ಪೆರುವಿನ ಕಾದಾಟದ ಹಬ್ಬ – ಟಾಕನಾಕುಯ್
– ಕೆ.ವಿ.ಶಶಿದರ.
ಡಿಸೆಂಬರ್ 25 ಪ್ರಪಂಚದಲ್ಲಿನ ಬಹುತೇಕ ಜನರಿಗೆ ಸೌಹಾರ‍್ದ ಮತ್ತು ಒಗ್ಗಟ್ಟನ್ನು ತೋರಿಸುವ ದಿನ. ಆದರೆ ಪೆರುವಿನ ಕುಜ್ಕೋ ಸಮೀಪದ ಚಂಬಲಿಲ್ಕ ಸಮುದಾಯದವರಿಗೆ ಅಂದು ಕಾದಾಟದ ಹಬ್ಬ. ಅವರುಗಳು ಈ ಹಬ್ಬವನ್ನು ಪೆರುವಿನ ಅತ್ಯಂತ ಹಳೆಯ, ಮಾತನಾಡುವ ಉಪಬಾಶೆಯಾದ ಕ್ವೆಚುವಾದಲ್ಲಿ ‘ಟಾಕನಾಕುಯ್’ ಎನ್ನುತ್ತಾರೆ. ಈ ಪದದ ನಿಜವಾದ ಅರ‍್ತ “ರಕ್ತ ಕುದಿಯುವಾಗ” ಎಂದು. ಪ್ರತಿ ವರ‍್ಶ ಡಿಸೆಂಬರ್ 25ರಂದು ನಡೆಯುವ ಈ ಹಬ್ಬದ ದಿನ, ತಮ್ಮ ಸಮುದಾಯದ ಸದಸ್ಯರುಗಳ ನಡುವೆ ಇರುವ ಬಿನ್ನಾಬಿಪ್ರಾಯವನ್ನು, ವೈಯುಕ್ತಿಕ ಮನಸ್ತಾಪಗಳನ್ನು ಕಾದಾಟದ ಮೂಲಕ ಪರಿಹರಿಸಿಕೊಳ್ಳಲು ಅವಕಾಶ ಕಲ್ಪಿಸುತ್ತಾರೆ. ನ್ಯಾಯಾಂಗ ವ್ಯವಸ್ತೆಯಲ್ಲಿನ ಅಪನಂಬಿಕೆ ಇದಕ್ಕೆ ಮೂಲ ಕಾರಣ. ಇದು ಕುಟುಂಬದ ಗೌರವ, ಕ್ಯಾತಿಯನ್ನು ಎತ್ತಿ ಹಿಡಿಯುವ ಪುರಾತನ ಆಚರಣೆಯಾಗಿದೆ. ಸಮುದಾಯದ ಸದಸ್ಯರ ನಡುವೆ ಇರುವ ಬಿನ್ನಾಬಿಪ್ರಾಯಗಳನ್ನು ತೊಡೆದುಹಾಕಲು, ಹೊಸ ವರ‍್ಶವನ್ನು ಅತ್ಯಂತ ಸಂಬ್ರಮದಿಂದ, ಕ್ಲೇಶವಿಲ್ಲದ ಮನಸ್ಸಿನಿಂದ, ಸಂತೋಶದಿಂದ ಬರಮಾಡಿಕೊಳ್ಳಲು ಇರುವ ಒಂದೇ ಒಂದು ದಾರಿಯಾಗಿದೆ.
ಈ ಟಾಕನಾಕುಯ್ ಕಾದಾಟದ ಹಬ್ಬದಲ್ಲಿ ಲಿಂಗ ಬೇದವಿಲ್ಲದೆ ಗಂಡಸರು, ಹೆಂಗಸರು ಮತ್ತು ಮಕ್ಕಳಾದಿಯಾಗಿ ಎಲ್ಲರೂ ಬಾಗವಹಿಸುತ್ತಾರೆ. ಇದು ನಡೆಯುವುದು ಸ್ತಳಿಯ ಗೂಳಿ ಕಾಳಗದ ಅಕಾಡದಲ್ಲಿ. ಕಾದಾಟದಲ್ಲಿ ತೊಡಗುವವರು ಮುಂಗೈನ ಗೆಣ್ಣುಗಳಿಂದ ಹೊಡೆದಾಟ ಮೊದಲು ಮಾಡುತ್ತಾರೆ. ಈ ಕಾದಾಟದ ಮೇಲ್ವಿಚಾರಣೆಯನ್ನು ಸ್ತಳೀಯ ಅದಿಕಾರಿಗಳು ವಹಿಸಿಕೊಂಡಿರುತ್ತಾರೆ. ಅವರೇ ತೀರ‍್ಪುಗಾರರಾಗಿಯೂ ಕೆಲಸ ನಿರ‍್ವಹಿಸುತ್ತಾರೆ. ಈ ಕಾದಾಟದಲ್ಲಿ ಗಂಡಸರು ಹೆಚ್ಚಿನ ಸಮಯ ಗೆಣ್ಣುಗಳಿಂದಲೇ ಕಾದಾಟ ನಡೆಸುತ್ತಾರೆ. ಆದರೆ ಹೆಂಗಸರ ಪಂದ್ಯಗಳಲ್ಲಿ ಒದೆಯುವಿಕೆ ಪ್ರಮುಕವಾಗಿದ್ದು, ಅದು ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಈ ಕಾದಾಟದಲ್ಲಿ ಗಾಯಗಳಾಗುವುದು ಅಪರೂಪವಾಗಿದೆ. ಈ ಕಾದಾಟದ ನಿಯಮದಂತೆ, ಕೆಳಗೆ ಬಿದ್ದವರನ್ನು ಹೊಡೆಯಲು ಅಪ್ಪಣೆ ಇಲ್ಲ. ಇದು ಅತ್ಯಂತ ಪ್ರಮುಕ ನಿಯಮವಾಗಿದ್ದು, ಇದನ್ನು ಮೀರಿದವರು ಚಾಟಿ ಏಟನ್ನು ಎದುರಿಸಬೇಕಾಗುತ್ತದೆ.
ಈ ಕಾದಾಟವು ಹಲವಾರು ಪ್ರಮುಕ ವಿಶಯಗಳನ್ನು ಮುಂದಿಟ್ಟುಕೊಂಡು ನಡೆಯುತ್ತದೆ. ಇದರಲ್ಲಿ ಆಸ್ತಿ ವಿವಾದ, ಗೆಳತಿಯರನ್ನು ಅಪಹರಿಸುವುದು, ಗೆಳೆಯರನ್ನು ಅಪಹರಿಸುವುದು, ಕುರಿ ಕದಿಯುವುದು ಇಂತಹ ಪ್ರಮುಕ ವಿಶಯ ಹಾಗೂ ಹೆಂಡವನ್ನು (ಬಿಯರ್) ಚೆಲ್ಲುವಂತಹ ಸಣ್ಣ ಪ್ರಸಂಗದಿಂದ ಉಂಟಾದ ವಿವಾದ ಸಹ ಕಾದಾಟದ ಮೂಲಕ ಪರಿಹಾರವಾಗುತ್ತದೆ. ಇಲ್ಲಿ ನಡೆಯುವ ಕಾದಾಟದಲ್ಲಿ ಯಾವುದೇ ನಿರ‍್ದಿಶ್ಟ ವಿಶಯ ಇಲ್ಲದಿದ್ದಲ್ಲಿ, ಕ್ರೀಡೆಗಾಗಿ ಮಾತ್ರವೇ ಹೊಡೆದಾಡುವುದೂ ಉಂಟು. ಅತವಾ ಕುಡಿತದ ಅಮಲಿನಲ್ಲಿ ನಡೆಯುವ ಹೊಡೆದಾಟ ಸಹ ಇದರಲ್ಲಿ ಸೇರಿರುತ್ತದೆ. ಟಾಕನಾಕುಯ್ ಕಾದಾಟ ಹಳೆಯ ಕುಂದುಕೊರತೆಗಳನ್ನು ಇತ್ಯರ‍್ತ ಮಾಡಲು ಮಾತ್ರವಲ್ಲದೆ, ತಮ್ಮ ದೈರ‍್ಯ ಮತ್ತು ಹೋರಾಟದ ಕೌಶಲ್ಯಗಳನ್ನು ಸಾಬೀತು ಮಾಡಲು ಬಯಸುವವರೂ ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಮತ್ತೆ ಕೆಲವರು ಸಮುದಾಯದ ಗೌರವವನ್ನು ಎತ್ತಿಹಿಡಿಯಲು ಕಾದಾಟದಲ್ಲಿ ತೊಡಗಿದರೆ, ಕೆಲವರು ಕುಟುಂಬ ಸದಸ್ಯರನ್ನು ಹೆಮ್ಮೆ ಪಡಿಸಲು ಕಾದಾಟದಲ್ಲಿ ತೊಡಗುತ್ತಾರೆ.
ಅನೇಕ ಹೋರಾಟಗಾರರು ಹೋರಾಟದ ಸಮಯದಲ್ಲಿ ತಮ್ಮ ಮುಕಗಳನ್ನು ಸಾಂಪ್ರದಾಯಿಕ ವರ‍್ಣರಂಜಿತ ನೀರ‍್ಗಲ್ಲಿನ ಓಟದಲ್ಲಿ ದರಿಸುವಂತಹ ಮುಕವಾಡವನ್ನು ಹಾಗೂ ಎದುರಾಳಿಯನ್ನು ಹೆದರಿಸುವ ಸಲುವಾಗಿ ಅನೇಕ ಬಯಂಕರ ಪ್ರಾಣಿಗಳ ವೇಶವನ್ನೂ ದರಿಸುತ್ತಾರೆ. ಈ ಹೊಡೆದಾಟದಲ್ಲಿ ಮೂಗಿನಿಂದ ಅತವ ಬಾಯಿಂದ ರಕ್ತ ಬಂದಲ್ಲಿ ಹೋರಾಟಗಾರರು ಅಕಾಡವನ್ನು ತೊರೆಯಬಹುದು. ಸಾರ‍್ವಜನಿಕರಿಗೆ ಟಾಕನಾಕುಯ್ ಹಿಂಸೆ ಮತ್ತು ಬುದ್ದಿಹೀನತೆಯ ತೋರುವಿಕೆಯಂತೆ ಕಾಣಬಹುದು. ಆದರೆ ಚಂಬಲಿಲ್ಕ ಸಮುದಾಯದವರಿಗೆ ಇದು ಅವರ ಸಾಂಸ್ಕ್ರುತಿಕ ಪರಂಪರೆಯ ಪ್ರಮುಕ ಬಾಗವಾಗಿದೆ. ತಮ್ಮತಮ್ಮಲ್ಲಿ ಯಾವುದೇ ತೆರನಾದ ಬಿನ್ನಾಬಿಪ್ರಾಯವಿದ್ದರೂ ಸಹ, ಕಾದಾಟಕ್ಕೆ ಮುನ್ನ ಒಬ್ಬರನ್ನೊಬ್ಬರು ತಬ್ಬಿಕೊಂಡು ಮನಸ್ತಾಪಗಳನ್ನು ತೊಡೆದುಹಾಕುತ್ತಾರೆ. ಒಂದೆರಡು ಗುದ್ದುಗಳನ್ನೂ ವಿನಿಮಯ ಮಾಡಿಕೊಳ್ಳುತ್ತಾರೆ. ಕಾದಾದ ನಂತರ ಎಲ್ಲವನ್ನೂ ಮರೆತು ಮತ್ತೆ ಉತ್ತಮ ಗೆಳೆಯರಾಗುತ್ತಾರೆ. ಟಾಕನಾಕುಯ್ ಸಮುದಾಯದ ಸದಸ್ಯರಲ್ಲಿರುವ ನಕಾರಾತ್ಮಕ ಬಾವನೆಯನ್ನು ತೆಗೆದುಹಾಕುವಲ್ಲಿ ಈ ಕಾದಾಟದ ಹಬ್ಬ ಬಹಳ ಪರಿಣಾಮಕಾರಿಯಾದ ದಾರಿಯಾಗಿದೆ.
(ಮಾಹಿತಿ ಮತ್ತು ಚಿತ್ರ ಸೆಲೆ: qcostarica.com, dailymail.co.uk, fscclub.com, de.wikipedia.org, news18.com )
ಇತ್ತೀಚಿನ ಅನಿಸಿಕೆಗಳು