ನಮ್ಮ ದೇಹದ ಕೆಲ ವಿಚಿತ್ರ ಸಂಗತಿಗಳು!

– ವಿಜಯಮಹಾಂತೇಶ ಮುಜಗೊಂಡ.

  • ನಾವು ನಿಮಿಶವೊಂದರಲ್ಲಿ ಸುಮಾರು 20 ಸಲ ರೆಪ್ಪೆ ಮಿಟುಕಿಸುತ್ತೇವೆ. ಅಂದರೆ ಇದು ಒಂದು ವರುಶದಲ್ಲಿ ಹತ್ತ ಲಕ್ಶಕ್ಕೂ ಹೆಚ್ಚು ಬಾರಿ!
  • ನಮ್ಮ ಕಣ್ಣ ಮುಂದಿರುವ ಪಾರದರ‍್ಶಕ ಕಣ್ಪೊರೆ (Cornea) ನೆತ್ತರ ನಾಳಗಳಿಲ್ಲದ ಏಕೈಕ ಅಂಗಾಂಶವಾಗಿದೆ.
  • ನಮ್ಮ ನಾಲಿಗೆಯಲ್ಲಿ ಸುಮಾರು 8,000 ರುಚಿ-ಮೊಗ್ಗುಗಳಿವೆ, ಪ್ರತಿಯೊಂದೂ ಮೊಗ್ಗೂ ನೂರಾರು ಜೀವಕೋಶಗಳನ್ನು ಹೊಂದಿದ್ದು ಆಹಾರ ರುಚಿಯನ್ನು ತಿಳಿಯಲು ಸವಿಯಲು ನೆರವಾಗುತ್ತವೆ!
  • ನಮ್ಮ ಬಾಯಿಯಲ್ಲಿ ದಿನವೊಂದಕ್ಕೆ ಸುಮಾರು ಒಂದು ಲೀಟರ್ ಜೊಲ್ಲು ಉತ್ಪಾದನೆಯಾಗುತ್ತದೆ. ಮನುಶ್ಯನ ಜೀವಿತಾವದಿಯಲ್ಲಿ‍ನ ಒಟ್ಟು ಉಗುಳಿನ ಪ್ರಮಾಣ ಸುಮಾರು 40,000 ಲೀಟರ್ ನಶ್ಟು!
  • ದಿನದ ಹೊತ್ತಿಗೆ ತಕ್ಕಂತೆ ನಮ್ಮ ಎತ್ತರವೂ ಬದಲಾಗುತ್ತದೆಯೇ? ರಾತ್ರಿ ಮಲಗುವಾಗಿನ ನಮ್ಮ ಎತ್ತರಕ್ಕೆ ಹೋಲಿಸಿದರೆ ಬೆಳಿಗ್ಗೆ ಎದ್ದಾಗ ನಮ್ಮ ಎತ್ತರ 1 ಸೆಂಟಿಮೀಟರ್ ನಶ್ಟು ಹೆಚ್ಚಾಗಿರುತ್ತದೆ. ಮೂಳೆಗಳ ನಡುವಿನ ಮೆತ್ತೆಲುಬು(cartilage) ನಾವು ಎದ್ದು ಓಡಾಡುವಾಗ ಕುಗ್ಗುವುದರಿಂದ ಎತ್ತರದಲ್ಲಿ ಹೆಚ್ಚು-ಕಡಿಮ ಆಗುತ್ತದೆ.
  • ಮಕ್ಕಳು ಹುಟ್ಟಿದ ಮೊದಮೊದಲು ಅವರ ದೇಹದಲ್ಲಿ ಸುಮಾರು 300 ಮೂಳೆಗಳಿರುತ್ತವೆ, ಅವುಗಳಲ್ಲಿ ಕೆಲವು ಮೂಳೆಗಳು ಬೆಸೆದುಕೊಂಡು ಬೆಳವಣಿಗೆ ಪೂರ್‍ತಿಯಾಗುವ ಹೊತ್ತಿಗೆ 206 ಮೂಳೆಗಳಾಗುತ್ತವೆ. ನಮ್ಮ ಕಿವಿಯಲ್ಲಿರುವ ಅತಿ ಚಿಕ್ಕ ಮೂಳೆಯ ಉದ್ದ ಎಶ್ಟು ಗೊತ್ತೇ? ಅದು 2.8 ಮಿಲಿ ಮೀಟರ್ ಅಶ್ಟೇ.  ಅಂದರೆ ನಮ್ಮ ಉಗುರಿನ ಉದ್ದದ ಕಾಲುಬಾಗಕ್ಕಿಂತಲೂ ಚಿಕ್ಕದು.
  • ಮನುಶ್ಯನ ದೇಹದಲ್ಲಿರುವ ನೆತ್ತರ ನಾಳಗಳ ಒಟ್ಟೂ ಉದ್ದ ಸುಮಾರು ಒಂದು ಲಕ್ಶ ಮೈಲಿ. ಇವುಗಳನ್ನು ಒಂದೆಳೆಯಾಗಿ ಬಿಡಿಸಿದರೆ, ಇಡೀ ಬೂಮಿಯನ್ನು ಮೂರು ಸುತ್ತು ಸುತ್ತಬಹುದು.
  • ಮನುಶ್ಯರು ಅತಿ ವೇಗದ ಅತವಾ ಬಲವಾದ ಪ್ರಾಣಿಗಳಲ್ಲದಿದ್ದರೂ, ದೂರದ ಓಟ ಮನುಶ್ಯನ ವಿಶೇಶ ಕಸುವು ಆಗಿದೆ. ನಮ್ಮ ಉದ್ದನೆಯ ಕಾಲುಗಳು, ನೇರವಾದ  ಮತ್ತು ಬೆವರಿನ ಮೂಲಕ ಮೈಬಿಸಿಯನ್ನು ಚೆಲ್ಲುವ ಕಸುವು ನಮ್ಮನ್ನು ಉತ್ತಮ ಓಟಗಾರರನ್ನಾಗಿ ಮಾಡುತ್ತದೆ. ಪುರಾತನ ಮಾನವರು ತಮ್ಮ ಬೇಟೆಯನ್ನು ಬೆನ್ನಟ್ಟಿ ಓಡುತ್ತಾ, ಪ್ರಾಣಿಗಳು ದಣಿದು ಬಳಲಿಕೆಯಿಂದ ಸಾಯುವವರೆಗೆ ಬಿಡುತ್ತಿರಲಿಲ್ಲ!
  • ಶ್ವಾಸಕೋಶಗಳು ನಮ್ಮ ದೇಹದ ಅಂಗಗಳಲ್ಲೇ ವಿಶೇಶವಾದ ರಚನೆ ಹೊಂದಿದ್ದು, ನೀರಿನ ಮೇಲೆ ತೇಲಬಲ್ಲ ಏಕಮಾತ್ರ ಅಂಗಗಳಾಗಿವೆ. ಶ್ವಾಸಕೋಶಗಳಲ್ಲಿರುವ ಅಲ್ವಿಯೋಲಿ ಎಂದು ಕರೆಯಲ್ಪಡುವ 300 ಮಿಲಿಯನ್ ಬಲೂನ್ ತರಹದ ಗಾಳಿಗೂಡುಗಳ ರಚನ ಇದಕ್ಕೆ ಕಾರಣವಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: penguin.co.uk, vizagsteel.com, osgpc.com, nectarsleep.com, easy-peasy.ai)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *