ಅರ‍್ಜೆಂಟಿನಾದ ಐಶಾರಾಮಿ ಹೆಣದವಾಹನ

– .

ಅಮೇರಿಕಾದ ಕಾರು ತಯಾರಕ ಕಂಪೆನಿ ಕ್ಯಾಡಿಲಾಕ್ 1942ರಲ್ಲಿ ಪ್ಲೀಟ್ ವುಡ್ ಸರಣಿಯ 60 ವಿಶೇಶ ನಾಲ್ಕು ಬಾಗಿಲಿನ ಸೆಡಾನ್ ಗಳನ್ನು ಉತ್ಪಾದಿಸಿತು. ಈ ಎಲ್ಲಾ ಕಾರುಗಳು ವಿ8 ಎಂಬ ಮಜಬೂತಾದ ಇಂಜಿನ್ ಜೊತೆಗೆ 133 ಇಂಚಿನ ವೀಲ್ ಹೊಂದಿದ್ದವು. ಅಂದಿನ ದಿನಗಳಲ್ಲಿ ಇದು ಅತ್ಯಂತ ಐಶಾರಾಮಿ ಕಾರುಗಳಲ್ಲಿ ಮಂಚೂಣಿಯಲ್ಲಿತ್ತು.

ಪರ‍್ನಾಂಡೋ ಅಗುರ‍್ರಾ, ಅಮೇರಿಕಾದ ಕ್ಯಾಲಿಪೋರ‍್ನಿಯಾದಲ್ಲಿ ವಾಸಿಸುತ್ತಿದ್ದ ಶೋದಕ. ಇವರು ಅರ‍್ಜೆಂಟಿನಾದಲ್ಲಿ ಒಂದು ಹಳೆಯ ಕೊಟ್ಟಿಗೆಯನ್ನು ಅನ್ವೇಶಿಸುವಾಗ, ಅದ್ಬುತವಾದ ಮರದ ಕೆತ್ತನೆಯ ವಿಂಟೇಜ್ ಅಂತ್ಯಕ್ರಿಯೆಯ ಕ್ಯಾಡಿಲಾಕ್ ಕಾರುಗಳನ್ನು ಕಂಡರು. ಇದರೊಂದಿಗೆ ಶವಸಂಸ್ಕಾರದ ಇತರೆ ವಾಹನಗಳಲ್ಲಿ ಹೂವಿನಿಂದ ಅಲಂಕ್ರುತವಾದ ಕಾರುಗಳು ಕಂಡುಬಂದವು. ಇದರಿಂದ ಅಶ್ಚರ‍್ಯಚಿಕಿತರಾದ ಅಗುರ‍್ರಾ, ಇವುಗಳನ್ನು ತನ್ನ ಸುಪರ‍್ದಿಗೆ ಪಡೆಯಲು ಇಶ್ಟಪಟ್ಟರು. ಈ ಎಲ್ಲಾ ಐಶಾರಾಮಿ ಕಾರುಗಳನ್ನು ಸ್ವಚ್ಚಗೊಳಿಸಿದ ನಂತರ, ಅವರು ಕಂಡುಕೊಂಡ ಸತ್ಯವೆಂದರೆ, ಹೆಣದವಾಹನಗಳಾಗಿ ಉಪಯೋಗಿಸುತ್ತಿದ್ದ ಈ ಐಶಾರಾಮಿ ಕಾರುಗಳು ಹೆಚ್ಚಾಗಿ ಹಾನಿಗೊಳಗಾಗಿರಲಿಲ್ಲ.

ಪರ‍್ನಾಂಡೋ ಅಗುರ‍್ರಾಗೆ ಕಂಡ ಕಾರುಗಳು ಅಪರೂಪದ್ದು. 1942ರ ಕ್ಯಾಟಿಲಾಕ್ ಪ್ಲೀಟ್ ಹುಡ್ ಸರಣಿಯ 60 ವಿಶೇಶ ನಾಲ್ಕು ಬಾಗಿಲುಳ್ಳ ಸೆಡಾನ್ ಗಳು ಅವರ ಕಣ್ಣಿಗೆ ಬಿತ್ತು. ಅವುಗಳಿಗೆ ಮರದ ಕೆತ್ತನೆಯ ಹೊರ ಮೈ ಹೊದಿಸಿದ ಶವಸಂಸ್ಕಾರದ ಕಾರುಗಳಾಗಿ ಮಾರ‍್ಪಡಿಸಲಾಗಿತ್ತು. ಮರದ ಕೆತ್ತನೆಯೂ ಸಹ ಅನನ್ಯ. ಆತನಿಗೆ ಸಿಕ್ಕ ಎಲ್ಲಾ ಕ್ಯಾಡಿಲಾಕ್ ಕಾರುಗಳ ಮರದ ಹೊರ ಮೈ ಬವ್ಯವಾದ ಕಣ್ಮನ ಸೆಳೆಯುವ ಸುಳಿಗಳಿಂದ, ಅಲೆಗಳಿಂದ ಅಲಂಕ್ರುತಗೊಂಡಿದ್ದವು. ಕೆಲವುದರಲ್ಲಿ ಅದರ ಹೊರ ಮೈಯನ್ನು ವಿನ್ಯಾಸಗೊಳಿಸಿದ ಒಬ್ಬ ಕೋಚ್ ಬಿಲ್ಡರ್ ಹೆಸರಿನ ಪಲಕ ಕಂಡು ಬಂದಿತ್ತು. ಅದರಲ್ಲಿ, ಹೆರ‍್ಮಿದಾ ವೈ ನಾಜಿ ಎಂದಿತ್ತು, ಅದರಾಚೆಗೆ ಮತ್ತಾವ ಸುಳಿವೂ ತಿಳಿದುಬಂದಿಲ್ಲ.

ತಾನು ವಾಸಿಸುತ್ತಿರುವ ಕ್ಯಾಲಿಪೋರ‍್ನಿಯಾದಲ್ಲಿ ಅವುಗಳನ್ನು ಪ್ರದರ‍್ಶನಕ್ಕೆ ಇಡುವ ವ್ಯವಸ್ತೆ ಮಾಡಿ, ಮೊದಲು ಹೂವಿಗಾಗಿ ಬಳಸುತ್ತಿದ್ದ ವಾಹನಗಳನ್ನು ಪ್ರದರ‍್ಶನಕ್ಕೆ ಇಟ್ಟರು. ನಂತರ ಕ್ಯಾಡಿಲಾಕ್ ಹೆಣದವಾಹನವನ್ನು ಪ್ರದರ‍್ಶಿಸುವ ಮುನ್ನ, ಬಾಡಿ-ಶಾಪ್ ಮಾಲೀಕರೊಂದಿಗೆ ಸಂವಹಿಸಿ ಅವುಗಳನ್ನು ಪೂರ‍್ಣ ಸರಿಪಡಿಸಿ, ಮರುಸ್ತಾಪಿಸಿದರು.

ಈ ಶವವಾಹನಗಳ ಇತಿಹಾಸದ ಬಗ್ಗೆ ಹೆಚ್ಚು ದಾಕಲಾತಿಗಳು ಲಬ್ಯವಿಲ್ಲ. ಇದನ್ನು ಕೆತ್ತಿದ ಕುಶಲಕರ‍್ಮಿಗಳ ಗುರುತು ರಹಸ್ಯವಾಗೇ ಉಳಿದಿದೆ. ರುಶಿ ಮೂಲ ನದಿ ಮೂಲದಂತೆ ಇದರ ಮೂಲವನ್ನೂ ಆನ್ವೇಶಿಸದೆ, ಅದರ ಅತ್ಯಂತ ಅದ್ಬುತವಾದ ಕುಸರಿ ಕೆಲಸಕ್ಕೆ ಎಲ್ಲರೂ ತಲೆದೂಗಲೇಬೇಕು. ಬ್ಯಾರ‍್ನ್ ಪೈಂಡ್ ನಲ್ಲಿ ಸಾಮಾನ್ಯವಾಗಿ ಹಿಂದಿನ ಕಾಲದ ಅತ್ಯಂತ ಐಶಾರಾಮಿ ಶವವಾಹನಗಳು ಕಾಣಸಿಗುತ್ತವೆ. ಸಣ್ಣ ಪುಟ್ಟ ದುರಸ್ತಿಗೆ ಬಂದಾಗಲೋ, ಇಲ್ಲವೇ ಅದನ್ನು ಓಡಿಸುವವರು ಇಲ್ಲದೆಯೋ, ಇಲ್ಲವೇ ಕಾರಿನ ಮಾಲೀಕ ಸತ್ತ ಕಾರಣದಿಂದಲೋ, ಕಾರುಗಳು ನಿಂತಲ್ಲೇ ನಿಂತು ಹಾಳಾಗಿರುತ್ತವೆ. ಅಂತಹ ಕಾರುಗಳನ್ನು ಹುಡುಕುವುದೇ ಹಲವರ ಕೆಲಸವಾಗಿದೆ. ಅಂತಹವು ಸಿಕ್ಕ ನಂತರ, ದುರಸ್ತಿಗೊಳಿಸಿ ಮರುಸ್ತಾಪಿಸಿ ಮಾರಾಟ ಮಾಡುತ್ತಾರೆ.

(ಮಾಹಿತಿ ಮತ್ತು ಚಿತ್ರಸೆಲೆ: jalopnik.com, themindcircle.com, hemmings.com, atlasobscura.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: