ಪುಕ್ತಾಲ್ ಬೌದ್ದ ವಿಹಾರ

ಪುಕ್ತಾಲ್ ಬೌದ್ದ ವಿಹಾರ ಇರುವುದು ಲಡಾಕ್ ನಲ್ಲಿ. ಇಲ್ಲಿನ ಹಲವಾರು ಬೌದ್ದ ವಿಹಾರಗಳಲ್ಲಿ ಇದೂ ಒಂದು. ಅತಿ ದುರ‍್ಗಮವಾದ ಲುಗ್ನಾಕ್ ಕಣಿವೆಯಲ್ಲಿ ಪುಕ್ತಾಲ್ ಬೌದ್ದ ವಿಹಾರ ಸ್ತಾಪಿತವಾಗಿದೆ.ಈ ಬೌದ್ದ ವಿಹಾರವನ್ನು ನೈಸರ‍್ಗಿಕ ಗುಹೆಗಳಲ್ಲಿ ನಿರ‍್ಮಿಸಲಾಗಿದೆ. ಇಲ್ಲಿಗೆ ತಲುಪಲು ಯಾವುದೇ ರೀತಿಯ ರಸ್ತೆಗಳಿಲ್ಲ, ಹಾಗಾಗಿ ವಾಹನಗಳು ಅಲ್ಲಿಗೆ ಹೋಗುವುದಿಲ್ಲ. ಕಾಲ್ನಡಿಗೆಯಲ್ಲೇ ಹೋಗುವುದು ಅನಿವಾರ‍್ಯ. ಅದೂ ಬೆಟ್ಟ ಗುಡ್ಡಗಳಲ್ಲಿ ಚಾರಣ ಮಾಡುತ್ತಾ ಸಾಗಬೇಕು. ಪುಕ್ತಾಲ್ ಬೌದ್ದ ವಿಹಾರವನ್ನು ತಲುಪಲು ಹತ್ತಿರದ ಹಳ್ಳಿಯಾದ ಚಾ ಅತವ ಕಂಗಸಾರ್ ನಿಂದ ಒಂದು ದಿನದ ಚಾರಣ. ಇದನ್ನು ತಲುಪಲು ಇದೊಂದೇ ದಾರಿ ಇರುವುದು. ಇಲ್ಲಿಗೆ ತಲುಪಿದ ಮೇಲೆ, ಆವರಣದಲ್ಲಿ ನಿಂತು ಅಂಕುಡೊಂಕಾಗಿ ಹರಿಯುವ ಲುಂಗ್ನಾಕ್ ನದಿ, ಕಣಿವೆಯ ವಿಹಂಗಮ ನೋಟ ಕಣ್ಣಿಗೆ ಹಬ್ಬ.

ಈ ಬೌದ್ದ ವಿಹಾರ ಇರುವ ಗುಹೆಗಳಿಗೆ ಸರಿ ಸುಮಾರು 2,550 ವರ‍್ಶಗಳ ಹಿಂದೆ ಅನೇಕ ರುಶಿಗಳು, ವಿದ್ವಾಂಸರು ಬೇಟಿ ನೀಡಿದ್ದರು ಎಂದು ಹೇಳಲಾಗುತ್ತದೆ. ಈ ಬೌದ್ದ ವಿಹಾರ ಟಿಬೆಟಿಯನ್ ಬೌದ್ದ ದರ‍್ಮದ ಗೆಲುಗ್ ಶಾಲೆಗೆ ಸೇರಿದೆ. ಇಲ್ಲಿ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ.  ಈ ಹಬ್ಬಗಳು ಬಹಳ ಆಕರ‍್ಶಣಿಯ. ಇಲ್ಲಿ ಆಚರಣೆಗೊಳ್ಳುವ ಹಬ್ಬಗಳಲ್ಲಿ ಸ್ಮೋನ್ಲಾಮ್ ಚೆನ್ನೋ, ಚುಡ್ಸಮ್ ಚೋಡ್ಪಾ, ಚೋಂಗಾ ಚೋಡ್ಪಾ, ಗೈಲ್ವೇ ಜಬ್ಸ್ತಾನ್, ಜಿಗ್ಚೆದ್ ಲಾಚುಸಮ್ ಮುಂತಾದ ಹಬ್ಬಗಳು ಪ್ರಮುಕವಾದವು.

ಪುಕ್ತಾಲ್ ಬೌದ್ದ ವಿಹಾರದ ಗೊಂಪಾವನ್ನು (ಬೌದ್ದ ದರ‍್ಮದ ಶಾಲೆ) ಹದಿನೈದನೇ ಶತಮಾನದ ಆರಂಬದಲ್ಲಿ ಟಿಬೆಟಿಯನ್ ಬೌದ್ದ ದರ‍್ಮದ ಗೆಲುಗ್ ಪಂತದ ಸಂಸ್ತಾಪಕ ಜೆ. ತ್ಸೋಂಗ್ಕಾಪಾ ಅವರ ಶಿಶ್ಯರಾದ ಜಾಂಗ್ಸೆಮ್ ಶೆರಾಪ್ ಜಾಂಗ್ಪೋ ಸ್ತಾಪಿಸಿದರು ಎಂದು ಅಲ್ಲಿನ ದಂತ ಕತೆಗಳು ಹೇಳುತ್ತವೆ. ಅದಕ್ಕೂ ಬಹಳ ಮುಂಚಿನಿಂದ ಈ ನೈಸರ‍್ಗಿಕ ಗುಹೆಗಳು ಅಸ್ತಿತ್ವದಲ್ಲಿದ್ದವು ಎಂದು ಕೆಲವು ಅದ್ಯಯನಗಳು ಹೇಳುತ್ತವೆ. ಇಲ್ಲಿನ ದಂತ ಕತೆಗಳು ಹೇಳುವ ಪ್ರಕಾರ  ಜಾಂಗ್ಸೆಮ್ ಶೆರಾಪ್ ಜಾಂಗ್ಪೋ ಇಲ್ಲಿ ಬಂದು ತನಗೆ ಸಿದ್ದಿಸಿದ್ದ ಹಲವಾರು ಪವಾಡಗಳನ್ನು ಮಾಡಿ ತೋರಿಸಿದ್ದರು. ಅವರು ತಮ್ಮ ಪವಾಡ ಶಕ್ತಿಯನ್ನು ಉಪಯೋಗಿಸಿಕೊಂಡು ಗುಹೆಯಿಂದ ಚಿಲುಮೆಯ ಮೂಲಕ ನೀರು ಹರಿದು ಬರುವಂತೆ ಮಾಡಿದ್ದರು, ಗುಹೆಯ ಮೇಲೆ ಮರ ಬೆಳೆಯುವಂತೆ ಮಾಡಿದ್ದರು ಹಾಗೂ ಇದರೊಂದಿಗೆ ಗುಹೆಯ ಗಾತ್ರವನ್ನು ಹೆಚ್ಚುವಂತೆಯೂ ಮಾಡಿದ್ದರು ಎಂದು ಅಲ್ಲಿನ ಸ್ತಳೀಯರು ಇಂದಿಗೂ ನಂಬುತ್ತಾರೆ. ಇವೆಲ್ಲಾ ದಂತ ಕತೆಗಳೇ ಹೊರತು ಇವಾವುದಕ್ಕೂ ಪೂರಕವಾದ ದಾಕಲೆಗಳಿಲ್ಲ.

ಪುಕ್ತಾಲ್ ಬೌದ್ದ ವಿಹಾರದ ವಾಸ್ತು ಶಿಲ್ಪವನ್ನು ಗಮನಿಸಿದರೆ ಇದು ಟಿಬೆಟಿಯನ್ ಶೈಲಿಯಲ್ಲಿದೆ. ಇಲ್ಲಿ ಮುಕ್ಯ ದೇವಾಲಯ, ಅದರೊಡನೆ ಪ್ರಾರ‍್ತನಾ ಮಂದಿರ, ಗ್ರಂತಾಲಯ, ವಾಸದ ಕೋಣೆಗಳು, ಬೋದನಾ ಸೌಲಬ್ಯಗಳನ್ನು ಶೇಕರಿಸಿಡುವ ಕೋಣೆ, ಅಡುಗೆ ಮನೆ ಹಾಗೂ ಜಾಂಕ್ಪೋ ಸ್ರುಶ್ಟಿಸಿದ ನೀರಿನ ಚಿಲುಮೆಗಳಿವೆ. ಇಲ್ಲಿಗೆ ಬೇಟಿ ನೀಡಲು ಉತ್ತಮ ಸಮಯವೆಂದರೆ, ಇಲ್ಲಿ ಆಚರಿಸುವ ಉತ್ಸವಗಳ ಸಮಯವಾಗಿದೆ. ಇದನ್ನು ಹೊರತುಪಡಿಸಿದರೆ ಜೂನ್ ಮತ್ತು ಸೆಪ್ಟೆಂಬರ್ ನಡುವೆ ಬೇಟಿ ನೀಡಲು ಸೂಕ್ತ ಸಮಯ. ಇಲ್ಲಿಗೆ ಬೇಡಿ ನೀಡುವವರು ಬೆಚ್ಚನೆಯ ಉಡುಪನ್ನು ಕೊಂಡೊಯ್ಯುವುದು ತೀರಾ ಅವಶ್ಯಕ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.org, tourmyindia.com, themysteriousindia.net, thrillophilia.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks