ಹೀರೇಕಾಯಿ ಎಣಗಾಯಿ/ತುಂಬುಗಾಯಿ

– ಸುಹಾಸಿನಿ ಎಸ್.

ಸಾಂಪ್ರದಾಯಿಕ ಅಡುಗೆಯಲ್ಲಿ ಎಣಗಾಯಿ/ತುಂಬುಗಾಯಿ ಒಂದು ಸ್ವಾದಿಶ್ಟ ಪಲ್ಯ. ಇದರ ರುಚಿ ಅದ್ಬುತ. ಸಾಮಾನ್ಯವಾಗಿ ಎಣಗಾಯಿ ಪಲ್ಯ ಎಂದರೆ ಬದನೆಕಾಯಿಯದು ಎಂದುಕೂಳ್ಳುವರು. ಇದನ್ನು ಹೀರೇಕಾಯಿ ಬಳಸಿಯೂ ಮಾಡಬಹುದು. ಹೀರೇಕಾಯಿಯಲ್ಲಿ ನಾರಿನಂಶ ಹೆಚ್ಚು ಇರುವುದರಿಂದ ಇದು ಜೀರ‍್ಣಕ್ರಿಯೆಗೆ ನೆರವಾಗುತ್ತದೆ. ಹೀರೇಕಾಯಿ ದೇಹದಿಂದ ಕಾವು/ಉಶ್ಣ ತೆಗೆದು ದೇಹವನ್ನು ತಂಪಾಗಿರುವಂತೆ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಎ ಅಂಶವು ಕಣ್ಣಿನ ದ್ರುಶ್ಟಿಗೆ ಒಳ್ಳೆಯದು. ಹೀರೆಕಾಯಿ ಬಳಸಿ ಎಣೆಗಾಯಿ/ತುಂಬುಗಾಯಿ ಮಾಡುವ ಬಗೆ ತಿಳಿಯೋಣ ಬನ್ನಿ.

ಏನೇನು ಬೇಕು

ಹೀರೇಕಾಯಿ 2-3
ಈರುಳ್ಳಿ – 2
ಬೆಳ್ಳುಳ್ಳಿ ಎಸಳು – 6-7
ಮೆಣಸಿನಕಾಯಿ – 3-4
ಎಣ್ಣೆ – 3-4 ಚಮಚ
ಜೀರಿಗೆ, ಸಾಸಿವೆ – 1 ಚಮಚ
ಶೇಂಗಾ, ಎಳ್ಳು – ಸ್ವಲ್ಪ
ಕೂಬ್ಬರಿ – ಸ್ವಲ್ಪ
ಕೊತ್ತಂಬರಿ, ಕರಿಬೇವು – ಸ್ವಲ್ಪ
ಅರಿಶಿಣ – ಸ್ವಲ್ಪ
ಅಚ್ಚಕಾರದ ಪುಡಿ – ಸ್ವಲ್ಪ
ಮಸಾಲೆ ಕಾರ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಹೀರೇಕಾಯಿಯನ್ನು ತೂಳೆದು ಸಿಪ್ಪೆ ತೆಗೆದು, ಒಂದರಿಂದ ಎರಡು ಇಂಚು ಉದ್ದ ತಂಬುಗಾಯಿಗೆ ಬೇಕಾದ ರೀತಿಯಲ್ಲಿ ಕತ್ತರಿಸಿ. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಜೀರಿಗೆ ಹಾಕಿ ಹುರಿಯಿರಿ. ನಂತರ ಶೇಂಗಾ, ಎಳ್ಳು, ಕೂಬ್ಬರಿ, ಕೊತ್ತಂಬರಿ, ಕರಿಬೇವು ಹಾಕಿ ಮತ್ತೆ ಹುರಿಯಿರಿ. ತಣ್ಣಗಾದ ಮೇಲೆ ಅವೆಲ್ಲವನ್ನು ಮಿಕ್ಸಿಯಲ್ಲಿ ಹಾಕಿ ಅರಿಶಿಣ, ಉಪ್ಪು, ಬೆಲ್ಲ ಹಾಕಿ ರುಬ್ಬಿ. ಈಗ ಎಣಗಾಯಿಗೆ ಮಸಾಲೆ ರೆಡಿ. ರುಬ್ಬಿದ ಮಿಶ್ರಣವನ್ನು ತಂಬುಗಾಯಿಯ ಹಾಗೆ ಕತ್ತರಿಸಿದ ಹೀರೇಕಾಯಿಯಲ್ಲಿ ಸ್ವಲ್ಪ ತುಂಬಿಡಿ. ಮಿಶ್ರಣವನ್ನು ಸ್ವಲ್ಪ ಒಗ್ಗರಣೆಯಲ್ಲಿ ಹಾಕಲು ಉಳಿಸಿಕೊಳ್ಳಿ.

ಬಾಣಲೆಯಲ್ಲಿ 3-4 ಚಮಚ ಎಣ್ಣೆ ಹಾಕಿ ಕಾದಮೇಲೆ ಜೀರಿಗೆ, ಸಾಸಿವೆ ಹಾಕಿ. ಚಟಪಟ ಸದ್ದು ಬಂದಮೇಲೆ ಕುಟ್ಟಿದ ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ ಹಾಕಿ ಕೈಯಾಡಿಸಿ. ಉಪ್ಪು, ಅರಿಶಿಣ ಹಾಕಿ ಮಸಾಲೆ ತುಂಬಿದ ಹೀರೇಕಾಯಿಯನ್ನು ಹಾಕಿ ಕೈಯಾಡಿಸಿ. ಒಂದು ಮುಚ್ಚಳ ಮುಚ್ಚಿ ಹೀರೇಕಾಯಿ ಎಣಗಾಯಿ ಬೇಯಲು ಬಿಡಿ. ಸ್ವಲ್ಪ ಸಮಯದ ನಂತರ ಬಾಣಲೆಗೆ ಉಳಿದ ಎಣಗಾಯಿ ಮಸಾಲೆ, ಅಚ್ಚಕಾರದ ಪುಡಿ, ಮಸಾಲೆ ಕಾರ ಹಾಕಿ.

ಬೇಕೆನಿಸಿದರೆ ನೀರು ಹಾಕಿ ಹಿರೇಕಾಯಿಯನ್ನು ಬೇಯಲು ಬಿಡಿ. ಹೀರೇಕಾಯಿ ಸ್ವಲ್ಪ ಮೆತ್ತಗಾದ ನಂತರ ಕೊತ್ತಂಬರಿಯಿಂದ ಅಲಂಕರಿಸಿ. ಹೀರೇಕಾಯಿ ಎಣಗಾಯಿ ಈಗ ತಯಾರು. ರೊಟ್ಟಿ, ಚಪಾತಿ, ಅನ್ನದ ಜೊತೆ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks