ನಾ ನೋಡಿದ ಸಿನೆಮಾ – ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

– ಕಿಶೋರ್ ಕುಮಾರ್.

ಸಾಮಾಜಿಕ ಸಿನೆಮಾಗಳಲ್ಲಿ ಹೆಚ್ಚಾಗಿ ನಮ್ಮ ಸುತ್ತಮುತ್ತಲಿನ ವಿಚಾರಗಳ ಮೇಲೆ ಕತೆಯನ್ನು ಹೆಣೆಯಲಾಗುತ್ತದೆ. ಒಂದು ಕುಟುಂಬ, ಒಂದು ಪಾತ್ರದ ಸುತ್ತ, ಒಂದು ವರ್‍ಗದ ಬದುಕು, ಒಂದು ಸಾಮಾಜಿಕ ಪಿಡುಗು, ಕಾಲೇಜಿನ ಬದುಕು, ವಟಾರಗಳಲ್ಲಿನ ಬದುಕು, ಕೊಳಗೇರಿಯ ಬದುಕು, ಮದ್ಯಮ ವರ್‍ಗದ ಬದುಕು, ರಾಜಕೀಯದ ಬದುಕು ಹೀಗೆ ಕತೆಯಲ್ಲಿ ಬದುಕಿಗೆ ಹತ್ತಿರದ ವಿಶಯಗಳನ್ನು ತಂದು ಅದಕ್ಕೆ ಸ್ವಲ್ಪ ಕಮರ್‍ಶಿಯಲ್ ಒಗ್ಗರಣೆ ಕೊಟ್ಟು ಸಿನೆಮಾ ಮಾಡಲಾಗುತ್ತದೆ. ಈ ಮೇಲಿನ ಎಲ್ಲಾ ವಿಶಯಗಳ ಮೇಲೂ ಒಂದಲ್ಲ ಒಂದು ಸಿನೆಮಾ ಬಂದು ಹೋಗಿದ್ದಿದೆ. ಆದರೆ ಕೆಲವರ ಸ್ಕೂಲು ಇಲ್ಲವೇ ಕಾಲೇಜಿನ ಬದುಕಿನಲ್ಲಿ ಬರುವ ಹಾಸ್ಟೆಲ್ ಬದುಕಿನ ಬಗ್ಗೆ ಸಿನೆಮಾ ಮಾಡಿದರೆ ಹೇಗೆ ಮಾಡಬಹುದು, ಅದರಲ್ಲೂ ಹಾಸ್ಟೆಲ್ ಬದುಕಿನಲ್ಲಿ ಒಂದು ದಿನ ನಡೆವ ಒಂದು ಗಟನೆಯನ್ನಿಟ್ಟುಕೊಂಡು, ಒಂದು ಹಾಸ್ಯ ತುಂಬಿದ ಕತೆಯನ್ನು ಹೆಣೆಯಬಹುದಾ ಎಂದರೆ, ಹೌದು ಎನ್ನಲು ಒಂದು ಎತ್ತುಗೆ “ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ”.

ಇತ್ತೀಚೆಗೆ ಸಿನೆಮಾ ಎಂಬುದು ಒಂದೋ ದೊಡ್ಡ ಮೊತ್ತದ ಹೂಡಿಕೆ, ಇಲ್ಲವೇ ಹೆಸರಾಂತ ನಟರು ಇದ್ದರೆ ಮಾತ್ರ ಗೆಲ್ಲುತ್ತದೆ ಎನ್ನುವಂತಾಗಿದೆ. ಅದರೆ ಇಂತರ ಒಂದು ಕಾಲಗಟ್ಟದಲ್ಲಿ ಹೊಸ ಮುಕಗಳು ಇಲ್ಲವೇ ಕಿರುತೆರೆ, ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಹೊಸಬರನ್ನು ಹಾಕಿಕೊಂಡು ಸಿನೆಮಾ ಮಾಡಿ ಹೆಸರು ಮಾಡಿದ ಗುಂಪಿಗೆ ಸೇರುತ್ತದೆ ಈ ಸಿನೆಮಾ.

ನಾಡಿನ ಬೇರೆ ಬೇರೆ ಊರುಗಳಿಂದ ಕಲಿಕೆಯನ್ನ ಅರಿಸಿ ಮನೆಯಿಂದ ದೂರ ಬಂದು, ಹೊಸಬರೊಂದಿಗೆ ಬೆರೆತು, ನೂರಾರು ರೀತಿಯ ಮನಸ್ಸುಗಳನ್ನು ನೋಡುತ್ತಾ, ನಲಿಯುತ್ತ, ಹಾಸ್ಟೆಲ್ ನಲ್ಲಿದ್ದುಕೊಂಡು ಕಲಿಯುತ್ತಿರುವ ಹುಡುಗರು. ಮನೆಯಿಂದ ದೂರ ಬಂದವರ ಮನೆಯೇ ಆಗಿರುವ ಹಾಸ್ಟೆಲ್, ಅಲ್ಲಿನ ಕಟ್ಟುಪಾಡುಗಳು, ಬೇಸರ ತರಿಸುವ ಊಟ, ಹಿರಿಯರ ರ್‍ಯಾಗಿಂಗ್, ವಾರ್‍ಡನ್ ಕಿರಿಕಿರಿ. ಇವೆಲ್ಲದರ ನಡುವೆ ಚಿತ್ರಕತೆ ಬರೆದು ಕಿರುಚಿತ್ರ ಮಾಡಬೇಕೆಂದುಕೊಳ್ಳುವ ಹುಡುಗ. ಈತನ ಸಿನೆಮಾ ತೆಗೆಯುವ ಹಂಬಲ, ಅದರಿಂದ ಆಗುವ ಅನಾಹುತಗಳೇ ಚಿತ್ರದ ಕತೆ.

ಸನ್ನಿವೇಶದಿಂದ ಸನ್ನಿವೇಶಕ್ಕೆ ನಗುವಿನ ಓಟ ಹೆಚ್ಚಿಸಿಕೊಂಡು ಮುನ್ನಡೆಸಿದ್ದಾರೆ ನಿರ್‍ದೇಶಕ ನಿತಿನ್ ಕ್ರಿಶ್ಣಮೂರ್‍ತಿ. ಪಾತ್ರವರ್‍ಗಕ್ಕೆ ಬಂದರೆ ಹೆಸರೇ ಹೇಳುವಂತೆ ಇದರಲ್ಲಿ ಹುಡುಗರ ಗುಂಪೇ ಇದೆ. ಮುಕ್ಯ ಪಾತ್ರದಲ್ಲಿ ಪ್ರಜ್ವಲ್, ಹಾಸ್ಟೆಲ್ ವಾರ್‍ಡನ್ ಆಗಿ ಮಂಜುನಾತ್, ಪೋತಾ ಪಾತ್ರದಲ್ಲಿ ಕಿರು ಚಿತ್ರಗಳಲ್ಲಿ ಹೆಸರಾಗಿರುವ ಚೇತನ್ ‍ದುರ್‍ಗ, ಅರವಿಂದ್ ಕಶ್ಯಪ್, ಪ್ರೊಟೆಸ್ಟ್ ಕ್ರಿಶ್ಣ ಪಾತ್ರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡುವ ಕ್ರಿಶ್ಣ ಜೋರಾಪುರ ಹೀಗೆ ಹೊಸ ಮುಕಗಳ ಆಗರ ಈ ಸಿನೆಮಾ. ಅತಿತಿ ಪಾತ್ರದಲ್ಲಿ ದಿಗಂತ್, ರಮ್ಯಾ, ರಿಶಬ್ ಶೆಟ್ಟಿ ಹಾಗೂ ಪವನ್ ಕುಮಾರ್ ಅವರು ನಟಿಸಿದ್ದಾರೆ. ನಿತಿನ್ ಕ್ರಿಶ್ಣಮೂರ್‍ತಿ ಅವರ ಚಿತ್ರಕತೆ, ಅಜನೀಶ್ ಲೋಕನಾತ್ ಅವರ ಸಂಗೀತ, ಅರವಿಂದ್ ಅಶ್ಯಪ್ ಅವರ ಸಿನೆಮಾಟೋಗ್ರಪಿ, ಸುರೇಶ್ ಸಂಕಲನ್ ಅವರ ಎಡಿಟಿಂಗ್ ಈ ಚಿತ್ರಕ್ಕಿದೆ. ಹೀಗೆ ಒಂದು ಹೊಸಬರ ಗುಂಪೇ ಸೇರಿ ನೋಡುಗರಿಗೆ ಒಂದು ಹಾಸ್ಯ ತುಂಬಿದ ಸಿನೆಮಾವನ್ನು ಉಣಬಡಿಸಿದೆ. ಹೇಗಿದೆ ಈ ಹುಡುಗರ ಹಾವಳಿ ಎಂದು ತಿಳಿಯಬೇಕೆಂದರೆ ಚಿತ್ರಮಂದಿರಲ್ಲಿದೆ ಉತ್ತರ.

(ಚಿತ್ರಸೆಲೆ: instagram.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: