ಮಕ್ಕಳ ಕತೆ: ಕಾಡಿನ ಪಂದ್ಯಾಟ

– ವೆಂಕಟೇಶ ಚಾಗಿ.

ವಿಂದ್ಯ ಪರ‍್ವತಗಳ ಸಾಲಿನಲ್ಲಿ ಒಂದು ದೊಡ್ಡದಾದ ಕಾಡು ಇತ್ತು. ಆ ಕಾಡಿನಲ್ಲಿ ಸಾವಿರಾರು ಬಗೆಬಗೆಯ ಸಸ್ಯಗಳು ಹಾಗೂ ವಿವಿದತೆಯ ವನ್ಯ ಸಂಪತ್ತು ಇತ್ತು. ಅಲ್ಲಿ ಅನೇಕ ಪ್ರಾಣಿಗಳು ಸುಕ ಸಂತೋಶದಿಂದ ವಾಸವಾಗಿದ್ದವು .

ಕಾಡಿನ ರಾಜನಾದ ಸಿಂಹ ಕಾಡಿನಲ್ಲಿ ಪ್ರತಿ ವರ‍್ಶ ಪಂದ್ಯಾಟವನ್ನು ಏರ‍್ಪಡಿಸುತ್ತಿದ್ದನು. ಕಾಡಿನ ಪ್ರಾಣಿಗಳಲ್ಲದೆ ಬೇರೆ ಬೇರೆ ದೂರದ ಕಾಡುಗಳಿಂದ ಸಹ ಪ್ರಾಣಿಗಳು ಹಾಗೂ ಪಕ್ಶಿಗಳು ಪಂದ್ಯಾಟದಲ್ಲಿ ಬಾಗವಹಿಸುತ್ತಿದ್ದವು. ನಾಲ್ಕು ದಿಕ್ಕಿನಲ್ಲೂ ಕಾಡಿನ ಪಂದ್ಯಾಟ ಹೆಸರುವಾಸಿಯಾಗಿತ್ತು. ಕಾಡಿನ ಪಕ್ಕದಲ್ಲಿದ್ದ ಅಮರಾಪುರ ಎಂಬ ಗ್ರಾಮದ ಜನರಿಗೆ ಕಾಡಿನ ಪಂದ್ಯಾಟವೆಂದರೆ ತುಂಬಾ ಸಂಬ್ರಮ. ಕಾಡಿನ ಪ್ರಾಣಿಗಳಿಗೆ ತೊಂದರೆಯಾಗದಂತೆ ಕಾಡಿನ ಪಂದ್ಯಾಟವನ್ನು ನೋಡಲು ಕಾಡಿಗೆ ಬರುತ್ತಿದ್ದರು. ದೂರದಲ್ಲಿ ನಿಂತು ಕಾಡಿನ ಪಂದ್ಯಾಟವನ್ನು ನೋಡುತ್ತಾ ಕುಶಿಪಡುತ್ತಿದ್ದರು.

ಪ್ರತಿವರ‍್ಶದಂತೆ ಈ ವರ‍್ಶ ಕೂಡ ಕಾಡಿನಲ್ಲಿ ಕಾಡಿನ ಪಂದ್ಯಾಟ ಪ್ರಾರಂಬವಾಯಿತು. ಚೈತ್ರ ಮಾಸದ ಪ್ರಾರಂಬದ ದಿನಗಳಂದು ಪ್ರಕ್ರುತಿಯ ಸೊಬಗಿನೊಂದಿಗೆ ಹಸಿರು ಚಿಗುರುಗಳ ಹೊಸತನದಲ್ಲಿ ಪ್ರಾಣಿಗಳು ಪಂದ್ಯಾಟವನ್ನು ಪ್ರಾರಂಬಿಸಿದವು. ಅಮರಾಪುರಕ್ಕೆ ರಜೆಗೆಂದು ಆಗಮಿಸಿದ್ದ ಸುನಿಲ ಮತ್ತು ರಮೇಶ ಪಂದ್ಯಾಟವನ್ನು ನೋಡಲು ಕಾಡಿಗೆ ಬಂದರು. ಇವರಿಬ್ಬರು ತಮ್ಮ ಶಾಲೆಯಲ್ಲಿ ನಡೆಯುತ್ತಿದ್ದ ಪಂದ್ಯಾಟದಂತೆ ಕಾಡಿನಲ್ಲೂ ಪಂದ್ಯಾಟ ನಡೆಯಬಹುದು ಎಂದುಕೊಂಡಿದ್ದರು.

ಪಂದ್ಯಾಟ ಪ್ರಾರಂಬವಾಯಿತು. ಪ್ರತಿ ವರ‍್ಗದ ಪ್ರಾಣಿಗಳಿಗೂ ಅವರವರ ಸಾಮರ‍್ತ್ಯಕ್ಕೆ ಅನುಗುಣವಾಗಿ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಗಳಿಗೆ ಮರದಿಂದ ಮರಕ್ಕೆ ಜಿಗಿಯುವ ಆಟ, ಜಿಂಕೆಗಳಿಗೆ ಓಟ, ಹಕ್ಕಿಗಳಿಗೆ ವೇಗವಾಗಿ ಹಾರುವ ಆಟ, ಮೀನುಗಳಿಗೆ ವೇಗವಾಗಿ ಈಜುವ ಆಟ, ಹಾವುಗಳಿಗೆ ಸರಸರ ಓಡುವ ಆಟ, ಕಾಡುಕೋಣಗಳಿಗೆ ಕುಸ್ತಿ ಆಟ, ಆನೆಗಳಿಗೆ ಬಂಡೆ ಕಲ್ಲುಗಳನ್ನು ದಮ್ಮಿಗಳನ್ನು ಎತ್ತುವ ಸ್ಪರ‍್ದೆ ನಡೆಯಿತು. ಕೋಗಿಲೆಗಳಿಗೆ ಹಾಡು ಹೇಳುವ ಸ್ಪರ‍್ದೆ ನಡೆಯಿತು. ಎಲ್ಲಾ ಪ್ರಾಣಿಗಳಿಗೂ ಒಂದೊಂದು ರೀತಿಯ ಸ್ಪರ‍್ದೆಯನ್ನು ಆಯೋಜಿಸಲಾಗಿತ್ತು. ಕಾಡಿನ ಪಂದ್ಯಾಟವನ್ನು ಕಂಡು ಸುನಿಲ ಹಾಗೂ ರಮೇಶ ತುಂಬಾ ಸಂತೋಶಗೊಂಡರು.

ಕಾಡಿನ ಪಂದ್ಯಾಟ ಪಂದ್ಯಾಟದಲ್ಲಿ ಗೆದ್ದ ಪ್ರಾಣಿಗಳಿಗೆ ಅವುಗಳಿಗೆ ಇಶ್ಟವಾದ ಆಹಾರ ಪದಾರ‍್ತಗಳನ್ನು ನೀಡಲಾಯಿತು. ಗೆದ್ದ ಪ್ರಾಣಿಗಳು ತಮ್ಮ ಬಂದು-ಬಳಗ ಮಿತ್ರರೊಂದಿಗೆ ಹಂಚಿ ತಿಂದು ಸಂಬ್ರಮಿಸಿದವು . ಎಲ್ಲಾ ಪ್ರಾಣಿಗಳ ಸಂಬ್ರಮ ಕಂಡು ಅಮರಾಪುರದ ಜನರಿಗೆ ಸಂತೋಶವಾಯಿತು. ಪಂದ್ಯಾಟದ ನಂತರ ಸೋಲು ಗೆಲುವನ್ನು ಲೆಕ್ಕಿಸದೆ ಎಲ್ಲಾ ಸೇರಿ ಸಂಬ್ರಮಿಸುವುದು ಜನರ ಮನಸೆಳೆಯಿತು. ಅಮರಾಪುರದ ಜನರು ಸುಕ ಸಂತೋಶ ಸಹಕಾರದಿಂದ ಜೀವನ ನಡೆಸಲು ಕಾರಣವೇ ಈ ಪಂದ್ಯಾವಳಿಯ ಪ್ರಬಾವವಾಗಿತ್ತು. ಪ್ರತಿ ವರ‍್ಶದ ಈ ಪಂದ್ಯಾಟ ಜನರಿಗೆ ಒಂದು ಪಾಟವಾಗಿತ್ತು. ಸುನಿಲ ಹಾಗೂ ರಮೇಶ ಈ ಪಂದ್ಯಾಟದಿಂದ ಹೊಸ ಪಾಟ ಕಲಿತರು. ಕಾಡಿನ ಪಂದ್ಯಾಟದ ಬಗ್ಗೆ ತಮ್ಮ ಸ್ನೇಹಿತರಿಗೆ ಸಂತೋಶದಿಂದ ವಿವರವಾಗಿ ತಿಳಿಸಿದರು.

(ಚಿತ್ರ ಸೆಲೆ: Forest Animals Vectors by Vecteezy)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: