ಮೋಳಿಗೆ ಮಾರಯ್ಯನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ.

ಮೋಳಿಗೆ ಮಾರಯ್ಯ, Molige Marayya

ಸದ್ಭಕ್ತಿಯೆ ದೈವವೆಂದು
ಅರ್ಚಿಸುವ ಠಾವಿನಲ್ಲಿ
ಮತ್ತತ್ವ ದುಶ್ಚರಿತ್ರ
ಪಗುಡಿ ಪರಿಹಾಸಕತನ
ಚೆಲ್ಲಾಟ ಗೆಲ್ಲ ಸೋಲತನ
ಇವೆಲ್ಲವ ಬಿಡಬೇಕು
ಇದೇ ಸದ್ಭಕ್ತಿ ಸದಾತ್ಮ ಯುಕ್ತಿ
ನಿಃಕಳಂಕ ಮಲ್ಲಿಕಾರ್ಜುನಾ.

ತನ್ನ ನಿತ್ಯ ಜೀವನದಲ್ಲಿ ಒಳ್ಳೆಯ ನಡೆನುಡಿಯನ್ನೇ ದೇವರೆಂದು ತಿಳಿದು ಆಚರಿಸುತ್ತಿರುವ ವ್ಯಕ್ತಿಯು ಯಾವ ಬಗೆಯ ಕೆಟ್ಟ ನಡೆನುಡಿಗಳನ್ನು ತೊರೆದು ಬಾಳಬೇಕು ಎಂಬುದನ್ನು ಈ ವಚನದಲ್ಲಿ ಹೇಳಲಾಗಿದೆ.

“ಒಳ್ಳೆಯ ನಡೆನುಡಿ” ಎಂದರೆ ವ್ಯಕ್ತಿಯು ಆಡುವ ಮಾತು ಮತ್ತು ಮಾಡುವ ದುಡಿಮೆಯು ಅವನ ಮತ್ತು ಅವನ ಕುಟುಂಬದ ಹಿತವನ್ನು ಕಾಪಾಡುವಂತೆಯೇ ಸಹಮಾನವರ ಮತ್ತು ಸಮಾಜದ ಹಿತವನ್ನು ಕಾಪಾಡುವುದು.

ಸದ್ಭಕ್ತಿ=ಒಳ್ಳೆಯ ನಡೆನುಡಿ; ದೈವ+ಎಂದು; ದೈವ=ದೇವರು; ಅರ್ಚಿಸು=ಪೂಜಿಸು; ಠಾವು+ಅಲ್ಲಿ; ಠಾವು=ಎಡೆ/ತಾಣ/ಜಾಗ;

ಸದ್ಭಕ್ತಿಯೆ ದೈವವೆಂದು ಅರ್ಚಿಸುವ ಠಾವಿನಲ್ಲಿ=ಒಳ್ಳೆಯ ನಡೆನುಡಿಯನ್ನೇ ದೇವರೆಂದು ತಿಳಿದು ಬಾಳುತ್ತಿರುವ ಎಡೆಯಲ್ಲಿ;

ಮತ್ತತ್ವ= “ನಾನೊಬ್ಬನೇ ಪ್ರಾಮಾಣಿಕ – ನನ್ನಿಂದಲೇ ಎಲ್ಲವೂ ನಡೆಯುತ್ತಿದೆ – ನನ್ನ ಮಾತನ್ನು ಎಲ್ಲರೂ ಪಾಲಿಸಬೇಕು” ಎಂಬ ಅಹಂಕಾರದ ನಡೆನುಡಿ;

ಚರಿತ್ರ=ನಡವಳಿಕೆ; ದುಶ್ಚರಿತ್ರ=ಕೆಟ್ಟ ನಡವಳಿಕೆ;

ಪಗುಡಿ=ಇತರರ ನಡೆನುಡಿಯನ್ನು ಕುರಿತು ಕೆಟ್ಟ ಮಾತನ್ನಾಡುವುದು/ಲೇವಡಿ ಮಾಡುವುದು/ಕುಚೋದ್ಯ ಮಾಡುವುದು;

ಪರಿಹಾಸ=ಗೇಲಿ/ಅಣಕ; ಪರಿಹಾಸಕತನ=ಇತರರ ನಡೆನುಡಿಯನ್ನು ಅಣಕ ಮಾಡಿ, ನಾಲ್ಕು ಜನರ ಮುಂದೆ ಅವರನ್ನು ಅಪಮಾನಗೊಳಿಸುವುದು;

ಚೆಲ್ಲಾಟ=ಇತರರ ನಡೆನುಡಿಯ ಬಗ್ಗೆ ಇಲ್ಲಸಲ್ಲದ ಕತೆ ಕಟ್ಟಿ, ಅವರ ಜೀವನದಲ್ಲಿ ಸಂಕಟವನ್ನು ಉಂಟುಮಾಡುವುದು;

ಗೆಲ್ಲ ಸೋಲತನ= ವ್ಯಕ್ತಿಯು ಯಾವುದೇ ಸಂಗತಿಯನ್ನು ಕುರಿತು ಇತರರೊಡನೆ ಚರ್‍ಚೆ ಮಾಡುವಾಗ, ತನ್ನ ಮಾತಿನ ಮೋಡಿಯಿಂದ ಮತ್ತು ಕುತಂತ್ರದಿಂದ ಎದುರಾಳಿಯನ್ನು ಸೋಲಿಸಿ, ತಾನು ಗೆಲ್ಲಲೇ ಬೇಕೆಂಬ ಹಟಮಾರಿತನ. ಇದಕ್ಕಾಗಿ ಯಾವುದೇ ಬಗೆಯ ಸುಳ್ಳನ್ನು ನುಡಿಯಲು ಹಿಂಜರಿಯದಿರುವುದು. ಇಂತಹ ವ್ಯಕ್ತಿಗೆ ತನ್ನ ಗೆಲುವು ದೊಡ್ಡದಾಗುತ್ತದೆಯೇ ಹೊರತು, ನಿಜದ ಸಂಗತಿಯು ಬೇಕಾಗುವುದಿಲ್ಲ;

ಮತ್ತತ್ವ-ದುಶ್ಚರಿತ್ರ-ಪಗುಡಿ-ಪರಿಹಾಸಕತನ-ಚೆಲ್ಲಾಟ-ಗೆಲ್ಲ ಸೋಲತನ ಇವೆಲ್ಲವ ಬಿಡಬೇಕು=ಸಹಮಾನವರನ್ನು ಕಡೆಗಣಿಸುವ/ಅಪಮಾನಿಸುವ/ಸಂಕಟಕ್ಕೆ ಗುರಿಮಾಡುವ ಈ ಬಗೆಯ ಕೆಟ್ಟ ನಡೆನುಡಿಗಳನ್ನು ಬಿಡಬೇಕು;

ಇದೇ ಸದ್ಭಕ್ತಿ=ವ್ಯಕ್ತಿಯು ಕೆಟ್ಟ ನಡೆನುಡಿಗಳನ್ನು ಬಿಟ್ಟು ಬಾಳುವುದೇ ದೇವರಿಗೆ ಮಾಡುವ ಉತ್ತಮವಾದ ಪೂಜೆ;

ಸತ್+ಆತ್ಮ; ಸತ್=ಒಳ್ಳೆಯ; ಆತ್ಮ=ಮನಸ್ಸು; ಸದಾತ್ಮ=ಒಳ್ಳೆಯ ಮನಸ್ಸು; ಯುಕ್ತಿ=ಆಚರಣೆ;

ಸದಾತ್ಮ ಯುಕ್ತಿ=ಒಳ್ಳೆಯ ಮನಸ್ಸಿನಿಂದ ಮಾಡುವ ಆಚರಣೆ;

ನಿಃಕಳಂಕ=ಯಾವುದೇ ಬಗೆಯ ಕಳಂಕವಿಲ್ಲದವನು; ಮಲ್ಲಿಕಾರ್ಜುನ=ಶಿವ;

ನಿಃಕಳಂಕ ಮಲ್ಲಿಕಾರ್ಜುನ=ಮೋಳಿಗೆ ಮಾರಯ್ಯನವರ ವಚನಗಳ ಅಂಕಿತನಾಮ;

ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರು ದೇವರಾದ ಶಿವನನ್ನು “ಕಲ್ಲು/ಮಣ್ಣು/ಮರ/ಲೋಹದ ವಿಗ್ರಹರೂಪದಲ್ಲಿ” ಕಾಣುತ್ತಿರಲಿಲ್ಲ. ತಮ್ಮ ನಿತ್ಯ ಜೀವನದಲ್ಲಿ ಕೆಟ್ಟ ನಡೆನುಡಿಯನ್ನು ಬಿಟ್ಟು, ಒಳ್ಳೆಯ ನಡೆನುಡಿಯಿಂದ ಬಾಳುವುದೇ ದೇವರ ಪೂಜೆಯೆಂಬ ನಿಲುವನ್ನು ತಳೆದು, ಅದರಂತೆಯೇ ತಮ್ಮ ಜೀವನವನ್ನು ರೂಪಿಸಿಕೊಂಡಿದ್ದರು. ಆದ್ದರಿಂದಲೇ ಮನೆಯಲ್ಲಿ ಇಲ್ಲವೇ ದೇಗುಲದಲ್ಲಿ ದೇವರನ್ನು ಬಹುಬಗೆಯಲ್ಲಿ ಅಲಂಕಾರ ಮಾಡಿ ಪೂಜಿಸುವ, ಮೆರೆಸುವ, ದೇವರ ಹೆಸರಿನಲ್ಲಿ ಯಾಗವನ್ನು ಮಾಡುವ ಮತ್ತು ಹತ್ತಾರು ಬಗೆಯ ವ್ರತಗಳನ್ನು ಆಚರಿಸುವ ಕ್ರಿಯೆಗಳನ್ನು ನಿರಾಕರಿಸಿದ್ದರು.

( ಚಿತ್ರ ಸೆಲೆ: lingayatreligion.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: