ರವೀಂದ್ರನಾತ ಟ್ಯಾಗೋರರ ಕವನಗಳು ಓದು – 13 ನೆಯ ಕಂತು
– ಸಿ.ಪಿ.ನಾಗರಾಜ.
ನಮ್ಮ ಸುಖಭೋಗಕ್ಕೆ ಹೊಸ ಹೊಸತು ವಸ್ತುಗಳ
ಸಂಚಯನದಲ್ಲಿ ನಾವು ಮಗ್ನರಾಗಿಹೆವು
ಅಂತರಂಗದ ಪೂರ್ಣತೆಯೆ ದಿಟದಿ ಸುಖವಹುದು
ಎಂಬ ಸತ್ಯವ ನಾವು ಕಡೆಗಣಿಸುತಿಹೆವು.
ಬಹಿರಂಗದ ಮಾರುಕಟ್ಟೆಯಲ್ಲಿ ಕಂಡು ಬರುವ ಹೊಸ ಹೊಸ ವಸ್ತುಗಳನ್ನು ಕೊಂಡು ತಂದು ಮನೆಯನ್ನು ಅಂದಚೆಂದವಾಗಿ ಸಿಂಗರಿಸಿ ಆನಂದಪಡುವುದರಲ್ಲಿಯೇ ಮಗ್ನರಾಗಿರುವ ನಾವು, ಅಂತರಂಗದ ಜೀವನದಲ್ಲಿ ಸಹಮಾನವರೊಡನೆ ಪ್ರೀತಿ, ಕರುಣೆ, ತಾಳ್ಮೆ ಮತ್ತು ಗೆಳೆತನದಿಂದ ಒಂದುಗೂಡಿ ಬಾಳುವುದರಲ್ಲಿ ಆನಂದವಿದೆ ಎಂಬ ವಾಸ್ತವವನ್ನು ಕಡೆಗಣಿಸಿದ್ದೇವೆ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.
ಸುಖ=ನಲಿವು/ನೆಮ್ಮದಿ/ಆನಂದ; ಭೋಗ=ಆನಂದವನ್ನು ಪಡೆಯುವುದು/ಮಯ್ ಮನಸ್ಸನ್ನು ಉಲ್ಲಾಸಗೊಳಿಸುವಂತಹ ವಸ್ತುಗಳನ್ನು ಹೊಂದುವುದು;
ನಮ್ಮ ಸುಖಭೋಗಕ್ಕೆ=ನಮ್ಮ ಮಯ್ ಮನದ ಬಯಕೆಗಳನ್ನು ಈಡೇರಿಸಿಕೊಂಡು ಆನಂದವನ್ನು ಪಡುವುದಕ್ಕಾಗಿ; ಹೊಸತು=ನೂತನವಾದುದು/ನವೀನವಾದುದು;
ಹೊಸ ಹೊಸತು ವಸ್ತುಗಳು=ವಿಜ್ನಾನ ಮತ್ತು ತಂತ್ರಜ್ನಾನದ ಪ್ರಗತಿಯಿಂದಾಗಿ ಪ್ರತಿನಿತ್ಯವೂ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ನೂರೆಂಟು ಬಗೆಯ ವಸ್ತುಗಳು;
ಸಂಚಯನ=ಒಟ್ಟುಗೂಡಿಸುವುದು/ಸಂಗ್ರಹಿಸುವುದು/ಕಲೆಹಾಕುವುದು; ಮಗ್ನರ್+ಆಗಿ+ಇಹೆವು; ಮಗ್ನ=ತಲ್ಲೀನನಾದವನು; ಇಹೆವು=ಇರುವೆವು;
ಹೊಸ ಹೊಸತು ವಸ್ತುಗಳ ಸಂಚಯನದಲ್ಲಿ ನಾವು ಮಗ್ನರಾಗಿಹೆವು=ಹೊಸ ಹೊಸ ವಸ್ತುಗಳನ್ನು ಕೊಂಡು ತಂದು ಕಲೆಹಾಕುವುದರಲ್ಲಿಯೇ ತೊಡಗಿದ್ದೇವೆ. ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ನಮ್ಮ ಕಣ್ಣುಗಳಿಗೆ ಮತ್ತು ಮನಸ್ಸಿಗೆ ಆನಂದವನ್ನು ಕೊಡುವ ಬಗೆಬಗೆಯ ವಸ್ತುಗಳನ್ನು ಪಡೆಯುವುದು ನಮ್ಮ ಬದುಕಿಗೆ ತುಂಬಾ ಅಗತ್ಯವಾಗಿ ಮತ್ತು ದೊಡ್ಡದಾಗಿ ಕಾಣಿಸುತ್ತಿದೆಯೇ ಹೊರತು, ನಮ್ಮ ಕಣ್ಣ ಮುಂದಿರುವ ವ್ಯಕ್ತಿಗಳ ಜೊತೆಯಲ್ಲಿ ಒಲವು ನಲಿವು ನೆಮ್ಮದಿಯಿಂದ ಬಾಳುವಂತಹ ನಂಟನ್ನು ಹೊಂದಿರಬೇಕೆಂಬುದು ತುಂಬಾ ಅಗತ್ಯವಾಗಿ ಮತ್ತು ದೊಡ್ಡದಾಗಿ ಕಾಣಿಸುತ್ತಿಲ್ಲ;
ಅಂತರಂಗ=ಮನಸ್ಸು; ಪೂರ್ಣತೆ=ಎಲ್ಲವನ್ನೂ ಒಳಗೊಂಡಿರುವುದು/ಸಮಸ್ತ;
ಅಂತರಂಗದ ಪೂರ್ಣತೆ=ಇದೊಂದು ನುಡಿಗಟ್ಟಾಗಿ ಬಳಕೆಗೊಂಡಿದೆ. ವ್ಯಕ್ತಿಯು ತನ್ನ ಕುಟುಂಬದ ನೆಲೆಯಲ್ಲಿ, ದುಡಿಮೆಯ ನೆಲೆಯಲ್ಲಿ ಮತ್ತು ಸಾರ್‍ವಜನಿಕ ನೆಲೆಯಲ್ಲಿ ತನ್ನೊಡನೆ ವ್ಯವಹರಿಸುವ ವ್ಯಕ್ತಿಗಳ ಜತೆಯಲ್ಲಿ ಮಾನಸಿಕವಾಗಿ ಒಳ್ಳೆಯ ನಂಟನ್ನು ಹೊಂದಿರಬೇಕು. ಇತರರನ್ನು ಯಾವುದೇ ಕಾರಣಕ್ಕಾಗಿ ಕೀಳಾಗಿ ಕಾಣದೆ, ಒಳ್ಳೆಯ ಮನಸ್ಸಿನಿಂದ ಪ್ರಯತ್ನಪೂರ್‍ವಕವಾಗಿ ಎಲ್ಲರೊಡನೆ ಹೊಂದಿಕೊಂಡು ಬಾಳುವುದರಿಂದ ಆನಂದ ದೊರೆಯುತ್ತದೆ ಎಂಬುದನ್ನು ಅರಿತಿರಬೇಕು; ಪರಸ್ಪರ ಹೊಂದಿಕೊಂಡು ಬಾಳುವ ಗುಣ ಪ್ರತಿಯೊಬ್ಬರಲ್ಲಿಯೂ ಇದ್ದಾಗ ಮಾತ್ರ ಜೀವನದಲ್ಲಿ ನೆಮ್ಮದಿಯು ದೊರೆಯುತ್ತದೆ;
ದಿಟ=ನಿಜ/ವಾಸ್ತವ; ಸುಖ+ಅಹುದು; ಸತ್ಯ=ವಾಸ್ತವ/ನಿಜ; ಕಡೆಗಣಿಸುತ+ಇಹೆವು; ಕಡೆಗಣಿಸು=ತಿರಸ್ಕರಿಸು/ಉದಾಸೀನ ಮಾಡು/ಗಮನ ಕೊಡದಿರು;
ಅಂತರಂಗದ ಪೂರ್ಣತೆಯ ದಿಟದಿ ಸುಖವಹುದು ಎಂಬ ಸತ್ಯವ ನಾವು ಕಡೆಗಣಿಸುತಿಹೆವು=ಇತರರೊಡನೆ ಒಳ್ಳೆಯ ನಡೆನುಡಿಯಿಂದ ಕೂಡಿಬಾಳಿದಾಗ ಮಾತ್ರ, ನಾವು ಜೀವನದಲ್ಲಿ ಆನಂದವನ್ನು ಪಡೆಯಬಲ್ಲೆವು ಎಂಬ ವಾಸ್ತವವನ್ನು ಕಡೆಗಣಿಸಿದ್ದೇವೆ.
ಬಹಿರಂಗದ ಜೀವನದಲ್ಲಿ ಅನುಕೂಲವನ್ನು ಒದಗಿಸಿಕೊಡುವಂತಹ ಸಲಕರಣೆಗಳು ಹೆಚ್ಚು ಹೆಚ್ಚು ಬಳಕೆಗೆ ಬಂದಂತೆಲ್ಲಾ, ವ್ಯಕ್ತಿಗಳ ಅಂತರಂಗದ ಬದುಕಿನ ನೆಮ್ಮದಿಯ ಪ್ರಮಾಣ ಕುಗ್ಗುತ್ತಿರುವ ವಾಸ್ತವವನ್ನು ಈ ಕವನದಲ್ಲಿ ಹೇಳಲಾಗಿದೆ. ಹಣವೊಂದಿದ್ದರೆ ಎಲ್ಲವನ್ನು ಪಡೆಯಬಲ್ಲೆವು ಎಂಬ ಕಾಲಮಾನದಲ್ಲಿ ಒಬ್ಬರು ಮತ್ತೊಬ್ಬರನ್ನು ಅವಲಂಬಿಸುವ ಅಗತ್ಯ ಇಲ್ಲವಾಗುತ್ತಿದೆ. ವಿಜ್ನಾನ ಮತ್ತು ತಂತ್ರಜ್ನಾನದಿಂದ ರೂಪುಗೊಂಡ ನಾಗರಿಕತೆಯಲ್ಲಿ ಮಾನವನು ವಸ್ತುಗಳ ಒಡನಾಡಿಯಾಗಿ, ಸಹಮಾನವರಿಂದ ದೂರ ದೂರ ಸರಿಯುತ್ತ, ಪರಸ್ಪರ ಒಲವು ನಲಿವು ನೆಮ್ಮದಿಯ ಬದುಕನ್ನು ಕಡೆಗಣಿಸಿದ್ದಾನೆ ಎಂಬ ವಾಸ್ತವವನ್ನು ಈ ಕವನದಲ್ಲಿ ಚಿತ್ರಿಸಲಾಗಿದೆ.
(ಚಿತ್ರ ಸೆಲೆ: wikimedia.org)
ಇತ್ತೀಚಿನ ಅನಿಸಿಕೆಗಳು