ಲಕ್ಶ್ಮೀಶ ಕವಿಯ ಜೈಮಿನಿ ಬಾರತ ಓದು: ಸೀತಾ ಪರಿತ್ಯಾಗ ಪ್ರಸಂಗ (ನೋಟ – 6)

ಸಿ.ಪಿ.ನಾಗರಾಜ.

ರಾಯ ಕೇಳು, ಲಕ್ಷ್ಮಣನ ತಲೆ ಮಸುಳಲು, ಇತ್ತಲು ಇವಳು ಬಾಯಾರಿ ಕಂಗೆಟ್ಟು “ಆ” ಎಂದು ಒರಲ್ದು,

ಭಯ ಶೋಕದಿಂದ ಅಸವಳಿದು, ಕಾಯಮನು ಮರೆದು, ಮೂಲಮನು ಕೊಯ್ದ ಎಳೆಯ ಬಳ್ಳಿಯಂತೆ ಅವನಿಗೆ ಒರಗಿದಳು.

ಅರಸ ಕೇಳು, ಅಲ್ಲಿರ್ದ ಪಕ್ಷಿ ಮೃಗ ಜಂತುಗಳು ಧರಣಿಸುತೆಯನು ಬಳಸಿ ನಿಂದು, ಮೈಯುಡಗಿ ಜೋಲ್ದು ಇರದೆ ಕಂಬನಿಗರೆದು, ನಿಜವೈರಮನು ಮರೆದು, ಪುಲ್ ಮೇವುಗಳನೆ ತೊರೆದು ಕೂಡೆ ಕೊರಗುತಿರ್ದುವು. ವೃಕ್ಷಲತೆಗಳು

ಬಾಡಿ ಸೊರಗುತಿರ್ದುವು. ಶೋಕಭಾರದಿನ್ ಕಲ್ಗಳುಮ್ ಕರಗುತಿರ್ದುವು. ಜಗದೊಳು ಉತ್ತಮರ ಹಾನಿಯನು ಕಂಡು ಸೈರಿಸುವರುಂಟೆ . ಅರರೆಆಕೆಯ ಅಂಗಮನು ನೋಡಿ ನೋಡಿ… ರಾಘವನ ರಾಣಿ ದುಃಖಸಂತಪ್ತೆಯಾಗಿರುತಿರಲ್ಕೆ…

ಜಾನಕಿಯ ಶೋಕಮ್ ತಮ್ಮದು ಎಂದು ತುಂಬಿ ಮೊರೆಯಲೊಲ್ಲವು; ನವಿಲ್ ಕುಣಿಯಲೊಲ್ಲವು; ಕೋಕಿ ಬೆರೆಯಲೊಲ್ಲವು; ಹಂಸೆ ನಡೆಯಲೊಲ್ಲವು; ಪಿಕಮ್ ಕರೆಯಲೊಲ್ಲವು; ಶುಕಮ್ ನುಡಿಯಲೊಲ್ಲವು; ಚಕೋರ ನಲಿಯಲೊಲ್ಲವು; ಹರಿಣಿ ನೆರೆಯಲೊಲ್ಲವು; ಕರಿಣಿ ಒಲೆಯಲೊಲ್ಲವು; ಚಮರಿ ಪೊರೆಯಲೊಲ್ಲವು; ಸಿಂಗಮ್ ಮೆರೆಯಲೊಲ್ಲವು.

ಚಮರಿಗಳು ಚಮರಮನ್ ಬಾಲದೊಳು ಬೀಸಿದುವು. ಕರಿಗಳು ಎಳೆದಳಿರ ಮೃದುತಲ್ಪಮನು ಪಾಸಿದುವು. ಸಾರಸಂಗಳು ತಮ್ಮ ಗರಿಗಳನು ತೋದು ತಂದು ಅಂಬುಗಳನು ಸೂಸಿದುವು. ಅಂಚೆಗಳು ಆಗಸದೊಳು ಓಸರಿಸದ ಎರಂಕೆಯನು ಅಗಲ್ಚಿ ಆ ಸಿರಿಮೊಗಕ್ಕೆ ಬಿಸಿಲಾಗದಂತೆ ನೆಳಲಾಸೆ ಗೈದುವು. ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು ಬರಲಾರದಿರ್ದೊಡಮ್, ಮತ್ತೆ ಗಂಗೆಯೊಳು ಅಲರ್ದ ಅರವಿಂದ ಗಂಧದ ಅತಿಭಾರಮನು ಪೋರಲಾರದೆ ಇರ್ದೊಡಮ್, ಧರಣಿಸುತೆಯ ಪರಿತಾಪಮನು ತವಿಸದೆ ಇರಬಾರದೆಂದು ತರಹರದೊಳು ಒಯ್ಯೊಯ್ಯನೆ ಐತಂದು ಸುಖ ಸ್ಪರುಶವಾತಮ್ ಬೀಸಿತು. ಜಗದೊಳು ಉಪಕಾರಿಯಾದವನು ತನ್ನ ನೋವನು ನೋಳ್ಪನೆ. ವೃಥಿವಿಯಾತ್ಮಜೆ ಬಳಿಕ ಚೇತರಿಸಿ, ತನಗೆ ಇನ್ನು ಪಥಮ್ ಆವುದೆಂದು ದೆಸೆದೆಸೆಗಳನು ನೋಡಿ, ಸಲೆ ಶಿಥಿಲಮ್ ಆದ ಅವಯವದ, ದೂಳಿಡಿದ ಮೈಯ, ಬಿಡುಮುಡಿಯ ವಿಕೃತಿಯನು ಎಣಿಸದೆ…

ಸೀತೆ: ಮಿಥಿಲೇಂದ್ರ ವಂಶದೊಳು ಜನಿಸಿ ರಘುಕುಲದ ದಶರಥ ನೃಪನ ಸೊಸೆಯಾಗಿ ತನಗೆ ಕಟ್ಟಡವಿಯೊಳು ವ್ಯಥಿಸುವಂತಾಯ್ತು ಅಕಟವಿಧಿ.

(ಎಂದು ಕಲ್ಮರನು ಕರಗುವಂತೆ ಹಲುಬಿದಳು.)

ಸೀತೆ: ಕೇಣಮನು ಬಿಟ್ಟು ಆತ್ಮಘಾತಕದೊಳು ಈ ಕ್ಷಣಮ್ ಪ್ರಾಣಮನು ತೊರೆದಪೆನೆ… ಗರ್ಭದಿನ್ ಭ್ರೂಣಹತ್ಯಾ ದೋಷಮ್ ಬಂದಪುದು. ಏಗೈವೆನು… ಆರ್ಗೆ ಒರೆವೆನು.

(ಎಂದು ಒಯ್ಯನೆ ಎದ್ದು, ಬಳಿಕ ಏಣಾಕ್ಷಿ ಅಡವಿಯೊಳು ನಡೆದಳು. ಉಪಲ ಕಂಟಕ ಶ್ರೇಣಿಗಳು ಸೊಂಕಿ, ಮೆಲ್ಲಡಿಗಳಿನ್ ಬಸಿವ ನವ ಶೋಣಿತಮ್ ನೆಲದೊಳು ಪೊನಲು ಪರಿಯಲು… ಅರಸ ಕೇಳು, ಪೆಣ್ಣೊಡಲು ಪಿಡಿಯಬಹುದೆ. ಅನ್ನೆಗಮ್ ಮಖಕೆ ಯೂಪವನು ಅರಸುತ ಆ ಬನಕೆ ಸನ್ನುತ ತಪೋಧನನ್ ವಾಲ್ಮೀಕಿ ಮುನಿವರನು ತನ್ನ ಶಿಷ್ಯರು ಬೆರಸಿ ನಡೆತಂದು, ಕಾಡೊಳು ಒರ್ವಳೆ ಪುಗಲು ದೆಸೆಗಾಣದೆ, ಬಗೆಗೆಟ್ಟು ಬನ್ನದಿನ್ ಪಾಡಳಿದು, ಗ್ರೀಷ್ಮಋತುವಿನ್ ನವೆದ ಕಾಂತಾರದ ಅಧಿದೇವಿ ತಾನು ಎನಲು ಸನ್ನಗದ್ಗದಕಂಠಿಯಾಗಿ ರೋದಿಸುತಿರ್ದ ವೈದೇಹಿಯನು ಕಂಡನು.)

ವಾಲ್ಮೀಕಿ: ಆರ್ ಇವಳು… ಈ ವನಾಂತರದೊಳು ಇದೇತಕೆ ಇರ್ದಪಳು ಇದನು ಆರೈವೆನು.

(ಎಂದು ನಡೆತಂದು, ಕರುಣದಿಂದೆ ಆ ರುಷಿ ನುಡಿಸಿದನು.)

ಎಲೆತಾಯೆ, ನೀನು ಆವಳೌಕಂಡ ಕುರುಪಾಗಿರ್ಪುದು. ಅಕಟ, ಘೋರತರ ಗಹನಕೆ ಒರ್ವಳೆ ಎಂತು ಬಂದೆ. ಹೆದರಬೇಡ, ಭೀರುಹೇಳೌ. ನಾನು ವಾಲ್ಮೀಕಿ. ಭೂರಿ ಶೋಕಾರ್ತರಾಗಿರ್ದರನು ಕಂಡು ಸುಮ್ಮನೆ ಪೋಪನಲ್ಲ.

(ಎಂದನು. ಹರುಷಮ್ ಒತ್ತರಿಸಿದುದು ಶೋಕ ಇಮ್ಮಡಿಸಿದುದು ಭೂಮಿಜೆಗೆ ಲಜ್ಜೆ ಬೆರಸಿದುದು. ಅಂದು ಗದ್ಗದ ಸ್ವರದಿಂದ ಸೀತೆ)

ಸೀತೆ: “ತರಣಿಕುಲಸಂಭವನು ತಾ ಲೋಕಾಪವಾದಕೆ, ಅಪರಾಧಿಯಲ್ಲದ ತನ್ನನು ಬಿಟ್ಟನು ” ಎಂದು ಸುಮಿತ್ರಾತ್ಮಜನು ಈ ವನದೊಳಿರಿಸಿ ಪೋದನು. ಜೀವಮನು ಪೊರೆಯವೇಳ್ವುದೆ ಗರ್ಭಮ್ ಒಡಲೊಳು ಇಹುದು. ಏಗೈವೆನು .

(ಎಂದು ಮುನಿಪದದೊಳು ಎರಗಿದಳು.)

ವಾಲ್ಮೀಕಿ: ದೇವಿ ಶೋಕಮನ್ ಬಿಡು. ಪುತ್ರ ಯುಗಮನ್  ಪಡೆವೆ. ಇನ್ನುಸಂದೇಹಮನ್ ಭಾವಿಸದಿರ್.ಜನಕಂಗೆ ನಾವು ಅನ್ಯರಲ್ಲ.ನಮ್ಮ ಆಶ್ರಮಕೆ ಬಂದು ನೀನು ಸುಖದೊಳು ಇರ್ದೊಡೆ, ಆವಾವ ಬಯಕೆಯುಂಟು ಎಲ್ಲಮನ್ ಸಲಿಸಿ, ನಿನ್ನನು ತಾನು ಓವಿಕೊಂಡಿರ್ಪೆನು. ಅಂಜದಿರು.

(ಎಂದು ಸಂತೈಸಿ ರಾವಣಾರಿಯ ರಾಣಿಯನು ನಿಜತಪೋವನಕೆ ವಾಲ್ಮೀಕಿ ಕರೆತಂದನು)

ಪದ ವಿಂಗಡಣೆ ಮತ್ತು ತಿರುಳು

ರಾಯ ಕೇಳು=ಜನಮೇಜಯ ರಾಜನಿಗೆ ರಾಮಾಯಣದ ಕತೆಯನ್ನು ಜೈಮಿನಿ ರಿಸಿಯು ಹೇಳುತ್ತಿದ್ದಾನೆ;

ಮಸುಳು=ಕಾಣದಾಗು;

ಲಕ್ಷ್ಮಣನ ತಲೆ ಮಸುಳಲು=ಲಕ್ಶ್ಮಣನ ತಲೆ ಕಾಣದಾಗಲು ಅಂದರೆ ಸೀತೆಯಿಂದ ಬಹುದೂರ ಹೋದನಂತರ;

ಕಂಗೆಡು=ಗಾಬರಿಯಾಗು/ಉದ್ವೇಗಗೊಳ್ಳು/ಏನು ಮಾಡಬೇಕೆಂದು ತಿಳಿಯದಾಗು;

ಇತ್ತಲು ಇವಳು ಬಾಯಾರಿ ಕಂಗೆಟ್ಟು=ಇತ್ತ ಕಾಡಿನಲ್ಲಿ ಸೀತೆಯು ಬಾಯಾರಿಕೆಯಿಂದ ಬಳಲುತ್ತ ಏನು ಮಾಡಬೇಕೆಂದು ತಿಳಿಯದಾಗಿ;

ಒರಲ್=ಕೂಗು/ಅರಚು;

“ಆ” ಎಂದು ಒರಲ್ದು=ಆ ಎಂದು ಅರಚುತ್ತ; ಅಸವಳಿ=ಶಕ್ತಿಗುಂದು/ಬಳಲು;

ಭಯಶೋಕದಿಂದ ಅಸವಳಿದು=ಹೆದರಿಕೆ ಹಾಗೂ ಸಂಕಟದಿಂದ ಬಳಲಿ;

ಕಾಯಮ್+ಅನ್; ಕಾಯ=ದೇಹ/ಮಯ್;

ಕಾಯಮನು ಮರೆದು=ಮಯ್ ಮೇಲಣ ಎಚ್ಚರವನ್ನು ಕಳೆದುಕೊಂಡು;

ಮೂಲಮ್+ಅನ್; ಮೂಲ=ಬೇರು/ಬುಡ; ಕೊಯ್=ಕತ್ತರಿಸು; ಅವನಿ=ನೆಲ/ಭೂಮಿ; ಒರಗು=ಕೆಳಕ್ಕೆ ಬಾಗು/ಬಗ್ಗು;

ಮೂಲಮನು ಕೊಯ್ದ ಎಳೆಯ ಬಳ್ಳಿಯಂತೆ ಅವನಿಗೆ ಒರಗಿದಳು=ಬುಡವನ್ನು ಕತ್ತರಿಸಿದ ಎಳೆಯ ಬಳ್ಳಿಯಂತೆ ಬೂಮಿಯ ಮೇಲೆ ಬಿದ್ದಳು;

ಅರಸ ಕೇಳು=ಜನಮೇಜಯ ರಾಜನಿಗೆ ರಾಮಾಯಣದ ಕತೆಯನ್ನು ಜೈಮಿನಿ ರಿಸಿಯು ಹೇಳುತ್ತಿದ್ದಾನೆ:

ಅಲ್ಲಿರ್ದ ಪಕ್ಷಿ ಮೃಗ ಜಂತುಗಳು ಇರದೆ ಧರಣಿಸುತೆಯನು ಬಳಸಿ ನಿಂದು=ಅಲ್ಲಿ ಇದ್ದ ಕಾಡಿನ ಪ್ರಾಣಿಗಳು ಮತ್ತು ಹಕ್ಕಿಗಳು ಸುಮ್ಮನೆ ತಮ್ಮ ಪಾಡಿಗೆ ತಾವು ಇರದೆ ಸೀತಾದೇವಿಯನ್ನು ಬಳಸಿ ನಿಂತುಕೊಂಡು;

ಮೈ+ಉಡುಗಿ; ಉಡುಗು=ಕುಗ್ಗು;

ಮೈಯುಡಗಿ=ದೇಹವು ಕುಗ್ಗಿ; ಜೋಲ್=ಇಳಿಬೀಳು;

ಜೋಲ್ದು=ಪ್ರಾಣಿಪಕ್ಶಿಗಳು ಕುತ್ತಿಗೆಯನ್ನು ಇಳಿಬಿಟ್ಟು;

ಕಂಬನಿ+ಕರೆದು; ಕರೆ=ಸುರಿಸು/ಚೆಲ್ಲು; ಕಂಬನಿಗರೆದು=ಕಣ್ಣೀರು ಹಾಕುತ್ತ; ನಿಜ=ತನ್ನ/ತಮ್ಮ; ವೈರ=ಹಗೆತನ;

ನಿಜವೈರಮನು ಮರೆದು=ತಮ್ಮ ನಡುವೆ ಇದ್ದ ಹಗೆತನವನ್ನು ಮರೆತು;

ಪುಲ್=ಹುಲ್ಲು; ಮೇವು=ಪ್ರಾಣಿಪಕ್ಶಿಗಳ ಉಣಸು ತಿನಸು;

ಪುಲ್ ಮೇವುಗಳನೆ ತೊರೆದು=ಹುಲ್ಲು… ಮೇವನ್ನು ತಿನ್ನುವುದನ್ನು ಬಿಟ್ಟು;

ಕೂಡೆ=ಜತೆಯಲ್ಲಿ; ಕೊರಗುತ+ಇರ್ದುವು; ಕೊರಗು=ಚಿಂತೆ/ಕಳವಳ;

ಕೂಡೆ ಕೊರಗುತಿರ್ದುವು=ಸೀತೆಯ ಬಗ್ಗೆ ಚಿಂತಿಸತೊಡಗಿದವು;

ಲತೆ=ಬಳ್ಳಿ; ಬಾಡು=ಮುರುಟು/ಕಳೆಗುಂದು/ಕುಗ್ಗು; ಸೊರಗುತ+ಇರ್ದುವು; ಸೊರಗು=ಕೃಶವಾಗು/ತೆಳುವಾಗು/ಸಣ್ಣದಾಗು;

ವೃಕ್ಷಲತೆಗಳು ಬಾಡಿ ಸೊರಗುತಿರ್ದುವು=ಮರಗಿಡಬಳ್ಳಿಗಳು ಕಳೆಗುಂದಿ ಸಣ್ಣದಾಗುತ್ತಿದ್ದವು;

ಶೋಕಭಾರದಿನ್ ಕಲ್ಗಳುಮ್ ಕರಗುತಿರ್ದುವು=ಇದೊಂದು ರೂಪಕ. ಸೀತೆಯ ಸಂಕಟವನ್ನು ನೋಡಿ, ಕಲ್ಲುಗಳು ಕೂಡ ಕರಗಿ ನೀರಾಗುತ್ತಿದ್ದವು. ಅಂದರೆ ನಿಸರ್‍ಗದಲ್ಲಿನ ಚೇತನ ಜೀವಿಗಳಾದ ಮರಗಿಡಬಳ್ಳಿ ಪ್ರಾಣಿಪಕ್ಷಿಗಳಂತೆಯೇ, ಅಚೇತನ ವಸ್ತುವಾದ ಕಲ್ಲುಗಳು ಕೂಡ ಸೀತೆಯ ಶೋಕದಲ್ಲಿ ಪಾಲ್ಗೊಂಡವು;

ಜಗದೊಳು ಉತ್ತಮರ ಹಾನಿಯನು ಕಂಡು ಸೈರಿಸುವರುಂಟೆ=ಜಗತ್ತಿನಲ್ಲಿ ಒಳ್ಳೆಯವರಿಗೆ ಉಂಟಾಗುವ ಹಾನಿಯನ್ನು ನೋಡಿ, ಸಹಿಸುಕೊಳ್ಳುವವರು ಇದ್ದಾರೆಯೇ. ಅಂದರೆ ಸಹಿಸಿಕೊಳ್ಳಲಾಗದೆ, ಒಳ್ಳೆಯವರ ಸಂಕಟವನ್ನು ಕಂಡು ಅನುಕಂಪದಿಂದ ತಾವು ನೋವನ್ನು ಉಣ್ಣುತ್ತಾರೆ;

ಅರರೆ=ಅಬ್ಬಬ್ಬಾ. ಸಂಕಟದ ಇಲ್ಲವೇ ಅಚ್ಚರಿಯ ಪ್ರಸಂಗದಲ್ಲಿ ಬಾಯಿಂದ ಹೊರಡುವ ಉದ್ಗಾರ ಸೂಚಕ ಪದ;

ಅರರೆಆಕೆಯ ಅಂಗಮನ್ ನೋಡಿನೋಡಿ=ಅಬ್ಬಬ್ಬಾ… ಸೀತೆಯ ದೇಹದ ಪರಿತಾಪವನ್ನು ನೋಡಿ ನೋಡಿ; ದುಃಖ+ಸಂತಪ್ತೆ+ಆಗಿರುತ+ಇರಲ್ಕೆ; ಸಂತಪ್ತೆ=ಬಹಳವಾಗಿ ನೊಂದವಳು;

ರಾಘವನ ರಾಣಿ ದುಃಖಸಂತಪ್ತೆಯಾಗಿರುತಿರಲ್ಕೆ=ರಾಮನ ಹೆಂಡತಿ ಸೀತೆಯು ಸಂಕಟದಿಂದ ಬಹಳವಾಗಿ ನೋಯುತ್ತಿರುವುದನ್ನು ಕಂಡು;

ಜಾನಕಿಯ ಶೋಕಮ್ ತಮ್ಮದು ಎಂದು=ಸೀತೆಗೆ ಬಂದಿರುವ ಸಂಕಟವು ತಮ್ಮ ಪಾಲಿನ ಸಂಕಟವೆಂದು ತಿಳಿದು;

ಮೊರೆಯಲ್+ಒಲ್ಲವು; ಮೊರೆ=ಜೇಂಕರಿಸು/ಗುಯ್ ಎಂದು ದನಿ ಮಾಡು;

ತುಂಬಿ ಮೊರೆಯಲೊಲ್ಲವು=ತುಂಬಿಗಳು ಜೇಂಕಾರವನ್ನು ಮಾಡಲು ಇಚ್ಚಿಸುವುದಿಲ್ಲ;

ಕುಣಿಯಲ್+ಒಲ್ಲವು;

ನವಿಲ್ ಕುಣಿಯಲೊಲ್ಲವು=ನವಿಲುಗಳು ನರ್ತಿಸಲು ಇಚ್ಚಿಸವು;

ಕೋಕಿ=ಹೆಣ್ಣು ಚಕ್ರವಾಕ ಹಕ್ಕಿ; ಬೆರೆಯಲ್+ಒಲ್ಲವು; ಬೆರೆ-ಕೂಡು;

ಕೋಕಿ ಬೆರೆಯಲೊಲ್ಲವು=ಹೆಣ್ಣು ಚಕ್ರವಾಕ ಹಕ್ಕಿಗಳು ಗಂಡು ಚಕ್ರವಾಕದೊಡನೆ ಕೂಡಿ ರಮಿಸಲು ಇಚ್ಚಿಸವು;

ನಡೆಯಲ್+ಒಲ್ಲವು; ನಡೆ=ಮುಂದೆ ಸಾಗು;

ಹಂಸೆ ನಡೆಯಲೊಲ್ಲವು=ಹಂಸಗಳು ಕೊಳದಲ್ಲಿ ಈಜಲು ಇಲ್ಲವೇ ನೆಲದಲ್ಲಿ ಮುಂದೆ ಸಾಗಲು ಇಚ್ಚಿಸವು;

ಪಿಕ=ಕೋಗಿಲೆ; ಕರೆಯಲ್+ಒಲ್ಲವು; ಕರೆ=ಕೂಗು:

ಪಿಕಮ್ ಕರೆಯಲೊಲ್ಲವು=ಕೋಗಿಲೆಗಳು ಇಂಪಾಗಿ ಹಾಡಲು ಇಚ್ಚಿಸವು;

ಶುಕ=ಗಿಣಿ; ನುಡಿಯಲ್+ಒಲ್ಲವು;

ಶುಕಮ್ ನುಡಿಯಲೊಲ್ಲವು=ಗಿಣಿಗಳು ಮಾತನಾಡಲು ಇಚ್ಚಿಸವು;

ಚಕೋರ=ಒಂದು ಬಗೆಯ ಹಕ್ಕಿ/ಜೊನ್ನವಕ್ಕಿ; ನಲಿಯಲ್+ಒಲ್ಲವು; ನಲಿ=ಕುಣಿ;

ಚಕೋರ ನಲಿಯಲೊಲ್ಲವು=ಚಕೋರಗಳು ಕುಣಿಯಲು ಇಚ್ಚಿಸವು;

ಹರಿಣಿ=ಹೆಣ್ಣು ಜಿಂಕೆ; ನೆರೆಯಲ್+ಒಲ್ಲವು; ನೆರೆ=ಸೇರು/ಜತೆಗೂಡು;

ಹರಿಣಿ ನೆರೆಯಲೊಲ್ಲವು=ಹೆಣ್ಣು ಜಿಂಕೆಗಳು ಗಂಡು ಜಿಂಕೆಗಳ ಜತೆಗೂಡಿ ರಮಿಸಲು ಇಚ್ಚಿಸವು;

ಕರಿಣಿ=ಹೆಣ್ಣಾನೆ; ಒಲಿಯಲ್+ಒಲ್ಲವು; ಒಲಿ=ಮೋಹಗೊಳ್ಳು;

ಕರಿಣಿ ಒಲೆಯಲೊಲ್ಲವು=ಹೆಣ್ಣಾನೆಗಳು ಗಂಡಾನೆಗಳ ಜತೆಯಲ್ಲಿ ಮೋಹಗೊಂಡು ನೆರೆಯಲು ಇಚ್ಚಿಸವು; ;

ಚಮರಿ=ಹೆಣ್ಣು ಚಮರಿ; ಪೊರೆಯಲ್+ಒಲ್ಲವು; ಪೊರೆ=ಕೂಡು/ಸೇರು;

ಚಮರಿ ಪೊರೆಯಲೊಲ್ಲವು=ಹೆಣ್ಣು ಚಮರಿಗಳು ಗಂಡು ಚಮರಗಳೊಡನೆ ಕೂಡಲು ಇಚ್ಚಿಸವು;

ಸಿಂಗ=ಸಿಂಹ; ಮೆರೆಯಲ್+ಒಲ್ಲವು; ಮೆರೆ=ಬೀಗು/ತೋರಿಸು;

ಸಿಂಗಮ್ ಮೆರೆಯಲೊಲ್ಲವು=ಸಿಂಹಗಳು ತಮ್ಮ ಶಕ್ತಿಯನ್ನು ತೋರಿಸಲು ಇಚ್ಚಿಸವು;

ಚಮರಮ್+ಅನ್; ಚಮರ=ಬಾಲದಲ್ಲಿ ಉದ್ದನೆಯ ಕೂದಲುಳ್ಳ ಒಂದು ಬಗೆಯ ಪ್ರಾಣಿ. ಈ ಪ್ರಾಣಿಯ ಬಾಲದ ಕೂದಲಿನಿಂದ ತಯಾರಿಸಿದ ಬೀಸಣಿಗೆಯನ್ನು ‘ಚಾಮರ’ ಎಂದು ಕರೆಯುತ್ತಾರೆ;

ಚಮರಿಗಳು ಚಮರಮನು ಬಾಲದೊಳು ಬೀಸಿದುವು=ಚಮರಿಗಳು ತಮ್ಮ ಬಾಲದಿಂದ ಗಾಳಿಯನ್ನು ಬೀಸಿದುವು;

ಕರಿ=ಆನೆ; ಎಳೆ+ತಳಿರ; ತಳಿರು=ಚಿಗುರು; ಮೃದು=ಮೆದುವಾದ/ಮೆತ್ತಗಿರುವ/ಕೋಮಲವಾದ; ತಲ್ಪ=ಹಾಸಿಗೆ/ಶಯ್ಯೆ; ಪಾಸು=ಹಾಸು/ಬಿಚ್ಚಿ ಹರಡಿದವು;

ಕರಿಗಳು ಎಳೆದಳಿರ ಮೃದುತಲ್ಪಮನು ಪಾಸಿದುವು=ಆನೆಗಳು ಎಳೆಯ ಚಿಗುರಿನ ಮೆತ್ತನೆಯ ಹಾಸಿಗೆಯನ್ನು ಹಾಸಿದವು; ಸಾರಸ=ಕೊಕ್ಕರೆ; ತೊಯ್=ನೀರಿನಲ್ಲಿ ನೆನೆಯಿಸು/ಅದ್ದಿ/ಮುಳುಗಿಸಿ; ಅಂಬು=ನೀರು; ಸೂಸು=ಚಿಮುಕಿಸು;

ಸಾರಸಂಗಳು ತಮ್ಮ ಗರಿಗಳನು ತೋದು ತಂದು ಅಂಬುಗಳನು ಸೂಸಿದುವು=ಕೊಕ್ಕರೆಗಳು ತಮ್ಮ ಗರಿಗಳನ್ನು ನೀರಿನಲ್ಲಿ ನೆನೆಯಿಸಿ ತಂದು ನೀರಹನಿಗಳನ್ನು ಸೀತೆಯ ಮಯ್ ಮೇಲಿ ಸಿಂಪಡಿಸಿದವು;

ಅಂಚೆ=ಹಂಸ; ಆಗಸ=ಆಕಾಶ/ಗಗನ; ಓಸರಿಸು=ಓರೆಯಾಗು/ಪಕ್ಕಕ್ಕೆ ಸರಿಸು; ಎರಂಕೆ=ರೆಕ್ಕೆ; ಅಗಲ್ಚಿ=ಅಗಲ ಮಾಡಿ; ಸಿರಿಮೊಗ=ಸುಂದರವಾದ ಮೊಗ; ನೆಳಲ್+ಆಸೆ; ಆಸೆ=ಆಶ್ರಯ/ಆಸರೆ; ಗೆಯ್=ಮಾಡು;

ಅಂಚೆಗಳು ಆಗಸದೊಳು ಓಸರಿಸದ ಎರಂಕೆಯನು ಅಗಲ್ಚಿ ಆ ಸಿರಿಮೊಗಕ್ಕೆ ಬಿಸಿಲಾಗದಂತೆ ನೆಳಲಾಸೆ ಗೈದುವು=ಹಂಸಗಳು ಸೀತೆಯ ಮೊಗದ ಮೇಲೆ ತಮ್ಮ ರೆಕ್ಕೆಗಳನ್ನು ಬಿಚ್ಚಿ ಹರಡಿ, ಅವಳಿಗೆ ಬಿಸಿಲಿನ ತಾಪ ತಟ್ಟದಂತೆ ನೆರಳಿನ ಆಸರೆಯನ್ನು ಒದಗಿಸಿದವು;

ಸುರನದಿ=ಗಂಗಾ ನದಿ; ತೆರೆ=ನೀರಿನ ಅಲೆ; ಬರಲಾರದೆ+ಇರ್ದೊಡಮ್; ಅಲರ್=ಅರಳಿದ; ಅರವಿಂದ=ತಾವರೆ; ಗಂಧ=ಪರಿಮಳ/ಕಂಪು/ಸುವಾಸನೆ;; ಧರಣಿ=ಭೂಮಿ; ಸುತೆ=ಮಗಳು; ಧರಣಿಸುತೆ=ಬೂದೇವಿಯ ಮಗಳು ಸೀತೆ; ಪರಿತಾಪಮ್+ಅನ್; ಪರಿತಾಪ=ಅತಿ ಹೆಚ್ಚಿನ ಸಂಕಟ; ತವಿಸು=ಪರಿಹರಿಸು/ನಿವಾರಿಸು; ತರಹರ=ಆತುರ/ಬೇಗಬೇಗನೆ; ಐತಂದು=ಆಗಮಿಸಿ; ವಾತ=ಗಾಳಿ;

ಸುರನದಿಯ ತೆರೆತೆರೆಯ ನಡುನಡುವೆ ಬಿದ್ದೆದ್ದು ಬರಲಾರದಿರ್ದೊಡಮ್… ಮತ್ತೆ ಗಂಗೆಯೊಳು ಅಲರ್ದ ಅರವಿಂದ ಗಂಧದ ಅತಿಭಾರಮನು ಪೋರಲಾರದೆ ಇರ್ದೊಡಮ್… ಧರಣಿಸುತೆಯ ಪರಿತಾಪಮನು ತವಿಸದೆ ಇರಬಾರದೆಂದು ತರಹರದೊಳು ಒಯ್ಯೊಯ್ಯನೆ ಐತಂದು ಸುಖ ಸ್ಪರುಶವಾತಮ್ ಬೀಸಿತು=ಬೀಸುತ್ತಿರುವ ಗಾಳಿಯು ಗಂಗಾ ನದಿಯ ತೆರೆಗಳ ನಡುವೆ ಬಿದ್ದೆದ್ದು ಬರಲು ಆಗದಿದ್ದರೂಗಂಗೆಯಲ್ಲಿ ಅರಳಿದ ತಾವರೆ ಹೂಗಳ ಮಕರಂದದ ಹೊರೆಯನ್ನು ಹೊರಲಾಗದಿದ್ದರೂ…ಸೀತಾದೇವಿಯ ಸಂಕಟವನ್ನು ಹೋಗಲಾಡಿಸದೆ ಇರಬಾರದೆಂದು… ವೇಗವಾಗಿ ಒಯ್ಯೊಯ್ಯನೆ ಆಗಮಿಸಿ ಸೀತೆಯ ಮಯ್ ಮೇಲೆ ತಂಗಾಳಿಯನ್ನು ಬೀಸಿತು;

ನೋಳ್ಪನೆ=ನೋಡುತ್ತಾನೆಯೆ/ಲೆಕ್ಕಿಸುತ್ತಾನೆಯೆ;

ಜಗದೊಳು ಉಪಕಾರಿಯಾದವನು ತನ್ನ ನೋವನು ನೋಳ್ಪನೆ=ಜಗತ್ತಿನಲ್ಲಿ ಉಪಕಾರಿಯಾದವನು ತನ್ನ ನೋವನ್ನು ಲೆಕ್ಕಿಸದೆ. ಪರರಿಗೆ ಒಳಿತನ್ನು ಮಾಡಲು ಮುನ್ನುಗ್ಗುತ್ತಾನೆ;

ಪೃಥಿವಿ+ಆತ್ಮಜೆ; ಪೃಥಿವಿ=ಬೂಮಿ; ಆತ್ಮಜೆ=ಮಗಳು; ಪೃಥಿವಿಯಾತ್ಮಜೆ=ಬೂದೇವಿಯ ಮಗಳಾದ ಸೀತೆ;

ವೃಥಿವಿಯಾತ್ಮಜೆ ಬಳಿಕ ಚೇತರಿಸಿ=ಕಾಡಿನ ಪ್ರಾಣಿಪಕ್ಶಿಗಳ ಉಪಚಾರದಿಂದ ಮತ್ತು ತಂಗಾಳಿಯ ತೀಡುವಿಕೆಯಿಂದ ಸೀತೆಯು ಚೇತರಿಸಿಕೊಂಡು;

ಪಥ=ದಾರಿ/ಮಾರ್ಗ; ಆವುದು+ಎಂದು; ಆವುದು=ಯಾವುದು; ದೆಸೆ=ದಿಕ್ಕು; ದೆಸೆದೆಸೆಗಳು=ಸುತ್ತಮುತ್ತ;

ತನಗೆ ಇನ್ನು ಪಥಮ್ ಆವುದೆಂದು ದೆಸೆದೆಸೆಗಳನು ನೋಡಿ=ತನಗೆ ಇನ್ನು ದಾರಿ ಯಾವುದೆಂದು ಸುತ್ತಮುತ್ತ ನೋಡಿ;

ಸಲೆ=ಬಹಳವಾಗಿ/ಅತಿಯಾಗಿ/ಸಂಪೂರ್‍ಣವಾಗಿ; ಶಿಥಿಲ=ಬಲಹೀನವಾದುದು; ಅವಯವ=ಶರೀರ/ಮಯ್;

ಸಲೆ ಶಿಥಿಲಮ್ ಆದ ಅವಯವದ=ಶಕ್ತಿಯು ಸಂಪೂರ್‍ಣವಾಗಿ ಉಡುಗಿದ ಅಂಗಾಂಗಗಳ;

ದೂಳ್+ಇಡಿದ; ಇಡಿ=ತುಂಬು/ಮೆತ್ತಿಕೊಳ್ಳು;

ದೂಳಿಡಿದ ಮೈಯ=ದೂಳು ಮೆತ್ತಿಕೊಂಡಿರುವ ಮಯ್ಯಿನ;

ಬಿಡುಮುಡಿ=ಕೆದರಿದ ತಲೆಗೂದಲು; ವಿಕೃತಿ=ಬದಲಾವಣೆ/ಕೆಟ್ಟ ರೀತಿಯಲ್ಲಿರುವುದು; ಎಣಿಸು=ಪರಿಗಣಿಸು/ಲೆಕ್ಕಿಸು/ಗಮನಿಸು;

ಬಿಡುಮುಡಿಯ ವಿಕೃತಿಯನು ಎಣಿಸದೆ=ಕೆದರಿಹೋಗಿರುವ ತಲೆಗೂದಲಿನ ಅಂದಗೆಟ್ಟ ತನ್ನ ರೂಪವನ್ನು ಗಮನಿಸದೆ;

ಮಿಥಿಲೇಂದ್ರ=ಮಿತಿಲೆಯ ರಾಜನಾದ ಜನಕ;

ಮಿಥಿಲೇಂದ್ರವಂಶದೊಳು ಜನಿಸಿ ರಘುಕುಲದ ದಶರಥನೃಪನ ಸೊಸೆಯಾಗಿ=ಮಿತಿಲೇಂದ್ರವಂಶದ ಜನಕ ರಾಜನ ಮಗಳಾಗಿ ಹುಟ್ಟಿ… ರಗುವಂಶದ ದಶರತ ರಾಜನ ಸೊಸೆಯಾಗಿ;

ಕಟ್ಟಡವಿ=ದಟ್ಟವಾದ ಕಾಡು; ವ್ಯಥೆ=ನೋವು/ಯಾತನೆ; ಅಕಟ=ಅಯ್ಯೋ; ವಿಧಿ=ಹಣೆಬರಹ; ಕಲ್ಮರ=ಕಲ್ಲು ಮತ್ತು ಮರ; ಹಲುಬು=ರೋದಿಸು/ಅಳು;

ತನಗೆ ಕಟ್ಟಡವಿಯೊಳು ವ್ಯಥಿಸುವಂತಾಯ್ತು. ಅಕಟವಿಧಿ ಎಂದು ಕಲ್ಮರನು ಕರಗುವಂತೆ ಹಲುಬಿದಳು= ತನಗೆ ದಟ್ಟವಾದ ಕಾಡಿನಲ್ಲಿ ಸಂಕಟಪಡುವಂತಾಯಿತು. ಅಯ್ಯೋ..ವಿದಿಯೇ ಎಂದು ನಿಸರ್‍ಗದಲ್ಲಿನ ಕಲ್ಲು ಮರಗಳೆಲ್ಲವೂ ತನ್ನ ಸಂಕಟದಲ್ಲಿ ಪಾಲುಗೊಳ್ಳುವಂತೆ ರೋದಿಸತೊಡಗಿದಳು;

ಕೇಣಮ್+ಅನ್; ಕೇಣ=ಕಳಂಕ;

ಕೇಣಮನು ಬಿಟ್ಟು=ನನಗೆ ಕೆಟ್ಟಹೆಸರು ಬರುತ್ತದೆ ಎಂಬ ಚಿಂತೆಯನ್ನು ಮರೆತು;

ಆತ್ಮಘಾತಕ=ಆತ್ಮಹತ್ಯೆ/ವ್ಯಕ್ತಿಯು ತನ್ನನ್ನು ತಾನೇ ಕೊಂದುಕೊಳ್ಳುವುದು; ಭ್ರೂಣ=ಬಸುರಿಯ ಹೊಟ್ಟೆಯಲ್ಲಿರುವ ಮಗು; ಹತ್ಯೆ=ಕೊಲ್ಲು;

ಕೇಣಮನು ಬಿಟ್ಟು ಆತ್ಮಘಾತಕದೊಳು ಈ ಕ್ಷಣಮ್ ಪ್ರಾಣಮನು ತೊರೆದಪೆನೆ… ಗರ್ಭದಿನ್ ಭ್ರೂಣಹತ್ಯಾ ದೋಷಮ್ ಬಂದಪುದು=ನನ್ನ ಬಾಳಿಗೆ ಕಳಂಕ ತಟ್ಟುತ್ತದೆ ಎಂಬ ಚಿಂತೆಯನ್ನು ಮರೆತು ಆತ್ಮಹತ್ಯೆಯನ್ನು ಮಾಡಿಕೊಂಡು ಈ ಗಳಿಗೆಯಲ್ಲಿ ಜೀವವನ್ನು ಬಿಡೋಣವೆಂದರೆ; ಹೊಟ್ಟೆಯಲ್ಲಿರುವ ಮಗುವನ್ನು ಕೊಂದ ಪಾಪ ನನ್ನನ್ನು ಸುತ್ತಿಕೊಳ್ಳುತ್ತದೆ;

ಆರ್ಗೆ=ಯಾರಿಗೆ; ಒರೆ=ಹೇಳು;

ಏಗೈವೆನು…ಆರ್ಗೆ ಒರೆವೆನು ಎಂದು ಒಯ್ಯನೆ ಎದ್ದು= ಈಗ ನಾನು ಏನು ಮಾಡಲಿ …ಯಾರಿಗೆ ನನ್ನ ಈ ಸಂಕಟವನ್ನು ಹೇಳಿಕೊಳ್ಳಲಿ ಎಂದು ಕೂಡಲೆ ಮೇಲಕ್ಕೆ ಎದ್ದು;

ಏಣ+ಅಕ್ಷಿ; ಏಣ=ಜಿಂಕೆ; ಅಕ್ಷಿ=ಕಣ್ಣು; ಏಣಾಕ್ಷಿ=ಜಿಂಕೆಯ ಕಣ್ಣುಗಳಂತಹ ಕಣ್ಣುಗಳನ್ನುಳ್ಳ ಸೀತೆ;

ಬಳಿಕ ಏಣಾಕ್ಷಿ ಅಡವಿಯೊಳು ನಡೆದಳು=ಅನಂತರ ಸೀತೆಯು ಕಾಡಿನಲ್ಲಿ ನಡೆಯುತ್ತ ಸಾಗಿದಳು;

ಉಪಲ=ಕಲ್ಲು; ಕಂಟಕ=ಮುಳ್ಳು; ಶ್ರೇಣಿ=ಸಾಲು; ಮೆಲ್ಲಿತ್ತು+ಅಡಿ; ಮೆಲ್ಲಿತ್ತು=ಕೋಮಲವಾದ/ಮೆತ್ತನೆಯ; ಅಡಿ=ಪಾದ; ಮೆಲ್ಲಡಿ=ಕೋಮಲವಾದ ಪಾದ; ಬಸಿ=ಸುರಿ; ನವ=ಹೊಸ; ಶೋಣಿತ=ನೆತ್ತರು/ರಕ್ತ; ಪೊನಲು=ಪ್ರವಾಹ; ಪರಿಯಲು=ಹರಿಯಲು;

ಉಪಲ ಕಂಟಕ ಶ್ರೇಣಿಗಳು ಸೋಂಕಿ ಮೆಲ್ಲಡಿಗಳಿನ್ ಬಸಿವ ನವ ಶೋಣಿತಮ್ ನೆಲದೊಳು ಪೊನಲು ಪರಿಯಲು=ಕಾಡಿನ ಹಾದಿಯಲ್ಲಿ ಸೀತೆಯು ನಡೆಯುತ್ತಿರುವಾಗ ಸಾಲಾಗಿ ಹರಡಿಕೊಂಡಿದ್ದ ಮುಳ್ಳುಗಳು ಚುಚ್ಚಿ, ಕಲ್ಲುಗಳು ಬಡಿದು ಆಕೆಯ ಕೋಮಲವಾದ ಪಾದಗಳಿಂದ ರಕ್ತವು ಅತಿಯಾಗಿ ಹರಿಯತೊಡಗಿತು;

ಅರಸ ಕೇಳು= ಜನಮೇಜಯ ರಾಜನಿಗೆ ರಾಮಾಯಣದ ಕತೆಯನ್ನು ಜೈಮಿನಿ ರಿಸಿಯು ಹೇಳುತ್ತಿದ್ದಾನೆ;

ಪೆಣ್ಣ್+ಒಡಲು; ಒಡಲು=ದೇಹ/ಮಯ್; ಪಿಡಿ=ತಾಳು/ಹೊಂದು;

ಪೆಣ್ಣೊಡಲು ಪಿಡಿಯಬಹುದೆ=ಹೆಣ್ಣಿನ ದೇಹ ಇಂತಹ ಸಂಕಟಗಳನ್ನೆಲ್ಲಾ ತಾಳಿಕೊಳ್ಳಬಲ್ಲುದೆ. ಅಂದರೆ ಸೀತೆಗೆ ಬಂದಿರುವ ಸಂಕಟ ಬಹಳ ಹೆಚ್ಚಿನದು;

ಅನ್ನೆಗಮ್=ಆ ಸಮಯದಲ್ಲಿ; ಮಖ=ಯಾಗ; ಯೂಪ=ಯಾಗಕ್ಕೆ ಬಲಿಕೊಡುವ ಪ್ರಾಣಿಯನ್ನು ಕಟ್ಟುವ ಕಂಬ; ಅರಸು=ಹುಡುಕು; ಸನ್ನುತ=ಹೊಗಳಿಕೆಗೆ ಪಾತ್ರನಾದ/ಹೆಸರಾಂತ; ತಪೋಧನ=ತಪಸ್ಸನ್ನೇ ಸಂಪತ್ತಾಗಿ ಪಡೆದವನು/ಮುನಿ;

ಅನ್ನೆಗಮ್ ಮಖಕೆ ಯೂಪವನು ಅರಸುತ ಆ ಬನಕೆ ಸನ್ನುತ ತಪೋಧನನ್ ವಾಲ್ಮೀಕಿ ಮುನಿವರನು ತನ್ನ ಶಿಷ್ಯರು ಬೆರಸಿ ನಡೆತಂದು=ಅದೇ ಸಮಯದಲ್ಲಿ ಯಾಗದ ಕಂಬಕ್ಕೆ ಬೇಕಾದ ಮರವನ್ನು ಹುಡುಕುತ್ತ ಹೆಸರಾಂತ ಮುನಿಯಾದ ವಾಲ್ಮೀಕಿಯು ಆ ಕಾಡಿಗೆ ತನ್ನ ಗುಡ್ಡರೊಡನೆ ಅಲ್ಲಿಗೆ ಬಂದನು;

ಪುಗಲು=ಪ್ರವೇಶಿಸಲು/ಒಳಹೋಗಲು; ದೆಸೆ+ಕಾಣದೆ; ದೆಸೆಗಾಣದೆ=ದಿಕ್ಕು ತೋಚದೆ/ದಾರಿ ಕಾಣದೆ;

ಕಾಡೊಳು ಒರ್ವಳೆ ಪುಗಲು ದೆಸೆಗಾಣದೆ=ಕಾಡಿನಲ್ಲಿ ಒಬ್ಬಳೇ ಪ್ರವೇಶಿಸಲು ದಾರಿ ಕಾಣದೆ;

ಬನ್ನ=ಅಳಲು/ಸಂಕಟ/ಯಾತನೆ; ಬಗೆ+ಕೆಟ್ಟು; ಬಗೆ=ದಾರಿ; ಬಗೆಗೆಟ್ಟು=ದಾರಿತಪ್ಪಿ; ಪಾಡು+ಅಳಿದು; ಪಾಡು=ಗತಿ/ಸ್ಥಿತಿ; ಅಳಿ=ನಾಶಗೊಂಡು;

ಬಗೆಗೆಟ್ಟು ಬನ್ನದಿನ್ ಪಾಡಳಿದು=ದಾರಿತಪ್ಪಿ ಸಂಕಟದಿಂದ ಗತಿಹೀನಳಾಗಿರುವ ಸೀತೆಯು;

ಗ್ರೀಷ್ಮಋತು=ಬೇಸಗೆ ಕಾಲ; ನವೆ=ಬಡವಾಗು/ನಾಶವಾಗು/ಸೊರಗುವುದು; ಕಾಂತಾರ=ಕಾಡು; ಅಧಿದೇವಿ=ದೊಡ್ಡ ದೇವಿ/ಮುಖ್ಯ ದೇವತೆ; ಎನಲು=ಎನ್ನುವಂತೆ;

ಗ್ರೀಷ್ಮಋತುವಿಮ್ ನವೆದ ಕಾಂತಾರದ ಅಧಿದೇವಿ ತಾನು ಎನಲು=ಬೇಸಿಗೆಯ ಬಿಸಿಲಿನ ತಾಪಕ್ಕೆ ಒಣಗಿ ಬಡವಾದ ಕಾಡಿನ ದೊಡ್ಡದೇವತೆಯೋ ತಾನು ಎನ್ನುವಂತೆ;

ಸನ್ನ+ಗದ್ಗದ+ಕಂಠಿ+ಆಗಿ; ಸನ್ನ=ಕುಗ್ಗಿದ ದನಿ; ಗದ್ಗದ=ಬಿಗಿ ಹಿಡಿದ; ಕಂಠ=ಕೊರಳು/ಗಂಟಲು; ರೋದಿಸುತ+ಇರ್ದ; ವೈದೇಹಿ=ಸೀತೆ/ವಿದೇಹ ಎಂಬ ದೇಶದ ರಾಜನಾದ ಜನಕನ ಮಗಳು ಸೀತೆ;

ಸನ್ನಗದ್ಗದಕಂಠಿಯಾಗಿ ರೋದಿಸುತಿರ್ದ ವೈದೇಹಿಯನು ಕಂಡನು=ಸಂಕಟದಿಂದ ಸೀತೆಯ ಗಂಟಲಿನ ನರಗಳು ಬಿಗಿಹಿಡಿದಿರುವುದರಿಂದ ಕುಗ್ಗಿದ ದನಿಯಲ್ಲಿ ಮಾತುಗಳನ್ನು ಆಡುತ್ತ, ಅಳುತ್ತಿರುವ ಸೀತೆಯನ್ನು ವಾಲ್ಮೀಕಿಯು ಕಂಡನು;

ಆರ್ ಇವಳು=ಯಾರು ಇವಳು; ವನ+ಅಂತರದೊಳು; ಅಂತರ=ನಡುವೆ/ಮಧ್ಯಭಾಗ;

ಈ ವನಾಂತರದೊಳು ಇದೇತಕೆ ಇರ್ದಪಳು=ದಟ್ಟವಾದ ಈ ಕಾಡಿನ ನಡುವೆ ಇದೇತಕ್ಕಾಗಿ ಇರುವಳು;

ಆರಯ್=ವಿಚಾರಿಸು;

ಇದನು ಆರೈವೆನು ಎಂದು ನಡೆತಂದು=ಇದನ್ನು ವಿಚಾರಿಸುವೆನು ಎಂದು ಸೀತೆಯ ಬಳಿಗೆ ಬಂದು;

ಕರುಣದಿಂದೆ ಆ ರುಷಿ ನುಡಿಸಿದನು=ಕರುಣೆಯಿಂದ ಆ ರಿಸಿಯು ಆಕೆಯನ್ನು ಮಾತನಾಡಿಸಿದನು;

ಎಲೆ ತಾಯೆ ನೀನು ಆವಳೌ=ಎಲೆ ತಾಯೆ, ನೀನಾರು;

ಕುರುಪು+ಆಗಿ+ಇರ್ಪುದು; ಕುರುಪು=ಗುರುತು;

ಕಂಡ ಕುರುಪಾಗಿರ್ಪುದು=ನಿನ್ನನ್ನು ಈ ಮೊದಲು ಎಲ್ಲಿಯೋ ನೋಡಿದ ನೆನಪಾಗುತ್ತಿರುವುದು;

ಗಹನ=ಕಾಡು;

ಅಕಟ, ಘೋರತರ ಗಹನಕೆ ಒರ್ವಳೆ ಎಂತು ಬಂದೆ=ಅಯ್ಯೋ…ಬಯಂಕರವಾದ ಕಾಡಿಗೆ ಒಬ್ಬಳೆ ಹೇಗೆ ಬಂದೆ?;

ಭೀರು=ಹೆದರಿದವಳು;

ಹೆದರಬೇಡ, ಭೀರು ಹೇಳೌ=ಹೆದರಬೇಡ, ನಿನ್ನ ವಿವರವನ್ನು ಹೇಳು;

ಭೂರಿ+ಶೋಕ+ಆರ್ತರ್+ಆಗಿ+ಇರ್ದರನು; ಭೂರಿ=ಹೆಚ್ಚು; ಶೋಕಾರ್ತರು=ಸಂಕಟಕ್ಕೆ ಒಳಗಾದವರು; ಇರ್ದರನು=ಇರುವವರನ್ನು;

ನಾನು ವಾಲ್ಮೀಕಿ. ಭೂರಿಶೋಕಾರ್ತರಾಗಿರ್ದರನು ಕಂಡು ಸುಮ್ಮನೆ ಪೋಪನಲ್ಲ ಎಂದನು=ನಾನು ವಾಲ್ಮೀಕಿ. ಅತಿಯಾದ ಸಂಕಟದಲ್ಲಿ ನರಳುತ್ತಿರುವವರನ್ನು ಕಂಡು ಸುಮ್ಮನೆ ಹೋಗುವವನಲ್ಲ. ಅಂದರೆ ನನ್ನಿಂದಾಗುವ ನೆರವನ್ನು ಅಂತಹವರಿಗೆ ನೀಡುತ್ತೇನೆ;

ಹರುಷ=ಹಿಗ್ಗು/ಆನಂದ; ಒತ್ತರಿಸು=ಹೆಚ್ಚಾಗು/ನುಗ್ಗು;

ಹರುಷಮ್ ಒತ್ತರಿಸಿದುದು=ಹಿಗ್ಗು ಉಕ್ಕಿಬಂದಿತು;

ಇಮ್ಮಡಿಸು=ಎರಡು ಪಟ್ಟು ಹೆಚ್ಚಾಗುವುದು;

ಶೋಕ ಇಮ್ಮಡಿಸಿದುದು=ಸಂಕಟ ಹೆಚ್ಚಾಯಿತು;

ಭೂಮಿಜೆ=ಸೀತೆ; ಲಜ್ಜೆ=ನಾಚಿಕೆ; ಬೆರಸು=ಕೂಡು;

ಭೂಮಿಜೆಗೆ ಲಜ್ಜೆ ಬೆರಸಿದುದು=ಸೀತೆಗೆ ನಾಚಿಕೆಯುಂಟಾಯಿತು; ಸ್ವರ=ದನಿ;

ಅಂದು ಗದ್ಗದ ಸ್ವರದಿಂದ ಸೀತೆ=ಆಗ ಸೀತೆಯು ಕಂಪಿಸುತ್ತಿರುವ ದನಿಯಿಂದ ನುಡಿಯತೊಡಗಿದಳು;

ತರಣಿ+ಕುಲ+ಸಂಭವನು; ತಾ=ತಾನು; ತರಣಿ=ಸೂರ್‍ಯ; ಕುಲ=ವಂಶ; ಸಂಭವನು=ಹುಟ್ಟಿದವನು; ತರಣಿಕುಲಸಂಭವ=ರಾಮ; ತಾ=ತಾನು; ಲೋಕಾಪವಾದ=ರಾಜ್ಯದಲ್ಲಿನ ಪ್ರಜೆಯೊಬ್ಬನು ಆಡಿದ ನಿಂದನೆಯ ನುಡಿ;

ತರಣಿಕುಲಸಂಭವನು ತಾ ಲೋಕಾಪವಾದಕೆ, ಅಪರಾಧಿಯಲ್ಲದ ತನ್ನನು ಬಿಟ್ಟನು ಎಂದು ಸುಮಿತ್ರಾತ್ಮಜನ್ ಈ ವನದೊಳಿರಿಸಿ ಪೋದನು= “ರಾಮನು ತನ್ನ ರಾಜ್ಯದಲ್ಲಿನ ಪ್ರಜೆಯೊಬ್ಬನು ಆಡಿದ ನಿಂದನೆಯ ನುಡಿಯ ಕಾರಣದಿಂದ, ಯಾವುದೇ ತಪ್ಪನ್ನು ಮಾಡದ ತನ್ನನ್ನು ತೊರೆದನು” ಎಂದು ಲಕ್ಶ್ಮಣನು ನನಗೆ ಹೇಳಿ ಈ ಕಾಡಿನಲ್ಲಿ ಬಿಟ್ಟು ಹೋದನು;

 ಗರ್ಭಮ್ ಒಡಲೊಳು ಇಹುದು=ನನ್ನ ಹೊಟ್ಟೆಯಲ್ಲಿ ಮಗುವಿದೆ; ಪೊರೆ=ಕಾಪಾಡು;

ಜೀವಮನು ಪೊರೆಯವೇಳ್ವುದೆ=ಆ ಜೀವವನ್ನು ನಾನು ಕಾಪಾಡಬೇಕಾಗಿದೆ;

ಏಗೈವೆನು ಎಂದು ಮುನಿಪದದೊಳು ಎರಗಿದಳು=ಏನು ಮಾಡಲಿ ಎಂದು ಮೊರೆಯಿಡುತ್ತ ಮುನಿಯ ಪಾದಕ್ಕೆ ನಮಸ್ಕರಿಸಿದಳು;

ದೇವಿ ಶೋಕಮನ್ ಬಿಡು=ದೇವಿ, ನಿನ್ನ ಶೋಕವನ್ನು ಬಿಡು;

ಪುತ್ರ=ಮಗ; ಯುಗ=ಜೋಡಿ/ಇಬ್ಬರು;

ಪುತ್ರಯುಗಮನ್ ಪಡೆವೆ=ಅವಳಿಜವಳಿ ಗಂಡು ಮಕ್ಕಳನ್ನು ಹಡೆಯುತ್ತೀಯೆ;

ಇನ್ನು ಸಂದೇಹಮನ್ ಭಾವಿಸದಿರು=ಇವರು ಅಪರಿಚಿತರು… ಏನಾಗುವುದೋ ಎಂಬ ಸಂಶಯಕ್ಕೆ ಒಳಗಾಗಬೇಡ;

ಜನಕಂಗೆ ನಾವು ಅನ್ಯರಲ್ಲ=ನಿಮ್ಮ ತಂದೆಯಾದ ಜನಕರಾಜನಿಗೆ ನಾವು ಬೇರೆಯಲ್ಲ. ಅಂದರೆ ರಾಜನಿಗೆ ನಾವು ಬೇಕಾದವರು;

ನಮ್ಮ ಆಶ್ರಮಕೆ ಬಂದು ನೀನು ಸುಖದೊಳು ಇರ್ದೊಡೆ=ನಮ್ಮ ಆಶ್ರಮಕ್ಕೆ ಬಂದು ನೀನು ನೆಮ್ಮದಿಯಿಂದ ಇದ್ದರೆ;

ಆವ+ಆವ; ಆವ=ಯಾವ; ಬಯಕೆ+ಉಂಟು; ಸಲಿಸು=ಈಡೇರಿಸು/ನೆರವೇರಿಸು;

ಆವಾವ ಬಯಕೆಯುಂಟು ಎಲ್ಲಮನ್ ಸಲಿಸಿ=ಬಸುರಿಯಾಗಿರುವ ನಿನ್ನ ಮನದಲ್ಲಿ ಯಾವ ಯಾವ ಆಸೆಗಳು ಇವೆಯೋ ಅವೆಲ್ಲವನ್ನೂ ಈಡೇರಿಸಿ; ಓವಿಕೊಂಡು+ಇರ್ಪೆನು; ಓವು=ಕಾಪಾಡು; ಅಂಜು=ಹೆದರು;

ನಿನ್ನನು ತಾನು ಓವಿಕೊಂಡಿರ್ಪೆನು. ಅಂಜದಿರು ಎಂದು ಸಂತೈಸಿ=ನಿನ್ನನ್ನು ನಾನು ಕಾಪಾಡಿಕೊಂಡಿರುವೆನು. ಹೆದರಬೇಡ ಎಂದು ಸೀತೆಯ ಸಂಕಟವನ್ನು ಪರಿಹರಿಸಿ;

ರಾವಣ+ಅರಿ; ಅರಿ=ಹಗೆ/ಶತ್ರು; ರಾವಣಾರಿ=ರಾವಣನಿಗೆ ಶತ್ರುವಾದ ರಾಮ; ನಿಜ=ತನ್ನ;

ರಾವಣಾರಿಯ ರಾಣಿಯನು ನಿಜತಪೋವನಕೆ ವಾಲ್ಮೀಕಿ ಕರೆತಂದನು=ವಾಲ್ಮೀಕಿಯು ಸೀತೆಯನ್ನು ತನ್ನ ತಪೋವನಕ್ಕೆ ಕರೆದುಕೊಂಡು ಬಂದನು;

(ಚಿತ್ರ ಸೆಲೆ: ವಿಕಿಪೀಡಿಯ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: