ಗಜ್ಜರಿ (ಕ್ಯಾರೆಟ್) ವಡೆ

– ಸವಿತಾ.

ಬೇಕಾಗುವ ಸಾಮಾನುಗಳು

ಗಜ್ಜರಿ (ಕ್ಯಾರೆಟ್) – 2
ಕಡಲೇ ಬೀಜ (ಶೇಂಗಾ) – 2 ಚಮಚ
ಹುರಿಗಡಲೆ (ಪುಟಾಣಿ) – 1 ಚಮಚ
ಉದ್ದಿನ ಬೇಳೆ – 1 ಚಮಚ
ಕಡಲೇ ಬೇಳೆ – 1 ಚಮಚ
ಕೊತ್ತಂಬರಿ ಕಾಳು – 1/2 ಚಮಚ
ಈರುಳ್ಳಿ – 1
ಹಸಿ ಮೆಣಸಿನಕಾಯಿ – 2
ಬೆಳ್ಳುಳ್ಳಿ – 1 ಗಡ್ಡೆ
ಹಸಿ ಶುಂಟಿ – 1/4 ಇಂಚು
ಒಣ ಕಾರದ ಪುಡಿ – 1/2 ಚಮಚ
ಕಡಲೇ ಹಿಟ್ಟು – 4 ಚಮಚ
ಅಕ್ಕಿ ಹಿಟ್ಟು – 2 ಚಮಚ
ಎಣ್ಣೆ – 2 ಚಮಚ
ಉಪ್ಪು ರುಚಿಗೆ ತಕ್ಕಶ್ಟು
ಕರಿಯಲು ಎಣ್ಣೆ

ಮಾಡುವ ಬಗೆ

ಕಡಲೇ ಬೀಜ ಹುರಿದು, ಸಿಪ್ಪೆ ತೆಗೆದು ಮಿಕ್ಸರ್ ಜಾರ್ ಗೆ ಹಾಕಿ ಇಟ್ಟುಕೊಳ್ಳಿ. ಉದ್ದಿನ ಬೇಳೆ, ಕಡಲೇ ಬೇಳೆ, ಹುರಿಗಡಲೆ, ಕೊತ್ತಂಬರಿ ಕಾಳು ಸ್ವಲ್ಪ ಹುರಿದು ಅದೇ ಮಿಕ್ಸರ್ ಜಾರ್ ಗೆ ಹಾಕಿ. ಆರಿದ ನಂತರ ಪುಡಿ ಮಾಡಿ. ಬಿಡಿಸಿದ ಬೆಳ್ಳುಳ್ಳಿ ಎಸಳು, ಹಸಿ ಮೆಣಸಿನಕಾಯಿ ಮತ್ತು ಹಸಿ ಶುಂಟಿ ಮಿಕ್ಸರ್ ಗೆ ಸೇರಿಸಿ ಇನ್ನೊಮ್ಮೆ ತಿರುಗಿಸಿ ಇಟ್ಟುಕೊಳ್ಳಿ.

ಗಜ್ಜರಿ ಸಿಪ್ಪೆ ತೆಗೆದು ತುರಿದು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈರುಳ್ಳಿ ಸಣ್ಣಗೆ ಕತ್ತರಿಸಿ ಸೇರಿಸಿ. ರುಬ್ಬಿದ ಮಿಶ್ರಣ ಸೇರಿಸಿ, ಅಕ್ಕಿ ಹಿಟ್ಟು, ಕಡಲೇ ಹಿಟ್ಟು, ಉಪ್ಪು ಮತ್ತು ಒಣ ಕಾರದ ಪುಡಿ ಮತ್ತು ಎರಡು ಚಮಚ ಎಣ್ಣೆ, ಎರಡು ಚಮಚ ನೀರು ಹಾಕಿ ಚೆನ್ನಾಗಿ ಕಲಸಿ ಇಟ್ಟುಕೊಳ್ಳಿ. ಬಜ್ಜಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿರಲಿ. ಕೈಯಲ್ಲಿ ವಡೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಸಂಜೆ ಸಮಯಕ್ಕೆ, ಮಳೆಗಾಲ ದಲ್ಲಿ ಕುರು ಕುರು ಗಜ್ಜರಿ ವಡೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: