ನಾ ನೋಡಿದ ಸಿನೆಮಾ: ಡೇರ್ ಡೆವಿಲ್ ಮುಸ್ತಾಪಾ
ಸಿನೆಮಾ ಹೊಂದಿಕೆ (Film Adaption) ಎನ್ನುವುದು ಕನ್ನಡ ಚಿತ್ರರಂಗಕ್ಕೆ ಹೊಸತೇನು ಅಲ್ಲ. ಈ ಹಿಂದೆ ಹಲವಾರು ಕತೆ/ಕಾದಂಬರಿಗಳು ಕನ್ನಡದಲ್ಲಿ ಸಿನೆಮಾ ಆಗಿ ಮೂಡಿಬಂದಿವೆ. ಆದರೆ 90 ರ ದಶಕದ ನಂತರ ಈ ಅಲೆ ಕಡಿಮೆಯಾಯಿತು. ಈಗ ಮತ್ತೊಮ್ಮೆ ಕತೆ/ಕಾದಂಬರಿಗಳನ್ನು ಸಿನೆಮಾ ಮಾಡಿ ಮಂದಿಯ ಮುಂದಿಡುವ ಅಲೆ ಮೊದಲಾದಂತೆ ಕಾಣುತ್ತದೆ. 2016 ರಲ್ಲಿ ತೆರೆಕಂಡ ಕಿರಗೂರಿನ ಗಯ್ಯಾಳಿಗಳು (ಪೂರ‍್ಣಚಂದ್ರ ತೇಜಸ್ವಿಯವರ ಕತಾಸಂಕಲನ) ಚಿತ್ರ ಇದಕ್ಕೆ ಇಂಬು ನೀಡುತ್ತದೆ. ಇವು ನಿಜ ಗಟನೆಯನ್ನು ಆದರಿಸಿದ ಇಲ್ಲವೆ ಕಲ್ಪಿಸಿಕೊಂಡು ಬರೆದ ಬರಹಗಳೂ ಸಹ ಆಗಿರಬಹುದು. ಇದರೊಟ್ಟಿಗೆ ಸ್ವಲ್ಪ ಕಮರ‍್ಶಿಯಲ್ ಅಂಶಗಳನ್ನೂ ಸೇರಿಸಿ ಸಿನೆಮಾ ಮಾಡಲಾಗುತ್ತದೆ.
ಈ ರೀತಿಯ ಸಿನೆಮಾಗಳನ್ನು ಮಾಡಬೇಕೆಂಬ ಹಂಬಲ ಹಲವರಲ್ಲಿದ್ದರೂ, ಅದನ್ನು ತೆರೆಯಮೇಲೆ ಅಚ್ಚುಕಟ್ಟಾಗಿ ತಂದು, ಜನರಿಗೆ ಉಣಬಡಿಸುವುದು ಎಲ್ಲರಿಂದಲೂ ಆಗದು. ಹಾಗೆ ಇದಕ್ಕೆ ಹಣ ಹೂಡುವವರೂ ಸಹ ಕಡಿಮೆಯೇ. ಇದೆಲ್ಲವನ್ನು ತಿಳಿದು, ಶ್ರಮವಹಿಸಿ ಮಂದಿಯೆದುರು ಸಿನೆಮಾ ತರುವುದು ದೊಡ್ಡ ಸಾದನೆಯೇ ಸರಿ. ಈ ಸಾಲಿಗೆ ಈ ವರ‍್ಶ ಮತ್ತೊಂದು ಸಿನೆಮಾ ಸೇರಿದೆ. ಅದುವೇ ಪೂರ‍್ಣಚಂದ್ರ ತೇಜಸ್ವಿಯವರು ಬರೆದಿರುವ ಕತಾಸಂಕಲನ ‘ಅಬಚೂರಿನ ಪೋಸ್ಟ್ ಆಪೀಸು’ ನಲ್ಲಿ ಬರುವ ಒಂದು ಅದ್ಯಾಯ ‘’ಡೇರ್ ಡೆವಿಲ್ ಮುಸ್ತಾಪಾ”. ಆಡು ಮುಟ್ಟದ ಸೊಪ್ಪಿಲ್ಲ, ತೇಜಸ್ವಿಯವರು ಬರೆಯದಿರುವ ವಿಶಯಗಳಿಲ್ಲ ಎಂಬ ಮಾತಿದೆ. ಸುತ್ತಣ, ಸಮಕಾಲೀನ ಹಾಗೂ ಇನ್ನೂ ಹಲವಾರು ವಿಶಯಗಳಲ್ಲಿ ಪೂಚಂತೇ ಅವರಿಗೆ ದೊಡ್ಡ ಹಿಂಬಾಲಕರ ಬಳಗವೇ ಇದೆ. ಹೀಗೆ ಯುವಕರ ನೆಚ್ಚಿನ ಪೂಚಂತೇಯವರ ಡೇರ್ ಡೆವಿಲ್ ಮುಸ್ತಾಪಾ ಮನೆಮಂದಿಯನ್ನೆಲ್ಲ ರಂಜಿಸಲು ತೆರೆಯ ಮೇಲೆ ಬಂದಿದ್ದಾನೆ.
ಇಂಗ್ಲೀಶ್ ನಲ್ಲಿ ಡೇರ್ ಡೆವಿಲ್ ಎಂದರೆ ಯಾವುದಕ್ಕೂ ಹೆದರದವನು ಎಂದರ‍್ತ. ಒಂದೇ ಕೋಮಿಗೆ ಸೇರಿದ ವಿದ್ಯಾರ‍್ತಿಗಳಿದ್ದ ಕಾಲೇಜಿಗೆ ಸೇರುವ ಮತ್ತೊಂದು ಕೋಮಿನ ಹುಡುಗ. ಆತನನ್ನು ತಮ್ಮಲ್ಲೊಬ್ಬ ಎಂದು ಒಪ್ಪಿಕೊಳ್ಳಲಾಗದ ಸಹಪಾಟಿಗಳು. ಇವರ ಕಾಲೇಜಿನ ಬದುಕಿನಲ್ಲಿ ನಡೆವ ಹಾಸ್ಯ ತುಂಬಿದ ಕತೆಯೇ ಡೇರ್ ಡೆವಿಲ್ ಮುಸ್ತಾಪಾ.
ಡೇರ್ ಡೆವಿಲ್ ಮುಸ್ತಾಪಾನಾಗಿ ಶಿಶಿರ್ ಬೈಕಾಡಿ ಹಾಗೂ ರಾಮಾನುಜ ಅಯ್ಯಂಗಾರಿಯಾಗಿ ಆದಿತ್ಯ ಆಶ್ರಿ ನೋಡುಗರ ಮನಸ್ಸನ್ನು ಸೆಳೆಯುತ್ತಾರೆ. ಎಂದಿನಂತೆ ಎನ್ ಎಸ್ ನಾಗಬೂಶಣ ಅವರು ಚಿತ್ರದುದ್ದಕ್ಕೂ ನಗಿಸುತ್ತಾರೆ. ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದಿರುವ ವಿಜಯ್ ಶೋಬರಾಜ್ ಪವೂರ‍್ ಅವರ ಪಾತ್ರ ಚೆನ್ನಾಗಿದೆ. ಅಯ್ಯಂಗಾರಿ ಪಟಾಲಂ ನ ಹುಡುಗರಾಗಿ ಶ್ರೀವತ್ಸ, ಆಶಿತ್, ಸುಪ್ರೀತ್ ಬಾರದ್ವಾಜ್ ಮತ್ತು ಅಬಯ್ ನಟಿಸಿದ್ದಾರೆ. ಸುಪ್ರೀತ್ ಬಾರದ್ವಾಜ್ ಕಾಮಿಡಿ ಟೈಮಿಂಗ್ ಚೆನ್ನಾಗಿದೆ. ರಮಾಮಣಿಯಾಗಿ ಪ್ರೇರಣಾ ಮತ್ತು ಒಲಿವಿಯ ಶೋಬಾ ಕುಮಾರಿ (OSK) ಯಾಗಿ ಚೈತ್ರಾ ಶೆಟ್ಟಿ ಗಮನ ಸೆಳೆಯುತ್ತಾರೆ. ಇನ್ನುಳಿದಂತೆ ಮಂಡ್ಯ ರಮೇಶ್, ಪೂರ‍್ಣಚಂದ್ರ ಮೈಸೂರು, ಹರಿಣಿ ಶ್ರೀಕಾಂತ್, ಸುಂದರ್ ವೀಣಾ ಹಾಗೂ ಮೈಸೂರು ಆನಂದ್ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಬಾಯಿಸಿದ್ದಾರೆ.
ಇನ್ನು ತೆರೆಯ ಹಿಂದಿನ ತಂಡದ ಬಗ್ಗೆ ಹೇಳೋದಾದ್ರೆ, ಶಶಾಂಕ್ ಸೋಗಲ್ ಅವರ ನಿರ‍್ದೇಶನ, ನವನೀತ್ ಶಾಮ್ ಅವರ ಸಂಗೀತವಿದೆ. ಇಡೀ ಚಿತ್ರವನ್ನೂ ಎಲ್ಲೂ ನೀರಸವಾಗದಂತೆ ಕೊಂಡೊಯ್ದಿದ್ದಾರೆ ನಿರ‍್ದೇಶಕ ಶಶಾಂಕ್ ಸೋಗಲ್. ರಾಹುಲ್ ರಾಯ್ ಅವರ ಸಿನೆಮಾಟೋಗ್ರಪಿ, ಶಶಾಂಕ್ ಸೋಗಲ್, ರಾಗವೇಂದ್ರ ಮಾಯಕೊಂಡ, ಅನಂತ ಶಾಂಡ್ರೇಯ ಅವರ ಚಿತ್ರಕತೆ ಹಾಗೂ ಶರತ್ ವಿ ವಶಿಶ್ಟ, ಹರೀಶ್ ಕೊಮ್ಮೆ, ರಾಹುಲ್ ರಾಯ್ ಅವರ ಎಡಿಟಿಂಗ್ ಈ ಚಿತ್ರದ ಜೀವಾಳ. ತೆರೆಯ ಮೇಲೆ ಒಂದು ಸದಬಿರುಚಿಯ ಚಿತ್ರ ಕಟ್ಟುಕೊಡುವಲ್ಲಿ ತೆರೆಯ ಹಿಂದಿನ ನಾಯಕರ ಕೆಲಸ ಎದ್ದು ಕಾಣುತ್ತದೆ. ಡಾಲಿ ಪಿಲಂಸ್ ಈ ಚಿತ್ರದ ಬೆನ್ನೆಲುಬಾಗಿ ನಿಂತಿದ್ದು, ಪೂಚಂತೇ ಅವರ ಅಬಿಮಾನಿಗಳೇ ನಿರ‍್ಮಿಸಿರುವ ಚಿತ್ರ ಇದು. ಯುವಕರಲ್ಲಿ ಪುಸ್ತಕದ ಗೀಳು ಬೆಳೆಸಿದವರಲ್ಲಿ ಪೂಚಂತೇ ಅವರು ಮೊದಲ ಸಾಲಿನಲ್ಲಿ ನಿಲ್ಲುತಾರೆ. ಇಂದು ಅದೇ ಓದುಗರು ಒಂದು ಚಿತ್ರವನ್ನೇ ನಿರ‍್ಮಿಸುತ್ತಾರೆ ಎಂದರೆ, ಅದು ಪೂಚಂತೇ ಅವರಿಗೆ ಸಂದ ಗೌರವ ಹಾಗೂ ಅವರ ಬರಹಕ್ಕಿರುವ ಶಕ್ತಿ. ಒಬ್ಬ ಕನ್ನಡ ಬರಹಗಾರರಿಗೆ ಈ ಮಟ್ಟದ ಅಬಿಮಾನಿಗಳಿರುವುದು ಕನ್ನಡಿಗರೆಲ್ಲರ ಹೆಮ್ಮೆಯೇ ಸರಿ. ನಾವ್ ಬಿಡಿ ಡೇರ್ ಡೇವಿಲ್ಗಳು…
(ಚಿತ್ರ ಸೆಲೆ: instagram.com )
ತುಂಬಾ ಚೆಂದದ ಬರಹ. ಅಪ್ಪಟ ಕನ್ನಡದ ಒರೆಗಳ ಬಳಕೆ ಜಾಸ್ತಿ ಮೆಚ್ಚುಗೆ ಆಯ್ತು 🙏
ಅತ್ಯುತ್ತಮವಾಗಿದೆ 💞