ಜಗತ್ತು ಒಂದು ಸೋಜಿಗದ ಗೂಡು

– ನಿತಿನ್ ಗೌಡ.

ಈ ಬ್ರಹ್ಮಾಂಡವು ಅಚ್ಚರಿಗಳ ತವರೂರು. ಹಾಗೆ ನೋಡಿದರೆ, ನಮ್ಮ ಇರುವಿಕೆಯೇ‌ ಒಂದು ಸೋಜಿಗ. ನಮ್ಮ ಸುತ್ತಲಿನ ವಿಶಯಗಳನ್ನು ಗಮನವಿಟ್ಟು ಅವಲೋಕಿಸಿದಾಗ ಸೋಜಿಗದ ಗೂಡೇ ತೆರೆದು ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ಅಂತಹುದೇ ಕೆಲವು ಸಂಗತಿಗಳ ಮೇಲಿನ ಪಕ್ಶಿನೋಟ ಈ ಸರಣಿ.

ಬೆಳಕು:

ಜಗತ್ತಿನಲ್ಲಿ ಅತಿ ಹೆಚ್ಚು ವೇಗವಾಗಿ ಚಲಿಸುವಂತಹುದು ಬೆಳಕು ಎಂಬುದು ತಿಳಿದಿರಬಹುದು. ಬೆಳಕು ಸೆಕೆಂಡಿಗೆ ಮೂರು ಲಕ್ಶ ಕೀ.ಮೀ ಸಾಗುತ್ತದೆ. ಇಂತಹ ಬೆಳಕು ಒಂದು ವರುಶದಲ್ಲಿ ಸಾಗುವ ದೂರಕ್ಕೆ ಬೆಳಕಿನ ವರುಶ(Light year) ಎನ್ನುತ್ತಾರೆ. ಸಾರ ಇಶ್ಟೆ; ಇಂದು‌‌ ನಾವು ನೋಡುವ ಹಲವು ಸಂಗತಿಗಳು ಗತಕಾಲದ ವಾಸ್ತವಗಳಿರಬಹುದು. ಇದೇ ಅರಿವಿನ ನೆಲೆಗಟ್ಟಲ್ಲಿ ಈ‌ ಕೆಳಗಿನ ಸಂಗತಿಗಳು ನಮಗೆ ಸೋಜಿಗವೆನಿಸಬಹುದು;
1. ಬೂಮಿಯಿಂದ 80 ಬೆಳಕಿನ‌ ವರುಶ ದೂರವಿರುವ ಹೊರಬಾನ ಜೀವಿಗಳು(Extra terrestrial or Aliens) ನಮ್ಮನ್ನು ಅಲ್ಲಿಂದ ನೋಡಿದರೆ; ಅವರುಗಳಿಗೆ ನಮ್ಮಲ್ಲಿ ಇನ್ನೂ‌ ಮಹಾಯುದ್ದ-2 ನಡೆಯುತ್ತಿರುವ ಕಾಲ ತೋರುತ್ತದೆ.
2.ಬೂಮಿಯಿಂದ 65ಲಕ್ಶ ಬೆಳಕಿನ‌ ವರುಶ ದೂರವಿರುವ ಹೊರಬಾನ ಜೀವಿಗಳಿಗೆ; ಇನ್ನೂ ಬೂಮಿಯ‌ ಮೇಲೆ ಡೈನೋಸಾರ್ ಗಳು ಓಡಾಡುತ್ತಿರುವ ಕಾಲ ಕಾಣಬಹುದು. ಹಾಗೆಯೇ ಬೂಮಿಯಿಂದ 460 ಕೋಟಿ ಬೆಳಕಿನ‌ ವರುಶ ದೂರವಿರುವ ಜೀವಿಗಳಿಗೆ, ನಮ್ಮ ನೇಸರ ಬಳಗವೇ (solar system) ಹುಟ್ಟಿರುವುದು ಕಂಡು ಬರುವುದಿಲ್ಲ.

ನೇಸರ ಬಳಗ:

ಬೂಮಿ ನೇಸರನ ಸುತ್ತುವುದು ಎಲ್ಲರಿಗೂ ತಿಳಿದಿರಬಹುದು. ಆದರೆ, ಹೀಗೆ ಸುತ್ತುವಾಗ; ನೇಸರನಿಂದ ಪ್ರತಿ ಸೆಕೆಂಡಿಗೆ 15ಲಕ್ಶ ಟನ್ ಅಶ್ಟು ಸೌರ ವಸ್ತುಗಳು(Solar material) ಸೆಕೆಂಡಿಗೆ 100‌ ಮೈಲಿ ವೇಗದಲ್ಲಿ ಬೂಮಿಯನ್ಬು ಅಪ್ಪಳಿಸುತ್ತದೆ‌. ಹೀಗಿದ್ದರೂ ನಾವು ಇಂದು ಸುರಕ್ಶಿತವಾಗಿರುವುದಾದರೂ ಹೇಗೆ? ಇದಕ್ಕೆ ಕಾರಣ ನಮ್ಮ ಬೂಮಿಯ ಅಯಸ್ಕಾಂತೀಯ ಅಲೆಗಳು. ಇವು ನೇಸರನ ಈ ತ್ಯಾಜ್ಯಗಳನ್ನು ಚದುರಿಸಿ ನಮ್ಮನ್ನು ಕಾಪಾಡುತ್ತವೆ. ಇದೇ ಮಾದರಿಯಲ್ಲಿ ಇನ್ನೂ ದೊಡ್ಡಮಟ್ಟದಲ್ಲಿ ಹೊರ ಬಾನಿನಿಂದ ಲಕ್ಶ ಟನ್ ಗಟ್ಟಲೆ ವಸ್ತುಗಳು ನಮ್ಮ ನೇಸರ ಬಳಗದ ಬಳಿ ಬರುತ್ತವೆ! ಇವುಗಳನ್ನು ನಮ್ಮ ನೇಸರನ ಆಯಸ್ಕಾಂತೀಯ ಅಲೆಗಳು ತಡೆದು ಅವುಗಳ ದಿಕ್ಕು ತಪ್ಪಿಸಿ , ಚದುರಿಸಿ ನಮ್ಮನ್ನು ಕಾಪಾಡುತ್ತವೆ. ಹೀಗೆ ಕ್ಶಣ ಕ್ಶಣಕ್ಕೂ ಇಂತಹ ಆಪತ್ತುಗಳ ಸಂಕೋಲೆಗಳನ್ನು ಮೀರಿ ಜೀವಸಂಕುಲ ಇನ್ನೂ ಬೂಮಿಯ ಮೇಲೆ ಉಳಿದಿರುವುದು ಒಂದು ಸೋಜಿಗವೇ ಸರಿ.

ಲೋಹಗಳ ಸೋಜಿಗ:

1) ಸೋಡಿಯಂ ಒಂದು ವಿಶಪೂರಿತ ಮೆತ್ತನೆಯ ಲೋಹವಾಗಿದ್ದು, ಕೇವಲ ಒಂದು ಚಾಕುವಿನಿಂದ ಅದನ್ನು ತುಂಡರಿಸಬಹುದು. ಹೀಗಿರುವ ಸೋಡಿಯಂ ನೀರಿನೊಡನೆ ಬೆರೆತೊಡನೆ, ಸಿಡಿದು ಹಾರುತ್ತದೆ! ಇದೇ ವಿಶಪೂರಿತ ಸೋಡಿಯಂ; ಹಾನಿಕಾರಕ ಕ್ಲೋರಿನ್ ಗಾಳಿಯೊಡನೆ ಬೆರೆತೊಡೆ ತಿನ್ನುವ ಉಪ್ಪಾಗಿ ಬದಲಾಗುತ್ತದೆ.

2)ಉಸಿರುಗಾಳಿ/ಆಮ್ಲಜನಕ (Oxygen ) ಇಲ್ಲದೆ ಬೆಂಕಿ ಉರಿಯುವುದಿಲ್ಲ(combustion) ಎಂದು ತಿಳಿದಿರಬಹುದು. ಹಾಗೆಯೇ ಜಲಜನಕ(Hydrogen) ಒಂದು ಸ್ಪೋಟಕ ಅನಿಲ ಎಂಬುದು ತಿಳಿದಿರಬಹುದು. ಇಂತಹ ಆಮ್ಲಜನಕ ಮತ್ತು ಜಲಜನಕ ಬೆರೆತರೆ ಇನ್ನೂ ದೊಡ್ಡ ಸ್ಪೋಟಕ ಆಗಬಹುದೇನೋ ಎಂದು ಕೊಂಡರೆ, ಅಲ್ಲಿ ನಮಗೆ ಅಚ್ಚರಿ ಕಾದಿದೆ. ಇವು ಬೆರೆತಲ್ಲಿ ನಮಗೆ ದೊರಕುವುದು ಇದೇ ಬೆಂಕಿಯನ್ನು ಆರಿಸಬಹುದಾದ ನೀರು!

ಅಲ್ಲಿಗೆ ಯಾವುದು, ಯಾವುದರೊಡನೆ ಹೇಗೆ ಬೆರೆಯೊತ್ತದೆಯೋ ಅದರ ಮೇಲೆ ಅವುಗಳ ವೈರುದ್ಯ ಅಳಿದು, ಅವುಗಳ ಸ್ವರೂಪವೇ ಬದಲಾಗುತ್ತದೆ ಎಂದಾಯ್ತು. ಹೀಗೆ ಇಂತಹುದೇ ಅಚ್ಚರಿಯ ವಿಶಯಗಳನ್ನು ಮುಂದಿನ ಬಾಗದಲ್ಲಿ ನೋಡೋಣ.

(ಚಿತ್ರಸೆಲೆ: microsoft.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks