ಕಾಡಿಸುತಿಹುದು ಮಾಯಾವಿ ಮಳೆ
ಈ ಮಳೆನೇ ಎಶ್ಟು ವಿಚಿತ್ರ ನೋಡಿ, ಬಂದ್ರೂ ಕಶ್ಟ, ಬರದಿದ್ದರೂ ಕಶ್ಟ; ಬಂದಾಗ, ಕಮ್ಮಿ ಬಂದ್ರೂ ತೊಂದರೆ, ಜಾಸ್ತಿ ಬಂದ್ರೆ ಇನ್ನೊಂತರಹ ತೊಂದರೆ!
ಅದಕ್ಕೇ ಇರಬಹುದು, ರುತುಮಾನಗಳಲ್ಲೇ ತುಂಬಾ Dicey season ಅಂದ್ರೆ ಮಳೆಗಾಲ ಅನ್ಸುತ್ತೆ! ಈ ಸಲ ಚಳಿ ಇರುತ್ತೋ ಇಲ್ವೋ, ಈ ಸಲ ಬಿಸಿಲುಗಾಲ ಕೈ ಕೊಡುತ್ತೇನೋ ಎಂದು ರೈತಾಪಿ ವರ‍್ಗದವರನ್ನು ಬಿಟ್ಟು ಯಾರಾದರೂ ಜಾಸ್ತಿ ತಲೆ ಕೆಡಿಸಿಕೊಳ್ಳುವುದನ್ನು ಕೇಳಿದ್ದೀರಾ? ಆದ್ರೆ, ಈ ಮಳೆಯ ಕದರ‍್ರೇ ಬೇರೆ. ಕಾದಶ್ಟು ಕಾಯಿಸುತ್ತದೆ, ಸಾಕು ಹೋಗಪ್ಪ ಅಂದಶ್ಟು ಜೋರಾಗಿ ಸುರಿಯುತ್ತದೆ. ಒಂದೊಂದು ಸಾರಿ ದೋ ಎಂದು ಸುರಿದರೆ, ನಮ್ಮ ಗಾಳಿ ಆಂಜನೇಯನನ್ನೂ ನೀರಲ್ಲಿ ಮುಳುಗಿಸಿ ಹೋಗುತ್ತದೆ! ಇನ್ನು ನಾವು ಹುಲುಮಾನವರು ಯಾವ ಗಿಡದ ಎಲೆಗಳು ಹೇಳಿ ಮತ್ತೆ?
ಈ ಬೇಸಿಗೆಕಾಲ, ಚಳಿಗಾಲಗಳನ್ನೆಲ್ಲ ಅಶ್ಟೊಂದು Predict ಮಾಡೋ ಅವಶ್ಯಕತೆ ಇಲ್ಲ. ಅವು ತಮ್ಮ ಸರದಿ ಬಂದಾಗ, ತಪ್ಪದೇ ಬಂದು, ಹಾಜರಿ ಕೊಟ್ಟು ಮುಂದಿನ ಸರದಿಗೆ Waiting Listನಲ್ಲಿ ಸರಿದುಬಿಡುತ್ತವೆ. ಆದ್ರೆ, ಈ ಮಳೆರಾಯ ಹಾಗಲ್ಲ ನೋಡಿ.
ಮನುಶ್ಯ ಅಂತರಿಕ್ಶದಲ್ಲಿ ಎಶ್ಟೋ ಉಪಗ್ರಹಗಳನ್ನ ಹಾರಿಬಿಟ್ಟು, ಅಲ್ಲಿಂದ ಬೂಮಿಯ ಆಗುಹೋಗುಗಳನ್ನು ಅಬ್ಯಸಿಸಿ, ನಾಳೆ ಹೀಗೆ ಗಾಳಿ ಬೀಸಬಹುದು, ನಾಡಿದ್ದು ಹಾಗೆ ಚಂಡಮಾರುತ ಬರಬಹುದು, ಆ ನಕ್ಶತ್ರವನ್ನ ಇವತ್ತು ಹತ್ತಿರದಿಂದ ನೋಡಬಹುದು, ಈ ಚಂದ್ರ ನಾಳೆ ಜಾಸ್ತಿ ಕೆಂಪಾಗಿ ಕಾಣಬಹುದು ಅಂತೆಲ್ಲ ನಿಕರವಾಗಿ ಹೇಳಬಹುದಶ್ಟು ಮುಂದುವರೆದಿದ್ದರೂ, ಈ ಮಳೆ ಮಾತ್ರ ಇವರ ಎಣಿಕೆಗೆ ಅಶ್ಟು ಕರಾರುವಕ್ಕಾಗಿ ಸಿಗುತ್ತಲೇ ಇಲ್ಲ.
ಹವಾಮಾನ ವರದಿ ಗಿಣಿಶಾಸ್ತ್ರದ ತರಹ ಅನ್ಸುತ್ತಪ್ಪ. ಬೆಳಿಗ್ಗೆನೇ ಬರುತ್ತದೆ ಅಂದಾಗ ಸಂಜೆಯಾದರೂ ಸುಳಿವೇ ಇರಲ್ಲ, ಈ ಸಲ ಮಾನ್ಸೂನ್ ಕೈ ಕೊಡುತ್ತದೆ ಎಂದಾಗ ಎಲ್ಲ ಕಡೆಯೂ ಪ್ರವಾಹ.
ನಮ್ಮ ಕಡೆ ಹಿರಿಯರು ಅವಾಗವಾಗ “ನೀನು ನನ್ನಶ್ಟೇನು ಮಳೆ ಕಂಡಿದಿಯಾ ಹೋಗೋ…” ಅಂತಾ ಹೇಳ್ತಾ ಇರ‍್ತಾರೆ. ಒಂದ್ಸಾರಿ ಅಜ್ಜಿ ಒಬ್ಬರಿಗೆ ಅದರರ‍್ತ ಕೇಳಿದಾಗ ವಿಶಯ ಬೇರೇನೇ ಇದೆ ಅಂತಾ ಗೊತ್ತಾಯ್ತು. ಅದು ಏನಪ್ಪಾ ಅಂದ್ರೆ, ಆವಾಗ ಮಳೆಗಾಲಗಳೆಂದರೆ ಎಶ್ಟೋ ಕಡೆ ಒಂದು ಬಯ, ಹೆದರಿಕೆ, ರೋಗಗಳು, ಸಂಪರ‍್ಕ ಕಡಿತ. ಈಗಿನ ತರಹ ಆಸ್ಪತ್ರೆಗಳಾಗಲಿ, ವೈದ್ಯಕೀಯ ಸೌಲಬ್ಯಗಳಾಗಲಿ ಇರಲಿಲ್ಲ. ಮಳೆಗಾಲದಲ್ಲಿ ಬದುಕುಳಿದರೆ ಒಂದು ವರ‍್ಶ ಆಯುಶ್ಯ ಜಾಸ್ತಿ ಆದಂಗೇ ಲೆಕ್ಕ. ಅಶ್ಟು ಜೋರು ಮಳೆಗಳನ್ನು ತಡೆದುಕೊಂಡು, ಜಯಿಸಿಕೊಂಡು ಬದುಕುಳಿದಿದ್ದದ್ದು ಆ ಹಿರಿಯ ಜೀವಗಳಿಗೆ ಒಂದು ಹೆಮ್ಮೆಯ ವಿಶಯವೇ ಸರಿ!
ನನ್ನ ಬಾಲ್ಯದ ಮಳೆಯ Definition ಗೂ ಈಗಿನ ಮಳೆಯ Definition ಗೂ ವ್ಯತ್ಯಾಸವಾಗಿಬಿಟ್ಟಿದೆ. ಆವಾಗ, ಮಳೆಯೆಂದರೆ ಏನೋ ಹುಡುಗಾಟ, ನೀರಿನಲ್ಲಿ ನೆನೆಯುವ ಉತ್ಸಾಹ, ಕೆಸರಿನಲ್ಲಿ ಆಡುವ ಕನವರಿಕೆ, ಶಾಲೆಗೆ ರಜೆ ಸಿಗುತ್ತದೆ ಎನ್ನುವ ಆಸೆ… ಈಗ, ಮಳೆಯ ವಿವಿದ ರೂಪಗಳನ್ನು ಅರಿತು ಮಳೆಯೆಂದರೆ ಏನೋ ಕಳವಳ, ನೆನೆದರೆ ನೂರಾರು ತರಹದ ವೈರಸ್ಸುಗಳ ಹೆದರಿಕೆ, ಕೆಸರಿನಲ್ಲಿ ಕೊಚ್ಚಿಹೋಗುವ ಬಯ, ಪ್ರವಾಹದಲ್ಲಿ ಸಿಕ್ಕಿದ ಜನರ ಜೀವನ ನೋಡಿ ಹತಾಶೆ.
ಇಲ್ಲಿ ಮಳೆಗಾಲವನ್ನು Focus ಮಾಡಿಟ್ಟುಕೊಂಡು ಬರೆದಿದ್ದಶ್ಟೇ. ಪ್ರಕ್ರುತಿಯಲ್ಲಿ ಎಲ್ಲ ರುತುಮಾನಗಳದ್ದೂ ಅಶ್ಟೇ ಪ್ರಾಮುಕ್ಯತೆ, ಅಶ್ಟೇ ಅವಶ್ಯಕತೆ ಅಲ್ವಾ? ಚಳಿಗಾಲವೂ ಜೀವ ತೆಗೆದ ಉದಾಹರಣೆಗಳಿವೆ, ಬೇಸಿಗೆಗಾಲವೂ ಕಶ್ಟ ಕೊಟ್ಟ ನಿದರ‍್ಶನಗಳಿವೆ. ಎಲ್ಲ ಕಾಲಗಳು ಸಮತೋಲನದಲ್ಲಿದ್ದಾಗಲೇ ಹವಾಮಾನ ಸಹನೀಯವೆನಿಸುತ್ತದೆ.
ತಲೆಯ ಮೇಲೆ ಸೂರಿದ್ದು, ನಾವು ಸೇಪ್ ಆದ ಜಾಗದಲ್ಲಿದ್ದರೆ ಮಳೆ ರೋಮ್ಯಾಂಟಿಕ್ ಅನ್ಸುತ್ತೆ. ಸೂರೇ ಇಲ್ಲದಿದ್ದರೆ, ಇದ್ದ ಒಂದು ಸೂರೂ ಮಳೆಗೆ ಕೊಚ್ಚಿಹೋಗುತ್ತಿದ್ದರೆ ಅದೇ ಮಳೆ ಟ್ರ್ಯಾಜಿಕ್ ಅನ್ನಿಸಿಬಿಡುತ್ತದೆ. ಎಶ್ಟೊಂದು ಮಾಯಾವಿ ಅಲ್ವಾ ಮಳೆ?
(ಚಿತ್ರ ಸೆಲೆ: unsplash.com)
ಇತ್ತೀಚಿನ ಅನಿಸಿಕೆಗಳು