ಸಾವಿತ್ರಿಬಾಯಿ ಪುಲೆ – ದಿಟ್ಟ ಹೆಣ್ಣು

– ಶ್ಯಾಮಲಶ್ರೀ.ಕೆ.ಎಸ್.

ಸ್ತ್ರೀಯರನ್ನು ಶಿಕ್ಶಣದಿಂದ ದೂರವಿಟ್ಟಿದ್ದ ಕಾಲಗಟ್ಟದಲ್ಲಿ ಅವರ ಒಳಿತಿಗಾಗಿ ಹೋರಾಡಿ ಶೈಕ್ಶಣಿಕ ಕ್ಶೇತ್ರದಲ್ಲಿ ಬಹುದೊಡ್ಡ ಕೊಡುಗೆ ನೀಡಿದಂತಹ ದಿಟ್ಟ ಮಹಿಳೆ ಅಕ್ಶರದವ್ವ, ಮೊಟ್ಟ ಮೊದಲ ಮಹಿಳಾ ಶಿಕ್ಶಕಿ ಸಾವಿತ್ರಿಬಾಯಿ ಪುಲೆ. ಆಕೆ ಮಹಾರಾಶ್ಟ್ರದ ಸತಾರ ಜಿಲ್ಲೆಯ ನಾಯಂಗಾವ ಎಂಬ ಗ್ರಾಮದಲ್ಲಿ ಜನವರಿ 3, 1831 ರಂದು ಹುಟ್ಟಿದರು. ಅವರ 8ನೇ ವರ‍್ಶಕ್ಕೆ, 12 ವರ‍್ಶದ ಜ್ಯೋತಿ ಬಾಪುಲೆ ಅವರೊಂದಿಗೆ ಬಾಲ್ಯವಿವಾಹ ನೆರವೇರುತ್ತದೆ. ಓದುವ ಹಂಬಲವಿದ್ದ ಸಾವಿತ್ರಿ ದೇವಿಗೆ ತನ್ನ ಅಕ್ಶರಸ್ತ ಪತಿಯ ಪ್ರೋತ್ಸಾಹ ದೊರೆತು, ಸಮಾಜದ ಕಟ್ಟಳೆಗಳನ್ನು ಹಂತ ಹಂತವಾಗಿ ದಾಟುತ್ತಾ ತಮ್ಮ 17ನೇ ವಯಸ್ಸಿಗೆ ಶಿಕ್ಶಕಿಯಾಗಿ ರೂಪುಗೊಂಡರು.

ಸಮಾಜ ಸುದಾರಣೆಯ ಹಿಂದಿನ ಹಾದಿ

‘ಮಾಳೀ’ ಜಾತಿಗೆ ಸೇರಿದ ಸಾವಿತ್ರಿ ದೇವಿಯು ತಾನು ಅನುಬವಿಸಿದ್ದ ಅವಮಾನಗಳಿಂದ ಆಕ್ರೋಶಗೊಂಡಿದ್ದರು. ಆಕೆ ತನ್ನಂತೆ ಇತರೆ ತಳವರ‍್ಗದ ಹೆಣ್ಣು ಮಕ್ಕಳಿಗೂ ಶಿಕ್ಶಣ ನೀಡುವ ಹಿರಿದಾಸೆ ಹೊಂದಿದ್ದರು. ಜ್ಯೋತಿ ಬಾಪುಲೆಯವರ ಸಂಪೂರ‍್ಣ ಬೆಂಬಲ ಆಕೆಗಿತ್ತು. ಮನೆ ಮನೆಗೂ ತೆರಳಿ ಶಿಕ್ಶಣದ ಬಗ್ಗೆ ತಿಳುವಳಿಕೆ ನೀಡುತ್ತಿದ್ದರು. ಇದನ್ನು ಸಹಿಸದ ಕೆಲವರು ಸಾವಿತ್ರಿಬಾಯಿಗೆ ಇನ್ನಿಲ್ಲದ ಅವಮಾನ ಅಪನಿಂದನೆಗಳನ್ನು ಮಾಡುತ್ತಿದ್ದರು. ಸಗಣಿನೀರನ್ನು ಎರಚುತ್ತಿದ್ದರು. ಕಲ್ಲುಗಳನ್ನು ಬೀಸುತ್ತಿದ್ದರು. ಇಶ್ಟೆಲ್ಲಾ ಹಿಂಸೆಗಳನ್ನು ಅನುಬವಿಸಿದ ಆ ದಂಪತಿಗಳು ಕೊನೆಗೆ ಮನೆಯವರಿಂದಲೇ ಬಹಿಶ್ಕರಿಸಲ್ಪಟ್ಟರು. ನೋವಿನಿಂದ ಹೊರನಡೆದ ದಂಪತಿಗಳೀರ‍್ವರು ಎದೆಗುಂದದೆ ಮಹಾರಾಶ್ಟ್ರದ ಪುಣೆಯಲ್ಲಿ ಮೊಟ್ಟ ಮೊದಲ ಹೆಣ್ಣು ಮಕ್ಕಳ ಮಹಿಳಾ ಶಾಲೆಯೊಂದನ್ನು ತೆರೆದರು.  ಸಾವಿತ್ರಿಬಾಯಿಯವರು ಅಲ್ಲಿನ ಮನೆಗಳಿಗೆ ಹೋಗಿ ಪೋಶಕರ ಮನವೊಲಿಸಿ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದರು.

ಸಾಂಪ್ರದಾಯಿಕ ಶಿಕ್ಶಣಕ್ಕೆ ಬದಲಾಗಿ ಸಮಾಜ, ಗಣಿತ, ವಿಜ್ನಾನ, ಮರಾಟಿ, ಇಂಗ್ಲಿಶ್ ವಿಶಯಗಳನ್ನು ಬೋದಿಸುತ್ತಿದ್ದರು. ಬರುಬರುತ್ತಾ ಅವರ ಶೈಕ್ಶಣಿಕ ಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗತೊಡಗಿತು. ಪುಣೆಯಲ್ಲಿನ ಅವರ ಈ ಶೈಕ್ಶಣಿಕ ಕ್ರಾಂತಿಯ ಹಾದಿ ಹೂವಿನ ಹಾದಿಯೇನು ಆಗಿರಲಿಲ್ಲ. ಅಲ್ಲಿಯೂ ಬಹಳ ಅವಮಾನಗಳನ್ನು ಎದುರಿಸಿ ತಾಳ್ಮೆಯಿಂದ ತಮ್ಮ ಕೆಲಸದಲ್ಲಿ ಮುನ್ನಡೆ ಸಾದಿಸುತ್ತಾ ಬಂದರು. ಶಿಕ್ಶಣ ಮಾತ್ರವಲ್ಲದೇ ಬಾಲ್ಯ ವಿವಾಹ ತಡೆಗಟ್ಟುವಿಕೆ, ವಯಸ್ಸಾದ ಪುರುಶರೊಂದಿಗೆ ಮದುವೆ ಮಾಡುತ್ತಿದ್ದ ಪುಟ್ಟ ಹೆಣ್ಣುಮಕ್ಕಳನ್ನು ಕಾಪಾಡುವಲ್ಲಿ ಯಶಸ್ವಿಯಾದರು. ತಮ್ಮ ಜನಾಂಗದ ಮೇಲೆ ನಡೆಯುತ್ತಿದ್ದ ದೌರ‍್ಜನ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದರು. ಸಾವಿತ್ರಿಬಾಯಿ ಮತ್ತು ಜ್ಯೋತಿ ಬಾಪುಲೆಯವರು ಜಾತಿ ವ್ಯವಸ್ತೆಯನ್ನು ಹೋಗಲಾಡಿಸಲು ‘ಮಾಂಗ್ಸ್’ ಮತ್ತು ಮಕ್ಕಳಿಗಾಗಿ, ವಯಸ್ಕರಿಗೆ, ರೈತ ಮತ್ತು ಕಾರ‍್ಮಿಕ ವರ‍್ಗದವರಿಗೆ ಆನೇಕ ಶಾಲೆಗಳನ್ನು ತೆರೆದರು. ಒಟ್ಟಾರೆ 1848 ರಿಂದ 1852 ರವರೆಗೆ ಪುಣೆ, ಸತಾರ ಹಾಗೂ ಅಹಮದ್ ನಗರಗಳಲ್ಲಿ 18 ಶಾಲೆಗಳನ್ನು ತೆರೆದು ಉಚಿತ ಶಿಕ್ಶಣ ನೀಡಿದ ಗೌರವಕ್ಕೆ ಸಾವಿತ್ರಿಬಾಯಿ ಪುಲೆಯವರು ಪಾತ್ರರಾದರು. ತಮ್ಮ ಸಂಪಾದನೆಯನ್ನು ತಮ್ಮ ವರ‍್ಗದ ಜನರ ಹಿತಕ್ಕಾಗಿ ಮೀಸಲಿಟ್ಟು, ಅನೇಕ ಸಮಾಜ ಸುದಾರಣೆಯ ಕಾರ‍್ಯಗಳನ್ನು ನಿರ‍್ವಹಿಸುವ ಮೂಲಕ ಸೈ ಎನಿಸಿಕೊಂಡರು. ಇಂಗ್ಲೆಂಡ್ ನ ಟೈಮ್ಸ್ ಪತ್ರಿಕೆ ಇವರ ಬಗ್ಗೆ ಶ್ಲಾಗನೆ ವ್ಯಕ್ತಪಡಿಸಿತ್ತು. ಅಲ್ಲಿಂದ ಪುಲೆಯವರು ಮನೆಮಾತಾದರು.

ಮಹಿಳಾ ಶಿಕ್ಶಣದ ಜೊತೆಗೆ ಮಹಿಳಾ ಸಬಲೀಕರಣಕ್ಕಾಗಿ ಅಪಾರ ಕೊಡುಗೆಯನ್ನು ನೀಡಿದ ಕ್ರಾಂತಿಕಾರಿ ಸಮಾಜ ಸುದಾರಕಿ, ಅಕ್ಶರ ಮಾತೆ ಸಾವಿತ್ರಿಬಾಯಿ ಪುಲೆಯವರು 1897ರಲ್ಲಿ ಪ್ಲೇಗ್ ರೋಗಿಗಳನ್ನು ತಾವೇ ಕುದ್ದಾಗಿ ಉಪಚರಿಸುವಾಗ ಪ್ಲೇಗ್ ರೋಗಕ್ಕೆ ಬಲಿಯಾಗಿ ಇಹಲೋಕವನ್ನು ತ್ಯಜಿಸಿದರು. ಅಕ್ಶರ ವಂಚಿತರಿಗೆ ಅಕ್ಶರ ಕಲಿಸಿದ ಸಾವಿತ್ರಿಬಾಯಿ ಪುಲೆಯವರ ಜನುಮ ದಿನವನ್ನು ಇಂದಿಗೂ ಪ್ರತೀ ವರ‍್ಶ ಜನವರಿ 3ರಂದು ನೆನಪಿಸಿಕೊಳ್ಳುತ್ತಿರುವುದೇ ಒಂದು ವಿಶೇಶ.

( ಚಿತ್ರಸೆಲೆ: wikimedia.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: