ಸುಗ್ಗಿ ಹಬ್ಬ ಸಂಕ್ರಾಂತಿ

– ಶ್ಯಾಮಲಶ್ರೀ.ಕೆ.ಎಸ್.

ಸಂಕ್ರಾಂತಿ, Sankranti

ಹಬ್ಬಗಳೆಂದರೆ ಕೇವಲ ಸಾಂಪ್ರದಾಯಿಕ ಆಚರಣೆ ಮಾತ್ರವಲ್ಲ. ಅವು ಎಲ್ಲರ ಪಾಲಿಗೆ ಒದಗುವ ಒಂದು ಬಗೆಯ ಹುರುಪು, ಹರುಶತರುವಂತದ್ದಾಗಿದೆ. ಪ್ರತೀ ವರ‍್ಶ ಜನವರಿ ತಿಂಗಳಲ್ಲಿ ತಪ್ಪದೇ ಆಚರಿಸುವ ಹಬ್ಬ ಸಂಕ್ರಾಂತಿ. ಇದನ್ನು ಹೊಸ ಕ್ಯಾಲೆಂಡರ್ ವರ‍್ಶದ ಮೊದಲನೇ ಹಬ್ಬವೆನ್ನಬಹುದು. ನಮ್ಮ ಕರ‍್ನಾಟಕದಲ್ಲಿ ಸಂಕ್ರಾಂತಿ ಎಂದು ಕರೆದರೆ, ತಮಿಳು ನಾಡಿನಲ್ಲಿ ಪೊಂಗಲ್, ಆಂದ್ರಪ್ರದೇಶದಲ್ಲಿ ಬೋಗಿ, ಪಂಜಾಬ್‌ನಲ್ಲಿ ಲೋಹ್ರಿ, ರಾಜಸ್ತಾನದಲ್ಲಿ ಸಂಕ್ರಾತ್, ಅಸ್ಸಾಂನಲ್ಲಿ ಬಿಹು ಮತ್ತು ಒಡಿಶಾದಲ್ಲಿ ಮಕರ ಸಂಕ್ರಾಂತ್ ಹೀಗೆ ಹಲವು ಹೆಸರುಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.

ಸೂರ‍್ಯನು ತನ್ನ ಪತವನ್ನು ದಕ್ಶಿಣಾಯನದಿಂದ ಉತ್ತರಾಯಣದೆಡೆಗೆ ಬದಲಿಸಿ ಮಕರ ರಾಶಿಗೆ ತಲುಪುವ ಈ ದಿನವನ್ನು ಮಕರ ಸಂಕ್ರಮಣ ಎನ್ನುವರು. ಆದ್ದರಿಂದಲೇ ಈ ಹಬ್ಬದಂದು ಸೂರ‍್ಯೋದಯಕ್ಕೂ ಮುನ್ನವೇ ಶ್ರದ್ದಾ ಬಕ್ತಿಯಿಂದ ಪೂಜೆ ನೈವೇದ್ಯಗಳು ಸಲ್ಲುತ್ತದೆ. ಜನಪದ ಸೊಗಡಿಗೂ ಸಂಕ್ರಾಂತಿಗೂ ತುಂಬಾ ನಂಟು. ಅನ್ನದಾತನು ವರ‍್ಶ ಪೂರ‍್ತಿ ಬೆವರು ಹರಿಸಿ ತಾನು  ಬೆಳೆದ ದಾನ್ಯಗಳನ್ನು ರಾಶಿ ಮಾಡಿ ಮಡಿಯಿಂದ, ಬಕ್ತಿಯಿಂದ ಪೂಜಿಸುವ ದಿನವೇ ಸುಗ್ಗಿ ಸಂಬ್ರಮ. ಈ ರಾಶಿಗಳ ನಡು ನಡುವೆ ಬಣ್ಣ ಬಣ್ಣದ ರಂಗೋಲಿಗಳು, ಹೂವುಗಳು, ಕಬ್ಬಿನ ಜಲ್ಲೆಗಳಿಂದ ಸಿಂಗರಿಸಿದ ಸುಗ್ಗಿಯ ಮೆರುಗು ಎಲ್ಲರನ್ನು ಮೈಮರೆಸುವಂತಿರುತ್ತದೆ. ಹಳ್ಳಿ ಕಡೆ ಈ ಹಬ್ಬವನ್ನು ಕಣ್ತುಂಬಿಕೊಳ್ಳುವುದು ಒಂದು ರೀತಿಯಲ್ಲಿ ಸ್ವರ‍್ಗವೇ ಮುಂದಿರುವುದೇನೋ ಎನಿಸುವಶ್ಟು ಆನಂದ, ಸಡಗರ. ಸುಗ್ಗಿ ಹಬ್ಬಕ್ಕೆ ಬಿಸಿ ಬಿಸಿಯಾದ ಸಿಹಿ ಮತ್ತು ಕಾರದ ಹುಗ್ಗಿಯ ಸವಿಯು ಮಾಗಿ ಚಳಿಯನ್ನು ತಡೆಯುವಂತ ತಾಕತ್ತು ನೀಡುತ್ತದೆ. ಹುಗ್ಗಿ ಅಂದರೆ ನಗರಗಳಲ್ಲಿ ನಾವೆಲ್ಲಾ ಕರೆಯುವ ಪೊಂಗಲ್. ಹುಗ್ಗಿಯ ಜೊತೆಗೆ ಬೇಯಿಸಿದ ಕಡಲೆಕಾಯಿ, ಅವರೆಕಾಯಿ, ಸಿಹಿಗೆಣಸು ಇವೆಲ್ಲವೂ ಕಾಯಂ.

ಸುಗ್ಗಿ ಹಬ್ಬದಲ್ಲಿ ಕೋಲಾಟ, ಲಾವಣಿ, ಜನಪದ ಗೀತೆಗಳು ಸಂಬ್ರಮವಿರುತ್ತದೆ. ಇವೆಲ್ಲದರ ನಡುವೆ ದನಕರುಗಳ ಕೊರಳಿಗೆ ಗಂಟೆ, ಕಾಲಿಗೆ ಗೆಜ್ಜೆ, ಕೊಂಬುಗಳಿಗೆ ಬಣ್ಣದ ಲೇಪನ ಮಾಡಿ ಕಿಚ್ಚು ಹಾಯಿಸುವ ಅದ್ಬುತ ದ್ರುಶ್ಯ ಎಲ್ಲರ ಮನಮುಟ್ಟುವಂತೆ ಮಾಡುತ್ತದೆ. ಆದರೆ ಆದುನಿಕತೆಯ ತಳುಕಿಗೆ ಸಿಲುಕಿ ಈ ಅದ್ಬುತ ಆಚರಣೆ ಗ್ರಾಮೀಣ ಬಾಗಗಳಲ್ಲಿ ಕಡಿಮೆಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಸಂಕ್ರಾಂತಿ ಹಬ್ಬದ ಮತ್ತೊಂದು ವಿಶೇಶತೆ ಎಳ್ಳು ಬೀರುವುದು. ಈ ಎಳ್ಳು ಬೀರುವ ಆಚರಣೆಗೆ ಮಾತ್ರ ಯಾವುದೇ ಅಡ್ಡಿ ಕೊರತೆಗಳು ಬಂದಂಗಿಲ್ಲ. ಎಲ್ಲಾ ಹೆಣ್ಣು ಮಕ್ಕಳಿಗೂ, ಚಿಣ್ಣರಿಗೂ ಎಳ್ಳು ಬೀರುವುದೆಂದರೆ ಎಲ್ಲಿಲ್ಲದ ಸಿರಿ ಸಡಗರ. ಎಳ್ಳು ಬೀರದೆ ಇದ್ದರೆ ಈ ಹಬ್ಬ ಅಪೂರ‍್ಣ.

ಸಂಕ್ರಾಂತಿ ಹಬ್ಬದ ನಂತರವೇ ಮಾಗಿ ಚಳಿಯು ಕೊನೆಗೊಳ್ಳುವುದು. ಈ ಕೊರೆಯುವ ಚಳಿಗೆ ನಮ್ಮ ಶರೀರವನ್ನು ಬೆಚ್ಚಗಿಡಲು ಎಳ್ಳು ಬೆಲ್ಲವನ್ನು ಸೇರಿಸಿ ಮಾಡುವ ಇದು ಒಂದು ಬಗೆಯ ತಿನಿಸು. ಎಳ್ಳನ್ನು ಹದವಾಗಿ ಹುರಿದು, ಸಣ್ಣಗೆ ಕತ್ತರಿಸಿದ ಬೆಲ್ಲ ಮತ್ತು ಕೊಬ್ಬರಿ ಚೂರುಗಳನ್ನು ಹಾಕಿ, ಹಾಗೆಯೇ ಹುರಿದ ಮತ್ತು ಸಿಪ್ಪೆ ತೆಗೆದ ಶೇಂಗಾ ಬೀಜಗಳನ್ನು, ಹುರಿಗಡಲೆಗಳನ್ನು ಸೇರಿಸಿ ಸವಿದರೆ ತುಂಬಾ ಸೊಗಸಾಗಿರುತ್ತದೆ ಜೊತೆಗೆ ನಮ್ಮನ್ನು ಚಳಿಯಿಂದ ರಕ್ಶಿಸುತ್ತದೆ. ಈ ಕಾರಣಕ್ಕಾಗಿಯೇ ಎಳ್ಳು ಬೀರುವ ಪದ್ದತಿ ನಮ್ಮಲ್ಲಿದೆ. ಇದರೊಟ್ಟಿಗೆ ಬಣ್ಣ ಬಣ್ಣದ ಸಕ್ಕರೆ ಅಚ್ಚು, ಕಬ್ಬಿನ ತುಂಡು, ಇನ್ನು ಕೆಲವರು ವೀಳ್ಯದೆಲೆ ತಾಂಬೂಲದೊಂದಿಗೆ ಬಾಳೆಹಣ್ಣನ್ನು ಇಟ್ಟು ಬೀರುವ ರೂಡಿ ಇಂದಿಗೂ ಮಾಸಿಲ್ಲ. ಮನೆಮನೆಗೂ ಹೋಗಿ ಎಳ್ಳನ್ನು ಬೀರಿ ಅವರೊಟ್ಟಿಗೆ ಸಾಮರಸ್ಯವನ್ನು ಉಳಿಸಿಕೊಂಡು ಹೋಗುವ ಹಿನ್ನೆಲೆಯು ಎಳ್ಳು ಬೀರುವುದರ ಹಿಂದೆ ಇದೆ. ಹೀಗೆ ಹುಗ್ಗಿಯ ಸವಿದು ಎಳ್ಳನ್ನು ಮೆಲ್ಲುತ್ತ ಸುಗ್ಗಿಯ ಆಚರಣೆಗೊಂದು ಮೆರುಗು ನೀಡೋಣವಲ್ಲವೇ.

( ಚಿತ್ರ ಸೆಲೆ: apk-cloud.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks