ಕವಿತೆ: ನಿನ್ನದೇ ದ್ಯಾನ

– ವೆಂಕಟೇಶ ಚಾಗಿ.

ಹಗಲು ಇರುಳು ನಿನ್ನದೇ ದ್ಯಾನ
ತವಕಿಸುತಿದೆ ನಿನಗಾಗಿ ಈ ಮನ
ಕನಸು ನನಸಲೂ ನಿನದೇ ಪಾತ್ರ
ನೀನಿರಲು ಈ ಹ್ರುದಯ ಪವಿತ್ರ

ಬದುಕಿನ ಬಂಡಿ ಹೇಗೆ ಇರಲಿ
ನಿನ್ನ ಸನಿಹದ ಸಮಯ ಬರಲಿ
ನೀನಿರಲು ನಗುವುದು ಜೀವನ
ನಿನ್ನ ನಗುವಿಗೆ ಸೋತಿತು ಮನ

ಒಲ್ಲೆ ಎನ್ನಲಾಗದು ಈ ನೋವಿಗೆ
ಬರಲಿ ಬಿಡು ಸಾವು ನಿನ್ನೊಂದಿಗೆ
ಪ್ರಶ್ನೆಗಳಿಗೆ ಉತ್ತರ ಏನೇ ಇರಲಿ
ಈ ಸಮಯ ನಿನಗಾಗಿ ಬದುಕಲಿ

ಬಾವನೆಯ ಸಾಗರದಿ ನಾ ಪಯಣಿಗ
ನಿನಗೆಂದೆ ನಗುತಿರುವ ಮದುಮಗ
ಸೋಲಿರಲಿ ಗೆಲುವಿರಲಿ ಹಾಗೆ
ನಿನ ನೆನಪು ಹಸಿರಿರಲಿ ಹೀಗೆ

ಹರಿವ ನದಿಯಲು ಕಲ್ಲು ಮುಳ್ಳುಂಟು
ಬದುಕ ಯಾತ್ರೆಯಲಿ ನೀನು ನಾನುಂಟು
ನಶಿಸದಿರಲಿ ಎಂದಿಗೂ ಈ ನಮ್ಮ ನಂಟು
ತಿಳಿದಿರಲಿ ನಿನಗೆಂದೂ ಇದು ಬ್ರಹ್ಮಗಂಟು

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: