ಗಾವುದಿ ಮಾಚಯ್ಯನ ವಚನದ ಓದು

– ಸಿ.ಪಿ.ನಾಗರಾಜ.

ವಚನಗಳು, Vachanasಹೆಸರು: ಗಾವುದಿ ಮಾಚಯ್ಯ
ಕಾಲ: ಕ್ರಿ.ಶ. 12 ನೆಯ ಶತಮಾನ
ದೊರೆತಿರುವ ವಚನಗಳು: 11
ವಚನಗಳ ಅಂಕಿತನಾಮ: ತ್ರಿಪುರಾಂತಕ ಲಿಂಗ

ತನ್ನ ದೇಹ
ತನಗೆ ಹೊರೆಯಾದ ಮತ್ತೆ
ತಾ ಹೊರುವುದೇನು
ತಾ ಹೇಳುವ ಅರಿವು
ತನಗೆ ಮರವೆಯಾದ ಮತ್ತೆ
ತಾನರಿವುದೇನು
ಇದು ಕಾರಣ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ದಿಟವೆನ್ನಿರಣ್ಣಾ.

ಮಯ್ ಬಗ್ಗಿಸಿ ದುಡಿಯದೆ ಸೋಂಬೇರಿಯಾಗಿರುವ ಮತ್ತು ಪಡೆದ ಅರಿವನ್ನು ಮನನ ಮಾಡಿಕೊಳ್ಳದೆ ಎಚ್ಚರಗೇಡಿಯಾಗಿರುವ ವ್ಯಕ್ತಿಯು ಜೀವನದಲ್ಲಿ ಏನನ್ನೂ ಪಡೆಯಲಾರನು ಎಂಬ ಸಂಗತಿಯನ್ನು ಈ ವಚನದಲ್ಲಿ ಹೇಳಲಾಗಿದೆ.

ತನ್ನ=ವ್ಯಕ್ತಿಯ; ದೇಹ=ಶರೀರ/ಮಯ್; ಹೊರೆ+ಆದ; ಹೊರೆ=ತೂಕ/ಬಾರ; ಮತ್ತೆ=ಆಮೇಲೆ/ಬಳಿಕ; ತಾ=ತಾನು; ಹೊರುವುದು+ಏನು; ಹೊರುವುದು=ಹೊಣೆಗಾರಿಕೆಯಿಂದ ಕೆಲಸವನ್ನು ಮಾಡುವುದು;

ತನ್ನ ದೇಹ ತನಗೆ ಹೊರೆಯಾದ ಮತ್ತೆ ತಾ ಹೊರುವುದೇನು=ಈ ನುಡಿಗಳು ಒಂದು ರೂಪಕವಾಗಿ ಬಳಕೆಯಾಗಿವೆ. ವ್ಯಕ್ತಿಗೆ ತನ್ನ ಮಯ್ಯೇ ತನಗೆ ಬಾರವಾದರೆ ಅಂದರೆ ಯಾವೊಂದು ಕೆಲಸವನ್ನು ಮಾಡಲು ತೊಡಗದೆ ಜಡವಾದರೆ, ಅಂತಹ ವ್ಯಕ್ತಿಯು ಯಾವೊಂದು ಜವಾಬ್ದಾರಿಯನ್ನು ಹೊರಲಾರ. ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹೊರೆಯಾಗುತ್ತಾನೆ;

ಅರಿವು=“ಜೀವನದಲ್ಲಿ ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು; ಯಾವುದು ವಾಸ್ತವ-ಯಾವುದು ಕಲ್ಪಿತ; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು” ಎಂಬ ಎಚ್ಚರ ಮತ್ತು ತನಗೆ , ತನ್ನ ಕುಟುಂಬಕ್ಕೆ ಒಲವು ನಲಿವು ನೆಮ್ಮದಿಯನ್ನು ಬಯಸುವಂತೆಯೇ ಸಹಮಾನವರ ಮತ್ತು ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬ ತಿಳುವಳಿಕೆ;

ತಾ ಹೇಳುವ=ವ್ಯಕ್ತಿಯು ಇತರಿಗೆ ಹೇಳುವಂತಹ ಅರಿವಿನ ನುಡಿಗಳು;

ಮರವೆ+ಆದ; ಮರವೆ=ಮರವು/ನೆನಪಿಲ್ಲದಿರುವುದು; ತಾನ್+ಅರಿವುದು+ಏನು; ಅರಿವುದು=ತಿಳಿಯುವುದು/ತಿಳುವಳಿಕೆಯನ್ನು ಪಡೆಯುವುದು; ಅರಿವುದೇನು=ತಿಳುವಳಿಕೆಯನ್ನು ಪಡೆದಿದ್ದರೂ ಅದರಿಂದ ಉಂಟಾದ ಪ್ರಯೋಜವೇನು;

ತಾ ಹೇಳುವ ಅರಿವು ತನಗೆ ಮರವೆಯಾದ ಮತ್ತೆ ತಾನರಿವುದೇನು=ವ್ಯಕ್ತಿಯು ತಾನು ಇತರರಿಗೆ ಹೇಳುವಂತಹ ತಿಳುವಳಿಕೆಯ ನುಡಿಗಳನ್ನು ತಾನೇ ನೆನಪಿಗೆ ತಂದುಕೊಳ್ಳದೆ ಅಂದರೆ ತನ್ನ ಜೀವನದಲ್ಲಿ ಅಳವಡಿಸಿಕೊಂಡು ಬಾಳದಿದ್ದರೆ, ಅವನು ಪಡೆದ ಅರಿವಿನಿಂದ ಉಂಟಾದ ಪ್ರಯೋಜನವೇನು;

ಇದು ಕಾರಣ=ವ್ಯಕ್ತಿಯು ತನ್ನ ದೇಹವನ್ನು ದಂಡಿಸಿ ಒಳ್ಳೆಯ ಕಾಯಕವನ್ನು ಮಾಡಬೇಕು ಮತ್ತು ತಾನು ಪಡೆದ ಅರಿವಿನಿಂದ ಒಳ್ಳೆಯ ನಡೆನುಡಿ ಯಾವುದೆಂಬುದನ್ನು ತಿಳಿದುಕೊಂಡು ಬಾಳಬೇಕೆಂಬ ಎಚ್ಚರವನ್ನು ಹೊಂದಿರುವುದು;

ತ್ರಿಪುರಾಂತಕ ಲಿಂಗ=ದೇವರಾದ ಶಿವನ ಮತ್ತೊಂದು ಹೆಸರು/ಗಾವುದಿ ಮಾಚಯ್ಯನವರ ವಚನಗಳ ಅಂಕಿತನಾಮ; ಹೇಳಿದುದ=ಹೇಳುತ್ತಿರುವುದನ್ನು; ದಿಟ+ಎನ್ನಿರಿ+ಅಣ್ಣಾ; ದಿಟ=ನಿಜ/ಸತ್ಯ/ವಾಸ್ತವ; ಅಣ್ಣ=ಗಂಡಸರನ್ನು ಒಲವು ನಲಿವಿನಿಂದ ಮಾತನಾಡಿಸುವಾಗ ಬಳಸುವ ಪದ;

ದಿಟವೆನ್ನಿರಣ್ಣಾ=ನಿಜವೆಂದು ಹೇಳಿರಿ. ಅಂದರೆ ವ್ಯಕ್ತಿಯ ಜೀವನದಲ್ಲಿ ಪರಿಶ್ರಮದ ದುಡಿಮೆ ಮತ್ತು ಎಚ್ಚರದಿಂದ ಬಾಳುವ ಅರಿವು ದೊಡ್ಡದು ಎಂಬ ವಾಸ್ತವವನ್ನು ಮನಗಾಣಿರಿ;

(ಚಿತ್ರ ಸೆಲೆ: sugamakannada.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: