ನಾ ನೋಡಿದ ಸಿನೆಮಾ: ಶಾಕಾಹಾರಿ
ಕನ್ನಡ ಚಿತ್ರರಂಗ ಕಳೆದ 20 ವರುಶಗಳಲ್ಲಿ ಮಾಡಿದ ದೊಡ್ಡ ತಪ್ಪೆಂದರೆ ಅದು ಡಬ್ಬಿಂಗ್ ತಡೆದು ರಿಮೇಕ್ ಹಾಗೂ ಒಂದೇ ಬಗೆಯ ಪಾರ್‍ಮುಲಾ ಸಿನೆಮಾಗಳಿಗೆ ಜೋತು ಬಿದ್ದದ್ದು. ಈ ಕಾರಣದಿಂದಾಗಿ ಕನ್ನಡಿಗರು ಬೇರೆ ನುಡಿಯ ಸಿನೆಮಾಗಳತ್ತ ವಾಲಿದ್ದಲ್ಲದೆ, ಕನ್ನಡದಲ್ಲಿ ಒಂದೊಳ್ಳೆ ಸಿನೆಮಾ ಬಂದರೂ ಅದನ್ನು ಗುರುತಿಸಲಾಗದಶ್ಟು ಕನ್ನಡ ಚಿತ್ರರಂಗದಿಂದ ಬೇಸತ್ತು ಹೋಗಿದ್ದಾರೆ. ಇದರಿಂದಾಗಿ ಅಪರೂಪಕ್ಕೊಮ್ಮೆ ಬರುವ ಒಳ್ಳೆಯ ಸಿನೆಮಾಗಳೂ ಸಹ ಮಂದಿಗೆ ತಲುಪದೆ ಹೋಗುವ ಪರಿಸ್ತಿಗೆ ಬಂದಿದೆ. ಕನ್ನಡ ಚಿತ್ರರಂಗದ ಈ ಪಾರ್‍ಮುಲಾ ಸಿನೆಮಾಗಳನ್ನು ನೋಡಿ ಬೇಸತ್ತು ಇದು ಅಂತಹದ್ದೇ ಮತ್ತೊಂದು ಸಿನೆಮಾ ಇರಬೇಕು ಎಂದು ನೋಡುವ ಗೋಜಿಗೆ ಹೋಗದಿರುವುದು ಎದ್ದು ಕಾಣುತ್ತದೆ. ಇಲ್ಲಿ ನೋಡುಗನನ್ನು ಹೊಣೆಮಾಡಲಾಗದು. ಏಕೆಂದರೆ ದುಡ್ಡು ಕೊಟ್ಟು ನೋಡುವ ನೋಡುಗ ತನ್ನ ದುಡ್ಡಿಗೆ ಏನು ಬೇಕು ಎಂದು ಕೇಳುವ ಹಕ್ಕನ್ನೂ ಹೊಂದಿರುತ್ತಾನೆ, ಸಿಗದಿದ್ದಾಗ ದೂರ ಉಳಿಯುವ ಹಕ್ಕೂ ಕೂಡ ಆತನದೆ.
ಪಕ್ಕದ ಚಿತ್ರರಂಗಗಳಲ್ಲಿ ಕತೆ ಸ್ವಲ್ಪ ಮಟ್ಟಿಗಿದ್ದರೂ ದೊಡ್ಡ ಗೆಲುವು ಕಾಣುವುದನ್ನು ನೋಡಿದ್ದೇವೆ. ಅದಕ್ಕೆ ಅವರ ಶ್ರಮ ಹಾಗೂ ಪ್ರಚಾರ ಎರಡೂ ಕಾರಣ. ನಮ್ಮಲ್ಲಿ ಶ್ರಮವಿದ್ದರೂ ಪ್ರಚಾರದ ಕೊರತೆಯೂ ಒಂದು. ಸುಮಾರು 5 ವರುಶಗಳ ಹಿಂದೆ ಮಲಯಾಳಂ ಸಿನೆಮಾಗಳ ಬಗ್ಗೆ ಕನ್ನಡಿಗರು ಕೇಳಿದ್ದರೆ ಹೊರತು ನೋಡಿದ್ದವರು ಸಿಗುವುದು ಕಶ್ಟವಿತ್ತು, ಆದರೆ ಈಗ ಬಾಶೆ ಬರದಿದ್ದರೂ ನೋಡಿ ಹೊಗಳುವ ಕನ್ನಡಿಗರನ್ನು ನೋಡಿದ್ದೇವೆ. ಇದಿಶ್ಟೇ ಅಲ್ಲದೆ ಮಲಯಾಳಂ ಸಿನೆಮಾಗಳೂ ಸಹ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗುತ್ತಿರುವುದನ್ನು ನೋಡಬಹುದು. ಡಬ್ಬಿಂಗ್ ನಿಂದಾಗಿ ಕನ್ನಡಿಗ ಮನರಂಜನೆಗಾಗಿ ಇನ್ನೊಂದು ನುಡಿಯನ್ನು ಕಲಿಯಬೇಕಾದ ಅನಿವಾರ್‍ಯತೆ ಕೂಡ ಇಲ್ಲ. ಇದರಿಂದ ಕನ್ನಡಿಗನಿಗೆ ಇದ್ದ ಒಂದು ತೊಡಕು ಇಲ್ಲವಾಗಿ, ಕನ್ನಡಿಗನಿಗೆ ಮುಂದೆ ಇಂದು ಹಲವಾರು ಆಯ್ಕೆಗಳಿವೆ.
ಈ ಮೇಲಿನ ಪೀಟಿಕೆ ನೀಡಲು ಕಾರಣ ಇತ್ತೀಚೆಗೆ ಪೆಬ್ರವರಲ್ಲಿ ಬಿಡುಗಡೆಯಾದ ರಂಗಾಯಣ ರಗು ಅವರು ಮುಕ್ಯ ಪಾತ್ರದಲ್ಲಿ ನಟಿಸಿದ್ದ ಶಾಕಾಹಾರಿ ಸಿನೆಮಾ. ಕನ್ನಡದಲ್ಲಿ ಹೊಸತನವಿಲ್ಲ ಎನ್ನುವವರಿಗಾಗಿ, ಹೊಸ ನಿರ್‍ದೇಶಕರೊಬ್ಬರು ನೀಡಿರುವ ಉತ್ತರದಂತಿದೆ ಶಾಕಾಹಾರಿ.
ಒಂದು ಪೊಲೀಸ್ ಟಾಣೆ ಅಲ್ಲಿನ ಇನ್ಸ್ಪೆಕ್ಟರ್ (ಗೋಪಾಲ ಕ್ರಿಶ್ಣ ದೇಶಪಾಂಡೆ) ವರ್‍ಗಾವಣೆಯು ಒಂದು ಕೊಲೆ ಕೇಸ್ ಮುಗಿಯುವುದರ ಮೇಲೆ ನಿಂತಿರುತ್ತದೆ, ಆದರೆ ಆ ಇನ್ಸ್ಪೆಕ್ಟರ್ ಗೆ ವರ್‍ಗಾವಣೆ ಬೇಕೆ ಬೇಕು ಎನ್ನುವ ಪರಿಸ್ತಿತಿ, ಕಾರಣ ಕುಟುಂಬ. ಇದರಿಂದ ಬೇಸತ್ತು ಹೇಗಾದರೂ ವರ್‍ಗಾವಣೆ ಪಡೆದು ಹೊರಡಬೇಕು ಎಂದು ತುದಿಗಾಲಲ್ಲಿ ನಿಂತಿರುವ ಇನ್ಸ್ಪೆಕ್ಟರ್. ಇನ್ನೊಂದೆಡೆ ಒಂದು ಪುಟ್ಟ ಹೊಟೇಲ್ ಬಟ್ಟರ ಹೊಟೇಲು ಎಂದು ಹೆಸರುವಾಸಿ. ಪುಟ್ಟ ಹಳ್ಳಿಯಾದ್ದರಿಂದ ಎಲ್ಲರಿಗೂ ಪರಿಚಯವಿರುವ, ದಿನನಿತ್ಯದ ಬದುಕಿನಲ್ಲಿ ಹೊಸತನವೇನು ಇರದ, 40 ದಾಟಿದರೂ ಮದುವೆಯಾಗದ ಹೊಟೇಲಿನ ನಡೆಸುಗ ಬಟ್ಟರು (ರಂಗಾಯಣ ರಗು). ಇದರೊಟ್ಟಿಗೆ ಬಟ್ಟರಿಗೊಂದು ಲವ್ ಸ್ಟೋರಿ. ಇನ್ನೇನು ಕೇಸ್ ಮುಗಿಸಿ, ವರ್‍ಗಾವಣೆ ತೆಗೆದುಕೊಂಡು ಹೊರಡುವ ಆತುರದಲ್ಲಿರುವ ಇನ್ಸ್ಪೆಕ್ಟರ್ ಗೆ, ಕೊಲೆ ಆರೋಪಿಯು ತಪ್ಪಿಸಿಕೊಂಡು ತಲೆನೋವಾಗಿ ಕಾಡುತ್ತಾನೆ, ಮುಂದೆ ಇನ್ಸ್ಪೆಕ್ಟರ್ ಗತಿ ಏನು ಎಂದು ತಿಳಿಯಬೇಕಾದರೆ ಸಿನೆಮಾದಲ್ಲಿದೆ ಉತ್ತರ.
ಕನ್ನಡ ಸಿನೆಮಾಗಳಲ್ಲಿ ಅಚ್ಯುತ್ ಕುಮಾರ್ ಹಾಗೂ ರಂಗಾಯಣ ರಗು ಅವರು ಹೆಚ್ಚಾಗಿ ಕಾಣುವ ಮುಕಗಳು, ಇತ್ತೀಚೆಗೆ ಈ ಪಟ್ಟಿಗೆ ಸೇರಿರುವ ಮುಕ ಎಂದರೆ ಅದು ಗೋಪಾಲ ಕ್ರಿಶ್ಣ ದೇಶಪಾಂಡೆ. ಈ ಸಿನೆಮಾದ ಮುಕ್ಯ ಪಾತ್ರಗಳನ್ನು ನಿರ್‍ವಹಿಸಿ ಸಿನೆಮಾವನ್ನು ಆವರಿಸಿರುವವ ಇಬ್ಬರೆಂದರೆ ಅದು ರಂಗಾಯಣ ರಗು ಹಾಗೂ ಗೋಪಾಲ ಕ್ರಿಶ್ಣ ದೇಶಪಾಂಡೆ ಅವರು. ರಂಗಾಯಣ ರಗು ಅವರ ಇತ್ತೀಚೆಗೆಗಿನ ಪಾತ್ರಗಳನ್ನು ಕಂಡು ಬೇಸತ್ತಿದ್ದ ನೋಡುಗನಿಗೆ, ಈ ಸಿನೆಮಾದಲ್ಲಿ ರಂಗಾಯಣ ರಗು ಅವರ ಪಾತ್ರ ಚೆನ್ನಾಗಿ ಮೂಡಿಬಂದಿರುವುದು ಎದ್ದು ಕಾಣುತ್ತದೆ. ಗೋಪಾಲ ಕ್ರಿಶ್ಣ ದೇಶಪಾಂಡೆ ಅವರಂತು ಸಿನೆಮಾದಿಂದ ಸಿನೆಮಾಗೆ ನೋಡುಗರನ್ನು ಮೆಚ್ಚಿಸಿಕೊಂಡೇ ಬರುತ್ತಿದ್ದು, ಈ ಸಿನೆಮಾದಲ್ಲೂ ಅದು ಮುಂದುವರೆದಿದೆ. ರಂಗಾಯಣ ರಗು ಹಾಗೂ ಗೋಪಾಲ ಕ್ರಿಶ್ಣ ದೇಶಪಾಂಡೆ ಇವರಿಬ್ಬರ ಪಾತ್ರದ ತಲ್ಲೀನತೆ ಸಿನೆಮಾದ ಕೊನೆಯಲ್ಲಂತೂ ನೋಡುಗನನ್ನು ಕತೆಯೊಳಗೆ ಕೊಂಡೊಯ್ಯುತ್ತದೆ. ಇನ್ನುಳಿದಂತೆ ಸುಜಯ್ ಶಾಸ್ತ್ರಿ, ನಿದಿ ಹೆಗ್ಡೆ, ವಿಜಯ್, ಪ್ರತಿಮಾ ನಾಯಕ್ ಹಾಗೂ ಇತರರು ನಟಿಸಿದ್ದಾರೆ.
ಈ ಸಿನೆಮಾದ ಜೀವಾಳ ಎಂದರೆ ಅದು ಚಿತ್ರಕತೆ ಹಾಗೂ ನಿರ್‍ದೇಶನ ಅದನ್ನು ತಮ್ಮ ಚೊಚ್ಚಲ ಸಿನೆಮಾದಲ್ಲೇ ಒಂದೊಳ್ಳೆ ಸಿನೆಮಾವನ್ನು, ನೋಡುಗರ ಮುಂದಿಟ್ಟಿದ್ದಾರೆ ನಿರ್‍ದೇಶಕ ಸಂದೀಪ್ ಸಂಕದ್. ಕನ್ನಡಕ್ಕೊಂದು ಅದ್ಬುತ ತ್ರಿಲ್ಲರ್ ಸಿನೆಮಾ ನೀಡಿ ಕನ್ನಡ ಸಿನೆಮಾಗಳ ಗುಣಮಟ್ಟದ ಬಗ್ಗೆ ಗೊಣಗುವವರಿಗೆ ಉತ್ತರಿಸಿದ್ದಾರೆ. ಎಡಿಟಿಂಗ್ ಈ ಸಿನೆಮಾದ ಮತ್ತೊಂದು ಪ್ಲಸ್ ಎನ್ನಬಹುದು. ಶಶಾಂಕ್ ನಾರಾಯಣ ಅವರ ಎಡಿಟಿಂಗ್ ತೆರೆಯ ಮೇಲೆ ಎದ್ದು ಕಾಣುತ್ತದೆ. ಸಿನೆಮಾ ಎಲ್ಲೂ ನಿದಾನಗತಿಗೆ ಇಳಿಯದ ಹಾಗೆ ಕೊಂಡೊಯ್ಯಲಾಗಿದೆ. ಎಸ್. ಆರ್. ಗಿರೀಶ್ ಹಾಗೂ ಸಂದೀಪ್ ಸಂಕದ್ ಅವರ ಕತೆ, ವಿಶ್ವಜಿತ್ ರಾವ್ ಅವರ ಸಿನೆಮಾಟೋಗ್ರಪಿ ಹಾಗೂ ಮಯೂರ್ ಅಂಬೇಕಲ್ಲು ಅವರ ಸಂಗೀತವಿದ್ದು, ಕೀಲಂಬಿ ಮೀಡಿಯಾ ಲ್ಯಾಬ್ ನವರು ಈ ಸಿನೆಮಾವನ್ನು ನಿರ್‍ಮಿಸಿದ್ದಾರೆ.
ತಿಯೇಟರ್ ನಲ್ಲಿ ಬಿಡುಗಡೆಯಾದಾಗ ಒಳ್ಲೆಯ ವಿಮರ್‍ಶೆಗಳು ಬಂದರೂ ಹೆಚ್ಚು ಮಂದಿಯನ್ನು ತಲುಪದ ಈ ಸಿನೆಮಾ, ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಒಂದೇ ದಿನಕ್ಕೆ 10,00,000+ ನಿಮಿಶಗಳಶ್ಟು ಪ್ರಸಾರ (streams) ಪಡೆದಿದೆ. ಎಲ್ಲಾ ವರ್‍ಗದವರು ನೋಡಬಹುದಾದ ಸಿನೆಮಾ ಎನ್ನಲಾಗದಿದ್ದರೂ, ಒಂದೊಳ್ಳೆಯ ಸಿನೆಮಾ ಎನ್ನುವುದರಲ್ಲಿ ಎರಡು ಮಾತಿಲ್ಲ.
(ಚಿತ್ರಸೆಲೆ: in.bookmyshow.com )
ಇತ್ತೀಚಿನ ಅನಿಸಿಕೆಗಳು