ಲೇಕ್ ಮೆಕ್ಡೊನಾಲ್ಡ್ ನ ಬಣ್ಣದ ಕಲ್ಲುಗಳು

– .

ಅಮೇರಿಕಾ ಮತ್ತು ಕೆನೆಡಾದ ಗಡಿ ಪ್ರದೇಶದಲ್ಲಿರುವ ಗ್ಲೇಸಿಯರ್ ರಾಶ್ಟ್ರೀಯ ಉದ್ಯಾನವನ ಅನೇಕ ಸರೋವರಗಳ ಆಗರವಾಗಿದೆ. ಗಡಿ ಪ್ರದೇಶದಲ್ಲಿದ್ದರೂ ಸಹ ಇದು ನಿಕರವಾಗಿ ಹಬ್ಬಿರುವುದು ಅಮೇರಿಕಾದ ರಾಜ್ಯವಾದ ಮೊಂಟಾನಾದಲ್ಲಿ. ಇಲ್ಲಿ ಸರಿಸುಮಾರು ಏಳು ನೂರಕ್ಕೂ ಹೆಚ್ಚು ಸರೋವರಗಳಿದ್ದು, ಅದರಲ್ಲಿ ನೂರ ಮೂವತ್ತೊಂದು ಸರೋವರಗಳು ಮಾತ್ರ ತಮ್ಮದೇ ಆದ ಹೆಸರಿನಿಂದ ಗುರುತಿಸಲ್ಪಡುತ್ತವೆ. ಉಳಿದವುಗಳಿಗೆ ಇನ್ನೂ ಹೆಸರಿಟ್ಟಿಲ್ಲ.

ಇಲ್ಲಿನ ಕೆಲವು ಸರೋವರಗಳ ವೈಶಿಶ್ಟ್ಯವೆಂದರೆ ಅವುಗಳ ತಳಬಾಗದಲ್ಲಿ ಮತ್ತು ತೀರ ಪ್ರದೇಶಗಳಲ್ಲಿ ಕಂಡುಬರುವ ಬಣ್ಣ ಬಣ್ಣದ ಬೆಣಚುಕಲ್ಲುಗಳು. ಸರೋವರದಲ್ಲಿ ಕಂಡುಬರುವ ಕಲ್ಲುಗಳು ಮತ್ತು ಬೆನಚುಕಲ್ಲುಗಳು ಗಾಡ ಕೆಂಪು, ಹಸಿರು, ಹಳದಿ, ನೀಲಿ ಹೀಗೆ ವಿವಿದ ಬಣ್ಣಗಳಿಂದ ಕಂಗೊಳಿಸುತ್ತವೆ. ಈ ಉದ್ಯಾನವನದ ಪಶ್ಚಿಮದಲ್ಲಿರುವ ಲೇಕ್ ಮೆಕ್ಡೊನಾಲ್ಡ್ ನಲ್ಲಿ ಈ ರೀತಿಯ ಬಣ್ಣ ಬಣ್ಣದ ಬೆಣಚುಕಲ್ಲುಗಳು ಹೇರಳವಾಗಿ ಕಂಡುಬರುತ್ತವೆ. ಲೇಕ್ ಮೆಕ್ಡೊನಾಲ್ಡ್ ಇಲ್ಲಿನ ಎಲ್ಲಾ ಸರೋವರಗಳಿಗಿಂತಾ ದೊಡ್ಡದು. ಇದು 6,823 ಎಕರೆ ವಿಸ್ತೀರ್‍ಣ ಹೊಂದಿದ್ದು, ಸುಮಾರು 15 ಕಿಲೋಮೀಟರ್ ಉದ್ದವಿದೆ. ಇದರ ಆಳ 141 ಮೀಟ‍ರ್. ಈ ಸರೋವರದ ನೀರು ಸದಾಕಾಲ ‍ತಿಳಿಯಾಗಿದ್ದು, ಯಾವುದೇ ಸ್ತಳದಲ್ಲಿ ಅದರ ತಳ ಕಾಣಬಹುದಾಗಿದೆ. ಹಾಗಾಗಿ ಇದು ಅತ್ಯಂತ ಸುಂದರವಾದ ಸರೋವರ ಎಂದು ಪರಿಗಣಿಸಲಾಗಿದೆ.

ಲೇಕ್ ಮೆಕ್ಡೊನಾಲ್ಡ್ ಸರೋವರದ ಬಣ್ಣದ ಕಲ್ಲುಗಳ ಮಹತ್ವ ಸಂಪೂರ‍್ಣವಾಗಿ ಬೂಮಿಗೆ ಸಲ್ಲಬೇಕು. ಏಕೆಂದರೆ ಇದು ನೈಸರ‍್ಗಿಕವಾಗಿ ರೂಪುಗೊಂಡಿದೆ. ಇಲ್ಲಿನ ಕಲ್ಲುಗಳು ಇಂದಿನ ಈ ಸ್ತಿತಿ ತಲುಪಲು ಲಕ್ಶಾಂತರ ವರ‍್ಶಗಳ ಬದಲಾವಣೆಯ ಸಮಯವನ್ನು ತೆಗೆದುಕೊಂಡಿದೆ. ನಿರಂತರ ನೀರಿನ ಹರಿವಿನಿಂದ ಈ ಕಲ್ಲುಗಳ ಮೇಲ್ಮೈ ಸವೆದು ನುಣುಪಾಗಿದೆ. ಇದರಲ್ಲಿನ ಕಲ್ಲುಗಳು ಹಾಗೂ ಬೆಣಚುಕಲ್ಲುಗಳು ವಿವಿದ ಬಣ್ಣಗಳನ್ನು ಪಡೆದುಕೊಳ್ಳಲು ಕಾರಣವೇನು? ಇದರ ಬಗ್ಗೆ ಅದ್ಯಯನ ಕೈಗೊಂಡ ವಿಜ್ನಾನಿಗಳ ತಂಡ, ವಿವಿದ ಬಣ್ಣಗಳ ಕಲ್ಲುಗಳು ಇಲ್ಲಿ ಕಂಡುಬರಲು ಇಲ್ಲಿನ ಬಂಡೆಗಳಲ್ಲಿರುವ ಕಬ್ಬಿಣದ ಅಂಶ ಕಾರಣ ಎಂದು ಕಂಡು ಹಿಡಿದಿದ್ದಾರೆ. ಇದರಲ್ಲಿನ ಕಬ್ಬಿಣದ ಅಂಶ ಆಮ್ಲಜನಕದ ಸಂಪರ‍್ಕಕ್ಕೆ ಬಂದಾಗ ಉತ್ಕರ‍್ಶಣ (ಆಕ್ಸಿಡೀಕರಣ) ವಾಗಿ ವಿವಿದ ಬಣ್ಣಗಳನ್ನು ಪಡೆದುಕೊಂಡಿದೆ ಎಂದಿದ್ದಾರೆ. ಹೆಚ್ಚು ಆಮ್ಲಜನಕದ ಸಂಪರ‍್ಕಕ್ಕೆ ಬಂದಾಗ ಗಾಡ ಕೆಂಪು ಬಣ್ಣವೂ, ಸರೋವರದ ಆಳದಲ್ಲಿರುವ ಕಲ್ಲುಗಳು ಸೀಮಿತ ಆಮ್ಲಜನಕದ ಸಂಪರ‍್ಕಕ್ಕೆ ಬರುವುದರಿಂದ ಅವುಗಳ ಬಣ್ಣ ಹಸಿರಾಗಿ ಕಾಣುತ್ತದೆ ಎಂದಿದ್ದಾರೆ.

ವಿಶ್ವದಲ್ಲೇ ಅತ್ಯಂತ ಸ್ವಚ್ಚ ಪಾರದರ‍್ಶಕ ಶುದ್ದ ನೀರನ್ನು ಹೊಂದಿರುವ ನದಿಯೆಂದರೆ ಸ್ವಿಟ್ಜರ‍್ಲ್ಯಾಂಡ್ ನ ವರ‍್ಜಾಸ್ಕಾ ನದಿ. ಶುದ್ದತೆಯಲ್ಲಿ ಅದಕ್ಕೆ ಸರಿಸಮನಾಗಿ ನಿಲ್ಲುವುದು ಈ ಉದ್ಯಾನವನದ ಲೇಕ್ ಮೆಕ್ಡೊನಾಲ್ಡ್ ಸರೋವರ. ಇದಕ್ಕೆ ಮೂಲ ಕಾರಣ ಈ ಸರೋವರದ ನೀರಿನ ಉಶ್ಣತೆ. ವರ‍್ಶದ ಯಾವುದೇ ಕಾಲದಲ್ಲೂ ಈ ಸರೋವರದ ನೀರಿನ ಉಶ್ಣತೆ 10 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚಾಗುವುದಿಲ್ಲ. ಇಂತಹ ಅತ್ಯಂತ ಕ್ಲಿಶ್ಟ ವಿಶಮ ತಾಪಮಾನದಲ್ಲಿ ಪ್ಲ್ಯಾಂಕ್ಟನ್ (ನೀರಿನಲ್ಲಿ ಬೆಳೆಯುವ ಕ್ರಿಮಿಗಳು ಮತ್ತು ಗಿಡಗಳು) ಸಂತಾನೋತ್ಪತ್ತಿ ಮಾಡಲು ಮತ್ತು ಬದುಕಲು ಸಾದ್ಯವಿಲ್ಲ. ಇದರಿಂದಾಗಿ ಲೇಕ್ ಮೆಕ್ಡೊನಾಲ್ಡ್ ಸರೋವರದ ನೀರು ಸಂಪೂರ‍್ಣ ಪಾರದರ‍್ಶಕವಾಗಿದೆ. ಮೇಲಿನಿಂದ ನೋಡಿದಲ್ಲಿ 8 ರಿಂದ 10 ಮೀಟರ್ ಅತವಾ ಇನ್ನೂ ಹೆಚ್ಚು ಆಳದ ತಳವನ್ನು ಕಾಣಲು ಸಾದ್ಯವಿದೆ.

ಲೇಕ್ ಮೆಕ್ಡೊನಾಲ್ಡ್ ಸರೋವರದಲ್ಲಿ ಹಲವು ಬಗೆಯ ಸಿಹಿನೀರಿನ ಮೀನುಗಳು, ಉದಾಹರಣೆಗೆ ಟ್ರೌಟ್ (ಒಂದು ರೀತಿಯ ಸಿಹಿನೀರಿನ ಮೀನು) ಮತ್ತು ಸಾಲ್ಮನ್ ಕಂಡುಬರುತ್ತದೆ. ಪಿರ್ (ಬದ್ರದಾರು ಮರ), ಮುಂತಾದ ಅನೇಕ ಮರಗಳು ಈ ಸರೋವರದ ಸುತ್ತಲೂ ಹಬ್ಬಿವೆ. ಜಿಂಕೆ, ಕಡವೆ ಜಾತಿಯ ಪ್ರಾಣಿಗಳು ಕರಡಿಗಳು ಇಲ್ಲಿ ಕಂಡುಬರುತ್ತವೆ. ಈ ಸರೋವರದ ಸುತ್ತಲೂ ಒಂದು ಬಾರಿ ಸುತ್ತುವುದು ಪ್ರಯಾಸದ ಕೆಲಸ. ಇದಕ್ಕೆ ಮೂಲವಾಗಿ ಇದರ ಅಗಾದವಾದ ವಿಸ್ತೀರ‍್ಣ ಕಾರಣ. ಲೇಕ್ ಮೊಕ್ಡೊನಾಲ್ಡ್ ಇಡೀ ವಿಶ್ವದಲ್ಲಿ ಅತ್ಯಂತ ಜನಪ್ರಿಯವಾಗಲು ಅದರಲ್ಲಿನ ವೈಶಿಶ್ಟ್ಯವೇ ಮೂಲ. ಬೇರೆಲ್ಲೂ ಕಾಣದ ಕಡುಗೆಂಪು, ಕಂದು, ಹಸಿರು, ಬಣ್ಣಗಳಿಂದ ಮೊದಲುಗೊಂಡು ನೀಲಿ ಹಳದಿ ನೇರಳೆ ಬಣ್ಣದ ಬಂಡೆಗಳು ವಿವಿದ ಬಣ್ಣದ ಬೆಣಚುಕಲ್ಲುಗಳನ್ನು ಇಲ್ಲಿ ಕಾಣಬಹುದು.

(ಮಾಹಿತಿ ಮತ್ತು ಚಿತ್ರಸೆಲೆ: pixabay.com, amusingplanet.com, mindblowing-facts.org, kickasstrips.com, worldweatheronline.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks