪ್ರಾಣಿಗಳ ಕಣ್ಣುಗಳು ಬೆಳಕಿಗೆ ಹೊಳೆಯುತ್ತವೆ, ಮತ್ತು ಕೆಲವು ಸಲ ಪ್ರಾಣಿಗಳೆ ಬೆಳಕು ನೋಡಿ ನಿಂತು ಬಿಡುತ್ತವೆ ಆಗ ಗುಂಡು ಹಾರಿಸಿ ಶಿಕಾರಿ ಮಾಡುತ್ತಾರೆ.

ಬೇಟೆ ಹೇಗೆ ನಡೆಯುತ್ತಿತ್ತು ಎಂಬುದರ ಬಗ್ಗೆ ಒಂದಶ್ಟು ಮಾಹಿತಿ ಮುಂದಿನ ಬರಹದಲ್ಲಿ

(ಚಿತ್ರ ಸೆಲೆ: creazilla.com)

ಕಂತು-2

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: