ಬ್ರೆಕ್ಟ್ ಕವನಗಳ ಓದು – 10 ನೆಯ ಕಂತು

– ಸಿ.ಪಿ.ನಾಗರಾಜ.

*** ಜರ್ಮನಿ 1945 ***

(ಕನ್ನಡ ಅನುವಾದ: ಶಾ.ಬಾಲುರಾವ್)

ಮನೆಯೊಳಗೆ ಮಹಾಮಾರಿ
ಹೊರಗೆ ಥಂಡಿಯ ಸಾವು
ನಾವೆಲ್ಲಿ ಹೋಗಬೇಕೀಗ.

ಹೆಣ್ಣು ಹಂದಿ ಹುಲ್ಲ ಮೇಲೆಯೇ ‘ಮಾಡಿ’ ಕೊಂಡಿದೆ
ಆ ಹೆಣ್ಣು ಹಂದಿ ನನ್ನ ತಾಯಿ

ಎಲೆ ನನ್ನವ್ವ… ಎಲೆ ಹೆತ್ತವ್ವ
ನೀನೇನು ಮಾಡಿಬಿಟ್ಟೆ.

ತಾವು ಹುಟ್ಟಿ ಬೆಳೆದು ಬಾಳುತ್ತಿರುವ ನಾಡಿನಲ್ಲಿಯೇ ಜನಾಂಗದ ಹೆಸರಿನಲ್ಲಿ ನಡೆಯುತ್ತಿರುವ ಕೊಲೆ, ಸುಲಿಗೆ ಮತ್ತು ಹಲ್ಲೆಗೆ ಗುರಿಯಾಗಿ ನರಳುತ್ತಿರುವ ಜನಸಮುದಾಯದ ಬದುಕಿನ ದುರಂತವನ್ನು ಈ ಕವನದಲ್ಲಿ ರೂಪಕದ ಮೂಲಕ ಚಿತ್ರಿಸಲಾಗಿದೆ.

ಜರ್ಮನಿ=ಯುರೋಪ್ ಪ್ರಾಂತ್ಯದಲ್ಲಿರುವ ಒಂದು ದೇಶ. 1933 ರಿಂದ 1945 ರ ವರೆಗೆ ಈ ದೇಶವನ್ನು ಆಳುತ್ತಿದ್ದ ಅಡಾಲ್ಪ್ ಹಿಟ್ಲರ್ ಎಂಬ ವ್ಯಕ್ತಿಯು ಒಬ್ಬ ಸರ್‍ವಾದಿಕಾರಿಯಾಗಿದ್ದ. ಜಗತ್ತಿನ ಮಾನವ ಸಮುದಾಯದಲ್ಲಿ ಆರ್‍ಯ ಜನಾಂಗದವರೇ ಅತ್ಯುತ್ತಮರೆಂದು, ಇತರ ಜನಾಂಗಗಳನ್ನು ಕಡೆಗಣಿಸಿದ್ದ ಹಿಟ್ಲರನು ಜರ್‍ಮನ್ ಪ್ರಜೆಗಳಾಗಿದ್ದ ಯಹೂದಿ ಜನಾಂಗದವರನ್ನು ಸಂಪೂರ್‍ಣವಾಗಿ ನಾಶಮಾಡಲೆಂದು ‘ನಾಜಿ’ ಎಂಬ ಹೆಸರಿನ ಪಾರ್‍ಟಿಯನ್ನು ರಚಿಸಿ (ನ್ಯಾಶನಲ್ ಸೋಶಿಯಲಿಸ್ಟ್ ಪಾರ್‍ಟಿ ಆಪ್ ಜರ್‍ಮನಿ) ಸರಿಸುಮಾರು 60 ಲಕ್ಶಕ್ಕಿಂತ ಹೆಚ್ಚು ಮಂದಿ ಯಹೂದಿಗಳನ್ನು ಅತ್ಯಂತ ಕ್ರೂರವಾಗಿ ಕೊಲ್ಲಿಸಿದ. 1945 ರ ಕಾಲಮಾನದಲ್ಲಿ ಜರ್‍ಮನಿಯಲ್ಲಿದ್ದ ಯಹೂದಿ ಜನಾಂಗದವರ ಬದುಕು ದುರಂತಮಯವಾಗಿತ್ತು;

ಮಹಾ=ದೊಡ್ಡ; ಮಾರಿ=ಒಬ್ಬ ದೇವತೆಯ ಹೆಸರು. ಮಹಾಮಾರಿ=ಇದೊಂದು ನುಡಿಗಟ್ಟು.ಜನರಿಗೆ ಸಾವುನೋವನ್ನುಂಟುಮಾಡುವ ದೇವತೆಯೆಂಬ ತಿರುಳಿನಲ್ಲಿ ಬಳಕೆಯಾಗುತ್ತದೆ;

ಮನೆಯೊಳಗೆ ಮಹಾಮಾರಿ=‘ಮನೆಯೊಳಗೆ’ ಎಂದರೆ ಜರ್‍ಮನಿ ದೇಶದೊಳಗೆ, ‘ಮಹಾಮಾರಿ ‘ ಎಂದರೆ ದೊಡ್ಡ ಪ್ರಮಾಣದಲ್ಲಿ ಯಹೂದಿ ಜನಾಂಗದವರ ಮೇಲೆ ನಡೆಯುತ್ತಿದ್ದ ಹಿಂಸಾಚಾರ.

ಆರ್‍ಯ ಜನಾಂಗದವರ ಸೇಡಿನ ಬೆಂಕಿಗೆ ಗುರಿಯಾದ ಯಹೂದಿಗಳು ತಮ್ಮ ಮನೆಮಟಗಳನ್ನು ಕಳೆದುಕೊಂಡು ಹಸಿವು ಮತ್ತು ಅಪಮಾನದಿಂದ ನರಳುವಂತಾಯಿತು. ಯಾವ ಗಳಿಗೆಯಲ್ಲಾದರೂ ಮಾನಹಾನಿ ಮತ್ತು ಜೀವಹಾನಿಗೆ ಒಳಗಾಗಿ ಸಂಕಟದಿಂದ ನರಳುವಂತಹ ಗತಿಯು ಒದಗಿಬಂದಿತು. ಜರ್‍ಮನಿ ದೇಶದಲ್ಲಿಯೇ ಹುಟ್ಟಿ ಬೆಳೆದು ಬಾಳುತ್ತಿದ್ದ ಯಹೂದಿಗಳಿಗೆ ತಮ್ಮ ತಾಯ್ನಾಡಿನಲ್ಲಿಯೇ ತಲೆಯೆತ್ತಿ ಬಾಳಲಾರದಂತಹ ದುರ್‍ಗತಿ ಒದಗಿಬಂದಿರುವುದನ್ನು “ ಮನೆಯೊಳಗೆ ಮಹಾಮಾರಿ ” ಎಂಬ ರೂಪಕದ ನುಡಿಗಳು ಸೂಚಿಸುತ್ತಿವೆ.

ಹೊರಗೆ=ಜರ್‍ಮನಿಯ ಹೊರಗಿನ ದೇಶಗಳಲ್ಲಿ;

1939 ರಿಂದ 1945 ರ ಕಾಲಮಾನದಲ್ಲಿ ಯುರೋಪ್ ಮತ್ತು ಏಶ್ಯಾ ಪ್ರಾಂತ್ಯಗಳಲ್ಲಿ ಎರಡನೆಯ ಮಹಾಯುದ್ದ ನಡೆಯುತ್ತಿದೆ. ಪ್ರಾನ್ಸ್-ಇಂಗ್ಲೆಂಡ್-ಅಮೆರಿಕ-ರಶ್ಯ ದೇಶಗಳ ಸೇನೆಗಳು ಒಗ್ಗೂಡಿ ಜರ್‍ಮನಿ-ಜಪಾನ್-ಇಟಲಿ ದೇಶಗಳ ಸೇನೆಗಳ ಎದುರು ಹೋರಾಡುತ್ತಿವೆ.

ಥಂಡಿ=ತಂಡಿ/ಚಳಿ/ತಣ್ಣಗಿರುವುದು; ಥಂಡಿಯ ಸಾವು=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ.

ಹೊರಗೆ ಥಂಡಿಯ ಸಾವು=ಎರಡನೆಯ ಮಹಾಯುದ್ದ ನಡೆದ ಆರು ವರುಶಗಳ ಕಾಲದಲ್ಲಿ ಆರು ಕೋಟಿಗೂ ಹೆಚ್ಚು ಮಂದಿ ಸಾವಿಗೆ ಬಲಿಯಾದರೆ, ಕೋಟ್ಯಂತರ ಮಂದಿ ಹಸಿವು, ಅಪಮಾನ ಮತ್ತು ಬಡತನದ ಸಂಕಟಕ್ಕೆ ಗುರಿಯಾಗಿ ಬಹುಕಾಲ ನರಳುವಂತಾಯಿತು. “ಥಂಡಿಯ ಸಾವು” ಎಂಬ ರೂಪಕವು ಕಾಳೆಗದಲ್ಲಿ ತೊಡಗಿದ್ದ ಎರಡು ಕಡೆಯ ಸೇನೆಯು ಅತ್ಯಂತ ಕ್ರೂರವಾದ ರೀತಿಯಲ್ಲಿ ಕೊಲೆ, ಸುಲಿಗೆಯಲ್ಲಿ ತೊಡಗಿ ಲಕ್ಶಾಂತರ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಮಕ್ಕಳನ್ನು ಬಿಡದೆ ಕಗ್ಗೊಲೆ ಮಾಡಿದ್ದನ್ನು ಸೂಚಿಸುತ್ತದೆ; ಮಾನವರ ಕರುಣೆಯಿಲ್ಲದ ಇಂತಹ ವರ್‍ತನೆಯನ್ನು “ತಣ್ಣನೆಯ ಕ್ರೂರತನ” ಎಂದು ಕರೆಯುತ್ತಾರೆ;

ನಾವು+ಎಲ್ಲಿ; ಎಲ್ಲಿ=ಯಾವ ದೇಶಕ್ಕೆ/ಯಾವ ಪ್ರಾಂತ್ಯಕ್ಕೆ; ಹೋಗಬೇಕು+ಈಗ;

ನಾವೆಲ್ಲಿ ಹೋಗಬೇಕೀಗ=ತಾಯ್ನಾಡು ಜರ್‍ಮನಿಯಲ್ಲಿ ನಾಜಿ ತಂಡದ ಕ್ರೂರತನಕ್ಕೆ ಬಲಿಯಾಗುತ್ತಿದ್ದೇವೆ, ಹೊರದೇಶಗಳಲ್ಲಿ ಎದೆ ನಡುಗಿಸುವಂತಹ ಕಾಳೆಗ ನಡೆಯುತ್ತಿದೆ. ಯಹೂದಿಗಳಾದ ನಾವು ಈಗ ಬದುಕಿ ಉಳಿಯಲು ಜಗತ್ತಿನಲ್ಲಿ ನೆಲೆಯೇ ಇಲ್ಲವಾಗಿದೆ;

‘ಮಾಡಿ’ ಕೊಂಡಿದೆ=ಮಲಮೂತ್ರವನ್ನು ವಿಸರ್‍ಜನೆ ಮಾಡಿಕೊಂಡಿದೆ; ಹೆಣ್ಣುಹಂದಿ=ಜರ್‍ಮನಿ ದೇಶ. ರೂಪಕದ ತಿರುಳು; ನನ್ನ ತಾಯಿ=ತಾಯ್ನಾಡು;

ಹೆಣ್ಣು ಹಂದಿ ಹುಲ್ಲ ಮೇಲೆಯೇ ‘ಮಾಡಿ’ಕೊಂಡಿದೆ ಆ ಹೆಣ್ಣುಹಂದಿ ನನ್ನ ತಾಯಿ=ಈ ನುಡಿಗಳೆಲ್ಲವೂ ರೂಪಕವಾಗಿ ಬಳಕೆಗೊಂಡಿವೆ. ಹೆಣ್ಣುಹಂದಿಯು ತನ್ನ ನೆಲೆಯನ್ನು ಕೊಳಕು ಮಾಡಿ, ಮರಿಗಳಾಗಲಿ ಇಲ್ಲವೇ ತಾನಾಗಲಿ ನೆಮ್ಮದಿಯಿಂದಿರಲು ಆಗದಂತಹ ಕೆಲಸವನ್ನು ಮಾಡಿದೆ. ಅಂತೆಯೇ ಜರ್‍ಮನಿಯನ್ನು ಆಳುತ್ತಿದ್ದ ಹಿಟ್ಲರನು ಇಡೀ ದೇಶವನ್ನು ಹಗೆತನ ಮತ್ತು ಸೇಡಿನ ನೆಲೆಯನ್ನಾಗಿ ಮಾಡಿ, ಪ್ರಜೆಗಳಾಗಲಿ ಇಲ್ಲವೇ ತಾನಾಗಲಿ ನೆಮ್ಮದಿಯಿಂದ ಬಾಳುವುದಕ್ಕೆ ಆಗದಂತಹ ಪರಿಸರವನ್ನು ನಿರ್‍ಮಿಸಿದ್ದಾನೆ. ಇಡೀ ದೇಶವೇ ಒಳಗಿನ ಮತ್ತು ಹೊರಗಿನ ಕ್ರೂರತನಕ್ಕೆ ಬಲಿಯಾಗುತ್ತಿದೆ. ಹೆತ್ತ ತಾಯಿ ತನ್ನ ಮಕ್ಕಳಿಗೆ ಹಾಲುಣಿಸುವ ಬದಲು ವಿಶವನ್ನು ಉಣಿಸಿದಂತೆ ಹಿಟ್ಲರನು ಯೆಹೂದಿ ಜನಸಮುದಾಯವನ್ನು ಸೆರೆ ಹಿಡಿದು, ಗುಂಪುಗುಂಪಾಗಿ ನಿಲ್ಲಿಸಿ ಗುಂಡಿಕ್ಕಿ ಕೊಲ್ಲುವ, ನಂಜನ್ನು ಉಣಿಸುವ ಮತ್ತು ಗ್ಯಾಸ್ ಚೇಂಬರ್ ಗಳಲ್ಲಿ ನಂಜಿನ ಅನಿಲವನ್ನು ಬಿಟ್ಟು ಉಸಿರನ್ನು ಅಡಗಿಸಿ ಸಾಮೂಹಿಕವಾಗಿ ಕೊಲ್ಲುವ ಕೆಲಸದಲ್ಲಿ ತೊಡಗಿದ್ದಾನೆ.

ಎಲೆ ನನ್ನವ್ವ… ಎಲೆ ಹೆತ್ತವ್ವ ನೀನೇನು ಮಾಡಿಬಿಟ್ಟೆ= ತಾಯ್ನಾಡಿನಲ್ಲಿಯೇ ತಾವು ದುರಂತಕ್ಕೆ ಬಲಿಯಾಗತೊಡಗಿದಾಗ, ದಿಕ್ಕು ತೋಚದಂತಾಗಿ ಯೆಹೂದಿ ಜನಾಂಗದವರು ಆಕ್ರಂದನ ದನಿಯಿಂದ ನರಳುತ್ತಿರುವುದನ್ನು ಈ ನುಡಿಗಳು ಸೂಚಿಸುತ್ತಿವೆ;

‘ಜರ್ಮನಿ 1945’ ಕವನದ ಓದಿನ ಜತೆಗೆ ಇನ್ನು ಕೆಲವು ಸಂಗತಿಗಳನ್ನು ತಿಳಿಯಬೇಕಾದ ಅಗತ್ಯವಿದೆ.

1939 ರಿಂದ 1945 ರ ವರೆಗೆ ಹಿಟ್ಲರನ ಆಡಳಿತದ ಸಮಯದಲ್ಲಿ ಸಾವು ನೋವಿಗೆ ಗುರಿಯಾಗಿ ನರಳಿದ್ದ ಯಹೂದಿ ಜನಾಂಗದವರಿಗೆ ಬ್ರಿಟಿಶರು ತಮ್ಮ ವಸಾಹತು ಆಗಿದ್ದ ಪ್ಯಾಲಿಸ್ಟೈನ್ ಪದೇಶವನ್ನು ನೀಡಿ, ಇಡೀ ಜಗತ್ತಿನಲ್ಲಿ ಹರಡಿಕೊಂಡಂತಿದ್ದ ಯಹೂದಿಗಳಿಗೆ ಒಂದು ನೆಲೆಯನ್ನು ಕಲ್ಪಿಸಿದರು. 1948 ರಿಂದ ಯಹೂದಿಗಳ ಈ ನೆಲೆಯು ಇಸ್ರೇಲ್ ಎಂಬ ದೇಶವಾಗಿ ರೂಪುಗೊಂಡಿತು.

ಪ್ಯಾಲಿಸ್ಟೈನ್ ಅನ್ನು ತಮ್ಮ ತಾಯ್ನಾಡನ್ನಾಗಿ ಹೊಂದಿದ್ದ ಅರಬ್ ಜನಾಂಗದವರು ಮತ್ತು ಅಲ್ಲಿ ಹೊಸದಾಗಿ ಹೋಗಿ ನೆಲೆಸಿದ ಯಹೂದಿಗಳು 1948 ರಿಂದ ಇಂದಿನ ತನಕ ಒಂದಲ್ಲ ಒಂದು ಕಾರಣಕ್ಕಾಗಿ ಕಾದಾಡುತ್ತಲೇ ಇದ್ದಾರೆ. ಹೊಸ ಹೊಸ ಶಸ್ತ್ರಾಸ್ತ್ರಗಳನ್ನುಳ್ಳ ಯಹೂದಿಗಳು ಅರಬ್ಬರ ಮೇಲೆ ದಾಳಿಯನ್ನು ನಡೆಸುತ್ತ , ದೊಡ್ಡ ಪ್ರಮಾಣದಲ್ಲಿ ಅರಬ್ಬರ ಸಾವು ನೋವುಗಳಿಗೆ ಕಾರಣರಾಗಿದ್ದಾರೆ. ಇಂದು ತಮ್ಮ ತಾಯ್ನಾಡಿನಲ್ಲಿ ನೆಲೆಸಿರುವ ಅರಬ್ಬರ ಮೇಲೆ ಅಂದು ಆರ್‍ಯನ್ ಜನಾಂಗದ ಹಿಟ್ಲರನಿಂದ ಹಲ್ಲೆಗೊಳಗಾಗಿ ನರಳಿದ್ದ ಯಹೂದಿಗಳೇ ಕ್ರೂರವಾದ ಹಲ್ಲೆಯನ್ನು ಮಾಡುತ್ತಿದ್ದಾರೆ.

ಇದರಿಂದ ಒಂದು ವಾಸ್ತವದ ಸಂಗತಿಯು ನಮಗೆ ತಿಳಿಯುತ್ತದೆ. ಅದೇನೆಂದರೆ ಮಾನವರು ಅವರು ಯಾವುದೇ ದರ್‍ಮದವರಾಗಿರಲಿ ಇಲ್ಲವೇ ಜನಾಂಗದವರಾಗಿರಲಿ ತಮ್ಮ ಬಳಿ ಶಕ್ತಿಯಿದ್ದಾಗ ಕ್ರೂರತನದಿಂದ ಬಲಹೀನರನ್ನು ತುಳಿಯುತ್ತಾರೆ. ತಾವು ಬಲಹೀನರಾಗಿದ್ದಾಗ ಅಸಹಾಯಕರಾಗಿ ನರಳುತ್ತಾರೆ. ಸನ್ನಿವೇಶಕ್ಕೆ ತಕ್ಕಂತೆ ಮಾನವ ಕ್ರೂರಪ್ರಾಣಿಯಾಗುತ್ತಾನೆ ಇಲ್ಲವೇ ಬಲಿಪಶುವಾಗುತ್ತಾನೆ.

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks