ನಾ ನೋಡಿದ ಸಿನೆಮಾ: ಹೊಸ ದಿನಚರಿ

– ಕಿಶೋರ್ ಕುಮಾರ್.

ನಿಜಗಟನೆಗಳನ್ನು ಹೆಚ್ಚು ಕಡಿಮೆ ಹಾಗೇ ಇಟ್ಟು, ಕಮರ್‍ಶಿಯಲ್ ಟಚ್ ಕೊಡದೆ ಸಿನೆಮಾ ಮಾಡೋದು ಸುಲಬದ ಕೆಲಸ ಅಲ್ಲ, ಹಾಗೇ ಮಾಡಲು ಆಗೋದೆ ಇಲ್ಲ ಅಂತಲೂ ಅಲ್ಲ. ಈ ರೀತಿಯ ಸಿನೆಮಾಗಳನ್ನು ಹೊಸ ಪ್ರಯತ್ನ ಎಂದು ವರ‍್ಗೀಕರಿಸುವುದೂ ಉಂಟು, ಒಮ್ಮೊಮ್ಮೆ ಈ ಸಿನೆಮಾಗಳು ತೆರೆಗೆ ಬರುತ್ತವೆ, ಕೆಲವೊಮ್ಮೆ ತೆರೆಗೆ ಬಂದರೂ ತಿಳಿಯದೇ ಮರೆಯಾಗುತ್ತವೆ, ಇನ್ನೂ ಕೆಲವು ಈಗಿನ ಟ್ರೆಂಡ್ ನಂತೆ ದೊಡ್ಡ ತೆರೆಗೆ ಬರದೆ ಓಟಿಟಿಯಲ್ಲೇ ಮಂದಿ ಮುಂದೆ ಬರುತ್ತಿವೆ. ಹೀಗೆ ದೊಡ್ಡ ಪದರೆ ಮೇಲೆ ಬಂದು, ಹೆಚ್ಚು ಮಂದಿಯನ್ನು ತಲುಪಲಾಗದಿದ್ದರೂ, ಓಟಿಟಿ ಯಲ್ಲಿ ತಮ್ಮ ಸಿನೆಮಾದ ಚಾಪು ಮೂಡಿಸಿದ ಸಿನೆಮಾಗಳ ಪಟ್ಟಿಗೆ ಸೇರುತ್ತದೆ ಹೊಸ ದಿನಚರಿ.

ಕೋವಿಡ್-19 ಸಮಯದಲ್ಲಿ ಇಡೀ ಜಗತ್ತೇ ಹಿಂದೆಂದೂ ಕಾಣದ ಕತ್ತಲೆಗೆ ಸಾಗಿ ಚೇತರಿಸಿಕೊಂಡಿದ್ದು ಎಲ್ಲರ ಮನಸ್ಸಲ್ಲೂ ಹಾಗೇ ಮಾಸದೇ ಇನ್ನೂ ಉಳಿದಿದೆ. ಏಕೆಂದರೆ ಕೋವಿಡ್ ಹಲವರ ಬದುಕನ್ನೇ ಅಲುಗಾಡಿಸಿದ್ದು ಸುಳ್ಳಲ್ಲ. ಈ ಕೋವಿಡ್ ಸಮಯದಲ್ಲಿ ಹಲವಾರು ಕುಟುಂಬಗಳ, ಸಂಬಂದಗಳ ಚಿತ್ರಣ ಹೇಗಿತ್ತು. ಮಂದಿಗಾಗಿ ತಮ್ಮ ವೈಯಕ್ತಿಕ ಬದುಕನ್ನು ಪಕ್ಕಕ್ಕಿಟ್ಟು ಮಂದಿಗಾಗಿ ದುಡಿದ ಆರೋಗ್ಯ ಸಿಬ್ಬಂದಿ (health care workers), ಏನಾಗುತ್ತಿದೆ ಎಂದು ತಿಳಿಯುವ ಮುಂಚೆಯೇ ಈ ಜಗತ್ತಿನಿಂದಲೇ ದೂರವಾದ ಜೀವಗಳು, ಇದನ್ನು ಹತ್ತಿರದಿಂದ ನೋಡಿಯೂ ಏನೂ ಮಾಡಲಾಗದ ಮಂದಿ. ಹತ್ತಿರದವರ ಕೊನೆಗಳಿಗೆಯಲ್ಲಿ ಜೊತೆಗಿರಲಾಗದ ಪರಿಸ್ತಿತಿ ಹೀಗೆ ಎಂದೂ ಊಹಿಸದ ಪರಿಸ್ತಿತಿಯೊಂದು ಬಿರುಗಾಳಿಯಂತೆ ಬಂದು ಅಪ್ಪಳಿಸಿ ಹೊರಟದ್ದರ ಒಂದು ಚಿತ್ರಣವನ್ನು ಕೆಲವು ನಿಜ ಗಟನೆಗಳನ್ನೂ ಸೇರಿಸಿ ಹೆಣೆಯಲಾದ ಕತೆಯೇ ಈ ಚಿತ್ರ. 

ಇದಶ್ಟೇ ಅಲ್ಲದೇ ಇಂದಿನ ತಲೆಮಾರಿನ ಒಲವು, ಅಲ್ಲಿ ಅತಿಯಾದ ಒಲವೂ ಸಹ ಹೇಗೆ ಬಿರುಕಿಗೆ ಕಾರಣವಾಗಬಹುದು, ಮದುವೆಯೆಂಬ ಒಂದು ಗಟ್ಟ ಅದಕ್ಕಾಗಿ ಪಡುವ ಪಾಡು ಇಂತಹ ಈ ಕಾಲಗಟ್ಟದ ವಿಶಯಗಳನ್ನೂ ಸಹ ಮಂದಿಯ ಮುಂದೆ ಹಾಗೇ ಇಟ್ಟಿದ್ದಾರೆ ನಿರ‍್ದೇಶಕ. ಇಡೀ ಕುಟುಂಬ ಕೂತು ನೋಡಬಹುದಾದ ಒಂದು ಚಿತ್ರವನ್ನು ಮಂದಿಯ ಮುಂದಿಟ್ಟಿದೆ ಚಿತ್ರತಂಡ ಎಂದರೆ ತಪ್ಪಾಗಲಾರದು.

ಬಾಬು ಹಿರಣ್ಣಯ್ಯ ಹಾಗೂ ಅರುಣಾ ಬಾಲರಾಜ್ ಅವರನ್ನು ಹೊರತು ಪಡಿಸಿ ಉಳಿದವರೆಲ್ಲಾ ನಟರು ಹೊಸಬರೇ ಆಗಿದ್ದು, ಮ್ರುತ್ಯುಂಜಯ ಶುಕ್ಲ, ಅಲೋಕ್ ಚೌರಾಸಿಯ, ಗಂಗಾದರ ಸಾಲಿಮಟ ಅವರು ಚಿತ್ರವನ್ನು ನಿರ್‍ಮಿಸಿದ್ದಾರೆ. ವೈಶಾಕ್ ಪುಶ್ಪಲತಾ ಹಾಗೂ ಕೀರ‍್ತಿ ಶೇಕರ್ ಅವರ ಚಿತ್ರಕತೆ ಹಾಗೂ ನಿರ‍್ದೇಶನವಿದ್ದು, ರಾಕಿ ಅವರ ಸಿನೆಮಾಟೋಗ್ರಪಿ, ರಂಜಿತ್ ಸೇತು ಅವರ ಎಡಿಟಿಂಗ್ ಹಾಗೂ ವೈಶಾಕ್ ವರ‍್ಮಾ ಅವರ ಸಂಗೀತವಿದೆ. ಹೀಗೆ ಹೊಸಬರ ಒಂದು ಪ್ರಯತ್ನ ತೆರೆಯ ಮೇಲೆ ಬಂದಿದ್ದು, ಈ ಚಿತ್ರವನ್ನು ಅಮೇಜಾನ್ ಪ್ರೈಮ್ ನಲ್ಲಿ ನೋಡಬಹುದಾಗಿದೆ.

(ಚಿತ್ರಸೆಲೆ: imdb.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks