ಬಟರ್ ಪ್ಲೈ ಎಪೆಕ್ಟ್

– ನಿತಿನ್ ಗೌಡ.

ಕಂತು-2,ಕಂತು-3

ಒಂದು ವೇಳೆ ತಾಳಿಕೋಟೆ ಕದನದಲ್ಲಿ ಗೆಲುವು ಕರ‍್ನಾಟ ಸಾಮ್ರಾಜ್ಯದ್ದಾಗಿದ್ದರೆ ಇಂದು ಕನ್ನಡಿಗರ ಸ್ತಿತಿ ಹೇಗಿರುತಿತ್ತೋ ?

ಒಂದು ವೇಳೆ ಹಿಟ್ಲರ್ ಯಾವುದೋ ಕಾಯಿಲೆಯಿಂದ ಸತ್ತಿದ್ದರೆ, ಎರಡನೇ ಮಹಾಯುದ್ದ ನಡೆಯುತ್ತಿರಲಿಲ್ಲವೇನೋ? ಹಾಗೇ ಲಕ್ಶಾಂತರ ಜನ ಸಾಯುತ್ತಿರಲಿಲ್ಲ ಮತ್ತು ಇಂದಿನ ಜಗತ್ತಿನ ಜನಸಂಕ್ಯೆ ಇನ್ನೂ ಹೆಚ್ಚಾಗುತಿತ್ತೇನೋ! ಆ ಜನರಲ್ಲಿ ಎಶ್ಟು ಮಂದಿ ಇಂದಿನ ಪ್ರಪಂಚದ ದಿಕ್ಕನ್ನೇ ಬದಲಿಸೋ ಬುದ್ದಿಶಕ್ತಿ ಹೊಂದಿರುತ್ತಿದ್ದರೋ ಏನೋ?

ಒಂದು ವೇಳೆ ನನ್ನ ತಂದೆ ತಾಯಿ ಬೇಟಿಯಾಗದಿದ್ದರೆ, ಅವರು ಮದುವೆ ಆಗುತ್ತಿರಲಿಲ್ಲ, ನಾನು ಹುಟ್ಟುತ್ತಿರಲಿಲ್ಲ, ಅಂದರೆ ಇಂದು ನೀವು ಹೊನಲಿನಲ್ಲಿರುವ ನನ್ನ ಈ ಬರಹ ಓದುತ್ತಿರಲಿಲ್ಲ!

ಈಗ ಇನ್ನೊಂದು ರೀತಿಯಲ್ಲಿ ಕಲ್ಪಿಸಿ ನೋಡೋಣ; ಯಾರೋ ಒಬ್ಬರಿಗೆ ಮುಂಜಾನೆ ಆಪೀಸಿಗೆ ಹೋಗುವಾಗ ಆಕ್ಸಿಡೆಂಟ್ ಆಗುತ್ತದೆ ಎಂದುಕೊಳ್ಳೋಣ. ಒಂದು ವೇಳೆ ಅವರು, ತಾವು ಆಪೀಸು ಹೋಗುವುದಕ್ಕಿಂತ ಮುಂಚೆ ಹೊನಲಿನಲ್ಲಿರುವ ಈ ಬರಹ/ಯಾವುದೇ ಬರಹವನ್ನು ಎರಡು ನಿಮಿಶ ಕುಳಿತುಕೊಂಡು ಓದಿದರು ಎಂದು ಕೊಳ್ಳೋಣ. ಆಗ ಅವರು ಆಪೀಸ್ ಗೆ ಹೊರಡುವ ಸಮಯ ಬದಲಾಗುವುದರಿಂದ, ಆಕ್ಸಿಡೆಂಟ್ ಆಗುತ್ತಿರಲಿಲ್ಲ. ಅವರು ಬದುಕುಳಿದು, ಅವರ ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ತಮ್ಮದೇ ಚಾಪು ಮೂಡಿಸಬಹುದು ಮತ್ತು ಅದು ಹಲವರ ಜೀವನದ ಮೇಲೆ ಪರಿಣಾಮ ಬೀರಬಹುದು.

ಒಂದು ವೇಳೆ ಮಿಂಚನ್ನು/ಕರೆಂಟ್ ಕಂಡುಹಿಡಿಯದಿದ್ದರೆ, ಇಂದು ಸ್ಮಾರ‍್ಟ್ ಪೋನ್ (ಜಾಣ ಅಲೆಯುಲಿ) ಇರುತ್ತಿರಲಿಲ್ಲ. ಅಂದರೆ ಇಂದಿನ ಕಾಲದಲ್ಲಿ ಸ್ಮಾರ‍್ಟ್ ಪೋನ್ ಮೂಲಕ ಹುಟ್ಟಿಕೊಳ್ಳಬಹುದಾದ ಹಲವರ ಪ್ರೀತಿ ಚಿಗುರುತ್ತಲೇ ಇರಲಿಲ್ಲ.

ಹೀಗೆ ಹೇಳುತ್ತಾ ಸಾಗಿದರೆ; ಹಿಂದೆ ನಡೆದ/ಇಂದು ನಡೆಯುವ ಯಾವುದೋ ಚಿಕ್ಕ ಗಟನೆ, ಆಗುಹೋಗು ಇಂದು ಮತ್ತು ಮುಂದೆ ನಡೆಯುವುದರ ಮೇಲೆ ದೊಡ್ಡ ಪರಿಣಾಮ ಬೀರಬಹುದು ಮತ್ತು ನಮ್ಮ ಮುಂದೆ ಬೇರೆಯೇ ಜಗತ್ತಿನ ತೆರೆಯನ್ನು ತೆರೆಯಬಹುದು(Entanglement). ಯಾರಿಗೆ ಗೊತ್ತು, ಟ್ವಿಟ್ಟರ್ ನಲ್ಲಿನ ನಿಮ್ಮ ಒಂದು ಚಿಕ್ಕ ಟ್ವೀಟ್/ಟುವ್ವಿ ಆಳ್ವಿಕೆಯ ಸರಕಾರವನ್ನೇ ಬೀಳಿಸಬಹುದು/ಕಟ್ಟಬಹುದು?

ಬಟರ್ ಪ್ಲೈ ಎಪೆಕ್ಟ್ ( Sensitive dependence on Initial Condition – Butterfly Effect) :

ಈಗ ಯಾವುದಾದರು ಒಂದು ಜಟಿಲ ಏರ‍್ಪಾಡು ತೆಗೆದುಕೊಂಡಲ್ಲಿ; ಎತ್ತುಗೆಗೆ ಸುತ್ತಣದ ಕಾವಿನ ಏರ‍್ಪಾಡು ( Surrounding Temperature ), ಹವಾಮಾನ ಮುನ್ಸೂಚನೆಯ ಏರ‍್ಪಾಡು ( weather Forecasting ), ಶೇರು ಮಾರುಕಟ್ಟೆ, ನಮ್ಮ ಮೆದುಳಿನ ಸ್ತಿತಿಯ ಏರ‍್ಪಾಡು ಹೀಗೆ ಇಂತಹ ಏರ‍್ಪಾಡುಗಳಲ್ಲಿ ಅಂದಿನ/ಆ ಗಳಿಗೆಯ ಹೊತ್ತಿನಲ್ಲಿರುವ ಆಗುಹೋಗುಗಳಲ್ಲಿನ, ಕಟ್ಟಳೆಗಳಲ್ಲಿ ಒಂದು ಚಿಕ್ಕ ಬೇರ‍್ಮೆ/ವ್ಯತ್ಯಾಸವಾದರೂ ಸಹ, ಇದು ಮುಂದೆ ಆ ಏರ‍್ಪಾಡುಗಳಲ್ಲಿ ದೊಡ್ಡಮಟ್ಟದ ತಳಮಳವನ್ನು ( chaos ) ತರಲಿದ್ದು, ಅದು ಬೇರೆಯೇ ಬಗೆಯ ಪರಿಣಾಮ/ಕೊನೆ ಯನ್ನು ಉಂಟುಮಾಡುತ್ತದೆ.

ಎಲ್ಲೋ ಅರಬ್ಬೀ ಸಮುದ್ರದಲ್ಲಿನ ತಟದಲ್ ಹಾರಾಡೋ ಒಂದು ಚಿಟ್ಟೆಯ ರೆಕ್ಕೆಯ ಮಿಡಿತದಿಂದ, ಅಲ್ಲಿನ ವಾತಾವರಣದಲ್ಲಿ ಉಂಟಾಗುವ ಸಣ್ಣ ಏರಿಳಿತ; ಮುಂದೆ ದೊಡ್ಡದಾಗಿ ಅರಬ್ಬೀ ಸಮುದ್ರದ ವಿರುದ್ದ ದಿಕ್ಕಿನಲ್ಲಿರೋ ತಮಿಳುನಾಡಿನ ಕಡೆ ಸುಂಟರಗಾಳಿ ತರಬಹುದಾದರೆ; ಅಂತಹ ಸುತ್ತಣದ ಏರ‍್ಪಾಡಿನಲ್ಲಿ( Complex chaotic system) ; ವಸ್ತುಸ್ತಿತಿಯ ಕಟ್ಟಳೆಗಳಲ್ಲಿನ ಚಿಕ್ಕ ಬದಲಾವಣೆ ಮುಂದೆ ದೊಡ್ಡಮಟ್ಟದ ಆಗುಹೋಗುಗಳಿಗೆ ಕಾರಣವಾಗುತ್ತದೆ. ಇಂತಹ ಚಿಕ್ಕ ಬದಲಾವಣೆಯನ್ನು ತಂದು ,ಅದರ ಪರಿಣಾಮಗಳನ್ನು ಗಮನಿಸುವುದನ್ನೇ ‘ಬಟರ‍್ ಪ್ಲೈ ಇಪೆಕ್ಟ್’ ಎನ್ನುವರು. ಹೀಗೂ ಆಗಬಹುದಾ ಎಂದೊಮ್ಮೆ ನಿಮಗನಿಸಿದಲ್ಲಿ, ಇದೊಂದು ಕಾವ್ಯಾತ್ಮಕ ವಿವರಣೆ. ಆದರೆ ಇದಕ್ಕೆ ನಿಜವಾಗಿಯೂ ಈ ಹೆಸರು ಬರಲು ಕಾರಣ ಮುಂದೆ ನೋಡೋಣ. ಹಾಲಿವುಡ್ ನಲ್ಲಿ ಬಟರ‍್ ಪ್ಲೈ ಎಪೆಕ್ಟ್ ಆದಾರಿಸಿ ಹತ್ತಾರೂ ಸಿನಿಮಾಗಳು ತೆರೆಗೆ ಬಂದಿವೆ. ಕಮಲ್ ಹಾಸನ್ ಅವರ ದಶಾವತಾರಮ್ ಕೂಡ ಬಟರ‍್ ಪ್ಲೈ ಎಪೆಕ್ಟ್ ಆದಾರಿಸಿ ಬಂದಿರುವ ಓಡು ತಿಟ್ಟವಾಗಿದೆ.

ಮುಂದಿನ ಬರಹದಲ್ಲಿ ‘ಬಟರ‍್ ಪ್ಲೈ ಇಪೆಕ್ಟ್’ ಬೆಳಕಿಗೆ ಬಂದ ಹಿನ್ನೆಲೆಯ ಬಗೆಗೆ ತಿಳಿದುಕೊಳ್ಳೋಣ.

ಕಂತು-2,ಕಂತು-3

( ಮಾಹಿತಿ ಮತ್ತು ತಿಟ್ಟ ಸೆಲೆ: ias.ac.in, veritasiumYoutube, ApertureYoutube, youtube.com, pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: