ಕವಿತೆ: ಬಾಲ್ಯದ ಸವಿ ಗಳಿಗೆ
– ಮಹೇಶ ಸಿ. ಸಿ.
ಮರಳಿ ಮರಳಿ ನೆನಪಾಗುವುದೆನಗೆ
ಬಾಲ್ಯದ ಸವಿ ಗಳಿಗೆ
ಬೇಕು ಎಂದರೂ ಮರಳಿ
ಬಾರದ ಅಮ್ರುತದ ಆ ಗಳಿಗೆ
ಅಕ್ಕಪಕ್ಕದ ನೆರೆಹೊರೆಯವರು
ಪ್ರೀತಿಯಿಂದಿದ್ದ ಕಾಲ
ಯಾರಿಹರೆಂದು ತಿಳಿಯುವುದಿಲ್ಲ
ಈಗ ಕೆಟ್ಟು ಹೋಗಿದೆ ಕಾಲ
ಬೇಸಿಗೆ ರಜೆಯಲಿ ಅಜ್ಜಿಯ ಮನೆಗೆ
ಹೋಗುವುದು ಕಾಯಮ್ಮು
ಹೋಂವರ‍್ಕ್ ಅಂತೆ, ಕ್ಯಾಂಪ್ ಗಳಂತೆ
ಸಿಗದಾಗಿದೆ ಪ್ರೀಡಮ್ಮು
ಮೈ-ಕೈ ಎಲ್ಲಾ ಮಣ್ಣಿನ ಕೊಳಕು
ಹಿರಿಯರು ಬೇಸರವಾಗುತ್ತಿರಲಿಲ್ಲ
ಬಟ್ಟೆ ಒಗೆಯಲು ಮಶೀನು ಬಂದಿದೆ
ಈಗ ಕೊಳೆಯಾಗಲು ಬಿಡುತಿಲ್ಲ
ಕಚ್ಚಿ ತಿನ್ನುವ ಎಂಜಲ ಹಣ್ಣು
ಬೇದ ಬಾವ ತಿಳಿದಿರಲಿಲ್ಲ
ನೂರೆಂಟು ಜಾತಿ, ದರ‍್ಮದ ಒಳಗೆ
ಸಿಲುಕಿ ನರಳುತಿರುವೆವು ಎಲ್ಲಾ
ಬೆಳೆದಂತೆ ನಾವು ಮರೆತೆವು
ಬಾಲ್ಯದ ಆಟ ಪಾಟವನ್ನು
ಅಂಕಗಳಿಗಾಗಿ ಪುಸ್ತಕ ಹಿಡಿದೆವು
ಮರೆತೆವು ಸಾಮಾನ್ಯ ಜ್ನಾನವನ್ನು
ಬುಗುರಿಯ ಆಟ, ಚೆಂಡಿನ ಆಟ
ಕುಶಿಯನು ಕೊಡುತ್ತಿತ್ತು
ಮನೆಯನು ಬಿಟ್ಟು ಹೊರಬಾರದ
ಮಕ್ಕಳ ಮೊಬೈಲು ಸೆಳೆದಿತ್ತು
(ಚಿತ್ರ ಸೆಲೆ: pixabay.com)
ಇತ್ತೀಚಿನ ಅನಿಸಿಕೆಗಳು