ಗಿಬ್ಸ್ ಪಾರಂ – ಶಿಲ್ಪಕಲೆಯ ಮಾಯಾಲೋಕ

– .

ಅಲನ್ ಗಿಬ್ಸ್ ನ್ಯೂಜಿಲೆಂಡಿನ ಮಿಲೆಯನೇರ್ ಉದ್ಯಮಿ. ಇವರಿಗೆ ಅತ್ಯುತ್ತಮ ಶಿಲ್ಪಕಲೆಯನ್ನು ಸಂಗ್ರಹಿಸುವಲ್ಲಿ ಮತ್ತು ಕಲಾವಿದರನ್ನು ಬೆಂಬಲಿಸುವಲ್ಲಿ ತುಂಬಾ ಆಸಕ್ತಿ ಮತ್ತು ಉತ್ಸಾಹ. 90ರ ದಶಕದ ಆದಿಯಲ್ಲಿ ಇವರು ತನ್ನದೇ ಶಿಲ್ಪಕಲೆಯ ಬೀಡನ್ನು ಸ್ತಾಪಿಸುವ ಉದ್ದೇಶದಿಂದ ಬೂಮಿಯನ್ನು ಕೊಂಡುಕೊಳ್ಳಲು ನಿರ‍್ದರಿಸಿ, ಅದನ್ನು 1991ರಲ್ಲಿ ಕಾರ‍್ಯರೂಪಕ್ಕೆ ತಂದರು. ಇದಕ್ಕಾಗಿ ಕೈಪಾರಾ ಕರಾವಳಿಯ ಸಮೀಪದಲ್ಲಿ 700 ಎಕರೆಗಳಶ್ಟು ಪ್ರದೇಶವನ್ನು ಕೊಂಡುಕೊಂಡರು.

ಕೈಪಾರಾ ಕರಾವಳಿ ಉತ್ತರ ಆಕ್ಲೆಂಡಿನ ಬಹುಬಾಗವನ್ನು ಆಕ್ರಮಿಸಿಕೊಂಡಿದೆ. ಈ ಕರಾವಳಿಯ ಬಂದರು ದಕ್ಶಿಣ ಗೋಳಾರ‍್ದದಲ್ಲಿ ಅತಿ ದೊಡ್ಡದು. ಬಹಳ ಆಳವಿಲ್ಲದ ಈ ಬಂದರಿನಲ್ಲಿ ಅಲೆಗಳ ಏರಿಳಿತ ತಗ್ಗುತ್ತಿದ್ದಂತೆ ಇಡೀ ಪ್ರದೇಶದ ಹತ್ತಾರು ಕಿಲೋಮೀಟರ್ ಟೊಳ್ಳಾದಂತೆ ಕಂಡು ಬರುತ್ತದೆ. ಹಾಗಾಗಿ ಈ ಪ್ರದೇಶವು ಶಿಲ್ಪಕಲೆಯ ಕ್ಯಾನ್ವಾಸ್ನಂತೆ ಕಾಣುತ್ತದೆ. ಅದರ ಮೇಲೆ ಬೀಳುವ ಬೆಳಕು ಕತ್ತಲೆಯ ಚೆಲ್ಲಾಟ ಅಸಾಮಾನ್ಯವಾಗಿದ್ದು, ದೊಡ್ಡ ದೊಡ್ಡ ಶಿಲ್ಪಕಲೆಯನ್ನು ರಚಿಸುವವರಿಗೆ ಸ್ವರ‍್ಗ. ತಮ್ಮ ಮನದ ಬಾವವನ್ನು ಬಿಂಬಿಸುವ ಅತಿ ದೊಡ್ಡ ಕ್ಯಾನ್ವಾಸ್.

ಗಿಬ್ಸ್ ತಾನು ಕೊಂಡುಕೊಂಡ ಇಡೀ ಪ್ರದೇಶವನ್ನು ಸುವ್ಯವಸ್ತಿತವಾಗಿಸಿ, ತನ್ನ ಹೊಸ ಉದ್ಯಾನವನ್ನು ತನ್ನಿಶ್ಟದಂತೆ ಅಲಂಕರಿಸಲು ವಿಶ್ವದ ಕೆಲವು ಪ್ರಸಿದ್ದ ಕಲಾವಿದರನ್ನು ಆಹ್ವಾನಿಸಿದರು. ಅವರುಗಳಲ್ಲಿ ರಿಚರ‍್ಡ್ ಸೆರ‍್ರಾ, ಅನೀಶ್ ಕಪೂರ್, ಬರ‍್ನಾರ್ ವೆನೆಟ್ ಮತ್ತು ಲಿಯಾನ್ ವ್ಯಾನ್ ಡೆನ್ ಐಜ್ಕೆಲ್ ಅಂತಹ ಮಹಾನ್ ಕಲಾವಿದರೂ ಸೇರಿದ್ದರು. ಇವರುಗಳೆಲ್ಲಾ ಸೇರಿ ಗಿಬ್ಸ್ ಕೊಂಡುಕೊಂಡಿದ್ದ ಈ ಪ್ರದೇಶವನ್ನು ಅನನ್ಯ ಕಲಾಕ್ರುತಿಗಳ ಆವಾಸ ಸ್ತಾನವನ್ನಾಗಿ ಮಾರ‍್ಪಡಿಸಿದರು.

ಉದ್ಯಾನವನದಲ್ಲಿ ಅತ್ಯಂತ ಪ್ರಸಿದ್ದವಾದ ಶಿಲ್ಪಕಲೆಯಲ್ಲಿ “ಹೊರೈಜಾನ್” ಒಂದು. ಇದು ಗಿಬ್ಸ್ ಪಾರಂನಲ್ಲಿ ನಿರ‍್ಮಾಣಗೊಂಡ ಮೊದಲ ಶಿಲ್ಪಕಲೆ. ನ್ಯೂಜಿಲೆಂಡಿನ ಕಲಾವಿದ ನೀಲ್ ಡಾಸನ್ ಇದರ ರೂವಾರಿ. ಇದರ ಕಲ್ಪನೆಯೇ ಕಲ್ಪನಾತೀತ. ಗಿಬ್ಸ್ ಪಾರಂನಲ್ಲಿನ ಅತಿ ಎತ್ತರದ ಪ್ರದೇಶದಲ್ಲಿ ಸ್ತಾಪಿತವಾಗಿರುವ ಈ ಕಲಾಕ್ರುಯನ್ನು, ಪಕ್ಕದಲ್ಲಿ ಹಾದು ಹೋಗುವ ರಸ್ತೆಯಿಂದ ಕಾಣಬಹುದಾಗಿದೆ. ನೀರಿನ ತೊಟ್ಟಿಗಳ ಮುಚ್ಚಳದಂತಿರುವ ಇದು ದೂರದಿಂದ ಗಮನಿಸಿದಾಗ ಮೂರು ಆಯಾಮದ ಕಲಾಕ್ರುತಿಯಂತೆ ಕಂಡುಬರುತ್ತದೆ. ಆದರೆ ವಾಸ್ತವವಾಗಿ ಅದು ಮೂರು ಆಯಾಮದ ಕಲಾಕ್ರುತಿಯಲ್ಲ. ಕಬ್ಬಿಣದ ಸರಳುಗಳಿಂದ ರಚಿಸಲಾದ ಸಮತಟ್ಟಾದ ಶಿಲ್ಪವಾಗಿದ್ದು, ನೋಡುಗರಿಗೆ ಮೂರು ಆಯಾಮದ ಬ್ರಮೆಯನ್ನು ಸ್ರುಶ್ಟಿಸುತ್ತದೆ.

ಗಿಬ್ಸ್ ಪಾರಂನಲ್ಲಿ ಜಿರಾಪೆ, ಕಾಡೆಮ್ಮೆ, ಜೀಬ್ರಾ, ಎಮು, ಅಲ್ಪಕಾ (ಹಿಮ ಪ್ರದೇಶದಲ್ಲಿನ ಹಿಮ ಕುರಿ) ಹೀಗೆ ಹಲವಾರು ಪ್ರಾಣಿಗಳು ನಿರ‍್ಬೀತಿಯಿಂದ ಅಡ್ಡಾಡುತ್ತಿರುತ್ತವೆ. ಈ ಉದ್ಯಾನವನಕ್ಕೆ ಸಾರ‍್ವಜನಿಕರಿಗೆ ತಿಂಗಳಿಗೊಮ್ಮೆ ಉಚಿತ ಪ್ರವೇಶ ಉಂಟು. ಗಿಬ್ಸ್ ಪಾರಂನಲ್ಲಿರುವುದೆಲ್ಲ ತುಂಬಾ ದೊಡ್ಡ ಕಲಾಕ್ರುತಿಗಳು. ಕೆಲವು ಕಲಾಕ್ರುತಿಗಳು ನೋಡುಗರನ್ನು ಬೆರಗುಗೊಳಿಸುತ್ತವೆ. ಗಿಬ್ಸ್ ಪಾರಂ ಕಾಸಗಿ ಒಡೆತನದಲ್ಲಿರುವ ಕಾರಣ, ಸಂದರ‍್ಶಕರು ಪೂರ‍್ವ ಅನುಮತಿ ಇದ್ದಲ್ಲಿ ಮಾತ್ರ ಇಲ್ಲಿ ಪ್ರವೇಶ ಪಡೆಯಬಹುದು.

ಈ ಉದ್ಯಾನವನದಲ್ಲಿ ನಡೆದು ಹೋಗುತ್ತಿದ್ದರೆ, ಇದ್ದಕ್ಕಿದ್ದಂತೆ ಹದಿನೈದು ಇಪ್ಪತ್ತು ದೊಡ್ಡ ವರ‍್ಣರಂಜಿತ ಶಿಲ್ಪ ಕಲಾಕ್ರುತಿಗಳು ನೆಲದಿಂದ ಮೇಲಕ್ಕೆ ದಿಗ್ಗನೆ ಎದ್ದುಬಂದಂತೆ ಕಾಣುತ್ತದೆ. ನ್ಯೂಜಿಲೆಂಡಿನ ಬಿಲ್ ಕಲ್ಬರ‍್ಟ್ ರಚಿಸಿರುವ ಪ್ರಕಾಶಮಾನತೆ, ಅರೆಪಾರದರ‍್ಶಕತೆ, ನೆರಳು ಮತ್ತು ಸುಪ್ತತೆಯ ಕಲಾಕ್ರುತಿ ಸುದೀರ‍್ಗ ಮತ್ತು ಸಮ್ರುದ್ದವಾದ ಶಿಲ್ಪಕಲೆಗೆ ಸಾಕ್ಶಿಯಾಗಿದೆ. ಬಾರತೀಯ ಸಂಜಾತ ಅನೀಶ್ ಕಪೂರ್ ಎರಡು ದೀರ‍್ಗ ದೊಡ್ಡ ಉಕ್ಕಿನ ವ್ರುತ್ತಗಳ ನಡುವೆ ಕಮಾನಿನ ಆಕ್ರುತಿಯನ್ನು ನಿರ‍್ಮಿಸಿದ್ದಾರೆ. ಅದಕ್ಕೆ ಗಾಡ ಕೆಂಪು ಹಾಳೆಯನ್ನು ಹೊದಿಸಿರುವುದು ಅದರ ಸೆಳೆತವನ್ನು ಇಮ್ಮಡಿಗೊಳಿಸಿದೆ. ತುತ್ತೂರಿಯ ಆಕಾರದಲ್ಲಿರುವ ಇದು ಜನರನ್ನು ಸೆಳೆವ ಪ್ರಮುಕ ಕಲಾಕ್ರುತಿ.

ಈ ಉದ್ಯಾನವನದ ಒಡೆಯರಾದ ಗಿಬ್ಸ್, ಎರಿಕ್ ಓರ್ ಅವರನ್ನು ಸಂಪರ‍್ಕಿಸಿ, ಅವರಿಂದ ದೊಡ್ಡ ಮಿಂಚಿನ ಕಲಾಕ್ರುತಿಯನ್ನು ನಿರ‍್ಮಿಸಲು ಆಹ್ವಾನಿಸಿದಾಗ, ಅವರು ಬಂದು ರಚಿಸಿರುವ ಕಲಾಕ್ರುತಿ ಸಂದರ‍್ಶಕರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಇದೇ ರೀತಿಯ ಹಲವಾರು ಸುಪ್ರಸಿದ್ದ ಕಲಾವಿದರ ದೊಡ್ಡ ದೊಡ್ಡ ಕಲಾಕ್ರುತಿಗಳನ್ನು ಗಿಬ್ಸ್ ಪಾರಂನಲ್ಲಿ ಕಾಣಬಹುದು. ಇವುಗಳನ್ನು ನೋಡುತ್ತಿದ್ದಂತೆ “ಅಲಿಸ್ ಇನ್ ವಂಡರ್‍ಲ್ಯಾಂಡ್ ನಲ್ಲಿ” ಇದ್ದಂತೆ ಬಾಸವಾಗುತ್ತದೆ.

(ಮಾಹಿತಿ ಮತ್ತು ಚಿತ್ರಸೆಲೆ: pixabay.com, gibbsfarm.org.nz, eventfinda.co.nz, publicdelivery.org, worldartfoundations.com, )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    ಧನ್ಯವಾದಗಳು 🙏🙏🙏

ಅನಿಸಿಕೆ ಬರೆಯಿರಿ: