ನಾ ನೋಡಿದ ಸಿನೆಮಾ: ಒಂದು ಸರಳ ಪ್ರೇಮ ಕತೆ
ಯಾವ ಪ್ರೇಮ ಕತೆಗಳು ಸರಳವಾಗಿ ಇರುವುದಿಲ್ಲ, ಏನಾದರೊಂದು ಕಶ್ಟ, ತೊಡಕು ಇಲ್ಲವೇ ಅನಿರೀಕ್ಶಿತ ತಿರುವು ಇದ್ದೇ ಇರುತ್ತದೆ. ಅದೇ ರೀತಿ ಇಲ್ಲೊಂದು ಪ್ರೇಮ ಕತೆ ಇದೆ ಅದು ಸರಳ ಎಂದೆನಿಸಿದರೂ ಕೊನೆಗೆ ವಿರಳ ಎಂದು ತಿಳಿದು ಬರುತ್ತದೆ.
ನಾಯಕಿಯನ್ನು ನೋಡದೆ ಪ್ರೀತಿಸುವ ಸನ್ನಿವೇಶಗಳನ್ನು ಹಲವಾರು ಸಿನೆಮಾಗಳಲ್ಲಿ ನೋಡಿರುತ್ತೇವೆ. ಅದರಲ್ಲೂ ಕೆಲವು ಸಿನೆಮಾಗಳಲ್ಲಿ ಆಕೆ ಯಾರು ಎಂದು ತಿಳಿಯುವುದೇ ಇಡೀ ಸಿನೆಮಾದ ಕತೆಯಾಗಿರುತ್ತದೆ. ಎತ್ತುಗೆಗೆ ‘ಯಾರೇ ನೀನು ಚೆಲುವೆ’, ಇಲ್ಲಿ ನಾಯಕನಿಗೆ ತಾನು ಪ್ರೀತಿಸಿದ ಹುಡುಗಿ ಯಾರೆಂದು ತಿಳಿಯುವುದು ಚಿತ್ರದ ಕೊನೆಯಲ್ಲಿ, ಹಾಗೆ ‘ಬೆಳದಿಂದಳ ಬಾಲೆ’ ಈ ಚಿತ್ರದಲ್ಲಂತೂ ಕೊನೆವರೆಗೂ ನಾಯಕನಿಗೆ ಆತ ಹುಡುಕುತ್ತಿರುವ ಹುಡುಗಿ(ನಾಯಕಿ) ಸಿಗುವುದೇ ಇಲ್ಲ. ಈ ಸಿನೆಮಾದಲ್ಲಿ ನಾಯಕನಿಗೆ ತಾನು ಹುಡುಕುತ್ತಿರುವ ಹುಡುಗಿಯೇನೊ ಬೇಗನೆ ಸಿಗುತ್ತಾಳೆ ಆದರೆ ಮುಂದೆ ಬರುವ ಸನ್ನಿವೇಶಗಳು ಆತನ ಜೀವನದಲ್ಲಿ ಹೇಗೆ ಆಟವಾಡುತ್ತವೆ, ಕೊನೆಯಲ್ಲಿ ಮತ್ತೊಮ್ಮೆ ನಾಯಕನಿಗೆ ಕಾಡುವ ಮತ್ತೊಂದು ದೊಡ್ಡ ಪ್ರಶ್ನೆ, ಆ ಪ್ರಶ್ನೆಗೆ ನಾಯಕನಿಗೆ ಉತ್ತರ ಸಿಗುತ್ತದೆಯೆ? ಸಿಕ್ಕರೆ ಅದು ಸರಳವೇ ಇಲ್ಲ ವಿರಳವೇ? ಇದಕ್ಕೆ ಉತ್ತರ ಸಿನೆಮಾದಲ್ಲಿದೆ.
ತಾರಾಗಣಕ್ಕೆ ಬಂದರೆ ವಿನಯ್ ರಾಜ್ ಕುಮಾರ್ ಅವರು ಎಂದಿನಂತೆ ತಮ್ಮ ಸಹಜ ನಟನೆಯ ಮೂಲಕ ನೋಡುಗರ ಮುಂದೆ ಬಂದಿದ್ದಾರೆ. ಇವರ ಹಿಂದಿನ ಸಿನೆಮಾಗಳಾದ ಸಿದ್ದಾರ್‍ತ, ರನ್ ಆಂಟನಿ ಮತ್ತು ಅನಂತು vs ನುಸ್ರತ್ ಸಿನೆಮಾಗಳನ್ನು ಗಮನಿಸಿದರೆ ವಿನಯ್ ಅವರ ಅಬಿನಯ ಎಶ್ಟು ಸಹಜತೆಯಿಂದ ಕೂಡಿರುತ್ತದೆ ಎಂದು ತಿಳಿದು ಬರುತ್ತದೆ. ಈ ಸಹಜತೆ ಈ ಸಿನೆಮಾದಲ್ಲೂ ಮುಂದುವರೆದಿದೆ. ನಾಯಕಿಯರಾಗಿ ಮಲ್ಲಿಕಾ ಸಿಂಗ್ (ಇವರು ಶ್ರೀ ಕ್ರಿಶ್ಣ ದಾರಾವಾಹಿಯ ಮೂಲಕ ಪರಿಚಯವಾದ ಕಿರುತೆರೆ ನಟಿ) ಹಾಗೂ ಸ್ವಾತಿಶ್ಟ ಕ್ರಿಶ್ಣನ್ ಅಬಿನಯಿಸಿದ್ದಾರೆ. ಇಬ್ಬರೂ ನಾಯಕಿಯರು ನಟನೆಯಲ್ಲಿ ಇನ್ನೂ ಸ್ವಲ್ಪ ಪಳಗಬೇಕು ಎಂಬುದು ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ನಾಯಕನ ತಂದೆಯ ಪಾತ್ರದಲ್ಲಿ ರಾಜೇಶ್ ನಟರಂಗ ಅವರು ನಟಿಸಿದ್ದು, ಅರುಣಾ ಬಾಲರಾಜ್ ಅವರು ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಸಾದು ಕೋಕಿಲಾ, ರಾಗವೇಂದ್ರ ರಾಜ್ ಕುಮಾರ್, ಶ್ವೇತ ಶ್ರೀವಾತ್ಸವ ಹಾಗೂ ಇತರರು ನಟಿಸಿದ್ದಾರೆ.
ತೆರೆಯ ಹಿಂದಿನ ಕೆಲಸಗಾರರ ವಿಶಯಕ್ಕೆ ಬಂದರೆ, ಸಿಂಪಲ್ ಸುನಿ ಅವರ ನಿರ್ದೇಶನವಿದ್ದು, ಈ ಸಾರಿ ಸಿಂಪಲ್ ಸುನಿ ಅವರ ಕತೆ ಸಿಂಪಲ್ ಅನಿಸಿದರೂ ಕೊನೆಯಲ್ಲಿ ಬರುವ ತಿರುವು ನೋಡುಗರಿಗೆ ಮತ್ತೊಮ್ಮೆ ಕುತೂಹಲ ಹುಟ್ಟಿಸುತ್ತದೆ. ಎಂದಿನಂತೆ ಸುನಿ ಅವರ ನಿರ್‍ದೇಶನ ನೋಡುಗರನ್ನು ರಂಜಿಸುವಲ್ಲಿ ಸೋತಿಲ್ಲ. ನೋಡುಗರಿಗೆ ತೆರೆಯ ಮೇಲಿನ ಪಾತ್ರಗಳು ತಮ್ಮ ಸುತ್ತ ಮುತ್ತಲಿನವೇ ಎನಿಸುವ ಹಾಗೆ ಕತೆ ಹೆಣೆಯುವಲ್ಲಿ ಸುನಿ ಅವರು ಎತ್ತಿದ ಕೈ ಎಂಬುದು ತಿಳಿದದ್ದೇ. ಅದು ಈ ಸಿನೆಮಾದಲ್ಲೂ ಸಹ ಮುಂದುವರೆದಿದೆ. ವೀರ್ ಸಮರ್‍ತ್ ಅವರ ಸಂಗೀತವಿದ್ದು, ನೀನ್ಯಾರೆಲೆ ಹಾಡು ಹಾಗೂ ಈ ಹಾಡಿನ ಹಿನ್ನೆಲೆ ಸಂಗೀತ ಮನತಟ್ಟುತ್ತದೆ. ಇನ್ನುಳಿದಂತೆ ಕಾರ್‍ತಿಕ್ ಶರ್‍ಮ ಹಾಗೂ ಸಬಾ ಕುಮಾರ್ ಅವರ ಸಿನೆಮಾಟೋಗ್ರಪಿ, ಆದಿ ಅವರ ಸಂಕಲನವಿದ್ದು, ರಾಮ್ ಮೂವೀಸ್ ಅವರು ಈ ಚಿತ್ರವನ್ನು ನಿರ್‍ಮಿಸಿದ್ದಾರೆ. ಪೆಬ್ರವರಿ 8 ರಂದು ಬಿಡುಗಡೆಯಾಗಿರುವ ಈ ಸಿನೆಮಾ, ಜನರನ್ನು ರಂಜಿಸುತ್ತಿದೆ. ಕುಟುಂಬದ ಜೊತೆ ಕೂತು ಒಂದು ಸರಳ ಪ್ರೇಮಕತೆಯ ವಿರಳವಾದ ಸನ್ನಿವೇಶಗಳನ್ನು ಚಿತ್ರಮಂದಿರಲ್ಲಿ ಸವಿಯಬಹುದು.
(ಚಿತ್ರಸೆಲೆ: in.bookmyshow.com )
ಇತ್ತೀಚಿನ ಅನಿಸಿಕೆಗಳು