ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 1)

– ಸಿ.ಪಿ.ನಾಗರಾಜ.

ಹೆಸರು: ಲಕ್ಶ್ಮೀಶ
ಕಾಲ: ಕ್ರಿ.ಶ.1530
ಹುಟ್ಟಿದ ಊರು: ದೇವನೂರು, ಕಡೂರು ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.
ತಂದೆ: ಅಣ್ಣಮಾಂಕ
ತಾಯಿ: ಹೆಸರು ತಿಳಿದುಬಂದಿಲ್ಲ
ರಚಿಸಿದ ಕಾವ್ಯ: ಜೈಮಿನಿ ಬಾರತ

ಸಂಸ್ಕ್ರುತ ನುಡಿಯಲ್ಲಿ ಜೈಮಿನಿ ಎಂಬ ಹೆಸರಿನ ಕವಿಯು ರಚಿಸಿದ್ದ ‘ಜೈಮಿನಿ ಬಾರತ’ ಕಾವ್ಯದ ವಸ್ತುವನ್ನು ಆದಾರವಾಗಿಟ್ಟುಕೊಂಡು ಲಕ್ಶ್ಮೀಶ ಕವಿಯು ಕನ್ನಡದಲ್ಲಿ ‘ಜೈಮಿನಿ ಬಾರತ’ ಕಾವ್ಯವನ್ನು ರಚಿಸಿದ್ದಾರೆ. ಹಸ್ತಿನಾಪುರದ ರಾಜನಾಗಿದ್ದ ಜನಮೇಜಯನು ಜೈಮಿನಿ ಮುನಿಯನ್ನು ಕುರಿತು “ಕೌರವರನ್ನು ಜಯಿಸಿ ಪಟ್ಟಕ್ಕೆ ಬಂದ ನಂತರ ಪಾಂಡವರು ಹಸ್ತಿನಾವತಿಯಲ್ಲಿ ಹೇಗೆ ರಾಜ್ಯವನ್ನು ಆಳಿದರು” ಎಂಬುದನ್ನು ತಿಳಿಸಿ ಎಂದು ಕೋರಿಕೊಂಡಾಗ, ಜೈಮಿನಿ ಮುನಿಯು ರಾಜನಾದ ದರ‍್ಮರಾಯನು ಅಶ್ವಮೇದವನ್ನು ಮಾಡಿ, ಜಗತ್ತೆಲ್ಲವನ್ನೂ ಗೆದ್ದ ಪರಿಯನ್ನು ವಿವರಿಸುತ್ತಾರೆ.

ಅಶ್ವ=ಕುದುರೆ; ಮೇದ=ಯಾಗ; ‘ಅಶ್ವಮೇದ’ ಎಂದರೆ ವಿಸ್ತಾರವಾದ ಪ್ರಾಂತ್ಯಕ್ಕೆ ಒಡೆಯನಾಗಬೇಕೆಂಬ ಬಯಕೆಯುಳ್ಳ ರಾಜನು ತನ್ನ ಕೀರ‍್ತಿ ಪರಾಕ್ರಮದ ವಿವರಗಳನ್ನು ಲೋಹದ ಪಟ್ಟಿಕೆಯೊಂದರಲ್ಲಿ ಬರೆಸಿ, ಅದನ್ನು ಯಾಗದ ಕುದುರೆಯ ಹಣೆಗೆ ಕಟ್ಟಿ, ಇನ್ನಿತರ ಪ್ರಾಂತ್ಯದವರು ಈ ಕುದುರೆಯ ಹಣೆಪಟ್ಟಿಯಲ್ಲಿರುವ ವಿವರವನ್ನು ಓದಿಕೊಂಡು ತನಗೆ ಶರಣಾಗಿ ಕಪ್ಪಕಾಣಿಕೆಗಳನ್ನು ನೀಡಬೇಕೆಂದು, ಇದಕ್ಕೆ ಒಪ್ಪದವರು ಕುದುರೆಯನ್ನು ಕಟ್ಟಿಹಾಕಿದರೆ, ಅಂತಹವರ ಮೇಲೆ ರಾಜನು ಕಾಳೆಗವನ್ನು ಮಾಡಿ ಅವರನ್ನು ಗೆಲ್ಲುತ್ತಾನೆ ಎಂಬ ಒಕ್ಕಣೆಯಿರುತ್ತದೆ. ಈ ರೀತಿ ಒಂದು ವರುಶದ ಕಾಲ ಕುದುರೆಯು ಹೋದ ಕಡೆಯಲ್ಲೆಲ್ಲಾ ರಾಜನು ತಾನು ಇಲ್ಲವೇ ತನ್ನ ಕಡೆಯ ಸೇನೆಯ ಆಕ್ರಮಣದ ಮೂಲಕ ಹೊಸ ಹೊಸ ಪ್ರಾಂತ್ಯಗಳನ್ನು ಗೆದ್ದು, ಅಪಾರವಾದ ಸಂಪತ್ತನ್ನು ಕಪ್ಪವಾಗಿ ಪಡೆದು, ಒಂದು ವರುಶದ ಕೊನೆಯಲ್ಲಿ ಯಾಗವನ್ನು ಮಾಡಿ ಕುದುರೆಯನ್ನು ಬಲಿಕೊಡುತ್ತಾನೆ. ಇದು ರಾಜ್ಯ ವಿಸ್ತಾರಕ್ಕಾಗಿ ಮಾಡುವ ಒಂದು ಆಚರಣೆಯಾಗಿರುತ್ತದೆ.

ಹಸ್ತಿನಾವತಿಯ ರಾಜನಾಗಿದ್ದ ದರ‍್ಮರಾಯನು ಮಾಡಿದ ಅಶ್ವಮೇದದ ಕುದುರೆಯ ಬೆಂಗಾವಲಿಗೆ ಹೋಗಿದ್ದ ಅರ‍್ಜುನನಿಗೂ ಮತ್ತು ಅವನ ಮಗ ಬಬ್ರುವಾಹನನಿಗೂ ಕಾಳೆಗ ನಡೆಯುವ ಸನ್ನಿವೇಶ ಪ್ರಾಪ್ತವಾಗುತ್ತದೆ. ಆಗ ಪಾಂಡವರ ಕತೆಯನ್ನು ಹೇಳುತ್ತಿದ್ದ ಜೈಮಿನಿ ಮುನಿಯು ಜನಮೇಜಯ ರಾಜನಿಗೆ “ಇದೇ ರೀತಿಯಲ್ಲಿ ರಾಮಾಯಣದ ಕಾಲದಲ್ಲಿ ತಂದೆಯಾದ ರಾಮ ಮತ್ತು ಅವನ ಅವಳಿ ಮಕ್ಕಳಾದ ಲವ ಕುಶರ ನಡುವೆ ಅಶ್ವಮೇದದ ಕುದುರೆಯ ಕಾರಣದಿಂದಲೇ ಕಾಳೆಗ ನಡೆಯಿತು” ಎಂದು ಹೇಳಿ, ಜನಮೇಜಯ ರಾಜನಿಗೆ ಇಡೀ ರಾಮಾಯಣದ ಕತೆಯನ್ನು ಹೇಳುತ್ತಾರೆ. ಇಂತಹ ಸನ್ನಿವೇಶದಲ್ಲಿ ಸೀತಾಪರಿತ್ಯಾಗದ ಪ್ರಸಂಗ ನಿರೂಪಣೆಗೊಂಡಿದೆ.

ರಾವಣನನ್ನು ಕೊಂದು, ಸೀತಾದೇವಿಯೊಡನೆ ಅಯೋದ್ಯೆಗೆ ಹಿಂತಿರುಗಿದ ರಾಮನು ಅಯೋದ್ಯೆಯ ರಾಜನಾಗಿ ಆಳ್ವಿಕೆಯನ್ನು ನಡೆಸುತ್ತಿದ್ದಾಗ, ಅಯೋದ್ಯೆಯ ಪ್ರಜೆಯಾಗಿದ್ದ ಅಗಸನೊಬ್ಬನು “ಗಂಡನಿಂದ ಕೆಲಕಾಲ ದೂರವಿದ್ದು ಮತ್ತೆ ಮನೆಗೆ ಬಂದ ಹೆಂಡತಿಯೊಡನೆ ಸಂಸಾರವನ್ನು ಮಾಡಲು ನಾನೇನು ರಾಮನಲ್ಲ” ಎಂದು ಆಡಿದ ನುಡಿಯನ್ನು ಅಯೋದ್ಯೆಯ ಗುಪ್ತಚರನಿಂದ ಕೇಳಿ, ಮಾನಸಿಕವಾಗಿ ನೊಂದು, ಸೀತೆಯನ್ನು ಪರಿತ್ಯಜಿಸಲು ನಿಶ್ಚಯಿಸಿ, ತಮ್ಮ ಲಕ್ಶ್ಮಣನಿಗೆ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರಲು ಆದೇಶವನ್ನು ನೀಡಿದಾಗ ನಡೆದ ಸನ್ನಿವೇಶಗಳನ್ನು ಸೀತಾ ಪ್ರಸಂಗದಲ್ಲಿ ವಿವರಿಸಲಾಗಿದೆ. ಸೀತಾ ಪರಿತ್ಯಾಗ ಎಂದರೆ ಸೀತೆಯನ್ನು ಬಿಡುವುದು/ತೊರೆಯುವುದು;

(ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಕಾವ್ಯದ ಹದಿನೆಂಟನೆಯ ಸಂದಿಯ 39 ನೆಯ ಪದ್ಯದಿಂದ 64 ಪದ್ಯ ಮತ್ತು ಹತ್ತೊಂಬತ್ತನೆಯ ಸಂದಿಯ 1ನೆಯ ಪದ್ಯದಿಂದ 41ನೆಯ ಪದ್ಯವರೆಗಿನ ಪಟ್ಯದಿಂದ ಸೀತಾ ಪರಿತ್ಯಾಗ ಪ್ರಸಂಗವನ್ನು ರಚಿಸಲಾಗಿದೆ.)

***

ಸೀತಾ ಪರಿತ್ಯಾಗ ಪ್ರಸಂಗ

ಪಾತ್ರಗಳು

ಸೀತೆ: ಅಯೋದ್ಯೆಯ ರಾಜನಾದ ರಾಮನ ಹೆಂಡತಿ. ಜನಕ ರಾಜನ ಮಗಳು. ದಶರತ ರಾಜನ ಸೊಸೆ
ರಾಮ: ಅಯೋದ್ಯೆಯ ರಾಜ. ದಶರತ ಮತ್ತು ಕೌಸಲ್ಯೆಯರ ಮಗ.
ವಸಿಶ್ಟ: ಒಬ್ಬ ಮುನಿ
ಚಾರ: ಅಯೋದ್ಯಾನಗರದಲ್ಲಿ ಮಾರುವೇಶದಲ್ಲಿ ಸಂಚರಿಸಿ ಪ್ರಜೆಗಳ ಬಗೆಗಿನ ಮಾಹಿತಿಯನ್ನು ಸಂಗ್ರಹಿಸಿ ರಾಜನಾದ ರಾಮನಿಗೆ ವರದಿ ಮಾಡುವ ಸೇವಕ;
ಬರತ: ದಶರತ ಮತ್ತು ಕೈಕೆಯ ಮಗ. ರಾಮನ ತಮ್ಮ.
ಲಕ್ಶ್ಮಣ: ದಶರತ ಮತ್ತು ಸುಮಿತ್ರೆಯ ಮಗ. ರಾಮನ ತಮ್ಮ
ಶತ್ರುಗ್ನ: ದಶರತ ಮತ್ತು ಸುಮಿತ್ರೆಯ ಮಗ. ರಾಮನ ತಮ್ಮ
ವಾಲ್ಮೀಕಿ: ಒಬ್ಬ ರಿಸಿ. ರಾಮಾಯಣ ಕಾವ್ಯವನ್ನು ರಚಿಸಿದ ಕವಿ.

***

ನೋಟ – 1

ಶರಣಜನ ವತ್ಸಲನು ಉತ್ಸವಕೆ ಬಂದ ಅನಿಬರೆಲ್ಲರನು ಸತ್ಕರಿಸಿ ಬೀಳ್ಕೊಟ್ಟು ರಾಜಸಂಪತ್ ಸುಖದೊಳು
ಇರ್ಪನಿತರೊಳು, ಬಳಿಕ ಸೀತೆ ನಿಜಕಾಂತನ ಏಕಾಂತಕೆ ಐದಿ…
ಸೀತೆ: ಕುತ್ಸಿತಮ್ ಪೊದ್ದದ ಆಶ್ರಮದ ಋಷಿಪತ್ನಿಯರ ಸತ್ಸಂಗದೊಳು ತನ್ನ ಬೇಸರನು ತವಿಸುವೆನು. ಇದು ತನಗೆ
ಉತ್ಸುಕಮ್. ಅದರಿನ್ ಇನ್ನೊಮ್ಮೆ ಬನಕೆ ತನ್ನನ್ ಕಳುಹಬೇಕು.
(ಎಂದು ಆ ಕ್ಷಿತಿಜೆ ಬಯಕೆಯನು ಬಿನ್ನೈಸೆ , ಕೇಳ್ದು ನಗುತ, ಆಕ್ಷೇಪದಿಂದೆ ಕಳುಹುವನಾಗಿ ಸಂತೈಸಿ,
ರಾಕ್ಷಸಾಂತಕನು ಇರಲ್ಕೆ, ಒಂದಿರುಳು ಕನಸು ಕಂಡು ಏಳುತೆ, ವಸಿಷ್ಠನೊಡನೆ…)
ರಾಮ: ಈ ಕ್ಷೋಣಿಸುತೆ ಗಂಗೆಯನು ಕಳೆದು ಕಾಡೊಳು ಮಹಾಕ್ಷೀಣೆಯಾಗಿ ದೇಸಿಗರಂತೆ ದೆಸೆದೆಸೆಯನು ಈಕ್ಷಿಸುತೆ
ಮರುಗುತ ಅಳುತ ಇರ್ದುದನು ಕಂಡೆನು. ಇದು ಲೇಸಹುದೆ ಪೇಳು.
(ಎಂದನು. ಎನೆ)
ವಸಿಷ್ಠ: ಕನಸಿದು ಒಳ್ಳಿತಲ್ಲ.
(ಎಂದು ಅದಕೆ ಶಾಂತಿಯನು ಮುನಿವರ ವಸಿಷ್ಠನು ನೆಗಳ್ಚಿದನು.)

ಪದ ವಿಂಗಡಣೆ ಮತ್ತು ತಿರುಳು

ಶರಣ=ಆಶ್ರಯ; ವತ್ಸಲ=ಪ್ರೀತಿಯುಳ್ಳವನು; ಶರಣಜನ ವತ್ಸಲ=ರಾಮ. ಇದೊಂದು ಗುಣವಾಚಕ ನುಡಿಗಟ್ಟು. ತನ್ನನ್ನು ಆಶ್ರಯಿಸಿದವರನ್ನು ಪ್ರೀತಿಯಿಂದ ಕಾಪಾಡುವ ವ್ಯಕ್ತಿ; ಉತ್ಸವ=ಸಾಂಸ್ಕ್ರುತಿಕ ಆಚರಣೆ; ಅನಿಬರ್+ಎಲ್ಲರನು; ಅನಿಬರ್=ಅವರು; ಸತ್ಕರಿಸಿ=ಉಪಚರಿಸಿ/ಆರಯಿಕೆ ಮಾಡಿ; ಬೀಳ್ಕೊಟ್ಟು=ಕಳುಹಿಸಿಕೊಟ್ಟು;

ಶರಣಜನ ವತ್ಸಲನು ಉತ್ಸವಕೆ ಬಂದ ಅನಿಬರೆಲ್ಲರನು ಸತ್ಕರಿಸಿ ಬೀಳ್ಕೊಟ್ಟು=ಸೀತೆಯು ನಾಲ್ಕು ತಿಂಗಳ ಬಸುರಿಯಾಗಿದ್ದಾಗ ಅಯೋದ್ಯೆಯ ಅರಮನೆಯಲ್ಲಿ ರಾಮನು ಆಚರಿಸಿದ ಸೀಮಂತದ ಉತ್ಸವಕ್ಕೆ ಬಂದಿದ್ದ ಗುರುಹಿರಿಯರು ಮತ್ತು ನೆಂಟರಿಶ್ಟರೆಲ್ಲರನ್ನೂ ಉಪಚರಿಸಿ ಕಳುಹಿಸಿಕೊಟ್ಟು;

ಸಂಪತ್ತು=ಸಿರಿ; ರಾಜಸಂಪತ್ತು=ರಾಜ್ಯದ ಒಡೆತನ; ಇರ್ಪ+ಅನಿತರೊಳ್; ಇರ್ಪ=ಇರುವ; ಅನಿತರೊಳ್=ಆ ಸಮಯದಲ್ಲಿ;

ರಾಜಸಂಪತ್ ಸುಖದೊಳು ಇರ್ಪನಿತರೊಳು=ರಾಜ್ಯದ ಒಡೆತನದಲ್ಲಿ ರಾಮ ಮತ್ತು ಸೀತೆ ಆನಂದ ಹಾಗೂ ನೆಮ್ಮದಿಯಿಂದ ಇರುತ್ತಿರಲು;

ಬಳಿಕ=ತರುವಾಯ/ಅನಂತರ; ನಿಜ=ತನ್ನ; ಕಾಂತ=ಗಂಡ; ನಿಜಕಾಂತ=ರಾಮ; ಏಕಾಂತ=ಒಬ್ಬನೇ ಇರುವುದು; ಐದಿ=ಬಳಿಬಂದು/ಹತ್ತಿರಕ್ಕೆ ಬಂದು;

ಬಳಿಕ ಸೀತೆ ನಿಜಕಾಂತನ ಏಕಾಂತಕೆ ಐದಿ=ಒಂದು ದಿನ ಅರಮನೆಯಲ್ಲಿ ರಾಮನು ಒಬ್ಬನೇ ಇರುವಾಗ ಅವನ ಬಳಿಸಾರಿ ಬಂದು;

ಕುತ್ಸಿತ+ಅಮ್; ಕುತ್ಸಿತ=ನಿಂದೆ/ತೆಗಳಿಕೆ; ಅಮ್=ಅನ್ನು; ಪೊರ್ದು=ಹೊಂದು/ಪಡೆ; ಪೊರ್ದು > ಪೊದ್ದು; ಪೊದ್ದದ=ಪಡೆಯದ/ಹೊಂದದ; ಆಶ್ರಮ=ಕಾಡಿನಲ್ಲಿ ಮುನಿದಂಪತಿಗಳು ವಾಸಿಸುವ ನೆಲೆ; ಸತ್ಸಂಗದ+ಒಳ್; ಸತ್ಸಂಗ=ಒಳ್ಳೆಯವರ ಸಹವಾಸ; ಒಳ್=ಅಲ್ಲಿ; ಬೇಸರ+ಅನ್; ಬೇಸರ=ಉತ್ಸಾಹವಿಲ್ಲದಿರುವುದು; ಅನ್=ಅನ್ನು; ತವಿಸು=ನಿವಾರಿಸು/ಪರಿಹರಿಸು; ತವಿಸುವೆನು=ಹೋಗಲಾಡಿಸಿಕೊಳ್ಳುತ್ತೇನೆ;

ಕುತ್ಸಿತಮ್ ಪೊದ್ದದ ಆಶ್ರಮದ ಋಷಿಪತ್ನಿಯರ ಸತ್ಸಂಗದೊಳು ತನ್ನ ಬೇಸರನು ತವಿಸುವೆನು=ಇತರರಿಂದ ನಿಂದೆಯನ್ನಾಗಲಿ ಇಲ್ಲವೇ ಕೆಟ್ಟಹೆಸರನ್ನಾಗಲಿ ಪಡೆಯದ ಆಶ್ರಮವಾಸಿಗಳಾಗಿರುವ ಮುನಿಪತ್ನಿಯರ ಒಳ್ಳೆಯ ಸಹವಾಸದಲ್ಲಿ ನನ್ನ ಬೇಸರವನ್ನು ಹೋಗಲಾಡಿಸಿಕೊಳ್ಳುತ್ತೇನೆ;

ಉತ್ಸುಕ=ಚಟುವಟಿಕೆ/ಕ್ರಿಯಾಶೀಲತೆ;

ಇದು ತನಗೆ ಉತ್ಸುಕಮ್=ಮುನಿಪತ್ನಿಯರ ಒಡನಾಟದಿಂದ ನನ್ನ ಮಯ್ ಮನಸ್ಸು ಉತ್ಸಾಹಗೊಂಡು ಆನಂದವನ್ನು ಪಡೆಯುತ್ತದೆ;

ಅದರಿನ್=ಆದ್ದರಿಂದ; ಬನ=ಕಾಡು; ಕ್ಷಿತಿ=ಬೂಮಿ; ಕ್ಷಿತಿಜೆ=ಬೂದೇವಿಯ ಮಗಳಾದ ಸೀತೆ. ಜನಕರಾಜನು ಯಾಗವೊಂದನ್ನು ಮಾಡಲೆಂದು ಬೂಮಿಯನ್ನು ಉಳುತ್ತಿದ್ದಾಗ, ನೇಗಿಲಗೆರೆಗೆ ಸಿಕ್ಕಿದ ಪೆಟ್ಟಿಗೆಯೊಂದರಲ್ಲಿ ಒಂದು ಹೆಣ್ಣು ಮಗು ಸಿಕ್ಕಿತು. ಈ ಮಗುವಿಗೆ ಸೀತೆ ಎಂಬ ಹೆಸರನ್ನಿಟ್ಟು ಜನಕರಾಜನು ತನ್ನ ಮಗಳಂತೆ ಸಾಕಿ ಬೆಳೆಸಿದನು ಎಂಬ ವಿವರ ವಾಲ್ಮೀಕಿ ರಾಮಾಯಣ ಮಹಾಕಾವ್ಯದಲ್ಲಿದೆ; ಬಯಕೆ+ಅನ್; ಬಯಕೆ=ಆಸೆ; ಬಿನ್ನೈಸು=ಹೇಳಿಕೊಳ್ಳಲು/ಅರಿಕೆ ಮಾಡಿಕೊಳ್ಳಲು;

ಅದರಿನ್ ಇನ್ನೊಮ್ಮೆ ಬನಕೆ ತನ್ನನು ಕಳುಹಬೇಕು ಎಂದು ಆ ಕ್ಷಿತಿಜೆ ಬಯಕೆಯನು ಬಿನ್ನೈಸೆ=ಆದ್ದರಿಂದ ಮತ್ತೊಮ್ಮೆ ನನ್ನನ್ನು ಕಾಡಿಗೆ ಕಳುಹಿಸಿಕೊಡಿ ಎಂದು ಬಸುರಿಯಾಗಿರುವ ಸೀತೆಯು ತನ್ನ ಮನದ ಆಸೆಯನ್ನು ರಾಮನೊಡನೆ ಹೇಳಿಕೊಳ್ಳಲು;

ಆಕ್ಷೇಪ+ಇಂದೆ; ಆಕ್ಷೇಪ=ಇತರರು ಹೇಳಿದ ಮಾತು ಇಲ್ಲವೇ ಮಾಡಿದ ಕೆಲಸವನ್ನು ಸರಿಯಲ್ಲವೆಂದು ಹೇಳುವುದು; ಕಳುಹುವನ್+ಆಗಿ; ಸಂತೈಸಿ=ಸಾಂತ್ವನಗೊಳಿಸಿ/ಸಮಾದಾನ ಹೇಳಿ;

ಕೇಳ್ದು ನಗುತ, ಆಕ್ಷೇಪದಿಂದೆ ಕಳುಹುವನಾಗಿ ಸಂತೈಸಿ=ಕಾಡಿನಲ್ಲಿಯೇ ಹದಿನಾಲ್ಕು ವರುಶ ಕಳೆದು ಬಂದಿರುವ ಸೀತೆಯ ಇಂತಹ ಬಯಕೆಯನ್ನು ತಿಳಿದು ರಾಮನಿಗೆ ನಗು ಬಂತು. ಬಸುರಿಯಾಗಿರುವ ನೀನು ಇಂತಹ ಸಮಯದಲ್ಲಿ ಕಾಡಿಗೆ ಹೋಗುವುದು ತರವಲ್ಲವೆಂದು ಸೀತೆಗೆ ಹೇಳುತ್ತ, ಅವಳ ಮನಸ್ಸನ್ನು ನೋಯಿಸಬಾರದೆಂದು “ನೋಡೋಣ, ಕಳುಹಿಸುತ್ತೇನೆ” ಎಂದು ಆಕೆಯನ್ನು ಸಮಾದಾನಪಡಿಸಿದ;

ರಾಕ್ಷಸ+ಅಂತಕನ್; ಅಂತಕ=ಯಮ; ರಾಕ್ಷಸಾಂತಕ=ರಾಮ. ರಕ್ಕಸನಾದ ರಾವಣನನ್ನು ಕೊಂದವನು; ಇರಲ್ಕೆ=ಇರಲು;

ರಾಕ್ಷಸಾಂತಕನು ಇರಲ್ಕೆ=ರಾಮನು ರಾಜ್ಯವನ್ನು ಆಳುತ್ತಿರುವಾಗ; ಒಂದು+ಇರುಳ್; ಇರುಳ್=ರಾತ್ರಿ;

ಒಂದಿರುಳು ಕನಸು ಕಂಡು ಏಳುತೆ=ಒಂದು ರಾತ್ರಿ ಕನಸೊಂದನ್ನು ಕಂಡು ಎಚ್ಚರಗೊಂಡು ಮೇಲೆದ್ದು;

ವಸಿಷ್ಠನೊಡನೆ=ಮುನಿಗಳಾದ ವಸಿಶ್ಟರ ಬಳಿಗೆ ಬಂದು;

ಕ್ಷೋಣಿ=ಬೂಮಿ; ಸುತೆ=ಮಗಳು; ಕ್ಷೋಣಿಸುತೆ=ಬೂದೇವಿಯ ಮಗಳಾದ ಸೀತೆ.; ಗಂಗೆ+ಅನ್; ಗಂಗೆ=ಗಂಗಾ ನದಿ; ಕಳೆದು=ದಾಟಿ; ಕಾಡು+ಒಳ್; ಮಹಾಕ್ಷೀಣೆ+ಆಗಿ; ಕ್ಷೀಣ=ಸೊರಗಿದ/ಕುಗ್ಗಿದ; ಮಹಾಕ್ಷೀಣೆ=ಬಹಳ ಸೊರಗಿದವಳಾಗಿ/ಕಳಾಹೀನಳಾಗಿ;

ಈ ಕ್ಷೋಣಿಸುತೆ ಗಂಗೆಯನು ಕಳೆದು ಕಾಡೊಳು ಮಹಾಕ್ಷೀಣೆಯಾಗಿ=ಸೀತೆಯು ಗಂಗಾ ನದಿಯ ಪ್ರಾಂತ್ಯವನ್ನು ದಾಟಿ ಕಾಡನ್ನು ಹೊಕ್ಕು ತುಂಬಾ ಸೊರಗಿದವಳಾಗಿ;

ದೇಸಿಗರ್+ಅಂತೆ; ದೇಸಿಗ=ಗತಿಯಿಲ್ಲದ ವ್ಯಕ್ತಿ/ದಿಕ್ಕುದೆಸೆಯಿಲ್ಲದ ವ್ಯಕ್ತಿ; ಅಂತೆ=ಹಾಗೆ;ದೆಸೆ=ದಿಕ್ಕು; ಈಕ್ಷಿಸು=ನೋಡು;

ದೇಸಿಗರಂತೆ ದೆಸೆದೆಸೆಯನು ಈಕ್ಷಿಸುತೆ=ಗತಿಯಿಲ್ಲದವರಂತೆ ಅಸಹಾಯಕಳಾಗಿ ದಿಕ್ಕುದಿಕ್ಕುಗಳನ್ನು ನೋಡುತ್ತ;

ಮರುಗು=ಸಂಕಟಪಡು; ಇರ್ದುದನು=ಇರುವುದನ್ನು;

ಮರುಗುತ ಅಳುತ ಇರ್ದುದನು ಕಂಡೆನು=ಸಂಕಟದಿಂದ ಬಾಯ್ಬಿಡುತ್ತ, ಅಳುತ್ತ ಕಾಡಿನಲ್ಲಿ ದಿಕ್ಕುಕಾಣದೆ ತೊಳಲಾಡುತ್ತಿರುವುದನ್ನು ಕಂಡೆನು;

ಲೇಸು+ಅಹುದೆ; ಲೇಸು=ಒಳ್ಳೆಯದು; ಅಹುದೆ=ಆಗಿರುವುದೇ;

ಇದು ಲೇಸಹುದೆ ಪೇಳು ಎಂದನು=ಈ ಕನಸಿನ ಪರಿಣಾಮ ಒಳ್ಳೆಯದೇ ಎಂಬುದನ್ನು ತಿಳಿಯ ಹೇಳಿರಿ ಎಂದು ರಾಮನು ವಸಿಶ್ಟ ಮುನಿಯನ್ನು ಕೇಳಿದನು;

ಎನೆ=ಎನ್ನಲು; ಒಳ್ಳಿತು+ಅಲ್ಲ; ಶಾಂತಿ+ಅನ್; ಶಾಂತಿ=ಮುಂದಿನ ದಿನಗಳಲ್ಲಿ ಉಂಟಾಗಲಿರುವ ಕೇಡನ್ನು ತಡೆಗಟ್ಟಿ, ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಜನರು ಮಾಡುವ ಜಪ, ತಪ, ಹೋಮ ಮುಂತಾದ ಪೂಜೆಯ ಆಚರಣೆಗಳು; ವರ=ಉತ್ತಮನಾದ; ನೆಗಳ್=ಮಾಡು/ಆಚರಿಸು; ನೆಗಳ್ಚಿದನ್=ಮಾಡಿಸಿದನು;

ಕನಸಿದು ಒಳ್ಳಿತಲ್ಲ ಎಂದು ಅದಕೆ ಶಾಂತಿಯನು ಮುನಿವರ ವಸಿಷ್ಠನು ನೆಗಳ್ಚಿದನು=ಇಂತಹ ಕನಸು ಒಳ್ಳೆಯದಲ್ಲ. ಇದು ಕೇಡಿನ ಮುನ್ಸೂಚನೆಯಂತಿದೆ ಎಂದು ಹೇಳಿ, ರಾಮಸೀತೆಯರ ಪಾಲಿಗೆ ಬರಲಿರುವ ಕೇಡು ಪರಿಹಾರಗೊಂಡು ಒಳಿತಾಗಲೆಂಬ ಉದ್ದೇಶದಿಂದ ರಾಮನಿಂದ ಶಾಂತಿಯ ಪೂಜೆಯನ್ನು ವಸಿಶ್ಟನು ಮಾಡಿಸಿದನು;

(ಚಿತ್ರ ಸೆಲೆ: ವಿಕಿಪೀಡಿಯ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks