ಮೆಂತೆ ಸೊಪ್ಪಿನ ಚಟ್ನಿ

– ಸವಿತಾ.

ಬೇಕಾಗುವ ಸಾಮಾನುಗಳು

ಮೆಂತೆ ಸೊಪ್ಪು – 1 ಕಟ್ಟು
ಟೊಮೆಟೊ – 1
ಈರುಳ್ಳಿ – 1
ಹಸಿ ಮೆಣಸಿನಕಾಯಿ – 6
ಬೆಳ್ಳುಳ್ಳಿ – 1 ಗಡ್ಡೆ
ಹುರಿಗಡಲೆ (ಪುಟಾಣಿ) – 2 ಚಮಚ
ಕೊತ್ತಂಬರಿ ಸೊಪ್ಪು – ಸ್ವಲ್ಪ
ಉಪ್ಪು – ರುಚಿಗೆ ತಕ್ಕಶ್ಟು
ಜೀರಿಗೆ – 1/2 ಚಮಚ
ಎಣ್ಣೆ – 4 ಚಮಚ
ಸಾಸಿವೆ – 1/2 ಚಮಚ
ಜೀರಿಗೆ – 1/4 ಚಮಚ

ಮಾಡುವ ಬಗೆ

ಬೆಳ್ಳುಳ್ಳಿ ಎಸಳು ಬಿಡಿಸಿ, ಒಂದು ಚಮಚ ಎಣ್ಣೆ ಹಾಕಿ ಹುರಿಯಿರಿ. ಕತ್ತರಿಸಿದ ಈರುಳ್ಳಿ, ಮೆಣಸಿನಕಾಯಿ ಮತ್ತು ಮೆಂತೆ ಸೊಪ್ಪು, ಕತ್ತರಿಸಿದ ಟೊಮೆಟೊ ಹಾಕಿ ಬಾಡಿಸಿ. ಮತ್ತೆ ಎರಡು ಚಮಚ ಎಣ್ಣೆ ಹಾಕಿ ಚೆನ್ನಾಗಿ ಹುರಿಯಿರಿ. ಹುರಿಗಡಲೆ, ಜೀರಿಗೆ ಹಾಕಿ ಹುರಿದು ಕೆಳಗಿಳಿಸಿ.

ಆರಿದ ನಂತರ ಕೊತ್ತಂಬರಿ ಸೊಪ್ಪು, ರುಚಿಗೆ ತಕ್ಕಶ್ಟು ಉಪ್ಪು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ಮಿಕ್ಸರ್ ನಲ್ಲಿ ರುಬ್ಬಿ ತೆಗೆಯಿರಿ. ಒಂದು ಚಮಚ ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ ಸೇರಿಸಿ ಒಗ್ಗರಣೆ ಹಾಕಿ ರುಬ್ಬಿದ ಮಿಶ್ರಣ ಸೇರಿಸಿ ಚೆನ್ನಾಗಿ ತಿರುಗಿಸಿ ಇಟ್ಟುಕೊಳ್ಳಿ. ಈಗ ಮೆಂತೆ ಸೊಪ್ಪಿನ ಚಟ್ನಿ ಸವಿಯಲು ಸಿದ್ದ. ಅನ್ನ, ಚಪಾತಿ, ದೋಸೆ ಇಲ್ಲವೇ ಇಡ್ಲಿ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: