ಓಪಸ್ 40 – ಪರಿಸರ ಶಿಲ್ಪ

– .

ನ್ಯೂಯಾರ‍್ಕಿನ ಸೌಗೇರ‍್ಟಿಸ್‍ನ ಆರೂವರೆ ಎಕರೆ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ಹರಡಿರುವ ರಾಕ್ ಪಾರ‍್ಕನ್ನು ಓಪಸ್-40 ಎನ್ನಲಾಗುತ್ತದೆ. ಇದರಲ್ಲಿರುವ ಕ್ವಾರಿಮ್ಯಾನ್ ಮ್ಯೂಸಿಯಮ್, ಗಿಪ್ಟ್ ಶಾಪ್ ಹಾಗೂ ಟನ್‍‍ಗಳಶ್ಟು ತೂಕದ ಕಲ್ಲಿನ ರಚನೆಗಳನ್ನು ಗಮನಿಸಿದಲ್ಲಿ, ಇದು ಒಬ್ಬನಿಂದ ಮಾಡಲು ಸಾದ್ಯವೇ? ಅನಿಸಬಹುದು. ಆದರೆ ಇದು ಒಬ್ಬನಿಂದಲೇ ರಚಿತವಾದ, ನೋಡುಗರನ್ನು ಮಂತ್ರಮುಗ್ದರನ್ನಾಗಿಸುವ ಬ್ರುಹತ್ ಕಲ್ಲಿನ ಉದ್ಯಾನವನ. ಓಪಸ್-40, ಅಲ್ಟರ‍್ ಕೌಂಟಿಯ, ಕ್ಯಾಟ್ ಸ್ಕಿಲ್ ಪರ‍್ವತ ಶ್ರೇಣಿಯ ಈಶಾನ್ಯದ ಅಂಚಿನಲ್ಲಿದೆ. ಈ ಕಲ್ಲುಗಣಿಗಾರಿಕೆಯ ಪ್ರದೇಶವನ್ನು 1938ರಲ್ಲಿ, ಬಾರ‍್ಡ್ ಕಾಲೇಜಿನಲ್ಲಿ ಕಲಾ ಪ್ರಾದ್ಯಾಪಕನಾಗಿ ಕೆಲಸ ನಿರ‍್ವಹಿಸುತ್ತಿದ್ದ ಹಾರ‍್ವೆ ಪಿಟ್ ಕರೀದಿಸಿದರು. ಸ್ವತಹ ಶಿಲ್ಪಿಯಾದ ಪಿಟ್ ಅವರಿಗೆ, ಕಲ್ಲಿನ ಕಾಡಿನಲ್ಲಿರುವ ಕಲ್ಲುಗಳನ್ನು, ತನ್ನದೇ ಶಿಲ್ಪ ಕಲೆಗೆ ಬಳಸಿಕೊಳ್ಳುವುದರತ್ತ ಆಶಯವಿತ್ತು. ಈ ಪ್ರದೇಶದಲ್ಲೇ ತನ್ನ ಶಿಲ್ಪ ಕಲೆಯ ಕೌಶಲವನ್ನು ದಾರೆಯೆರೆಯಲು ಪಿಟ್ ಸಿದ್ದನಾಗಿದ್ದ. ಆ ಆಶಯವೇ ಈ ಉತ್ಕ್ರುಶ್ಟ ಕಲಾ ಕ್ರುತಿಗಳನ್ನು ರಚಿಸಲು ನಾಂದಿಯಾಯಿತು.

ಪಿಟ್ ಮಾಯನ್ನರ ಶಿಲ್ಪಕಲೆಯನ್ನು ಅದ್ಯಯನ ಮಾಡಿದ್ದರು. ಈ ಅದ್ಯಯನದಿಂದ ಡ್ರೈ-ಕಿ ಕಲ್ಲಿನ ತಂತ್ರಗಳನ್ನು ಬಳಸುವುದನ್ನು ಕಲಿತರು. ಅದನ್ನು ಇಲ್ಲಿ ಪ್ರಯೋಗಿಸಿ ಬೂಮಿಯಲ್ಲಿದ್ದ ಬ್ಲೂಸ್ಟೋನ್ ತುಣುಕುಗಳನ್ನು ಕತ್ತರಿಸಿ, ತನ್ನ ಮನದಲ್ಲಿ ಮೂಡಿದ್ದ ಚಿತ್ರವನ್ನು ಬಿಡಿಸಿದ್ದರು. ಇದಕ್ಕೆ ಅವರು ವ್ಯಯಿಸಿದ ಕಾಲ ಬರೋಬ್ಬರಿ ನಲವತ್ತು ವರ‍್ಶಗಳು. ಬಾರ‍್ಬರಾ, ಪಿಟ್ ರವರ ದರ‍್ಮಪತ್ನಿ, ಪಿಟ್ ಯೋಜನೆಯ ಮೇಲ್ವಿಚಾರಣೆ ಮಾಡುತ್ತಿದ್ದರಲ್ಲದೆ, ವಿನ್ಯಾಸದ ಬಗ್ಗೆ ವಿವರವನ್ನೂ ನೀಡುತ್ತಿದ್ದರು. ಬಾರ‍್ಬರಾರವರು ನೀಡುತ್ತಿದ್ದ ಸಲಹೆಗಳನ್ನು ಉಪಯೋಗಿಸಿಕೊಂಡು ಪಿಟ್ ಇಳಿಜಾರುಗಳನ್ನು, ನಡೆದಾರಿಗಳನ್ನು ಹಾಗೂ ಅನನ್ಯ ಶಿಲ್ಪಗಳ ಸರಣಿಯನ್ನು ರಚಿಸಿದರು. ಇವು ಹೊರಗಿನ ಪ್ರಪಂಚದಿಂದ ಹೊತ್ತು ತಂದಶ್ಟು ವೈವಿದ್ಯಮಯವಾಗಿದೆ ಎನ್ನುವಂತಿದೆ.

ಓವರ್ ಲುಕ್ ಪರ‍್ವತದ ಕಣ್ಗಾವಲಿನಲ್ಲಿ, ಸೊಂಪಾದ ಅರಣ್ಯದಿಂದ ಸುತ್ತುವರೆದಿರುವ ಈ ಪ್ರದೇಶ ಅತ್ಯಂತ ಬವ್ಯವಾಗಿ ಕಂಡರೂ ಸಹ, ಒಂಬತ್ತು ಟನ್ ತೂಕದ, ಲಂಬವಾಗಿ ನಿಂತಿರುವ ‘ಜ್ವಾಲೆ” (ಪ್ಲೇಮ್) ಎಂದು ಕರೆಯಲ್ಪಡುವ ಕಂಬವು ಅತ್ಯಂತ ಜನಾಕರ‍್ಶಣೀಯವಾಗಿದೆ. 1960ರ ದಶಕದಲ್ಲಿ ಇದು ಪೂರ‍್ಣಗೊಂಡಿತು. ಇದರ ರಚನೆಯಲ್ಲಿ ಪಿಟ್, ಈಜಿಪ್ಟರು ಪಿರಮಿಡ್‍ಗಳನ್ನು ಕಟ್ಟುವುದರಲ್ಲಿ ಬಳಸಿದ್ದ ವಿಂಚ್ ಮತ್ತು ಪ್ರಾಪ್ ತಾಂತ್ರಿಕತೆಯ ವಿದಾನವನ್ನು ಬಳಸಿದ್ದು ವಿಶೇಶ. ಅದರೆ ಪಿಟ್ ಇದೆಲ್ಲವನ್ನೂ ತಾನೊಬ್ಬನೇ ಯಾರ ಸಹಾಯವೂ ಇಲ್ಲದೆ ಮಾಡಿರುವುದು ನಿಜಕ್ಕೂ ಅತ್ಯದ್ಬುತ. ಇದಕ್ಕೆ ಯಾವುದೇ ಹೆಸರನ್ನು ನೀಡುವ ಬಯಕೆ ಪಿಟ್ ಮನದಲ್ಲಿ ಇರಲಿಲ್ಲ. ತಮ್ಮ ಗೆಳೆಯರ ಒತ್ತಾಯಕ್ಕೆ ಮಣಿದು ಪಿಟ್ ತಮ್ಮ ಸ್ರುಶ್ಟಿಗೆ ಮೊದಲಿಗೆ “ಓಪಸ್-1” ಅತವಾ “ಓಪಸ್-2” ಇಡಬಹುದು ಎಂದುಕೊಂಡರೂ ಸಹಾ ಕೊನೆಯಲ್ಲಿ ತನ್ನ ನಲವತ್ತು ವರ‍್ಶಗಳ ಶ್ರಮದ ಪ್ರತಿಪಲವಾಗಿ ಇದನ್ನು “ಓಪಸ್-40” ಎಂದು ಹೆಸರಿಸಲು ತೀರ‍್ಮಾನಿಸಿದರು.

ಪಿಟ್ ಮುಂದಿನ ದಿನಗಳಲ್ಲಿ ಈ ಆಸ್ತಿಗೆ ಎಪ್ಪತ್ತು ಎಕರೆ ಜಮೀನನ್ನು ಸೇರಿಸಿದರು. ಈ ಕಲ್ಲುಗಣಿಗಾರಿಕೆ ಪ್ರದೇಶದಲ್ಲಿ ತನಗಾಗಿ ಒಂದು ನೆಲೆಯನ್ನು ಕಟ್ಟಿಕೊಂಡು, ತಾನು ಇದರ ಸ್ರುಶ್ಟಿಯಲ್ಲಿ ಉಪಯೋಗ ಮಾಡಿದ ಸಕಲ ಸಲಕರಣೆಗಳನ್ನು ಜೋಡಿಸಿ 1970ರಲ್ಲಿ ವಸ್ತುಸಂಗ್ರಹಾಲಯವೊಂದನ್ನು ತೆರೆದಿದ್ದಾರೆ. ಈ ವಸ್ತು ಸಂಗ್ರಹಾಲಯದಲ್ಲಿ ಕಲ್ಲುಗಣಿಗಾರನ ಕತೆಯನ್ನು ಹೇಳುವುದರೊಂದಿಗೆ, ಕರಕುಶಲತೆಯನ್ನು ಅಬಿವ್ರುದ್ದಿ ಪಡಿಸಲು ಬಳಸಿದ ಎಲ್ಲಾ ಸಾದನಗಳನ್ನೂ ಪ್ರದರ‍್ಶನಕ್ಕಾಗಿ ಸಮರ‍್ಪಿಸಿದ್ದಾರೆ. ಪಿಟ್ 1978ರಲ್ಲಿ ಇಹ ಲೋಕ ತ್ಯಜಿಸಿದರು. ನಂತರ ಅವರ ಕನಸಿನ ಕೂಸು ಓಪಸ್-40ರನ್ನು ಕಾಯ್ದುಕೊಳ್ಳಲು, ಲಾಬ ಉದ್ದೇಶವಿಲ್ಲದ ಸಂದರ‍್ಶಕರಿಂದ ಶುಲ್ಕ ವಸೂಲಿ ಕ್ರಮವನ್ನು ಜಾರಿಗೊಳಿಸಲಾಯಿತು. ಈ ಸೌಗೇರ‍್ಟಿಸ್ ಪ್ರದೇಶದಲ್ಲಿ ಹಾದು ಹೋಗುವವರೆಲ್ಲರೂ ಹಾರ‍್ವೆ ಪಿಟ್ನ ಕನಸಿನ ಕೂಸನ್ನು ತಮ್ಮ ಸಂದರ‍್ಶನದ ಮೊದಲ ಸ್ತಾನದಲ್ಲಿರಿಸಿಕೊಳ್ಳಬೇಕು. ಅದು ಈ ಒಂದು ಮಾಸ್ಟರ‍್ ಪೀಸ್ಗೆ ಸಲ್ಲಿಸುವ ಗೌರವ ಸಮರ‍್ಪಣೆ.

( ಮಾಹಿತಿ ಸೆಲೆ ಮತ್ತು ಚಿತ್ರ ಸೆಲೆ: hudsonvalleyone.com, exploringupstate.com, wikipedia.org )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಇಂದು ಈ ಬರಹವನ್ನು ಹೊನಲುವಿನಲ್ಲಿ ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *